ಅಯೋಧ್ಯೆ ತೀರ್ಪು ಹಿನ್ನೆಲೆ : ಮಂಗಳೂರಿನಲ್ಲಿ ಬಿಗಿ ಬಂದೋಬಸ್ತ್ - ಪೊಲೀಸ್ ಆಯುಕ್ತ
ಮಂಗಳೂರು : ಅಯೋಧ್ಯೆ ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ನ.9ರಂದು ಪ್ರಕಟಿಸಲಿದ್ದು, ಮಂಗಳೂರಿನಲ್ಲಿ ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
ನಗರದಾದ್ಯಂತ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಂತರ್ ರಾಜ್ಯ ಗಡಿಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗುತ್ತಿದೆ ಎಂದರು.
ಬಂದೋಬಸ್ತ್ನಲ್ಲಿ ಇಬ್ಬರು ಡಿಸಿಪಿಗಳು, 15 ಇನ್ಸ್ಪೆಕ್ಟರ್ಗಳು, 40 ಪಿಎಸ್ಐಗಳು, 100 ಎಎಸ್ಐ, 5 ಕೆಎಸ್ಆರ್ಪಿ ತುಕಡಿ, ಒಂದು ಕೇಂದ್ರೀಯ ಅರೆಸೇನಾ ಪಡೆ, ಒಂದು ರ್ಯಾಪಿಕ್ ಆ್ಯಕ್ಷನ್ ತುಕಡಿ, ನಗರ ಸಶಸ್ತ್ರ ಪಡೆ, ಹೋಮ್ಗಾರ್ಡ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಸೈಬರ್ ಕ್ರೈಂ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ. ಯಾರೇ ಆಗಲಿ ಕೋಮು ಪ್ರಚೋದನೆ ಅಥವಾ ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತುವ ಸಂದೇಶ ಕಳುಹಿಸುವವರ ವಿರುದ್ಧ ಅತಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂದೇಶ ಆರಂಭಿಸಿದವರು ಅಲ್ಲದೆ, ಅವುಗಳನ್ನು ಫಾರ್ವರ್ಡ್ ಮಾಡುವವರ ವಿರುದ್ಧವೂ ಸೂಕ್ತ ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.