ಸಿಖ್ ಸಂಘಟನೆಗಳ ಹೇಳಿಕೆ: ಭಾರತ ಒಂದು ಹಿಂದೂ ರಾಷ್ಟ್ರವಲ್ಲ
ಸಿಖ್ ಧರ್ಮವು ಹಿಂದೂ ಧರ್ಮದ ಒಂದು ಭಾಗವೆಂಬ ಆರೆಸ್ಸೆಸ್‌ನ ವಾದವು ಹಿಂದೂ ರಾಷ್ಟ್ರೀಯತೆ ರಾಜಕೀಯ ಕಾರ್ಯಸೂಚಿಯ (ಅಜೆಂಡಾ) ಒಂದು ಭಾಗವಾಗಿದೆ. ಸಿಂಧು ನದಿಯಿಂದ ಸಾಗರಗಳವರೆಗೆ ಚಾಚಿರುವ ಭೂಭಾಗದಲ್ಲಿ ವಾಸಿಸುವವನೇ ಹಿಂದೂ ಎಂಬ ಸಾವರ್ಕರ್ ಅವರ ವ್ಯಾಖ್ಯಾನದಿಂದ ಈ ಅಜೆಂಡಾ ಆರಂಭವಾಗುತ್ತದೆ. ಈ ವ್ಯಾಖ್ಯಾನವು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳನ್ನು ‘ವಿದೇಶಿ ಧರ್ಮಗಳು’ ಎಂದು ಪರಿಗಣಿಸುತ್ತದೆ.
ಆರೆಸ್ಸೆಸ್ ಸಿದ್ಧಾಂತಿಗಳು ಹಾಗೂ ನಾಯಕರು ಭಾರತ ಒಂದು ಹಿಂದೂ ರಾಷ್ಟ್ರವೆಂದು ಆಗಾಗ ಹೇಳುತ್ತಿರುತ್ತಾರೆ ಇದು ಅಲ್ಪಸಂಖ್ಯಾತರಿಗೆ ವಿಶೇಷವಾಗಿ ಮುಸ್ಲಿಮರಿಗೆ, ಸಿಖ್ಖರು ಮತ್ತು ಭಾರತದ ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಎಲ್ಲರಿಗೂ ತುಂಬಾ ಸಿಟ್ಟು ಬರಿಸುವ ವಿಷಯ. ಈ ವರ್ಷ ದಸರಾ ಹಬ್ಬದ ವೇಳೆ ಆರೆಸ್ಸೆಸ್ ಮಹಾನಾಯಕ ಮೋಹನ್ ಭಾಗವತ್ ತನ್ನ ಒಂದು ಗಂಟೆಯ ಭಾಷಣದಲ್ಲಿ ಇದೇ ವಿಷಯವನ್ನು ಪುನಃ ಹೇಳಿದಾಗ ಬಹಳಷ್ಟು ಸಿಖ್ ಸಂಘಟನೆಗಳು ಹಾಗೂ ಬುದ್ಧಿಜೀವಿಗಳು ಈ ಕುರಿತು ತಮ್ಮ ವಿರೋಧ ವ್ಯಕ್ತಪಡಿಸಿದರು ಹಲವು ಸ್ಥಳಗಳಲ್ಲಿ ಭಾಗವತರ ಈ ಹೇಳಿಕೆಯ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸಲಾಗಿದೆ.
‘ಪಂಜಾಬಿ ಟ್ರಿಬ್ಯೂನ್’ ಹಾಗೂ ‘ನವ ಜಮಾನ’ ದಂತಹ ಪ್ರಮುಖ ಪಂಜಾಬಿ ವರ್ತಮಾನ ಪತ್ರಿಕೆಗಳು ಈ ಹೇಳಿಕೆಯನ್ನು ಕಟುವಾದ ಶಬ್ದಗಳಲ್ಲಿ ಖಂಡಿಸಿದವು. ಎನ್‌ಡಿಎ ಸರಕಾರದ ಒಂದು ಭಾಗ ಹಾಗೂ ಬಿಜೆಪಿಯ ಮಿತ್ರಪಕ್ಷವಾಗಿರುವ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮತ್ತು ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿ (ಎಸ್‌ಜಿ ಪಿಸಿ) ಕೂಡ ಭಾಗವತರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದವು. ಆರೆಸ್ಸೆಸ್‌ನ ಕ್ರಿಯೆಗಳು ದೇಶದಲ್ಲಿ ವಿಭಜನೆಗಳನ್ನು ಸೃಷ್ಟಿಸುತ್ತವೆಂದು ಅಕಾಲ್ ತಖ್ತ್‌ನ ಹಂಗಾಮಿ ಜಾತೆದಾರ್ ಗ್ಯಾನಿ ಹರ್ಪ್ರೀತ್ ಸಿಂಗ್ ಹೇಳಿದರು. ‘‘ಆರೆಸ್ಸೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ದೇಶದ ಹಿತಾಸಕ್ತಿಗಳಿಗೆ ಪೂರಕವಾಗಿಲ್ಲ’’ ಎಂದು ಅವರು ಅಮೃತಸರದಲ್ಲಿ ಮಾಧ್ಯಮದವರಿಗೆ ಹೇಳಿದರು. ಹಾಗೆಯೇ ಪಂಜಾಬ್ ಲೋಕ್ ಮೋರ್ಚಾದ ಮುಖ್ಯಸ್ಥ ಅಮೋಲಕ್ ಸಿಂಗ್ ಇನ್ನಷ್ಟು ಕಟುವಾದ ಶಬ್ದಗಳನ್ನು ಬಳಸಿ ಭಾಗವತರ ಹೇಳಿಕೆ ಇನ್ನಷ್ಟು ದೊಡ್ಡ ಒಳಸಂಚಿನ ಒಂದು ಭಾಗ ಮತ್ತು ಎಚ್ಚರಿಕೆಯ ಗಂಟೆ ಎಂದು ಹೇಳಿದರು.
ಆರೆಸ್ಸೆಸ್ ಸಿಖ್ಖರನ್ನು ಹಿಂದೂ ಧರ್ಮದ ಒಂದು ಭಾಗವೆಂದು ಬಿಂಬಿಸುತ್ತಿರುವುದೇ ಆ ಹೇಳಿಕೆಯ ವಿರುದ್ಧ ಸಿಖ್ ಸಂಘಟನೆಗಳು ಕಟುವಾಗಿ ಪ್ರತಿಕ್ರಿಯಿಸಲು ಕಾರಣ. ಸಿಕ್ಖರೂ ಈ ರೀತಿ ಪ್ರತಿಕ್ರಿಯಿಸುತ್ತಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. ಈ ಹಿಂದೆ 2000ದಲ್ಲಿ ಅಂದು ಆರೆಸ್ಸೆಸ್ ಸರಸಂಘಚಾಲಕರಾಗಿದ್ದ ಕೆ. ಸುದರ್ಶನ್ ಅವರು ಸಿಖ್ ಧರ್ಮವು ಹಿಂದೂ ಧರ್ಮದ ಒಂದು ಪಂಥ; ಮೊಘಲರ ದಬ್ಬಾಳಿಕೆಯಿಂದ ಹಿಂದೂಗಳನ್ನು ರಕ್ಷಿಸಲು ಖಾಲ್ಸಾವನ್ನು ಹುಟ್ಟು ಹಾಕಲಾಯಿತು ಎಂದು ಹೇಳಿದಾಗಲೂ ಸಿಖ್ಖರು ಇದೇ ರೀತಿಯಾಗಿ ಪ್ರತಿಕ್ರಿಯಿಸಿದ್ದರು. ಸಿಖ್ ಧರ್ಮವನ್ನು ಹಿಂದೂ ಧರ್ಮದ ತೆಕ್ಕೆಯೊಳಗೆ ಸೆಳೆದುಕೊಳ್ಳಲು ಆರೆಸ್ಸೆಸ್, ರಾಷ್ಟ್ರೀಯ ಸಿಖ್ ಸಂಗತ್ ಎಂಬ ಒಂದು ಸಂಘಟನೆ ಸ್ಥಾಪಿಸಿದೆ.
ಗುರುನಾನಕ್‌ರವರಿಂದ ಸಿಖ್ ಧರ್ಮದ ಸ್ಥಾಪನೆಯಾದದ್ದು ಹದಿನಾರನೇ ಶತಮಾನದ ಭಾರತದಲ್ಲಿ ಇದ್ದ ಬ್ರಾಹ್ಮಣಶಾಹಿಯ ವಿರುದ್ಧವಾದ ಒಂದು ಪ್ರತಿಕ್ರಿ ಯೆಯಾಗಿ. ನಾನಕ್ ಹಾಗೂ ಅವರ ಉತ್ತರಾಧಿಕಾರಿಗಳು ಬ್ರಾಹ್ಮಣಶಾಹಿಯನ್ನು ವಿರೋಧಿಸಿದ್ದರು.
ನಾನಕ್, ವಿಶೇಷವಾಗಿ ಸಂತ ಕಬೀರ ಹಾಗೂ ಬಾಬಾ ಫರೀದ್ ಅವರಿಂದ ಸ್ಫೂರ್ತಿ ಪಡೆದಿದ್ದರು. ಸಿಖ್ ಧರ್ಮವು ಮಾನವತಾವಾದ ಹಾಗೂ ಎಲ್ಲ ಜೀವಿಗಳ ಸಮಾನತೆಯನ್ನು ಬೋಧಿಸುವ ಹಲವು ಮೂಲಗಳಿಂದ ಸ್ಫೂರ್ತಿ ಪಡೆದಿರುವ ಧರ್ಮ. ನಾನಕ್ ಇಸ್ಲಾಂ ಹಾಗೂ ಹಿಂದೂ ಧರ್ಮದ ಅಂಧಾನುಯಾಯಿಗಳನ್ನು ಖಂಡಿಸಿದರು. ಅಂತರ್‌ಧರ್ಮೀಯ ಸಂಬಂಧಗಳಿಗೆ ಅವರು ಮಹತ್ವ ನೀಡಿದರು. ಅವರ ಬೋಧನೆಗಳು ಒಂದು ಮಟ್ಟದಲ್ಲಿ ಎರಡೂ ಧರ್ಮಗಳ ಮೌಲ್ಯಗಳ ತಿರುಳು ಆಗಿದೆ.
ಸಿಖ್ ಧರ್ಮವು ಹಿಂದೂ ಧರ್ಮದ ಒಂದು ಭಾಗವೆಂಬ ಆರೆಸ್ಸೆಸ್‌ನ ವಾದವು ಹಿಂದೂ ರಾಷ್ಟ್ರೀಯತೆ ರಾಜಕೀಯ ಕಾರ್ಯಸೂಚಿಯ (ಅಜೆಂಡಾ) ಒಂದು ಭಾಗವಾಗಿದೆ. ಸಿಂಧು ನದಿಯಿಂದ ಸಾಗರಗಳವರೆಗೆ ಚಾಚಿರುವ ಭೂಭಾಗದಲ್ಲಿ ವಾಸಿಸುವವನೇ ಹಿಂದೂ ಎಂಬ ಸಾವರ್ಕರ್ ಅವರ ವ್ಯಾಖ್ಯಾನದಿಂದ ಈ ಅಜೆಂಡಾ ಆರಂಭವಾಗುತ್ತದೆ. ಈ ವ್ಯಾಖ್ಯಾನವು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳನ್ನು ‘ವಿದೇಶಿ ಧರ್ಮಗಳು’ ಎಂದು ಪರಿಗಣಿಸುತ್ತದೆ.
ರಾಜಕೀಯ ಅವಶ್ಯಕತೆಗಳಿಗಾಗಿ ವ್ಯಾಖ್ಯಾನಗಳು ಬದಲಾಗುತ್ತಾ ಬಂದಿದೆ. ಈಗ ಇತರ ಎಲ್ಲರನ್ನೂ ಹಿಂದೂಗಳೇ ಎಂದು ಕರೆಯುವ ಪ್ರಯತ್ನ ನಡೆದಿದೆ; ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನ್ನರನ್ನು ಕೂಡ ಹಿಂದೂಗಳೆಂದು ಕರೆಯಲಾಗುತ್ತಿದೆ. ಇದು ತುಂಬಾ ಬುದ್ಧಿವಂತಿಕೆಯ ನಡೆಯಾಗಿದೆ: ಮೊದಲು ಎಲ್ಲರನ್ನೂ ಹಿಂದೂಗಳೆಂದು ಕರೆಯುವುದು; ಬಳಿಕ ಅವರ ಮೇಲೆ ಹಿಂದೂ ಅಸ್ಮಿತೆಯ ಸಂಕೇತಗಳನ್ನು (ಗೋವು, ಗೀತೆ, ಗಂಗೆ, ಶ್ರೀರಾಮ) ಹೇರುವುದು. (199ಂರಲ್ಲಿ) ಮುರಳಿ ಮನೋಹರ ಜೋಶಿಯವರು ಬಿಜೆಪಿ ಅಧ್ಯಕ್ಷರಾದಾಗ ಎಲ್ಲಾ ಮುಸ್ಲಿಮರು ಅಹಮದೀಯ ಹಿಂದೂಗಳು ಹಾಗೂ ಎಲ್ಲ ಕ್ರಿಶ್ಚಿಯನರು ಕ್ರಿಸ್ತಿ ಹಿಂದುಗಳೆಂದು ಚಾಣಾಕ್ಷತೆಯಿಂದ ಹೇಳಿದ್ದರು.
ಜೈನರು ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಬಹಳ ಸಮಯದಿಂದ ಹೋರಾಡುತ್ತಿದ್ದಾರೆ. ಬೌದ್ಧ ಧರ್ಮ ಅಥವಾ ಸಿಖ್ ಧರ್ಮದ ಅನುಯಾಯಿಗಳು ತಮ್ಮ ಧಾರ್ಮಿಕ ಅಸ್ಮಿತೆಯನ್ನು ಮರೆಯುವುದಾಗಲಿ ಅಥವಾ ಬಿಟ್ಟು ಬಿಡುವುದಾಗಲಿ ಸುಲಭದ ಮಾತಲ್ಲ. ಈ ಮೊದಲು ಕೂಡ ಸಿಖ್ ಅಸ್ಮಿತೆ ಹಾಗೂ ಪಂಜಾಬಿ ಭಾಷೆಯನ್ನು ಅಮುಖ್ಯಗೊಳಿಸುವ ಪ್ರಯತ್ನ ನಡೆದಿತ್ತು. ಆಗ ಭಾಯಿ ಕಹನ್ ಸಿಂಗ್‌ರವರು ‘ಹಮ್ ಹಿಂದೂ ನಹೀಂ’ (ನಾವು ಹಿಂದೂಗಳಲ್ಲ) ಎಂಬ ಒಂದು ಪುಸ್ತಕ ಬರೆದಿದ್ದರು. ಆರೆಸ್ಸೆಸ್ ಸಿಖ್ಖರನ್ನು ಕೇಶಧಾರಿ ಹಿಂದೂಗಳೆಂದು ಕರೆಯಬಯಸುತ್ತದೆ; ಆದರೆ ಸಿಖ್ಖರು ತಾವು ಧಾರ್ಮಿಕ ಮಟ್ಟದಲ್ಲಿ ಸಿಖ್ಖರೇ ಎಂದು ಹೇಳುತ್ತಾರೆ. ಪ್ರತಿಯೊಬ್ಬ ಭಾರತೀಯನೂ ತನ್ನದೇ ಆದ ಧರ್ಮವನ್ನು ಅನುಸರಿಸಬೇಕು ಮತ್ತು ಆರೆಸ್ಸೆಸ್ ಸಿಕ್ಖರ ಮೇಲೆ ಹಿಂದೂ ನಡಾವಳಿಗಳನ್ನು ಹೇರಲು ಪ್ರಯತ್ನಿಸಬಾರದೆಂದು ಹಲವಾರು ಸಿಖ್ ಸಿದ್ಧಾಂತಿಗಳು ಹೇಳಿದ್ದಾರೆ. ಸಿಖ್ಖರ ಪರಂಪರೆಗಳು ಬ್ರಾಹ್ಮಣಶಾಹಿ ಕ್ರಮ ಸಂಪ್ರದಾಯಗಳಿಂದ ಭಿನ್ನವಾಗಿವೆ. ಗುರುಗ್ರಂಥ ಸಾಹೇಬ್ ಹೀಗಾಗಿಯೇ ಸಂತ ಪರಂಪರೆ, ಸೂಫಿ ಮತ್ತು ಭಕ್ತಿ ಪಂಥದ ಹಲವು ಅಂಶಗಳನ್ನು ತನ್ನೊಳಗೆ ಹೊಂದಿದೆ. ಅಮೃತಸರದ ಸ್ವರ್ಣ ದೇವಾಲಯಕ್ಕೆ ಬುನಾದಿ ಕಲ್ಲು ಹಾಕಲು ಮಿಯಾನ್ ಮೀರ್ ಅವರನ್ನು ಆಹ್ವಾನಿಸಲಾಗಿತ್ತು ಎಂಬುದನ್ನು ನಾವು ಜ್ಞಾಪಿಸಿಕೊಳ್ಳಬೇಕಾಗಿದೆ.
ಸಿಖ್ ಧರ್ಮವು ಹಿಂದೂ ಧರ್ಮದ ಒಂದು ಪಂಥವೆಂದು ಪ್ರಚಾರ ಮಾಡುವುದರಲ್ಲಿ ಆರೆಸ್ಸೆಸ್‌ನ ಒಂದು ಅಂಗ ಸಂಸ್ಥೆಯಾಗಿರುವ ರಾಷ್ಟ್ರೀಯ ಸಿಖ್ ಸಂಘಚ್ ಪಂಜಾಬಿನಲ್ಲಿ ಸಕ್ರಿಯವಾಗಿದೆ. ತನ್ನ ಮೂಲದಲ್ಲಿ ಬ್ರಾಹ್ಮಣಶಾಹಿ ಮೌಲ್ಯಗಳನ್ನು ಹೊಂದಿರುವ ಆರೆಸ್ಸೆಸ್‌ನ ಹಿಂದುತ್ವ ಹಾಗೂ ಹಿಂದೂ ರಾಷ್ಟ್ರೀಯತೆಯ ಕಾರ್ಯಸೂಚಿ, ಸಿಖ್ ಧರ್ಮ ಯಾವುದನ್ನು ಪ್ರತಿನಿಧಿಸುತ್ತದೋ ಅದರಿಂದ ತುಂಬ ದೂರದಲ್ಲಿದೆ. ಆದ್ದರಿಂದ ಭಾರತ ಒಂದು ಹಿಂದೂ ರಾಷ್ಟ್ರವೆಂಬ ಹೇಳಿಕೆಯನ್ನು ಬಹುತೇಕ ಸಿಖ್ ಸಂಘಟನೆಗಳು ಹಾಗೂ ಸಿದ್ಧಾಂತಿಗಳು ಒಟ್ಟಾಗಿ ವಿರೋಧಿಸುತ್ತಿರುವುದರಲ್ಲಿ ಆಶ್ಚರ್ಯವಿಲ್ಲ.