ತುಕ್ಕು ಹಿಡಿಯುತ್ತಿರುವ ತುಂಬೆ, ಕಣ್ಣೂರು ಸ್ಕೈವಾಕ್
ಪಾದಚಾರಿಗಳ ಪಾಲಿಗೆ ಮೇಲ್ಸೇತುವೆಗಳು ದೂರ
► ಜಾಹೀರಾತಿಗಾಗಿ ಸೀಮಿತವಾದ ಪಾದಚಾರಿ ಮೇಲ್ಸೇತುವೆ
► ಅಗತ್ಯ ಸ್ಥಳಗಳಲ್ಲಿ ಸ್ಕೈವಾಕ್‌ಗೆ ಒತ್ತಾಯ
ಬಂಟ್ವಾಳ, ನ.4: ಸಂಚಾರ ದಟ್ಟಣೆ ಮಧ್ಯೆ ರಸ್ತೆ ದಾಟುವ ಅಪಾಯವನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ವಿಸಿರುವ ‘ಪಾದಚಾರಿ ಮೇಲ್ಸೇತುವೆ’ಗಳು ಒಂದೆಡೆ ನಿರ್ವಹಣೆಯಿಲ್ಲದೆ ಅವ್ಯವಸ್ಥೆಯಿಂದಿದ್ದರೆ, ಮತ್ತೊಂದಡೆ ಜಾಹೀರಾತು ಪ್ರದರ್ಶನಕ್ಕಷ್ಟೇ ಸೀಮಿತಗೊಂಡಿವೆ. ಹೆದ್ದಾರಿಯಲ್ಲಿರುವ ಸ್ಕೈವಾಕ್‌ಗಳು ಸಾರ್ವಜನಿಕ ಬಳಕೆಯಿಂದ ದೂರ ಉಳಿದಿವೆ.
ತುಂಬೆ ಸ್ಕೈವಾಕ್: ವಿದ್ಯಾರ್ಥಿಗಳ ಸುಕ್ಷತೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2013ರಲ್ಲಿ ಸುಮಾರು 36 ಲಕ್ಷ ರೂ. ವೆಚ್ಚದಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ಕಾಲೇಜಿನ ಬಳಿಯಲ್ಲಿ ಸ್ಕೈವಾಕ್‌ನ್ನು ನಿರ್ಮಿಸಿದೆ. ಆದರೆ, ಈ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆಯೇ ಹೊರತು ಇದರ ನಿರ್ವಹಣೆಗೆ ಮಾಡದಿರುವುದರಿಂದ ಸೇತುವೆಯು ತುಕ್ಕು ಹಿಡಿದಿದ್ದು, ಶಿಥಿಲಾವ್ಯವಸ್ಥೆಯಲ್ಲಿದೆ. ಗಾಳಿ ಮಳೆಯಿಂದ ಸ್ಕೈವಾಕ್‌ನ ಮೇಲ್ಛಾವಣೆ ಹಾರಿ ಹೋಗಿದ್ದು, ಮಳೆ ನೀರು ಒಳ ನಿಂತು ಉಕ್ಕಿನಿಂದ ನಿರ್ಮಿಸಿದ ಮೇಲ್ಸೇತುವೆ ತುಕ್ಕು ಹಿಡಿಯುತ್ತಿದೆ. ಕಬ್ಬಿಣದ ನೆಲಹಾಸು ಶಿಥಿಲಗೊಂಡಿದ್ದು, ಹೆಚ್ಚಿನ ಭಾರ ಬಿದ್ದರೆ ಪಾದಾಚಾರಿಗಳು ರಸ್ತೆಗೆ ಬೀಳುವ ಅಪಾಯವಿದೆ.
ಕಣ್ಣೂರು ಸ್ಕೈವಾಕ್: ಅಡ್ಯಾರ್-ಕಣ್ಣೂರು ಜುಮಾ ಮಸೀದಿಯ ಬಳಿಯಲ್ಲಿರುವ ಸ್ಕೈವಾಕ್ ಪಾದಚಾರಿಗಳ ಬಳಕೆಯಿಲ್ಲದೆ ಸಂಪೂರ್ಣವಾಗಿ ದೂರ ಉಳಿದಿದೆ. ಇಲ್ಲಿನ ಸ್ಕೈವಾಕ್, ಜಾಹೀರಾತು ಫಲಕ ಅಳವಡಿಸಲು ಹಾಗೂ ಕಾರ್ಯಕ್ರಮದ ಕಟೌಟ್, ಬ್ಯಾನರ್ ಹಾಕಲಷ್ಟೇ ಸೀಮಿತವಾಗಿದೆ. ತುಕ್ಕು ಹಿಡಿದಿರುವ ಕಬ್ಬಿಣ ಪೂರ್ತಿ ಬ್ರಿಡ್ಜ್‌ನಸೌಂದರ್ಯವನ್ನೂ ಹಾಳುಗೆಡವಿದೆ. ಕೇವಲ 6 ವರ್ಷಗಳಲ್ಲಿ ಈ ಓವರ್ ಬ್ರಿಡ್ಜ್‌ಗೆ ಈ ರೀತಿಯ ಪರಿಸ್ಥಿತಿ ಬಂದಿರುವುದು ಇಲಾಖೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಅಗತ್ಯವಿದಲ್ಲಿ ಇಲ್ಲ ಸ್ಕೈವಾಕ್
ನಗರವಾಗಿ ಮುಂದುವರಿಯುತ್ತಿರುವ ಫರಂಗಿಪೇಟೆ ಜಂಕ್ಷನ್, ಕೈಕಂಬ, ಬಿ.ಸಿ.ರೋಡ್, ಮೆಲ್ಕಾರ್ ಹಾಗೂ ಕಲ್ಲಡ್ಕದಂತಹ ಪ್ರದೇಶಗಳಲ್ಲಿ ಸ್ಕೈವಾಕ್ ಅಗತ್ಯವಾಗಿದ್ದು, ಈ ಪ್ರದೇಶಗಳಲ್ಲಿ ಸ್ಕೈವಾಕ್‌ಗಳಿಲ್ಲ. ತುಂಬೆಯಲ್ಲಿ ಶಾಲಾ ಆಡಳಿತದ ನಿಯಮದಿಂದ ಸ್ಕೈವಾಕ್ ಬಳಕೆಯಾಗುತ್ತಿದೆಯಾದರೂ, ಅಡ್ಯಾರ್-ಕಣ್ಣೂರುನಲ್ಲಿ ಪಾದಚಾರಿ ಮಾರ್ಗಗಳು ಬಳಕೆ ಆಗುತ್ತಿಲ್ಲ.
ಶಾಲಾ ಮಕ್ಕಳ ಸುರಕ್ಷತೆಗಾಗಿ ನಿರ್ಮಿಸಲ್ಪಟ್ಟ ಓವರ್ ಬ್ರಿಡ್ಜ್ ಸರಿಯಾದ ನಿರ್ವಹಣೆ ಇಲ್ಲದೆ ನಲುಗುತ್ತಿದೆ. ತುಕ್ಕು ಹಿಡಿದಿರುವ ಕಬ್ಬಿಣ ಒಂದು ಕಡೆಯಾದರೆ ಮೇಲ್ಛಾವಣಿ ಇಲ್ಲದೇ ಮಳೆ ನೀರು ಶೇಖರಣೆಯಾಗಿ ಉಕ್ಕಿನ ಬಿಡಿಭಾಗಗಳೆಲ್ಲವೂ ತುಕ್ಕು ಹಿಡಿದು ದೂಳಾಗಿ ರಾಶಿ ಬಿದ್ದಿದೆ. ಆದಷ್ಟು ಬೇಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಎಚ್ಚೆತ್ತುಕೊಂಡು ಓವರ್‌ಬ್ರಿಡ್ಜ್‌ಗೆ ಮರುಜೀವ ನೀಡಿದರೆ ಒಳ್ಳೆಯದು.
ದಿನೇಶ್ ಎನ್., ತುಂಬೆ, ಪಾದಚಾರಿ
ಅಗತ್ಯವಿರುವ ಸ್ಥಳಗಳಲ್ಲಿ ಸ್ಕೈವಾಕ್ ನಿರ್ಮಿಸಿದರೆ ಹೆಚ್ಚಿನ ಜನರು ಬಳಸುತ್ತಾರೆ. ವಾಹನ ಚಾಲನೆ ಸಲೀಸಾಗುವುದರ ಜೊತೆಗೆ ರಸ್ತೆ ಸುರಕ್ಷತೆಯೂ ಹೆಚ್ಚುತ್ತದೆ. ಸಾರ್ವಜನಿಕ ಓಡಾಟಕ್ಕೆ ಅನುಕೂಲವಿರುವ ಸ್ಥಳಗಳ ಬಗ್ಗೆ ಅಧ್ಯಯನ ಮಾಡುವುದರೊಂದಿಗೆ ಸಂಚಾರ ವಿಭಾಗದ ಪೊಲೀಸರ ಜೊತೆಗೆ ಸಮನ್ವಯ ಸಾಧಿಸಿ, ಅಗತ್ಯ ಪ್ರದೇಶಗಳಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಮುಂದಾಗಲಿ.
ಕಮರುದ್ದೀನ್, ಆಟೊ ಚಾಲಕ