varthabharthi


ಕೃತಿ ಪರಿಚಯ

ಈ ಹೊತ್ತಿನ ಹೊತ್ತಿಗೆ

ದಲಿತ ಸಂಸ್ಕೃತಿಯ ‘ಸಂಶೋಧನೆ’

ವಾರ್ತಾ ಭಾರತಿ : 4 Nov, 2019
-ಕಾರುಣ್ಯಾ

ಧುನಿಕ ಕನ್ನಡ ಸಾಹಿತ್ಯದಲ್ಲಿ ನವೋದಯ, ನವ್ಯ ಘಟ್ಟಗಳ ಹಾಗೆಯೇ 1970ರಿಂದ 80ರ ದಶಕದಲ್ಲಿ ಆರಂಭವಾದ ಬಂಡಾಯ ಹಾಗೂ ದಲಿತ ಪಂಥಗಳು ಅತ್ಯಂತ ಪ್ರಮುಖ ಘಟ್ಟಗಳು. ಬಂಡಾಯ ಹಾಗೂ ದಲಿತ ಪಂಥಗಳ ಕಾಲದಲ್ಲಿ ಕನ್ನಡದಲ್ಲಿ ಅನೇಕ ಮಹತ್ವದ ಕೃತಿಗಳು ಪ್ರಕಟವಾಗಿವೆ. ಆದರೆ ಪ್ರಾತಿನಿಧಿಕ ದಲಿತ ಬರವಣಿಗೆಗಳನ್ನು ಒಳಗೊಂಡ ಸಂಪುಟಗಳು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ‘ದಲಿತ ಸಾಹಿತ್ಯ ಸಂಪುಟ ರಚನಾ ಸಮಿತಿ’ಯೊಂದನ್ನು ಅಸ್ತಿತ್ವಕ್ಕೆ ತಂದಿತು. ಆ ಮೂಲಕ ಹತ್ತು ಸಂಪುಟಗಳನ್ನು ಹೊರತರಲು ಯೋಜನೆ ರೂಪಿಸಿತು. ಮೊದಲ ಕಂತಿನಲ್ಲಿ ಐದು ಸಂಪುಟಗಳನ್ನು ಹೊರತರಲಾಗಿದೆ. ಆ ಸಂಪುಟದ ಭಾಗವಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಸಂಪಾದಕತ್ವದ ‘ದಲಿತ ಸಾಹಿತ್ಯ ಸಂಪುಟ-ಸಂಶೋಧನೆ’ ಕೃತಿ ಇಲ್ಲಿದೆ. ಈ ಕೃತಿಯಲ್ಲಿ ಒಟ್ಟು 20 ಲೇಖನಗಳಿವೆ.

 ಡಾ. ಎಂ.ಬಿ. ನೇಗಿನಾಳ ಅವರ ‘ಕರ್ನಾಟಕ ಬೇಡ ಜನಾಂಗ: ಒಂದು ಪರಿಚಯ’, ಡಾ. ಮೈಲಹಳ್ಳಿ ರೇವಣ್ಣ ಅವರ ‘ಜಾನಾಂಗಿಕ ಹಿನ್ನೆಲೆ: ಮಾದರರ ಮೂಲ’, ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ‘ಸವರ್ಣೀಯರೊಡನೆ ಅಸ್ಪಶ್ಯರ ಸಾಂಸ್ಕೃತಿಕ ಹಾಗೂ ರಾಜಕೀಯ ಅಂತರ್ ಸಂಬಂಧಗಳು’, ಡಾ. ಎಚ್.ಟಿ. ಪೋತೆ ಅವರ ‘ಮಾಂಗರವಾಡಿಗಳ ಸಂಸ್ಕೃತಿ ಶೋಧ’, ಡಾ. ಶಿವಾನಂದ ಕೆಳಗಿನಮನಿ ಅವರ ‘ಕರ್ನಾಟಕದಲ್ಲಿ ಮಾತಂಗಿ ಸಂಸ್ಕೃತಿ’, ಡಾ. ಅರ್ಜುನ ಗೊಳಸಂಗಿ ಅವರ ‘ಬುರುಬುರು ಪೋಚಮ್ಮಗಳು’, ಡಾ. ಮಲ್ಲೇಪುರಂ ಜಿ. ವೆಂಕಟೇಶ ಅವರ ‘ಶಾಸನಗಳಲ್ಲಿ ಅಸ್ಪಶ್ಯತೆಯ ಪರಿಕಲ್ಪನೆ’, ಡಾ. ನೆಲ್ಲಿಕಟ್ಟೆ ಸಿದ್ದೇಶ ಅವರ ‘ಛಲವಾದಿ ಸಮುದಾಯದ ಪಾರಂಪರಿಕ ನ್ಯಾಯವ್ಯವಸ್ಥೆ’, ಡಾ. ಹರಿಲಾಲ ಪವಾರ ಅವರ ‘ಡಕ್ಕಲಿಗರು: ಹೊಗೆ ಇಲ್ಲದ ಊಟ ಮಾಡುವವರು’, ಡಾ. ಧನವಂತ ಹಾಜವಗೋಳರ ‘ಮುಳುಗುಂ ನಾಡು’, ಪ್ರೊ. ಎಂ. ಸುಮಿತ್ರ ಅವರ ‘ಖಗೇಂದ್ರ ಮಣಿ ದರ್ಪಣಂ’ ಲೇಖನಗಳು ಶೋಧ ವಿಭಾಗಗಳಲ್ಲಿವೆ. ವಿಶ್ಲೇಷಣೆಯ ವಿಭಾಗದಲ್ಲಿ ಡಾ. ಪಿ. ಕೆ. ಖಂಡೋಬಾ ಅವರ ‘ಜೈನ ಕವಿಗಳ ಕನ್ನಡ ಕಾವ್ಯಮಾರ್ಗ’, ಡಾ. ಪ್ರಶಾಂತ ನಾಯಕ ಅವರ ‘ಜೈನ ಸಾಹಿತ್ಯ: ಗಂಡು ಹೆಣ್ಣಿನ ಸಂಬಂಧ’, ಡಾ. ಅಪ್ಪಗೆರೆ ಸೋಮಶೇಖರ ಅವರ ‘ಜೈನಧರ್ಮದ ತಾತ್ತ್ವಿಕ ನೆಲೆ: ಸುಕುಮಾರ ಸ್ವಾಮಿ ಕತೆಯ ಹೊಸ ಓದು’, ಡಾ. ಕೆ. ಆರ್. ದುರ್ಗಾದಾಸ್ ಅವರ ‘ಕೆಳವರ್ಗದ ವಚನಕಾರರಲ್ಲಿ ಸಾಮಾಜಿಕ ಕಾಳಜಿ’, ಡಾ. ಕಾ.ವೆಂ. ಶ್ರೀನಿವಾಸ ಮೂರ್ತಿ ಅವರ ‘ವಚನಕಾರರು ನಾಡು-ನುಡಿ ಪ್ರಜ್ಞೆ’, ಡಾ. ಅಣ್ಣಮ್ಮ ಅವರ ‘ಶರೀಫರು ಮತ್ತು ಸಾಮಾಜಿಕ ವಿನ್ಯಾಸ’, ಡಾ. ಚಿನ್ನಸ್ವಾಮಿ ಸೋಸಲೆ ಅವರ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಲಿತ ಶಿಕ್ಷಣದ ಹಿನ್ನೆಲೆ’, ಡಾ. ಬಿ. ಎಂ. ಪುಟ್ಟಯ್ಯ ಅವರ ‘ದಲಿತ ಸಾಹಿತ್ಯಚಳವಳಿ: ಸೃಜನಶೀಲ ಪ್ರಕಾರಗಳ ಅವಲೋಕನ’, ಡಾ. ಸಂತೋಷ ಸು. ಹಾನಗಲ್ಲ ಅವರ ‘ಪ್ರಾಚೀನತೆಯಲ್ಲಿ ಭಾಷಾ ಅನ್ಯೋನ್ಯತೆ’ ಬರಹಗಳು ಇವೆ. ಇಲ್ಲಿ ದಲಿತ ಸಂಸ್ಕೃತಿಯ ಕುರಿತ ಶೋಧನೆಗಳು ಒಂದೆಡೆಯಾದರೆ, ದಲಿತ ಬರಹಗಾರರೇ ನಡೆಸಿದ ವಿಶ್ಲೇಷಣೆಗಳನ್ನು ನಾವು ಕಾಣಬಹುದು.

29ಂ ಪುಟಗಳ ಈ ಕೃತಿಯ ಮುಖಬೆಲೆ 38ಂ ರೂ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)