ಎಚ್ಚರಿಕೆ, ರಕ್ತದೊತ್ತಡ ನಿಯಂತ್ರಿಸುವ ಸಾಮಾನ್ಯ ಔಷಧಿಗಳು ಹೃದಯಾಘಾತದ ಅಪಾಯ ಹೆಚ್ಚಿಸಬಹುದು !
ಅನಾರೋಗ್ಯದಿಂದ ಪಾರಾಗಲು ನಾವು ಔಷಧಿಗಳನ್ನು ಸೇವಿಸುತ್ತೇವೆ. ಆದರೆ ಈ ಔಷಧಿಗಳೇ ಬೇರೆ ಅನಾರೋಗ್ಯಗಳಿಗೆ ಕಾರಣವಾದರೆ ಏನು ಗತಿ? ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಮತ್ತು ಎದೆನೋವಿಗೆ ಸಾಮಾನ್ಯವಾಗಿ ಸೇವಿಸುವ ಔಷಧಿಯೊಂದು ದಿಢೀರ್ ಹೃದಯಸ್ತಂಭನದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ನೆದರ್ ಲ್ಯಾಂಡ್ಸ್‌ನ ಆಮಸ್ಟರ್ ಡ್ಯಾಮ್ ಅಕಾಡೆಮಿಕ್ ಮೆಡಿಕಲ್ ಸೆಂಟರ್‌ನ ಸಂಶೋಧಕರು ಈ ಅಧ್ಯಯನವನ್ನು ಕೈಗೊಂಡಿದ್ದು,60,000ಕ್ಕೂ ಅಧಿಕ ಜನರನ್ನು ಸಮೀಕ್ಷೆಗೊಳಪಡಿಸಿದ್ದಾರೆ. ವಿವಿಧ ಔಷಧಿಗಳ ಪರಿಣಾಮಗಳನ್ನು ವಿಶ್ಲೇಷಿಸಿದ ಬಳಿಕ ಸಂಶೋಧಕರು ನಿಫೆಡಿಪೈನ್ ಮತ್ತು ಆಮ್ಲಾಡಿಪೈನ್ ಎಂಬ ಡಿಹೈಡ್ರೊಪೈರಿಡಿನ್ ವರ್ಗಕ್ಕೆ ಸೇರಿದ ಎರಡು ಔಷಧಿಗಳ ಸಂಭಾವ್ಯ ಪರಿಣಾಮಗಳ ಕುರಿತು ಆಳವಾದ ಅಧ್ಯಯನವನ್ನು ನಡೆಸಿದ್ದಾರೆ. ಅಧಿಕ ರಕ್ತದೊತ್ತಡ ಮತ್ತು ಹೃದಯಕ್ಕೆ ರಕ್ತಪೂರೈಕೆ ಕಡಿಮೆಯಾದಾಗ ಕಾಣಿಸಿಕೊಳ್ಳುವ ಎದೆನೋವು ‘ಆ್ಯಂಜಿನಾ’ದ ಚಿಕಿತ್ಸೆಯಲ್ಲಿ ಈ ಔಷಧಿಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
ಸಂಭಾವ್ಯ ಪರಿಣಾಮಗಳ ಅಧ್ಯಯನಕ್ಕಾಗಿ ಸಂಶೋಧಕರು ನಿಫೆಡಿಪೈನ್ ಮತ್ತು ಆಮ್ಲಾಡಿಪೈನ್‌ನ ಅಧಿಕ ಡೋಸ್ (ದಿನಕ್ಕೆ 60 ಎಮ್‌ಜಿ)ನ್ನು ಬಳಸಿದ್ದರು. ನಿಫೆಡಿಮೈನ್ ದಿಢೀರ್ ಹೃದಯ ಸ್ತಂಭನದ ಹೆಚ್ಚಿನ ಅಪಾಯವನ್ನೊಡ್ಡುತ್ತದೆ ಮತ್ತು ಆಮ್ಲೊಡಿಪೈನ್ ಅಂತಹ ಯಾವುದೇ ಅಪಾಯವನ್ನು ಹೊಂದಿಲ್ಲ ಎನ್ನುವುದು ಅವರ ಅಧ್ಯಯನದಿಂದ ಬೆಳಕಿಗೆ ಬಂದಿದೆ.
ಹೃದಯ ತಜ್ಞರು ಮತ್ತು ಇತರ ವೈದ್ಯರು ಹೆಚ್ಚಾಗಿ ನಿಫೆಡಿಪೈನ್ ಮತ್ತು ಆಮ್ಲಾಡಿಪೈನ್ ಔಷಧಿಗಳನ್ನು ಶಿಫಾರಸು ಮಾಡುತ್ತಾರೆ ಮತ್ತು ಆಯ್ಕೆಯು ಅವರ ಆದ್ಯತೆ ಹಾಗೂ ವೈಯಕ್ತಿಕ ಅನುಭವವನ್ನು ಅವಲಂಬಿಸಿರುತ್ತದೆ ಎಂದು ಮುಖ್ಯ ಸಂಶೋಧಕ ಡಾ.ಹ್ಯಾನೊ ಟ್ಯಾನ್ ವರದಿಯಲ್ಲಿ ಹೇಳಿದ್ದಾರೆ.
ನಿಫೆಡಿಪೈನ್‌ನ ಅಧಿಕ ಡೋಸ್‌ನ್ನು ಸೇವಿಸುವ ವ್ಯಕ್ತಿಗಳಲ್ಲಿ ದಿಢೀರ್ ಹೃದಯ ಸ್ತಂಭನದ ಅಪಾಯ ಡಿಹೈಡ್ರೊಪೈರಿಡಿನ್‌ಗಳನ್ನು ತೆಗೆದುಕೊಳ್ಳದ ಅಥವಾ ಆಮ್ಲೊಡಿಪೈನ್ ಅನ್ನು ತೆಗೆದುಕೊಳ್ಳುತ್ತಿರುವ ವ್ಯಕ್ತಿಗಳಿಗಿಂತ ಹೆಚ್ಚಾಗಿರುವುದನ್ನು ಸಂಶೋಧಕರ ವಿಶ್ಲೇಷಣೆಯು ಬೆಟ್ಟು ಮಾಡಿದೆ.
ಇವೆರಡೂ ಔಷಧಿಗಳು ಹಲವಾರು ವರ್ಷಗಳಿಂದ ಬಳಕೆಯಲ್ಲಿರುವುದು ಮತ್ತು ಇವು ಒಂದೇ ವಿಧಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಪರಿಣಾಮಗಳು ಭಿನ್ನವಾಗಿರುವುದು ಸಂಶೋಧಕರಿಗೆ ಅಚ್ಚರಿಯನ್ನು ಮೂಡಿಸಿದೆ.
ನಿಫೆಡಿಪೈನ್‌ನ ಅಧಿಕ ಡೋಸ್ ಸೇವನೆಯು ಮಾರಣಾಂತಿಕ ಅನಿಯಮಿತ ಹೃದಯಬಡಿತದಿಂದಾಗಿ ದಿಢೀರ್ ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಆಮ್ಲಿಡಿಪೈನ್ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ ಎನ್ನುವುದು ಅಧ್ಯಯನದಲ್ಲಿ ಕಂಡು ಬಂದಿದೆ. ಆದರೆ ತಮ್ಮ ಅಧ್ಯಯನದಲ್ಲಿ ಒಂದು ವರ್ಷ ಕಾಲ ಅಧಿಕ ರಕ್ತದೊತ್ತಡ ಮತ್ತು ಆ್ಯಂಜಿನಾ ಚಿಕಿತ್ಸೆಗಾಗಿ ಈ ಔಷಧಿಗಳನ್ನು ಬಳಸಿ ನೋಡಿರುವ ಸಂಶೋಧಕರು,ಯಾವುದೇ ಕ್ರಮವನ್ನು ಕೈಗೊಳ್ಳುವ ಮುನ್ನ ಇದೇ ಫಲಿತಾಂಶವನ್ನು ಪ್ರತಿಬಿಂಬಿಸುವ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿರುವುದರಿಂದ ಅಧ್ಯಯನದ ಫಲಿತಾಂಶವನ್ನು ಎಚ್ಚರಿಕೆಯಿಂದ ವ್ಯಾಖ್ಯಾನಿಸಬೇಕಿದೆ ಎಂದು ಒತ್ತಿ ಹೇಳಿದ್ದಾರೆ.
ಸದ್ಯಕ್ಕೆ ಸಂಶೋಧಕರು ರೋಗಿಗಳು ತಮ್ಮ ವೈದ್ಯರೊಂದಿಗೆ ಸಮಾಲೋಚಿಸಿ ಆ್ಯಂಜಿನಾ ಮತ್ತು ಅಧಿಕ ರಕ್ತದೊತ್ತಡಕ್ಕಾಗಿ ನಿಫೆಡಿಪೈನ್ ಅನ್ನು ಒಂದು ಮಿತಿಯಲ್ಲಿ ಸೇವಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.