ಸ್ತನ ಕ್ಯಾನ್ಸರ್ ಉಂಟಾಗುವ ಐದು ವರ್ಷಗಳ ಮೊದಲೇ ಅದರ ಲಕ್ಷಣಗಳನ್ನು ಗುರುತಿಸಬಹುದು!
ರಕ್ತ ಪರೀಕ್ಷೆ ನಮ್ಮ ಒಟ್ಟಾರೆ ಆರೋಗ್ಯಕ್ಕೆ ಒಂದು ಇಣುಕು ನೋಟವಾಗಿದೆ. ರಕ್ತ ಪರೀಕ್ಷೆಯು ನಮ್ಮ ಆರೋಗ್ಯದ ಬಗ್ಗೆ ಏನೆಲ್ಲ ಹೇಳಬಲ್ಲದು ಎಂದು ಎಂದಾದರೂ ಯೋಚಿಸಿದ್ದೀರಾ? ಈಗ ರಕ್ತ ಪರೀಕ್ಷೆಯು ಸ್ತನ ಕ್ಯಾನ್ಸರ್ಗೆ ಗುರಿಯಾಗುವ ಅಪಾಯದ ಬಗ್ಗೆಯೂ ಸಾಕಷ್ಟು ಮುಂಚಿತವಾಗಿಯೇ ಹೇಳಬಲ್ಲದು.
ಕ್ಯಾನ್ಸರ್ ಎಂಬ ಮಹಾಮಾರಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ ಮತ್ತು ಕ್ಯಾನ್ಸರ್ ಇದೆಯೆನ್ನುವುದು ಖಚಿತವಾದಾಗ ಕಾಲ ಮಿಂಚಿರುತ್ತದೆ ಎನ್ನುವುದು ನಮಗೆ ಗೊತ್ತು. ಈಗ ಬ್ರಿಟನ್ನಲ್ಲಿ ನಡೆಸಲಾದ ಸಂಶೋಧನೆಯೊಂದು ಮಹಿಳೆಯರು ಸ್ತನ ಕ್ಯಾನ್ಸರ್ಗೆ ಗುರಿಯಾಗುವ ಐದು ವರ್ಷಗಳ ಮೊದಲೇ ಅದರ ಲಕ್ಷಣಗಳನ್ನು ಪತ್ತೆ ಹಚ್ಚುವುದು ಸಾಧ್ಯ ಎನ್ನುವುದನ್ನು ಬಹಿರಂಗಗೊಳಿಸಿದೆ. ಸಂಶೋಧನೆಯು ಆಧುನಿಕ ರೋಗನಿರ್ಧಾರ ಕ್ರಮಕ್ಕೆ ಒತ್ತು ನೀಡಿದ್ದು,ಇದರ ಅಡಿ ನಡೆಸಲಾಗುವ ರಕ್ತ ಪರೀಕ್ಷೆಯಿಂದ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಕಷ್ಟು ಮೊದಲೇ ಅದು ಉಂಟಾಗುವ ಸಾಧ್ಯತೆಗಳನ್ನು ವಿಶ್ಲೇಷಿಸಬಹುದಾಗಿದೆ.
ಸಂಶೋಧಕರು ತಮ್ಮ ಅಧ್ಯಯನಕ್ಕಾಗಿ ಸ್ತನ ಕ್ಯಾನ್ಸರ್ಗಾಗಿ ಚಿಕಿತ್ಸೆ ಪಡೆಯುತ್ತಿರುವ 90 ಮಹಿಳೆಯರು ಮತ್ತು ಸಂಪೂರ್ಣ ಆರೋಗ್ಯವಂತರಾದ 90 ಮಹಿಳೆಯರ ರಕ್ತದ ಸ್ಯಾಂಪಲ್ಗಳನ್ನು ಪಡೆದುಕೊಂಡಿದ್ದರು. ಫಲಿತಾಂಶಗಳ ನಿಖರತೆಯನ್ನು ಖಚಿತಪಡಿಸಲು ಈ ರಕ್ತದ ಸ್ಯಾಂಪಲ್ಗಳನ್ನು ಒಂಭತ್ತು ವಿವಿಧ ಮಾನದಂಡಗಳಡಿ ಪ್ರಯೋಗಾಲಯ ಪರೀಕ್ಷೆಗೊಳಪಡಿ ಸಲಾಗಿತ್ತು.
ರಕ್ತಪರೀಕ್ಷೆಯ ಮೂಲಕ ಆರಂಭದಲ್ಲೇ ಸ್ತನ ಕ್ಯಾನ್ಸರ್ ಸಾಧ್ಯತೆಯನ್ನು ಪತ್ತೆ ಹಚ್ಚುವುದು ಮಧ್ಯಮ ಮತ್ತು ಕೆಳ ಆದಾಯದ ಜನರಿಗೆ ಲಾಭದಾಯವಾಗುತ್ತದೆ,ಏಕೆಂದರೆ ಇಂತಹ ಪರೀಕ್ಷೆಗೆ ಅತ್ಯಂತ ಕಡಿಮೆ ಹಣ ವೆಚ್ಚವಾಗುತ್ತದೆ. ಅಲ್ಲದೆ ಈ ಪರೀಕ್ಷಾ ವಿಧಾನವು ಸ್ತನ ಕ್ಯಾನ್ಸರ್ ಪತ್ತೆಗಾಗಿ ಬಳಸಲಾಗುವ ಸಂಕೀರ್ಣ ಮತ್ತು ದುಬಾರಿ ಯಂತ್ರಗಳ ಮೊರೆ ಹೋಗುವುದನ್ನು ತಪ್ಪಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
2018ರಲ್ಲಿ ಅಂದಾಜು 6.27 ಲಕ್ಷ ಮಹಿಳೆಯರು ಸ್ತನ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದಾರೆ. ಇದು ಇತರ ವಿಧಗಳ ಕ್ಯಾನ್ಸರ್ಗಳಿಂದ ಮಹಿಳೆಯರಲ್ಲಿ ಸಂಭವಿಸುವ ಸಾವುಗಳ ಶೇ.15ರಷ್ಟಾಗಿದೆ.
ನಾವು ಸಂಶೋಧನೆಯನ್ನು ಮುಂದುವರಿಸಬೇಕಿದೆ. ಆದರೆ ಸ್ತನ ಕ್ಯಾನ್ಸರ್ ಉಂಟಾಗುವ ಸಾಕಷ್ಟು ಮೊದಲೇ ಅದರ ಲಕ್ಷಣಗಳನ್ನು ಗುರುತಿಸಲು ಸಾಧ್ಯ ಎನ್ನುವುದು ಈವರೆಗಿನ ಸಂಶೋಧನೆಯಿಂದ ಸ್ಪಷ್ಟವಾಗಿದೆ. ಈ ಸಂಶೋಧನೆಯ ನಿಖರತೆಯನ್ನು ನಾವು ಹೆಚ್ಚಿಸಿದರೆ ಸರಳ ರಕ್ತ ಪರೀಕ್ಷೆಯು ವರ್ಷಗಳಿಗೂ ಮೊದಲೇ ಸ್ತನ ಕ್ಯಾನ್ಸರ್ ಸಾಧ್ಯತೆಯನ್ನು ಗುರುತಿಸುತ್ತದೆ ಎನ್ನುವುದು ದೃಢಪಡಲಿದೆ ಮತ್ತು ಅದನ್ನು ತಡೆಯುವ ನಿಟ್ಟಿನಲ್ಲಿ ಶ್ರಮಿಸಬಹುದಾಗಿದೆ ಎಂದಿರುವ ಸಂಶೋಧಕರು,ಮುಂದಿನ ನಾಲ್ಕೈದು ವರ್ಷಗಳಲ್ಲಿ ಸ್ತನ ಕ್ಯಾನ್ಸರ್ನ್ನು ಗುರುತಿಸುವ ಈ ಸರಳ ರಕ್ತಪರೀಕ್ಷೆಯ ಸೌಲಭ್ಯ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.