'ಅನುಮತಿಯಿಲ್ಲದೆ ನೇರವಾಗಿ ಭೇಟಿ ಮಾಡಿ': ಗಮನ ಸೆಳೆದ ಹಿರಿಯ ಐಎಎಸ್ ಅಧಿಕಾರಿ ಮಣಿವಣ್ಣನ್ ನಡೆ
ಬೆಂಗಳೂರು, ನ.14: ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿನ ಬಹುತೇಕ ಮಂತ್ರಿಗಳು ಮತ್ತು ಐಎಎಸ್, ಕೆಎಎಸ್ ಅಧಿಕಾರಿಗಳನ್ನು ಸಾರ್ವಜನಿಕರು ಭೇಟಿ ಮಾಡಬೇಕಾದರೆ ಕೆಲವು ಶಿಷ್ಟಾಚಾರಗಳನ್ನು ಪಾಲಿಸಬೇಕಾಗುತ್ತದೆ. ಅನುಮತಿ, ಕೆಲವೊಮ್ಮೆ ಶಿಫಾರಸ್ಸು ಬೇಕಾಗುತ್ತದೆ. ಮಂತ್ರಿಗಳು ಮತ್ತು ಸರ್ಕಾರದ ಕಾರ್ಯದರ್ಶಿಮಟ್ಟದ ಅಧಿಕಾರಿಗಳು ಸದಾ ಮೀಟಿಂಗ್ ನಲ್ಲಿ ಇರುತ್ತಾರೆ. ಕರೆ ಮಾಡಿದರೆ ಅವರು ಕರೆ ಸ್ವೀಕರಿಸುವುದೂ ಕಡಿಮೆ. ಜನಸಾಮಾನ್ಯರು ಅಥವಾ ಪತ್ರಕರ್ತರು ಮಾಹಿತಿಗಾಗಿ ಕರೆ ಮಾಡಿದರೂ ಅವರು ಫೋನ್ ಕರೆ ಸ್ವೀಕರಿಸುವುದಿಲ್ಲ. ಕೆಲವು ಅಧಿಕಾರಿಗಳು ಮತ್ತು ಮಂತ್ರಿಗಳು ಜನಸ್ನೇಹಿಯಾಗಿ ಜನರೊಂದಿಗೆ ಸಂಪರ್ಕ ಹೊಂದಲು ಬಯಸುತ್ತಾರೆ. ಅಂತಹ ಅಧಿಕಾರಿಗಳಲ್ಲಿ ಹಿರಿಯ ಐಎಎಸ್ ಅಧಿಕಾರಿ
ಪಿ.ಮಣಿವಣ್ಣನ್ ಒಬ್ಬರು. ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಕಾರ್ಯದರ್ಶಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರು ಇತರರಿಗಿಂತ ಭಿನ್ನವಾಗಿದ್ದು, ಯಾವುದೇ ಅನುಮತಿಯಿಲ್ಲದೆ ನೇರವಾಗಿ ತನ್ನನ್ನು ಭೇಟಿ ಮಾಡಬಹುದು ಎಂದು ಕಚೇರಿಯ ಹೊರಗೆ ನೊಟಿಸ್ ಲಗತ್ತಿಸಿ ಗಮನ ಸೆಳೆದಿದ್ದಾರೆ.
"ಮಧ್ಯಾಹ್ನ 3ರಿಂದ 5.30 ಗಂಟೆಯವರೆಗೆ(ಬುಧವಾರ ಹೊರತು ಪಡಿಸಿ) ಈ ಸಮಯದಲ್ಲಿ ಯಾವುದೇ ಅನುಮತಿಯಿಲ್ಲದೆ ನೇರವಾಗಿ ಭೇಟಿ ಮಾಡಬಹುದು. ಕಾರ್ಯದರ್ಶಿಯವರು ಕಚೇರಿಯಲ್ಲಿ ಲಭ್ಯವಿಲ್ಲದಿದ್ದಲ್ಲಿ ದಯವಿಟ್ಟು ಮೊಬೈಲ್ ಸಂಖ್ಯೆ- 9632060006 ಗೆ ವ್ಯಾಟ್ಸಾಪ್ ಸಂದೇಶ ಕಳುಹಿಸಬಹುದು. ಕಾರ್ಯದರ್ಶಿಯವರ ವೇಳಾಪಟ್ಟಿಯನ್ನು ಈ ಕೆಳಗಿನ ವೆಬ್ ಸೈಟ್ನಲ್ಲಿ ಪಡೆಯಬಹುದು. www.labour.Karnataka.gov.in " ಎಂದು ತಮ್ಮ ವಿಕಾಸ ಸೌಧದ ನಾಲ್ಕನೇ ಮಹಡಿಯಲ್ಲಿರುವ ಕಚೇರಿಯ ಹೊರಗಡೆ ಸಾರ್ವಜನಿಕರ ಗಮನಕ್ಕಾಗಿ ಪ್ರಕಟಿಸಿದ್ದಾರೆ.
ಒಂದು ಸರ್ಕಾರ, ಒಬ್ಬ ಮಂತ್ರಿ, ಒಬ್ಬ ಅಧಿಕಾರಿ ಬದ್ಧತೆಯಿಂದ ಸಾರ್ವಜನಿಕರಿಗೆ ತಲುಪಲು ಇಂತಹ ದಾರಿ ಕಂಡುಕೊಂಡರೆ ಒಂದು ಸರ್ಕಾರ ತನಗರಿವಿಲ್ಲದೆ ಜನರ ಮಧ್ಯೆ ಜನರ ಸಮಸ್ಯೆಗೆ ಸ್ಪಂದಿಸಿ ಜೀವಂತವಾಗಿರುತ್ತದೆ. ಕೆಳ ಹಂತದ ಅಧಿಕಾರಿಗಳು ಸರ್ಕಾರಕ್ಕೆ ಬರೆದ ಪತ್ರಗಳು
ಸರ್ಕಾರ ತಲುಪುವಾಗ ಅದು ನಿರ್ಜೀವವಾಗಿದ್ದರೆ, ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಬರೆದ ಪತ್ರಗಳು ತಳ ಮಟ್ಟದ ಅಧಿಕಾರಿಗಳಿಗೆ ತಲುಪುವಾಗ ಅದು ಬಲ ಪಡೆಯುತ್ತದೆ. ಜನರ ಸಮಸ್ಯೆ ಬಗೆಹರಿಯುತ್ತದೆ. ಸಚಿವಾಲಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರಜೆಗಳ ನೋವಿಗೆ ಮತ್ತು ಸಮಸ್ಯೆಗೆ ಸ್ಪಂದಿಸಿದರೆ ಪ್ರಜಾಪ್ರಭುತ್ವ ಮತ್ತಷ್ಟು ಅರ್ಥ ಪೂರ್ಣವಾಗಲಿದೆ. ಹಿರಿಯ ಐಎಎಸ್ ಅಧಿಕಾರಿ ಪಿ.ಮಣಿವಣ್ಣನ್ ಅವರ ಜನಪರ ಜನ ಸೇವೆಯನ್ನು ಸಾರ್ಜಜನಿಕರು ಬಳಸಿಕೊಂಡು ಅವರ ಪ್ರಯತ್ನ ಸಾರ್ಥಕಗೊಳಿಸೋಣ.