ಕೆಪಿಎಲ್ ಬೆಟ್ಟಿಂಗ್ ಪ್ರಕರಣ: ಬುಕ್ಕಿಗಳ ಬಂಧನಕ್ಕೆ ಲುಕ್‌ಔಟ್ ನೋಟಿಸ್
ಬೆಂಗಳೂರು, ನ.5: ಕರ್ನಾಟಕ ಪ್ರಿಮಿಯರ್ ಲೀಗ್(ಕೆಪಿಎಲ್) ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಸಿಬಿ ತನಿಖಾಧಿಕಾರಿಗಳು, ಬೆಂಗಳೂರು ಬ್ಲಾಸ್ಟರ್ ತಂಡದ ಆಟಗಾರ ನಿಶಾಂತ್ ಶೇಖಾವತ್‌ನನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣ ಸಂಬಂಧ ಈಗಾಗಲೇ ಬಂಧನವಾಗಿರುವ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲಕ ಅಲಿ ಅಸ್ಪಾಕ್ ಟಿ. ಹಾಗೂ ಬೌಲಿಂಗ್ ಕೋಚ್‌ಗಳ ಜೊತೆಗೂಡಿ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದ ಎನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಿ ನಿಶಾಂತ್ ಶೇಖಾವತ್‌ನನ್ನು ವಶಕ್ಕೆ ತೆಗೆದುಕೊಂಡು, ವಿಚಾರಣೆಗೊಳಪಡಿಸಲಾಗಿದೆ.
ನೋಟಿಸ್?: ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದಿದೆ ಎನ್ನಲಾದ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಿಲ್ಲಿಯ ಇಬ್ಬರು ಬುಕ್ಕಿಗಳ ಬಂಧನಕ್ಕೆ ಸಿಸಿಬಿ ಲುಕ್‌ಔಟ್ ನೋಟಿಸ್ ಹೊರಡಿಸಿದೆ ಎಂದು ವರದಿಯಾಗಿದೆ.
ಹೊಸದಿಲ್ಲಿಯ ಬುಕ್ಕಿಗಳಾದ ಜತ್ತಿನ್, ಸಯ್ಯಿಂ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಅಂತರ್‌ರಾಷ್ಟ್ರೀಯ ಆಟಗಾರರ ಜತೆ ಸಯ್ಯಿಂ ಸಂಪರ್ಕ ಹೊಂದಿದ್ದ ಮಾಹಿತಿ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಬುಕ್ಕಿಗಳ ಬಂಧನಕ್ಕಾಗಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದು, ಎಲ್ಲ ವಿಮಾನ ನಿಲ್ದಾಣಗಳಿಗೆ ಆರೋಪಿಗಳ ಕುರಿತು ಮಾಹಿತಿ ರವಾನಿಸಲಾಗಿದೆ. ಇವರ ಬಗ್ಗೆ ಮಾಹಿತಿ ಇದ್ದಲ್ಲಿ ನೀಡುವಂತೆ ಸಿಸಿಬಿ ಮನವಿ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.