ಅಲ್ಪಸಂಖ್ಯಾತರ ಭದ್ರತೆ-ಸುರಕ್ಷತೆ ನಮ್ಮ ಕರ್ತವ್ಯ: ಅಬ್ದುಲ್ ಅಝೀಮ್
ಬೆಂಗಳೂರು, ನ.6: ಅಲ್ಪಸಂಖ್ಯಾತರ ಭದ್ರತೆ ಹಾಗೂ ಸುರಕ್ಷತೆ ನಮ್ಮ ಕರ್ತವ್ಯವಾಗಿದ್ದು, ನ.8ರಿಂದ 15ರ ನಡುವೆ ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಹೊರಬೀಳುವ ಸಾಧ್ಯತೆಯಿದೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ತಿಳಿಸಿದರು.
ಗುರುವಾರ ನಗರದ ವಿಶ್ವೇಶ್ವರಯ್ಯ ಗೋಪುರದಲ್ಲಿರುವ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಚೇರಿಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಧಾರ್ಮಿಕ ಮುಖಂಡರೊಂದಿಗೆ ನಡೆಸಿದ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
28 ವರ್ಷಗಳ ಮುನ್ನ 1992ರಲ್ಲಿ ಬಾಬರಿ ಮಸೀದಿ ಧ್ವಂಸವಾಯಿತು. ಅಲ್ಲಿಂದ ಈವರೆಗೆ ಮುಸ್ಲಿಮರು ಹಾಗೂ ಇಡೀ ದೇಶ ಚಿಂತಿತವಾಗಿದೆ. ಈ ಘಟನೆಯ ಬಳಿಕ ಹಲವಾರು ಅಮಾಯಕರು ತಮ್ಮ ಜೀವಗಳನ್ನು ಕಳೆದುಕೊಂಡರು. ಅನೇಕರು ತಮ್ಮ ಮನೆ, ಮಠಗಳನ್ನು ಕಳೆದುಕೊಂಡರು. ಇವತ್ತಿಗೂ ಜೈಲುಗಳಲ್ಲಿ ಹಲವಾರು ಮಂದಿ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಆಡಳಿತ ವ್ಯವಸ್ಥೆಯ ನಿರ್ಲಕ್ಷದಿಂದಾಗಿ ಬಾಬರಿ ಮಸೀದಿ ಧ್ವಂಸವಾಯಿತು. ಇವತ್ತಿನವರೆಗೆ ಆ ನಿರ್ಲಕ್ಷದ ಪರಿಣಾಮವನ್ನು ನಾವು ಅನುಭವಿಸುತ್ತಿದ್ದೇವೆ. ಸುಪ್ರೀಂಕೋರ್ಟ್ ತೀರ್ಪು ಏನೇ ಬರಲಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಬೇಕಾದ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅಬ್ದುಲ್ ಅಝೀಮ್ ತಿಳಿಸಿದರು.
ಅಲ್ಪಸಂಖ್ಯಾತರ ಆಯೋಗದ ವತಿಯಿಂದ ಈವರೆಗೆ ಉಲೇಮಾಗಳು ಹಾಗೂ ಧಾರ್ಮಿಕ ಮುಖಂಡರೊಂದಿಗೆ ಮೂರು ಸಭೆಗಳನ್ನು ಮಾಡಲಾಗಿದೆ. ಇವತ್ತು ಉಲೇಮಾಗಳು, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರ ಜೊತೆ ಸಭೆ ಮಾಡಲಾಗಿದೆ ಎಂದು ಅವರು ಹೇಳಿದರು.
ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಏನೆಲ್ಲಾ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಂಡಿದೆ ಎಂಬ ಮಾಹಿತಿಯನ್ನು ಪಡೆಯಲಾಗಿದೆ. ಸಮಾಜಘಾತುಕ ಶಕ್ತಿಗಳ ನಿಗ್ರಹ, ಸೂಕ್ಷ್ಮ ಪ್ರದೇಶಗಳಲ್ಲಿ ಕೈಗೊಳ್ಳಲಿರುವ ಭದ್ರತೆಯ ಕುರಿತು ಪೊಲೀಸರು ವಿವರಣೆ ನೀಡಿದ್ದಾರೆ ಅಬ್ದುಲ್ ಅಝೀಮ್ ತಿಳಿಸಿದರು.
ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸುವುದು, ಎರಡು ಕೋಮುಗಳ ಗೌರವಾನ್ವಿತ, ಪ್ರತಿಷ್ಠಿತ ವ್ಯಕ್ತಿಗಳನ್ನು ಒಳಗೊಂಡ 10 ಜನರ ಶಾಂತಿ ಸಮತಿಗಳನ್ನು ರಚನೆ ಮಾಡುವುದು, ತೀರ್ಪು ಹೊರಬರುವ ಒಂದು ದಿನ ಮುಂಚಿತವಾಗಿಯೇ ಸೆಕ್ಷನ್ 144 ಜಾರಿ ಮಾಡುವ ಕುರಿತು ಪೊಲೀಸರಿಗೆ ಸಲಹೆ ನೀಡಿದ್ದೇನೆ ಎಂದು ಅವರು ಹೇಳಿದರು.
ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು, ಕ್ಷಿಪ್ರ ಕಾರ್ಯಪಡೆ ವತಿಯಿಂದ ಪಥಸಂಚಲನ ಮಾಡಿ, ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ಸಮಾಜದಲ್ಲಿ ಕೊಮು ಸೌಹಾರ್ದತೆಯನ್ನು ಕಾಪಾಡುವ ಸಂಬಂಧ ಪೊಲೀಸರ ಮೂಲಕ ಒಂದು ಮನವಿ ಪತ್ರ ಹೊರಡಿಸುವಂತೆ ತಿಳಿಸಿದ್ದೇನೆ ಎಂದು ಅಬ್ದುಲ್ ಅಝೀಮ್ ತಿಳಿಸಿದರು.
ಶಾಲೆಗಳಲ್ಲಿ ಶಿಕ್ಷಕರು ಹಾಗೂ ಮಕ್ಕಳ ಮೂಲಕ ಶಾಂತಿಯ ಸಂದೇಶವನ್ನು ಪೋಷಕರಿಗೆ ತಲುಪಿಸುವುದು. ಸಾರ್ವಜನಿಕರೊಂದಿಗೆ ಪೊಲೀಸರು ಯಾವುದೇ ಕಾರಣಕ್ಕೂ ನಿಕೃಷ್ಟವಾಗಿ ವರ್ತಿಸಬಾರದು. ಮಾನವೀಯ ನೆಲೆಗಟ್ಟಿನಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯಬೇಕು ಎಂದು ಅವರು ಹೇಳಿದರು. ಹಿಂದಿನ ಇತಿಹಾಸದಿಂದ ನಾವು ಪಾಠ ಕಲಿಯಬೇಕು. ಯಾವುದೇ ರೀತಿಯ ನಿರ್ಲಕ್ಷವಾಗಬಾರದು. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಸೂಚನೆ ನೀಡಿದ್ದೇನೆ. ಮುಂದಿನ ಪೀಳಿಗೆಯ ಬಗ್ಗೆಯೂ ನಾವು ಗಮನಹರಿಸಬೇಕಿದೆ. ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಶಾಂತಿಯೇ ಅಭಿವೃದ್ಧಿಯ ಅಡಿಪಾಯವಾಗಿದೆ ಎಂದು ಅಬ್ದುಲ್ ಅಝೀಮ್ ತಿಳಿಸಿದರು.