ಎನ್ಬಿಎಫ್ಸಿಗಳ ಪುನಶ್ಚೇತನಕ್ಕೆ ವಿಶೇಷ ಕ್ರಮ: ಕೇಂದ್ರದ ಚಿಂತನೆ
ಹೊಸದಿಲ್ಲಿ,ನ.7: ತೀವ್ರವಾದ ಒತ್ತಡಕ್ಕೊಳಗಾಗಿರುವ ಬ್ಯಾಂಕೇತರ ಹಣಕಾಸು ಕಂಪೆನಿ(ಎನ್ಬಿಎಫ್ಸಿ)ಗಳ ಪುನಶ್ಚೇತನಕ್ಕೆ ಋಣಬಾಧ್ಯತೆ ಹಾಗೂ ದಿವಾಳಿತನ ಸಂಹಿತೆಯಡಿ ವಿಶೇಷ ಗವಾಕ್ಷಿಯೊಂದನ್ನು ರೂಪಿಸಲು ಕೇಂದ್ರ ಸರಕಾರ ಚಿಂತಿಸುತ್ತಿದೆ.
ದೇವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಶನ್ (ಡಿಎಚ್ಎಫ್ಎಲ್)ನಂತಹ ಬ್ಯಾಂಕೇತರ ಹಣಕಾಸು ವಲಯದ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವಾಲಯವು ಈ ನಡೆಯನ್ನು ಇರಿಸಿದೆ.
ಪಂಜಾಬ್ ಹಾಗೂ ಮಹಾರಾಷ್ಟ್ರ ಸಹಕಾರಿ ಬ್ಯಾಕ್ (ಪಿಎಂಸಿ) ಕೂಡಾ ತೀವ್ರವಾದ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿದೆ.
ಪ್ರಸಕ್ತ ಆರ್ಥಿಕ ಒತ್ತಡಕ್ಕೊಳಗಾಗಿರುವ ಹಣಕಾಸು ಸಂಸ್ಥೆಗಳಿಗೆ ಋಣಬಾಧ್ಯತೆ ಹಾಗೂ ದಿವಾಳಿತನ ಕಾಯ್ದೆಯಡಿ ಪರಿಹಾರವನ್ನು ಒದಗಿಸುವುದು ಸಾಧ್ಯವಾಗುತ್ತಿಲ್ಲ.
ಋಣಬಾಧ್ಯತೆ ಹಾಗೂ ದಿವಾಳಿತನ (ಐಬಿಸಿ) ಪ್ರಕ್ರಿಯೆ ಮೂಲಕ ಒತ್ತಡಕ್ಕೊಳಗಾದ ಆಸ್ತಿಗಳನ್ನು ಖರೀದಿಸುವ ಸಂಸ್ಥೆಗಳು ಹಿಂದಿನ ಆಡಳಿತವು ಎಸಗಿದ ಆರ್ಥಿಕ ಅಪರಾಧಗಳಿಗೆ ಬಾಧ್ಯಸ್ಥರಾಗುವುದಿಲ್ಲವೆಂದು ನೂತನ ಪ್ರವರ್ತಕರಿಗೆ ಖಾತರಿಪಡಿಸುವ ಕಾರ್ಯವಿಧಾನವೊಂದನ್ನು ಕೇಂದ್ರ ಸರಕಾರ ರೂಪಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.