'ಐದು ವರ್ಷಗಳಲ್ಲಿ ನಾನು ಮಾಡಿದ ಅಭಿವೃದ್ಧಿ ಕಾಮಗಾರಿಗಳು ನನಗೆ ಶ್ರೀರಕ್ಷೆ'
ಕಂಕನಾಡಿ 49ನೆ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಚಂದ್ರ ಆಳ್ವ
ಮಂಗಳೂರು ಮಹಾನಗರ ಪಾಲಿಕೆಯ ಕಂಕನಾಡಿ 49ನೆ ವಾರ್ಡ್‌ನಿಂದ ಟಿ. ಪ್ರವೀಣ್ ಚಂದ್ರ ಆಳ್ವ ಎರಡನೇ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ.
2013ರಲ್ಲಿ ಪ್ರಥಮ ಯತ್ನದಲ್ಲೇ ಕಾರ್ಪೊರೇಟರ್ ಆಗಿ ಚುನಾಯಿತರಾದ ಪ್ರವೀಣ್ ಚಂದ್ರ ಆಳ್ವ 2014ರಿಂದ 2017ರವರೆಗೆ ನಗರ ಯೋಜನೆ ಸ್ಥಾಯಿ ಸಮಿತಿ ಸದಸ್ಯರಾಗಿ, 2017-18ರಲ್ಲಿ ಹಣಕಾಸು ಸ್ಥಾಯಿ ಸಮಿತಿ ಸದಸ್ಯರಾಗಿ, 2018-19ರಲ್ಲಿ ನಗರ ಯೋಜನೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದವರು.
ಮಂಗಳೂರು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪ್ರವೀಣ್‌ಚಂದ್ರ ಆಳ್ವ ಇದೀಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪದವೀಧರ, 42ರ ಹರೆಯದ ಯುವ ಉತ್ಸಾಹಿ ನಾಯಕರೂ ಆಗಿರುವ ಪ್ರವೀಣ್‌ಚಂದ್ರ ಆಳ್ವ ಜೊತೆ ‘ವಾರ್ತಾಭಾರತಿ’ ಮಾತನಾಡಿಸಿದಾಗ....
ಯಾವ ವಿಷಯವನ್ನು ಮುಂದಿಟ್ಟುಕೊಂಡು ಮತ್ತೆ ಮತದಾರರ ಭೇಟಿ ಮಾಡುತ್ತಿದ್ದೀರಿ ?
ನಾನು ಕಳೆದ 5 ವರ್ಷದಲ್ಲಿ ಕಾರ್ಪೊರೇಟರ್ ಆಗಿದ್ದಾಗ ಕೈಗೊಂಡ ಪ್ರಮುಖ ಯೋಜನೆಗಳೇ ನನಗೆ ಶ್ರೀರಕ್ಷೆ. ಅದನ್ನೇ ಮುಂದಿಟ್ಟುಕೊಂಡು ಸಾರ್ವಜನಿಕ ಸಭೆ, ಮನೆ ಮನೆ ಭೇಟಿಯ ಮೂಲಕ ಮತದಾರರ ಪ್ರೀತಿ-ವಿಶ್ವಾಸ ಗಳಿಸುತ್ತಿದ್ದೇನೆ.
ಕಳೆದ ಅವಧಿಯಲ್ಲಿ ನೀವು ಕೈಗೆತ್ತಿಕೊಂಡ ಪ್ರಮುಖ ಯೋಜನೆಗಳೇನು ?
ಕಂಕನಾಡಿ ರೈಲ್ವೆ ನಿಲ್ದಾಣ ರಸ್ತೆ, ಎಕ್ಕೂರು-ಪಕ್ಕಲಡ್ಕ ಮುಖ್ಯ ರಸ್ತೆ ಸಹಿತ ಅನೇಕ ರಸ್ತೆಗಳ ಕಾಂಕ್ರಿಟೀಕರಣ, ಅಗಲೀಕರಣ, ಕಿರುಸೇತುವೆಗಳ ನಿರ್ಮಾಣ, ಗ್ರಂಥಾಲಯ ಅಭಿವೃದ್ಧಿ, ನೂತನ ಆರೋಗ್ಯ ಕೇಂದ್ರ ಸ್ಥಾಪನೆ, ಹೈಮಾಸ್ಟ್ ದೀಪ ಅಳವಡಿಕೆ, ಇ-ಟಾಯ್ಲೆಟ್ ನಿರ್ಮಾಣ, ಶುದ್ಧ ಕುಡಿಯುವ ನೀರು ಪೂರೈಕೆ.. ಹೀಗೆ ಹಲವು ಅಭಿವೃದ್ಧಿ ಯೋಜನೆಗಳ ಪಟ್ಟಿ ಮಾಡಬಹುದು. ಅಂದಹಾಗೆ, ನಮ್ಮ ವಾರ್ಡ್ ಮನಪಾಕ್ಕೆ ತುಂಬಾ ವಿಳಂಬವಾಗಿ ಸೇರಿತ್ತು. ನಗರಕ್ಕೆ ಹತ್ತಿರವಾಗಿದ್ದರೂ ಗ್ರಾಮೀಣ ಪ್ರದೇಶದಂತಿತ್ತು. ಇದೀಗ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕಾಣುತ್ತಿದ್ದು, ನಗರದ ವಾತಾವರಣ ಸೃಷ್ಟಿಯಾಗುತ್ತಿದೆ.
ಮುಂದಿನ ಗುರಿ ?
ಎಕ್ಕೂರು ಮುಖ್ಯರಸ್ತೆಯಿಂದ ಕಂಟ್ರಿಕ್ಲಬ್ ಮುಖಾಂತರ ರಾ.ಹೆ.ಗೆ ಸಂಪರ್ಕ ರಸ್ತೆ, ಪಂಪ್‌ವೆಲ್‌ನಿಂದ ಎಕ್ಕೂರುವರೆಗೆ ರಾಜ ಕಾಲುವೆಗೆ ತಡೆಗೋಡೆ, ಒಳಚರಂಡಿ-ಫುಟ್ಪಾತ್ ಅಭಿವೃದ್ಧಿ, ವಾರ್ಡ್ ಕಚೇರಿ ಮತ್ತು ಅಂಚೆ ಕಚೇರಿ ಸ್ಥಾಪನೆ, ವಾಕಿಂಗ್ ಟ್ರಾಕ್ ಮತ್ತು ಪಾರ್ಕ್‌ಗಳ ನಿರ್ಮಾಣ, ಎಕ್ಕೂರು-ಸದಾಶಿವನಗರ-ಜೆಎಂ ರಸ್ತೆ-ಬಜಾಲ್‌ಗೆ ಬಸ್ ಸಾರಿಗೆ ವ್ಯವಸ್ಥೆ, ಇ-ಲೈಬ್ರೆರಿ ಸ್ಥಾಪಿಸುವ ಗುರಿ ಇದೆ.
ಮತದಾರ ಯಾಕೆ ನಿಮ್ಮ ‘ಕೈ’ ಹಿಡಿಯಬೇಕು ?
ನಾನು ಜನರ ಮಧ್ಯೆ ಇದ್ದುಕೊಂಡು ಕೆಲಸ ಮಾಡಿದವ ಮತ್ತು ಈಗಲೂ ಮಾಡುವವ, ನನಗೆ ಎಲ್ಲಾ ಜಾತಿ, ಧರ್ಮ, ಭಾಷಿಗರ ಮಧ್ಯೆ ಇದ್ದುಕೊಂಡು ಚೆನ್ನಾಗಿ ಜನಸೇವೆ ಮಾಡಿ ಗೊತ್ತು. ನಾನು ಸದಾ ಜನರ ಕೈಗೆ ಸಿಗುತ್ತಿದ್ದೇನೆ. ಅವರ ಸಮಸ್ಯೆಗೆ ಸ್ಪಂದಿಸುತ್ತಿದ್ದೇನೆ. ನನ್ನ ವಾರ್ಡ್‌ನ ಯಾರೂ ಕೂಡ ‘ನಾನು ಕೆಲಸ ಮಾಡಿಲ್ಲ’ ಎಂದು ಹೇಳಲಾರರು. ಯಾಕೆಂದರೆ, ನನ್ನ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಹಾಗಾಗಿ ಖಂಡಿತಾ ಮತದಾರರು ನನ್ನ ಕೈ ಹಿಡಿಯುವರು ಎಂಬ ವಿಶ್ವಾಸವಿದೆ.
ನಿಮ್ಮ ಗೆಲುವಿಗೆ ಬಂಡಾಯ ಅಭ್ಯರ್ಥಿಯ ಸ್ಪರ್ಧೆ ತೊಡಕಾಗದೇ ?
ವಿಶ್ವನಾಥ್ ಕಾಂಗ್ರೆಸ್ ಪಕ್ಷದ ಹಿರಿಯರು. ಕಾರ್ಪೊರೇಟರ್ ಆಗಿ ಅನುಭವ ಉಳ್ಳವರು. ಪಕ್ಷದಿಂದ ಟಿಕೆಟ್ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡು ಅವರು ನನ್ನ ವಿರುದ್ಧ ಬಂಡಾಯ ಏಳಬಾರದಿತ್ತು. ಯಾಕೆಂದರೆ ಅವರಂತಹ ಹಿರಿಯರ ಮಾರ್ಗದರ್ಶನದಲ್ಲೇ ಬೆಳೆದು ಬಂದ ನಾನು ವಾರ್ಡ್‌ನ ಅಭಿವೃದ್ಧಿಗಾಗಿ ಟೊಂಕ ಕಟ್ಟಿ ನಿಂತಿರುವೆ. ಅಲ್ಲದೆ ಯುವ ಕಾಂಗ್ರೆಸ್‌ನ ಮುಂಚೂಣಿಯಲ್ಲಿದ್ದ ನನಗೆ ಅವರು ಮತ್ತಷ್ಟು ಪ್ರೋತ್ಸಾಹ ನೀಡಬೇಕಿತ್ತು. ಇರಲಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸ್ಪರ್ಧೆ ಮಾಡಲಿರುವ ಹಕ್ಕನ್ನು ಅವರು ಬಳಸಿಕೊಂಡಿದ್ದಾರೆ. ಆದರೆ ಮತದಾರರ ಅಶೀರ್ವಾದ ನನಗಿದೆ ಎಂಬ ಭರವಸೆಯಿದೆ.
ಹಾಗಿದ್ದರೆ, ನಿಮ್ಮ ಪ್ರತಿಸ್ಪರ್ಧಿಗಳು ಯಾರು ? ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯೇ, ಬಿಜೆಪಿ ಅಭ್ಯರ್ಥಿಯೇ ?
ನನಗೆ ಇಬ್ಬರೂ ನಿಕಟ ಸ್ಪರ್ಧಿಗಳು ಅಲ್ಲ. ಪಕ್ಷ ಮತ್ತು ವೈಯಕ್ತಿಕ ವರ್ಛಸ್ಸು ನನಗೆ ಇದೆ. ಅದೇ ನಿಟ್ಟಿನಲ್ಲಿ ಎರಡನೇ ಬಾರಿಗೆ ಕಾರ್ಪೊರೇಟರ್ ಆಗುವ ಪೂರ್ಣ ವಿಶ್ವಾಸ ನನಗೆ ಇದೆ.