ಮುಖ್ಯಮಂತ್ರಿಯಿಂದ ಎರಡು ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳ ಲೋಕಾರ್ಪಣೆ
ಬೆಂಗಳೂರು, ನ.8: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಸಾರಕ್ಕಿಯಲ್ಲಿ ನಿರ್ಮಿಸಿರುವ ಐದು ದಶ ಲಕ್ಷ ಲೀಟರ್ ಸಾಮರ್ಥ್ಯದ ಮತ್ತು ದೊಡ್ಡ ಬೆಲೆಯಲ್ಲಿ 40 ದ.ಲ.ಲೀ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು.
ಶುಕ್ರವಾರ ನಗರದ ಕೆಂಗೇರಿ ಬಳಿಯಿರುವ ದೊಡ್ಡಬೆಲೆ ಎಸ್‌ಟಿಪಿ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ನೀರಿನ ದುರ್ಬಳಕೆ, ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ ಹಾಗೂ ಕೈಗಾರೀಕರಣದಿಂದಾಗಿ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ನೀರಿನ ಶುದ್ಧೀಕರಣ ಹಾಗೂ ಮರುಬಳಕೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ತ್ಯಾಜ್ಯನೀರು ಶುದ್ಧೀಕರಣ ಮಾಡಿ ಬಳಕೆ ಮಾಡುವುದು ಇಂದಿನ ಜರೂರಾಗಿದ್ದು, ಇಲ್ಲಿನ ಶುದ್ಧೀಕರಣಗಳಿಂದ ಶುದ್ಧೀಕರಿಸಿದ ನೀರನ್ನು ಪರಿಣಾಮಕಾರಿಯಾಗಿ ಮರು ಬಳಕೆಗೆ ಕ್ರಮ ವಹಿಸಲಾಗಿದೆ. ಈ ನೀರನ್ನು ಕೃಷಿ ಹಾಗೂ ಕೈಗಾರಿಕೆಗಳಿಗೆ ಬಳಸಬಹುದಾಗಿದೆ ಎಂದು ಅವರು ತಿಳಿಸಿದರು. ಶುದ್ಧೀಕರಣದ ನೀರು ಮರು ಬಳಕೆಯಿಂದಾಗಿ ಜಲಮೂಲಗಳ ಸಂರಕ್ಷಣೆಯೂ ಸಾಧ್ಯವಾಗುತ್ತದೆ ಎಂದ ಮುಖ್ಯಮಂತ್ರಿ, ರಾಜ್ಯದ ನೆಲ, ಜಲ ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಲು ಸರಕಾರ ಬದ್ಧವಾಗಿದೆ. ಲಭ್ಯವಿರುವ ನೀರಿನ ಸಂಪನ್ಮೂಲ ಪೋಲು ಮಾಡದಂತೆ ಜಾಗರೂಕತೆಯಿಂದ ಬಳಸಬೇಕು. ಈ ನಿಟ್ಟಿನಲ್ಲಿ ಮಳೆ ನೀರಿನ ಕೊಯ್ಲು, ನೀರಿನ ಮರುಬಳಕೆ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ತ್ಯಾಜ್ಯನೀರನ್ನು ಸಂಸ್ಕರಣಗೊಳಿಸಲು ಜಲಮಂಡಳಿಯು ಇದುವರೆಗೂ 1067.50 ದ.ಲ.ಲೀ ದಿನನಿತ್ಯ ಸಾಮರ್ಥ್ಯದ 25 ಸಂಸ್ಕರಣ ಘಟಕಗಳನ್ನು ಸ್ಥಾಪಿಸಿದ್ದು, ಇದರ ಜತೆಗೆ ಇದೀಗ ಎರಡು ಸೇರ್ಪಡೆಗೊಂಡಿವೆ. ಈಗ 1112 ದ.ಲ.ಲೀ ಸಾಮರ್ಥ್ಯದಷ್ಟು ತ್ಯಾಜ್ಯ ನೀರನ್ನು ಸಂಸ್ಕರಿಸಿದಂತಾಗುತ್ತಿದೆ ಎಂದು ಜಲಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.
ಇದರ ಜತೆಗೆ ಕಾವೇರಿ 5ನೆ ಹಂತದ ಯೋಜನೆ ಅಡಿಯಲ್ಲಿ ಒಟ್ಟು 14 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಕಾಮಗಾರಿಯನ್ನು ತೆಗೆದುಕೊಳ್ಳಲು ಉದ್ದೇಶಿಸಲಾಗಿದ್ದು, 2023 ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಇದರಿಂದ ಒಟ್ಟು 1723 ದ.ಲ.ಲೀ ಸಾಮರ್ಥ್ಯದಷ್ಟು ತ್ಯಾಜ್ಯ ನೀರು ಸಂಸ್ಕರಿಸಿದಂತಾಗುತ್ತದೆ ಎಂದರು.
ಎರಡೂ ಘಟಕಗಳಿಗೆ ಬೆಂಗಳೂರಿನ ಜೆ.ಪಿ.ನಗರ, ಅಂಜನಪುರ, ಕುವೆಂಪು ಲೇಔಟ್, ಸುಂಕದಕಟ್ಟೆ, ಭಾರತನಗರ, ವಿಶ್ವೇಶ್ವರಯ್ಯ ಲೇಔಟ್, ಸೊನ್ನೆನಹಳ್ಳಿ, ದೇವರಾಜ್ ಅರಸ್ ಬಡಾವಣೆ, ಜ್ಞಾನಭಾರತಿ, ದೊಡ್ಡ ಬಸ್ತಿ, ಎಚ್‌ಎಂಟಿ ಲೇಔಟ್, ಬಂಡೆ ಮಠ, ಸನ್ ಸಿಟಿ, ಕೆಂಗೇರಿ ಸ್ಯಾಟಲೈಟ್ ಟೌನ್, ಡಿಸೋಜ ನಗರ, ಕೆಂಚೇನಹಳ್ಳಿ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಕಡೆಗಳಿಂದ ತ್ಯಾಜ್ಯ ನೀರನ್ನು ಕೊಳವೆ ಮಾರ್ಗದ ಮೂಲಕ ಪಡೆಯಲಾಗುತ್ತದೆ.
ಬಳಿಕ ತ್ಯಾಜ್ಯ ನೀರನ್ನು ಎಲ್ಲ ಯೂನಿಟ್‌ಗಳ ಮೂಲಕ ಉನ್ನತ ಮಟ್ಟದ ತಾಂತ್ರಿಕತೆಯ ವಿಧಾನದಿಂದ ತೃತೀಯ ಹಂತದ ಮಟ್ಟದಲ್ಲಿ ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ವೃಷಭಾವತಿ ನದಿ ಕಣಿವೆ ಹಾಗೂ ಸಾರಕ್ಕಿ ಕೆರೆಗೆ ಹರಿಬಿಡಲಾಗುವುದು. ಸುತ್ತಮುತ್ತಲಿನ ನೈಸರ್ಗಿಕ ಪರಿಸರ ಸಂಪನ್ಮೂಲಗಳನ್ನು ರಕ್ಷಿಸಲು ಹಾಗೂ ಸುಧಾರಿಸಲು ಸಾಧ್ಯವಾಗುವುದು. ಕೆರೆ ಹಾಗೂ ಕಣಿವೆಯ ನೀರಿನ ಮಟ್ಟ ಕಡಿಮೆಯಾಗದಂತೆ ನೋಡಿಕೊಂಡು, ಬಳಿಕ ಅದನ್ನು ಬೇರೆ ಬೇರೆ ಕಡೆಗಳಿಗೆ ಹರಿಸಲಾಗುವುದು.