ಉಡುಪಿ: ಸಂಭ್ರಮದ ತೆಪ್ಪೋತ್ಸವ, ಲಕ್ಷದೀಪೋತ್ಸವ ಪ್ರಾರಂಭ
ಉಡುಪಿ, ನ. 9: ಉಡುಪಿ ಶ್ರೀಕೃಷ್ಣಮಠದಲ್ಲಿ ಶನಿವಾರ ಉತ್ಥಾನ ದ್ವಾದಶಿಯಂದು ಬೆಳಗ್ಗೆ ತುಳಸೀ ಪೂಜೆ, ಸಂಜೆ ಕ್ಷೀರಾಬ್ದಿ ಪೂಜೆ ನಡೆದ ಬಳಿಕ ತೆಪ್ಪೋತ್ಸವ ಸಹಿತ ಲಕ್ಷದೀಪೋತ್ಸವ ಹಾಗೂ ವಾರ್ಷಿಕ ರಥೋತ್ಸವ ಪ್ರಾರಂಭಗೊಂಡಿತು.
ಈ ಮೂಲಕ ಒಂದು ತಿಂಗಳ ಕಾಲ ಮಠದಲ್ಲಿ ನಡೆದ ಪಶ್ಚಿಮ ಜಾಗರಣೆ ಪೂಜೆ ಸಂಪನ್ನಗೊಂಡಿತು. ಚಾತುರ್ಮಾಸ್ಯದ ಹಿನ್ನೆಲೆಯಲ್ಲಿ ಗರ್ಭಗುಡಿ ಸೇರಿದ್ದ ಕೃಷ್ಣನ ಉತ್ಸವ ಮೂರ್ತಿಯನ್ನು ಇಂದು ಮತ್ತೆ ರಥಬೀದಿಯಲ್ಲಿರುವ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನವಗ್ರಹ ಪೂಜೆ, ನವಗ್ರಹ ದಾನದ ಬಳಿಕ ರಥೋತ್ಸವ ಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಸಂಜೆ ಮಧ್ವಸರೋವರದ ಮಧ್ಯದ ಮಂಟಪದಲ್ಲಿ ಕ್ಷೀರಾಬ್ಧಿ ಪೂಜೆ ನಡೆಯಿತು. ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ತುಳಸೀ ಮತ್ತು ನೆಲ್ಲಿಗಿಡದ ಬುಡದಲ್ಲಿಟ್ಟಿದ್ದ ತೆಂಗಿನ ಹೋಳಿನಲ್ಲಿ ಕ್ಷೀರಾಬ್ಧಿ ಅರ್ಘ್ಯ ಪ್ರದಾನ ಮಾಡಿದರು. ಈ ಮೂಲಕ ಚಾತುರ್ಮಾಸ್ಯದ ವೃವನ್ನು ದೇವರಿಗೆ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಮಧ್ವ ಸರೋವರದ ದಂಡೆಯಲ್ಲಿ ಪ್ರಭೋದೋತ್ಸವದ ಅಂಗವಾಗಿ ವೇದ- ದಾಸ ಗಾನ ಉತ್ಸವ ನಡೆಯಿತು. ಕರಾವಳಿಯ ಭಜನಾ ಮಂಡಳಿಗಳಿಂದ ಗೋಷ್ಠಿ ಗಾನ ನಡೆಯಿತು.
ಬೆಳಗ್ಗೆ ಪರ್ಯಾಯ ಪಲಿಮಾರು ಸ್ವಾಮೀಜಿಗಳು ಮಹಾಪೂಜೆಯ ಬಳಿಕ ಮಠದ ಪ್ರಾಂಗಣದಲ್ಲಿರುವ ತುಳಸಿ ಕಟ್ಟೆಯಲ್ಲಿ ತುಳಸಿಪೂಜೆ ನೆರವೇರಿಸಿದರು. ಅಪರಾಹ್ನ ರಥಬೀದಿಯಲ್ಲಿ ಅಳವಡಿಸಿದ ದಳಿಗಳಲ್ಲಿ ಹಣತೆ ಇಡುವ ಮುಹೂರ್ತವನ್ನು ಪರ್ಯಾಯ ಪಲಿಮಾರು ಹಿರಿಯ, ಕಿರಿಯ, ಪೇಜಾವರ ಕಿರಿಯ, ಕಾಣಿಯೂರು ಸ್ವಾಮೀಜಿ ನಡೆಸಿದರು.
ಲಕ್ಷ ದೀಪೋತ್ಸವ: ರಾತ್ರಿ ಆಕರ್ಷಕ ತೆಪ್ಪೋತ್ಸವ ನಡೆಯಿತು. ಇದೇ ವೇಳೆ ರಥಬೀದಿ, ಮಧ್ವಸರೋವರದಲ್ಲಿ ಸಾವಿರಾರು ಹಣತೆಗಳ ದೀಪಗಳು ಕಂಗೊಳಿಸಿದವು. ತೆಪ್ಪೋತ್ಸವದ ಬಳಿಕ ರಥಬೀದಿಯಲ್ಲಿ ಮೊದಲ ರಥೋತ್ಸವ ನಡೆಯಿತು.
ಚಾತುರ್ಮಾಸ್ಯವ್ರತ ಮುಗಿದ ಬಳಿಕ ಇದೇ ಮೊದಲ ಉತ್ಸವವಾಗಿದ್ದು ಉತ್ಸವ ಮೂರ್ತಿಗಳನ್ನು ರಥದಲ್ಲಿರಿಸಿ ರಥೋತ್ಸವ ನಡೆಯಿತು. ಈ ಸಂದರ್ಭ ರಥಬೀದಿಯ ಸುತ್ತಲೂ ರಥ ಚಲಿಸುವಾಗ ಭಜನಾ ಮಂಡಳಿಗಳ ಸದಸ್ಯರು ಕುಣಿತದ ಭಜನೆಗಳನ್ನು ಹಾಡಿದರು.