ಮಧುಮೇಹ ನಿಯಂತ್ರಣ ಹೇಗೆ?
ನ.14ರಂದು ವಿಶ್ವ ಮಧುಮೇಹ ದಿನ
ಮಧುಮೇಹಿಗಳಲ್ಲಿ ಶೇಕಡಾ 75ರಷ್ಟು ನಗರ ವಾಸಿಗಳು ಮತ್ತು 25ರಷ್ಟು ಗ್ರಾಮೀಣ ವಾಸಿಗಳು ಮತ್ತು ನಗರವಾಸಿಗಳಲ್ಲಿ ಶೇಕಡಾ 50ರಷ್ಟು ಮಂದಿ 40 ವರ್ಷಗಳಿಗಿಂತ ಕೆಳಗಿನವರು ಇದ್ದು, ನಮ್ಮ ನಗರವಾಸಿಗಳ ಬದಲಾಗುತ್ತಿರುವ ಜೀವನಶೈಲಿ, ಆಹಾರಪದ್ಧತಿ ಮತ್ತು ಕೆಲಸದ ಒತ್ತಡ ಇತ್ಯಾದಿಗಳಿಗೆ ಹಿಡಿದ ಕನ್ನಡಿ ಎಂದರೂ ತಪ್ಪಲ್ಲ. ಇದಲ್ಲದೆ ನಮ್ಮ ದೇಶದ ಮಧುಮೇಹ ಪೀಡಿತರಲ್ಲಿ ಶೇ. 75 ಮಂದಿಗೆ ತಾವು ಮಧುಮೇಹ ರೋಗಿಗಳು ಎಂಬುದರ ಅರಿವೂ ಇರುವುದಿಲ್ಲ. ಇದೇ ಕಾರಣಕ್ಕಾಗಿಯೇ ಮಧುಮೇಹ ರೋಗ ಉಲ್ಭಣಿಸಿ ಇತರ ಖಾಯಿಲೆಗಳಿಗೆ ಕಾರಣವಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ರೋಗವನ್ನು ಹತೋಟಿಯಲ್ಲಿರಿಸಿ, ಇನ್ನಿತರ ಅಂಗಾಂಶಗಳಿಗಾಗುವ ತೊಂದರೆಯನ್ನು ತಪ್ಪಿಸಿ, ಮಧುಮೇಹಿಗಳು ಇತರರಂತೆ ಸುಖವಾಗಿ ಬಾಳಬಹುದು. ಈ ಕಾರಣಕ್ಕಾಗಿಯೇ ನವೆಂಬರ್ 14ರಂದು ವಿಶ್ವ ಮಧುಮೇಹ ದಿನ ಎಂದು ಆಚರಿಸಿ ಮಧುಮೇಹ ರೋಗಗಳ ಬಗ್ಗೆ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸಿ, ಅದರಿಂದಾಗುವ ತೊಂದರೆಗಳನ್ನು ಕಡಿಮೆ ಮಾಡುವ ಸದುದ್ದೇಶವನ್ನು ಹೊಂದಿದೆ.
ಚಿಕಿತ್ಸೆ ಹೇಗೆ?
ನೆನಪಿರಲಿ, ಮಧುಮೇಹದಿಂದಾಗಿ ಜನರು ದಿನ ಬೆಳಗಾಗುವುದರಲ್ಲಿ ಸಾಯುವುದಿಲ್ಲ. ಸರಿಯಾದ ನಿಯಂತ್ರಣವಿಲ್ಲದ ಮಧುಮೇಹದಿಂದಾಗಿ ಕ್ಷಣ ಕ್ಷಣಕ್ಕೂ ಜೀವಕೋಶಗಳಿಗೆ ಹಾನಿಯಾಗಿ ಹೃದಯ, ಕಣ್ಣು, ಮೆದುಳು ಮೂತ್ರಪಿಂಡ, ನರಮಂಡಲ ಹೀಗೆ ಎಲ್ಲವನ್ನು ಆಪೋಶನ ತೆಗೆದುಕೊಂಡು, ನಿಧಾನವಾಗಿ ವ್ಯಕ್ತಿಯ ಎಲ್ಲಾ ಅಂಗಾಂಗಗಳನ್ನು ವೈಕಲ್ಯಗೊಳಿಸುತ್ತದೆ ಮತ್ತು ನಿಧಾನವಾಗಿ ಕೊಲ್ಲುತ್ತದೆ. ಈ ಕಾರಣಕ್ಕಾಗಿಯೇ ಮಧುಮೇಹಿಗಳು ಮಧುಮೇಹ ರೋಗವನ್ನು ಯಾವಾಗಲೂ ನಿಯಂತ್ರಣದಲ್ಲಿ ಇಡಬೇಕಾದ ಅನಿವಾರ್ಯತೆ ಇದೆ. ಮಧುಮೇಹ ರೋಗದ ಚಿಕಿತ್ಸೆಯ ಹೊಣೆಗಾರಿಕೆಯನ್ನು ವೈದ್ಯರಿಗೆ ಬಿಡಿ. ನೀವು ಯಾವತ್ತೂ ನಿಮ್ಮ ಇಚ್ಛೆಯಂತೆ ಅಥವಾ ಅನುಕೂಲಕ್ಕೆ ತಕ್ಕಂತೆ ಔಷಧಿಗಳನ್ನು ಸೇವಿಸಬಾರದು. ಸ್ವಯಂ ಮದ್ದುಗಾರಿಕೆ ಮತ್ತು ನಿಮ್ಮಿಷ್ಟದಂತೆ ಔಷಧಿಯ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ಕಡಿಮೆ ಮಾಡುವುದು ಯಾವತ್ತೂ ಅಪಾಯಕಾರಿ. ಪದೇ ಪದೇ ವೈದ್ಯರನ್ನು ಬದಲಿಸಬೇಡಿ. ನಿಮ್ಮ ಕೆಲಸ ಏನಿದ್ದರೂ ದೇಹದ ತೂಕವನ್ನು ನಿಯಂತ್ರಿಸುವುದು, ಸರಿಯಾದ ಸಮತೋಲಿತ ವೈದ್ಯರು ತಿಳಿಸಿದ ಆಹಾರವನ್ನು ಕಾಲಕಾಲಕ್ಕೆ ತೆಗೆದುಕೊಳ್ಳುವುದು ಮತ್ತು ನಿರಂತರ, ನಿಯಮಿತ ದೈಹಿಕ ವ್ಯಾಯಾಮ ಮಾಡಿಕೊಂಡು ದೇಹದ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೆ ಸೀಮಿತವಾಗಿರಬೇಕು. ವೈದ್ಯರ ಸಲಹೆ ಇಲ್ಲದೆ ನಿಮ್ಮ ಮಧುಮೇಹ ರೋಗದ ಮಾತ್ರೆಯ ಪ್ರಮಾಣ ಮತ್ತು ಇನ್ಸುಲಿನ್ ರಸದೂತದ ಪ್ರಮಾಣವನ್ನು ಬದಲಾಯಿಸಬಾರದು. ಚಿಕಿತ್ಸೆಯ ಹೊಣೆಗಾರಿಕೆಯನ್ನು ನಿಮ್ಮ ವೈದ್ಯರಿಗೆ ಬಿಟ್ಟುಕೊಟ್ಟಲ್ಲಿ, ಹೆಚ್ಚಿನ ಅಪಾಯಗಳನ್ನು ತಡೆಗಟ್ಟಬಹುದು.
ನಿಯಂತ್ರಣ ಹೇಗೆ?
1. ನಿರಂತರ ಮತ್ತು ನಿಯಮಿತ ವ್ಯಾಯಾಮ ಮಧುಮೇಹ ನಿಯಂತ್ರಣಕ್ಕೆ ಅತೀ ಅಗತ್ಯ. ವ್ಯಾಯಾಮ ಮಾಡಿದಾಗ ಮಾಂಸಖಂಡಗಳು ಮತ್ತು ಸ್ನಾಯುಗಳು ಕ್ರಿಯಾಶೀಲವಾಗುತ್ತವೆ ಹಾಗೂ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಈ ಶಕ್ತಿಯು ರಕ್ತದಲ್ಲಿರುವ ಗ್ಲೂಕೋಸ್‌ನಿಂದ ಸ್ನಾಯುಗಳಿಗೆ ಸರಬರಾಜು ಆಗುತ್ತದೆ. ವ್ಯಾಯಾಮದಿಂದ ಜೀವಕೋಶಗಳು ಚಯಾಪಚಯ ಕ್ರಿಯೆಗಳು ವೇಗವಾಗುತ್ತದೆ. ಹಾಗಾದಾಗ ಹೆಚ್ಚಿನ ಕ್ಯಾಲರಿ (ಶಕ್ತಿ)ಯ ಅವಶ್ಯಕತೆ ಉಂಟಾಗಿ, ಗ್ಲೂಕೋಸ್‌ನಿಂದ ಶಕ್ತಿ ದೊರಕಿ, ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ದಿನಕ್ಕರ್ಧ ಗಂಟೆಗಳ ವ್ಯಾಯಾಮ, ಬಿರುಸು ನಡಿಗೆ ಬರೀ ಮಧುಮೇಹ ರೋಗಕ್ಕೆ ಮಾತ್ರವಲ್ಲ, ಹೃದಯ ರೋಗ ಮತ್ತು ಅಧಿಕ ರಕ್ತದೊತ್ತಡದ ನಿಯಂತ್ರಣಕ್ಕೂ ಅತೀ ಅವಶ್ಯಕ.
2. ನೀವು ಸೇವಿಸುವ ಆಹಾರ ಯಾವತ್ತೂ ಕೊಬ್ಬು, ಪ್ರೊಟೀನ್ ಮತ್ತು ಪಿಷ್ಟಗಳಿಂದ ಕೂಡಿದ್ದು ಸಮತೋಲಿತ ಆಹಾರವಾಗಿರಬೇಕು. ಆಹಾರವು ಅನ್ನ ಸತ್ವಗಳು (ವಿಟಮಿನ್‌ಗಳು) ಮತ್ತು ಖನಿಜಗಳಿಂದ ಕೂಡಿರಬೇಕು. ಕೇವಲ ಶರ್ಕರ ಪಿಷ್ಟಗಳು ಹೆಚ್ಚಾಗಿರುವ ಆಹಾರ ಒಳ್ಳೆಯದಲ್ಲ. ನಿಮ್ಮ ಆಹಾರ ಸೊಪ್ಪು, ಹಸಿರು ತರಕಾರಿ, ಕಾಳು ಬೇಳೆಗಳಿಂದ ಕೂಡಿರಲಿ. ಸಂಸ್ಕರಿತ ಕೃತಕ ಆಹಾರ ಬೇಡವೇ ಬೇಡ. ಮೂಲಾಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನೀವು ಸೇವಿಸುವ ಆಹಾರ ನಿಮ್ಮ ದೇಹದ ಗಾತ್ರ ಮತ್ತು ದೈಹಿಕ ಶ್ರಮಕ್ಕೆ ಅನುಗುಣವಾಗಿರಲಿ. ಆಹಾರ ಬರೀ ರುಚಿಗಾಗಿ ಇರದೆ, ದೇಹದ ಆರೋಗ್ಯಕ್ಕೆ ಪೂರಕವಾಗಿರಲಿ. ನಾರುಯುಕ್ತ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಿ. ಕೊಬ್ಬಿನಾಂಶ ಜಾಸ್ತಿ ಇರುವ ಕರಿದ ತಿಂಡಿಗಳು ಇರುವ ತಿನಿಸುಗಳಿಗೆ ಕಡಿವಾಣ ಹಾಕಬೇಕು.
3. ಮಾನಸಿಕ ಒತ್ತಡ ಕಡಿಮೆಯಾಗುವ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು. ಒತ್ತಡದ ಸಂದರ್ಭಗಳಲ್ಲಿ ರಸದೂತಗಳ ಸ್ರವಿಸುವಿಕೆ ಜಾಸ್ತಿಯಾಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಜಾಸ್ತಿಯಾಗಬಹುದು. ಬಿಡುವಿಲ್ಲದ, ಒತ್ತಡದ, ದೈಹಿಕ ವ್ಯಾಯಾಮವಿಲ್ಲದ ಜೀವನ ಶೈಲಿಯು ಮಧುಮೇಹ ರೋಗಕ್ಕೆ ಮುನ್ನುಡಿ ಬರೆಯುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಮಾನಸಿಕ ಉದ್ವೇಗ, ತುಮುಲತೆಯನ್ನು ಕಡಿಮೆ ಮಾಡಿ ಮಾನಸಿಕ ನೆಮ್ಮದಿ, ಶಾಂತಿ ದೊರೆತಲ್ಲಿ ಮಧುಮೇಹ ಮಾತ್ರವಲ್ಲ ಇನ್ನೂ ಹತ್ತು ಹಲವು ಕಾಯಿಲೆಗಳನ್ನು ತಡೆಗಟ್ಟಬಹುದು.
ಮಧುಮೇಹ ಮತ್ತು ದಂತ ಆರೋಗ್ಯ
ನಮ್ಮ ಬಾಯಿ ಎನ್ನುವುದು ಬ್ಯಾಕ್ಟೀರಿಯಾಗಳ ಗುಂಡಿ. ಲಕ್ಷಾಂತರ ಬ್ಯಾಕ್ಟೀರಿಯಾಗಳು ನಮ್ಮ ಬಾಯಿಯೊಳಗೆ ಮನೆ ಮಾಡಿಕೊಂಡು ನಿರುಪದ್ರವಿಯಾಗಿ ಬಾಳಿಕೊಂಡಿರುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಕುಸಿದು ಹೋದಾಗ ನಿರುಪದ್ರವಿ ರೋಗಾಣುಗಳು ತಮ್ಮ ನೈಜ ಬುದ್ಧಿಯನ್ನು ತೋರಿಸಿಕೊಂಡು ವಸಡಿನ ತೊಂದರೆಗಳಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಮಧುಮೇಹಿ ರೋಗಿಗಳಲ್ಲಿ ನ್ಯೂಟ್ರೋಫಿಲ್ ಎಂಬ ಬಿಳಿರಕ್ತಕಣ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅದರ ರಚನೆಯಲ್ಲಿ ವ್ಯತ್ಯಾಸವಿರುತ್ತದೆ. ಈ ಕಾರಣದಿಂದಲೇ ಮಧುಮೇಹಿ ರೋಗಿಗಳಲ್ಲಿ ಗಾಯ ಒಣಗಲು ಬಹಳ ಸಮಯ ಹಿಡಿಯುತ್ತದೆ. ಮಧುಮೇಹಿ ರೋಗಿಗಳಲ್ಲಿ ಈ ಕಾರಣದಿಂದಾಗಿ ದಂತ ಸಂಬಂಧಿ ರೋಗಗಳು ಹೆಚ್ಚು ಕಂಡು ಬರುತ್ತದೆ.
* ವಸಡಿನ ತೊಂದರೆ:
ಮಧುಮೇಹಿ ರೋಗಿಗಳ ವಸಡಿನಲ್ಲಿ ಪದೇ ಪದೇ ಸೋಂಕು ಉಂಟಾಗಿ ಕೀವು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪಯೋರಿಯ ಎಂಬ ವಸಡಿನ ರೋಗ ಸುಮಾರು ಶೇ. 80 ಮಧುಮೇಹಿಗಳಲ್ಲಿ ಕಂಡು ಬರುತ್ತದೆ.
* ಬಾಯಿ ವಾಸನೆ :
ಮಧುಮೇಹಿ ರೋಗಿಗಳು ಬಹಳ ಅಸಹ್ಯವಾದ ಬಾಯಿ ವಾಸನೆಯಿಂದ ಬಳಲುತ್ತಾರೆ. ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳ ಸಂಖ್ಯೆ ವೃದ್ಧಿಸಿಕೊಂಡು ವಸಡಿನ ನಡುವೆ ಕೀವು ತುಂಬಿಕೊಂಡು ಬಾಯಿಯಿಂದ ಅಸಹನೀಯವಾದ ವಾಸನೆ ಬರುತ್ತಿರುತ್ತದೆ.
* ಪದೇ ಪದೇ ಸೋಂಕು:
ದೇಹದಲ್ಲಿನ ರಕ್ಷಣಾ ಪ್ರಕ್ರಿಯೆ ಸರಿಯಾಗಿ ಸ್ಪಂಧಿಸದ ಕಾರಣದಿಂದ ಬಾಯಿಯಲ್ಲಿ ಪದೇ ಪದೇ ಸೋಂಕು ಉಂಟಾಗುವ ಸಾಧ್ಯತೆ ಮಧುಮೇಹ ರೋಗಿಗಳಲ್ಲಿ ಹೆಚ್ಚು ಕಂಡು ಬರುತ್ತದೆ.
*ಗಾಯ ನಿಧಾನ ಒಣಗುವುದು: ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಜಾಸ್ತಿಯಾಗಿ, ಬ್ಯಾಕ್ಟೀರಿಯಾಗಳ ಸಂಖ್ಯೆ ವೃದ್ಧಿಸಿದಾಗ ಒಂದು ವಾರದಲ್ಲಿ ಒಣಗಬೇಕಾದ ಗಾಯ ನಾಲ್ಕೈದು ವಾರಗಳಾದರೂ ಒಣಗುವುದೇ ಇಲ್ಲ. ಹಲ್ಲು ಕೀಳುವಾಗ ಮಧುಮೇಹ ರೋಗಿಗಳಲ್ಲಿ ವಿಶೇಷ ಮುತುವರ್ಜಿ ವಹಿಸಬೇಕು. ಆಂಟಿಬಯೋಟಿಕ್ ಔಷಧಿ ನೀಡಿ, ದೇಹದಲ್ಲಿನ ಗ್ಲೂಕೋಸ್ ಅಂಶವನ್ನು ಔಷಧಿಗಳಿಂದ ನಿಯಂತ್ರಿಸಿ ಹಲ್ಲು ಕಿತ್ತ ಜಾಗದಲ್ಲಿ ಸೋಂಕು ಆಗದಂತೆ ಎಚ್ಚರ ವಹಿಸಬೇಕಾಗುತ್ತದೆ.
* ಹಲ್ಲು ಅಲುಗಾಡುವುದು:
ಮಧುಮೇಹ ರೋಗಿಗಳ ವಸಡು ಬಹಳ ಕ್ಷಿಣವಾಗಿರುತ್ತದೆ ಮತ್ತು ಹಲ್ಲಿನ ಸುತ್ತಲಿರುವ ಎಲುಬು ಬಹಳ ಬೇಗ ಕರಗುತ್ತದೆ. ಈ ಕಾರಣದಿಂದ ಮಧುಮೇಹಿ ರೋಗಿಗಳಲ್ಲಿ ಹೆಚ್ಚಾಗಿ ಹಲ್ಲುಗಳು ಸದೃಢವಾಗಿರುವುದಿಲ್ಲ. ಹಲ್ಲುಗಳು ನಿಧಾನವಾಗಿ ಅಲುಗಾಡಲು ಆರಂಭವಾಗಿ ಕ್ರಮೇಣ ಬಿದ್ದು ಹೋಗುತ್ತದೆ. ನಿರಂತರ ವೈದ್ಯಕೀಯ ಸಲಹೆ, ಶುಶ್ರೂಷೆ ಮತ್ತು ಬಾಯಿ ಸ್ವಚ್ಛಗೊಳಿಸುವುದರ ಮುಖಾಂತರ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
* ಹೆಚ್ಚು ರಕ್ತಸ್ರಾವದ ಸಾಧ್ಯತೆ: ಬಹಳ ವರ್ಷಗಳಿಂದ ಮಧುಮೇಹ ನಿಯಂತ್ರಿಸಲು ಔಷಧಿ ತೆಗೆದುಕೊಂಡಿದ್ದಲ್ಲಿ, ಔಷಧಿಯ ಅಡ್ಡ ಪರಿಣಾಮದಿಂದಾಗಿ ರಕ್ತದಲ್ಲಿನ ಬಿಳಿ, ಕೆಂಪು ರಕ್ತಕಣಗಳು ಮತ್ತು ರಕ್ತ ತಟ್ಟಿಗಳ ಸಂಖ್ಯೆ ಕ್ಷೀಣವಾಗಿ ಹಲ್ಲು ಕಿತ್ತ ಬಳಿಕ ರಕ್ತಸ್ರಾವವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.