ಮಹಾ ಬಿಕ್ಕಟ್ಟು: ಆರೆಸ್ಸೆಸ್ ಮೊರೆಹೋದ ಫಡ್ನವೀಸ್
ಮುಂಬೈ, ನ.6: ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆಗೆ ಅಂತಿಮ ಗಡುವು ಸಮೀಪಿಸುತ್ತಿದ್ದು, 72 ಗಂಟೆಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶಿವಸೇನೆ ಜತೆಗಿನ ಬಿಕ್ಕಟ್ಟು ಶಮನ ಮಾಡುವ ಸಲುವಾಗಿ ಆರೆಸ್ಸೆಸ್ ಮೊರೆ ಹೋಗಿದ್ದಾರೆ.
ನಾಗ್ಪುರಕ್ಕೆ ದಿಢೀರ್ ಪ್ರಯಾಣ ಬೆಳೆಸಿರುವ ಫಡ್ನವೀಸ್ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರನ್ನು ಭೇಟಿ ಮಾಡಿ ಚರ್ಚೆಗೆ ಮುಂದಾಗಿದ್ದಾರೆ.
ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯ ಮತಗಳ ಎಣಿಕೆ ಕಾರ್ಯ ಅಕ್ಟೋಬರ್ 24ರಂದು ಮುಕ್ತಾಯವಾಗಿದ್ದು, ರಾಜ್ಯದಲ್ಲಿ ಅಧಿಕಾರ ಹಂಚಿಕೆಗೆ 50: 50 ಸೂತ್ರ ಅನುಸರಿಸುವಂತೆ ಬಿಜೆಪಿ ಮಿತ್ರ ಪಕ್ಷವಾದ ಶಿವಸೇನೆ ಷರತ್ತು ವಿಧಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆ ಕಗ್ಗಂಟಾಗಿಯೇ ಉಳಿದಿದೆ. ಅರ್ಧದಷ್ಟು ಸಚಿವ ಸ್ಥಾನಗಳಿಗೆ ಹಾಗೂ ಮುಖ್ಯಮಂತ್ರಿ ಹುದ್ದೆಯನ್ನು ಎರಡೂವರೆ ವರ್ಷ ಕಾಲ ಬಿಟ್ಟುಕೊಡಬೇಕು ಎಂದು ಶಿವಸೇನೆ ಪಟ್ಟು ಹಿಡಿದಿದೆ.
ಬಿಜೆಪಿ ಮೈತ್ರಿಧರ್ಮ ಪಾಲಿಸುತ್ತಿಲ್ಲ ಎಂದು ಆಪಾದಿಸಿ ಕಳೆದ ವಾರ ಶಿವಸೇನೆ ಮುಖಂಡರು ಮೋಹನ್ ಭಾಗ್ವತ್ ಅವರಿಗೆ ಪತ್ರ ಬರೆದು, ಸಮಸ್ಯೆ ಇತ್ಯರ್ಥಪಡಿಸುವಂತೆ ಕೋರಿದ್ದರು. ರೈತ ಹಕ್ಕುಗಳ ಹೋರಾಟಗಾರ ಕಿಶೋರ್ ತಿವಾರಿ ಈ ಮಧ್ಯೆ ಹೇಳಿಕೆ ನೀಡಿ, ಬಿಕ್ಕಟ್ಟು ಬಗೆಹರಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಸಂಧಾನ ತಂಡಕ್ಕೆ ಕರೆ ತರುವಂತೆ ಕೋರಿದ್ದರು.
ಕಳೆದ ವಿಧಾನಸಭೆಯಲ್ಲಿ 122 ಶಾಸಕರನ್ನು ಹೊಂದಿದ್ದ ಬಿಜೆಪಿ ಸದಸ್ಯಬಲ ಈ ಬಾರಿ 105ಕ್ಕೆ ಕುಸಿದಿದ್ದು, ಅಧಿಕಾರ ಹಂಚಿಕೆಗೆ ಫಡ್ನವೀಸ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಬೆಂಬಲ ನೀಡದಿರಲು ಶಿವಸೇನೆ ನಿರ್ಧರಿಸಿದೆ. ಈ ಮಧ್ಯೆ ಮಂಗಳವಾರ ಫಡ್ನವೀಸ್ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.