ಇಲ್ಲಿ ಅನರ್ಹರು ಯಾರು?
ನಾ. ದಿವಾಕರ
ಅಪರಾಧ ಮಾಡಿದವರಿಗೆ ಶಿಕ್ಷೆ ನೀಡುವ ಬದಲು ಬಹುಮಾನ ನೀಡುವ ಹೊಸ ಪರ್ವವನ್ನು ಅಯೋಧ್ಯೆಯ ತೀರ್ಪಿನಲ್ಲಿ, ಅನರ್ಹ ಶಾಸಕರ ತೀರ್ಪಿನಲ್ಲಿ ಕಾಣುತ್ತಿದ್ದೇವೆ. ಮತ್ತೊಂದೆಡೆ ಯಾವುದೇ ಅಪರಾಧವನ್ನು ಮಾಡದೆ ನ್ಯಾಯಕ್ಕಾಗಿ ಹೋರಾಡುವ ಒಂಟಿ ದನಿಗಳನ್ನು ಶಿಕ್ಷಿಸಲಾಗುತ್ತಿದೆ. ಕಳೆದುಹೋದ ಮೌಲ್ಯಗಳನ್ನು ಮರಳಿ ಪಡೆಯಬೇಕಾದ ಅನಿವಾರ್ಯತೆಯನ್ನು ನಾಗರಿಕ ಸಮಾಜ ಎದುರಿಸುತ್ತಿದೆ. ದುರಂತ ಎಂದರೆ ರಾಷ್ಟ್ರೀಯತೆಯ ಉನ್ಮಾದದಲ್ಲಿ ಸ್ವಂತಿಕೆಯನ್ನೇ ಕಳೆದುಕೊಂಡಿರುವ ಸುಶಿಕ್ಷಿತ ಸಮಾಜದ ಒಂದು ವರ್ಗ ಹೆಚ್ಚಿನ ಸಂಖ್ಯೆಯಲ್ಲಿದ್ದು ತನ್ನ ಪ್ರಜ್ಞೆಯನ್ನೇ ಕಳೆದುಕೊಂಡಿದೆ.
ಭಾರತದ ಸಾಂವಿಧಾನಿಕ ಚೌಕಟ್ಟು ಕ್ರಮೇಣ ಶಿಥಿಲವಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯ ಸಂರಕ್ಷಣೆಗಾಗಿಯೇ ರೂಪಿಸಲಾದ ಸಾಂಸ್ಥಿಕ ಅಡಿಪಾಯವೂ ಶಿಥಿಲವಾಗುತ್ತಿದೆ. ಅಧಿಕಾರ ರಾಜಕಾರಣ ಮತ್ತು ಹಣಕಾಸು ಬಂಡವಾಳದ ಜಂಟಿ ಕಾರ್ಯಾಚರಣೆ 70 ವರ್ಷಗಳ ಪರಿಶ್ರಮವನ್ನು ಹಂತಹಂತವಾಗಿ ಅವಸಾನದತ್ತ ಕೊಂಡೊಯ್ಯುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯ ನಾಲ್ಕೂ ಸ್ತಂಭಗಳು ತಮ್ಮ ಸ್ವಂತಿಕೆಯನ್ನು ಕಳೆದುಕೊಂಡು ಸ್ವಾರ್ಥ ರಾಜಕಾರಣಕ್ಕೆ ಬಲಿಯಾಗುತ್ತಿವೆ. ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಜೀವಾಳ ಎನ್ನಬಹುದಾದ ಸಾರ್ವತ್ರಿಕ ಚುನಾವಣೆ ಮತ್ತು ಮತದಾನ ವ್ಯವಸ್ಥೆ ಪ್ರಬಲ ಆಳುವ ವರ್ಗಗಳ ಹಿತಾಸಕ್ತಿಯನ್ನು ರಕ್ಷಿಸುವ ಮಾರ್ಗವಾಗುತ್ತಿರುವಂತೆಯೇ ಸಾರ್ವಭೌಮ ಪ್ರಜೆಗಳ ಪಾಲಿಗೆ ವ್ಯರ್ಥ ಕಸರತ್ತು ಎನಿಸುತ್ತಿದೆ. ಕರ್ನಾಟಕದ 17 ಅನರ್ಹ ಶಾಸಕರ ಪ್ರಹಸನ, ಮಹಾರಾಷ್ಟ್ರದಲ್ಲಿನ ಸರಕಾರ ರಚನೆಯ ಗೊಂದಲ, ಹರ್ಯಾಣದ ರಾಜಕೀಯ ಮಿಲನದ ಬೆಳವಣಿಗೆಗಳು ಪ್ರಾತಿನಿಧಿಕ ಪ್ರಜಾತಂತ್ರ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ನಿಜ, ಇದೇನೂ ಹೊಸ ವಿದ್ಯಮಾನವಲ್ಲ. ಇಂತಹ ಅಸಹ್ಯ ರಾಜಕಾರಣಕ್ಕೆ 1980ರ ದಶಕದಲ್ಲೇ ಆಯಾರಾಂ ಗಯಾರಾಂ ಪರಂಪರೆ ನಾಂದಿ ಹಾಡಿದೆ. ಚುನಾಯಿತ ಜನಪ್ರತಿನಿಧಿಗಳನ್ನು ಅನರ್ಹಗೊಳಿಸುವುದು, ಅನರ್ಹರನ್ನೇ ಮತ್ತೊಮ್ಮೆ ಚುನಾಯಿಸುವುದು, ಶಾಸಕರನ್ನು ಖರೀದಿಸುವುದು ಇವೆಲ್ಲವೂ ಪಕ್ಷಾಂತರ ರಾಜಕಾರಣದ ಹೊಸ ಆಯಾಮವಾಗಿ ಮೈದಳೆದಿರುವುದನ್ನು ಗಮನಿಸಬೇಕಿದೆ.
ಅಧಿಕಾರದ ಹಪಹಪಿ ಮತ್ತು ಧನಾರ್ಜನೆಯ ದಾಹ ರಾಜಕೀಯ ನಾಯಕರನ್ನು ನಿರ್ಲಜ್ಜರನ್ನಾಗಿ ಮಾಡಿರುವುದು ಒಂದು ರೀತಿಯಲ್ಲಿ ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಸಾಧನೆಯೇ ಸರಿ. ರೆಸಾರ್ಟ್ ರಾಜಕಾರಣ ಒಂದು ರೀತಿಯಲ್ಲಿ ಸ್ವೀಕೃತ ಸಾಮೂಹಿಕ ಅಪಹರಣದಂತೆ ಕಾಣುತ್ತಿದೆ. ಸಾರ್ವಭೌಮ ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳ ಬದ್ಧತೆ ಸಂವಿಧಾನಕ್ಕೋ, ಪ್ರಜೆಗಳಿಗೋ ಅಥವಾ ತಮ್ಮ ಸ್ವಹಿತಾಸಕ್ತಿಯನ್ನು ರಕ್ಷಿಸುವ ರಾಜಕೀಯ ಪಕ್ಷಗಳಿಗೋ ಎನ್ನುವ ಪ್ರಶ್ನೆಗೆ ಉತ್ತರ ಶೋಧಿಸಬೇಕಿದೆ. ಪಕ್ಷ ನಿಷ್ಠೆ ಎನ್ನುವುದು ತನ್ನ ಸೈದ್ಧಾಂತಿಕ ನೆಲೆಗಳನ್ನು ಕಳೆದುಕೊಂಡು ಅಧಿಕಾರದಾಹದ ಒಂದು ಗುಪ್ತಮಾರ್ಗವಾಗಿ ಪರಿಣಮಿಸಿದೆ. ಕಳೆದ ಹತ್ತು ವರ್ಷಗಳ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ನೋಡಿದರೆ ಜನಪ್ರತಿನಿಧಿ ಎನ್ನುವ ಪದ ತನ್ನ ಮೂಲ ಅರ್ಥವನ್ನೇ ಕಳೆದುಕೊಂಡಿದೆ ಎನಿಸುತ್ತದೆ. ಹಾಗೆಯೇ ಪ್ರಜಾತಂತ್ರ ವ್ಯವಸ್ಥೆ ಎಂದರೆ ಪ್ರಜೆಗಳಿಂದ, ಪ್ರಜೆಗಳಿಗಾಗಿ ಎನ್ನುವ ವ್ಯಾಖ್ಯಾನವೂ ತನ್ನ ಅರ್ಥವನ್ನು ಕಳೆದುಕೊಂಡಿದೆ ಎನಿಸುತ್ತದೆ. ಇಂದು ಪ್ರಜೆ ರಾಜಕೀಯ ಪಗಡೆಯಾಟದಲ್ಲಿ ಕೇವಲ ಮೂಕ ಪ್ರೇಕ್ಷಕನಾಗಿದ್ದಾನೆ. ಹಣಕಾಸು ಬಂಡವಾಳ ತೀರ್ಪುಗಾರನ ಸ್ಥಾನ ಆಕ್ರಮಿಸಿದೆ. ಪ್ರತಿನಿಧಿಗಳು ಪಗಡೆಯ ಕಾಯಿಗಳಂತೆ ಮನೆಯಿಂದ ಮನೆಗೆ, ಚೌಕದಿಂದ ಚೌಕಕ್ಕೆ, ಈ ಮೂಲೆಯಿಂದ ಆ ಮೂಲೆಗೆ ಹಾರುತ್ತಿದ್ದಾರೆ. ರಾಜಕೀಯ ಪಕ್ಷಗಳು ಕಾರ್ಪೊರೇಟ್ ರಾಜಕಾರಣ ಬೀಸುವ ದಾಳಗಳಾಗಿವೆ. ಈ ಪಗಡೆಯಾಟದ ನಡುವೆಯೇ ದೈನಂದಿನ ಬದುಕು ಮುನ್ನಡೆಸಲು ಪರದಾಡುತ್ತಿರುವ ಜನಸಮೂಹ ನಿರ್ಲಕ್ಷ್ಯಕ್ಕೊಳಗಾಗಿದೆ.
ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದ ನಂತರವೂ ನಾವು ಸಂವಿಧಾನ ಬರೆದದ್ದು ಯಾರು, ಸ್ವಾತಂತ್ರ್ಯಕ್ಕೆ ಹೋರಾಡಿದವರು ಯಾರು ಎಂಬ ಪ್ರಶ್ನೆಗಳ ಸುತ್ತಲೂ ಗಿರಕಿ ಹೊಡೆಯುತ್ತಿರುವುದನ್ನು ನೋಡಿದರೆ ನಮ್ಮ ನಾಗರಿಕ ಸಮಾಜ ಪ್ರಬುದ್ಧವಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಸಂವಿಧಾನವನ್ನು ಯಾರು ರಚಿಸಿದರು ಎಂದು ಕಾದಾಡುವ ಬದಲು, ಏಳು ದಶಕಗಳ ಹಿಂದೆ ದಾರ್ಶನಿಕರ ದೂರದೃಷ್ಟಿ ಮತ್ತು ಹಿತಚಿಂತಕರ ಧನಾತ್ಮಕ ದೂರಾಲೋಚನೆಯ ಪರಿಣಾಮವಾಗಿ ರೂಪುಗೊಂಡ ಸಂವಿಧಾನವನ್ನು ನಾವು ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎಂದು ಯೋಚಿಸಿದರೆ ಸಾರ್ಥಕ ಎನಿಸುವುದಿಲ್ಲವೇ? ಡಾ. ಬಿ. ಆರ್. ಅಂಬೇಡ್ಕರ್ ಏಕಾಂಗಿಯಾಗಿ ಸಂವಿಧಾನ ರಚಿಸಿದ್ದಾರೆ ಎಂದು ಯಾರೂ, ಎಲ್ಲಿಯೂ ಹೇಳಿಲ್ಲ. ಆದರೆ ಸಂವಿಧಾನದ ಅಂತಿಮ ಕರಡು ಸಿದ್ಧವಾದ ನಂತರದಲ್ಲಿ ಸಂವಿಧಾನಕ್ಕೆ ಅಂತಿಮ ಸ್ವರೂಪ ನೀಡುವ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಪರಿಶ್ರಮ ಮತ್ತು ಕೊಡುಗೆಯನ್ನು ಯಾರಿಂದಲೂ ನಿರಾಕರಿಸಲೂ ಆಗುವುದಿಲ್ಲ. ಈ ಸಂದರ್ಭದಲ್ಲಿ ಅಂಬೇಡ್ಕರ್ ಏಕಾಂಗಿಯಾಗಿಯೇ ತಮ್ಮ ಕೊಡುಗೆಯನ್ನು ಸಲ್ಲಿಸಿರುವುದನ್ನೂ ಅಲ್ಲಗಳೆಯಲಾಗುವುದಿಲ್ಲ. ಜನಸಾಮಾನ್ಯರನ್ನು ದಿಕ್ಕುತಪ್ಪಿಸಲೆಂದೇ ಇಂತಹ ಸಾರ್ವಜನಿಕ ಚರ್ಚೆಗಳನ್ನು ಹುಟ್ಟುಹಾಕುವ ಆಳುವ ವರ್ಗಗಳ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರಗಳನ್ನು ಬದಿಗಿಟ್ಟು ಸಂವಿಧಾನದತ್ತ ದೃಷ್ಟಿಹಾಯಿಸಿದಾಗ, ಈ ಸಂವಿಧಾನದ ನಿಯಮಗಳೇ ಒಂದು ರಾಜ್ಯ ವಿಧಾನಸಭೆಯ 17 ಶಾಸಕರಿಗೆ ಅನರ್ಹರಾದ ನಂತರವೂ ಮತಭಿಕ್ಷೆ ಬೇಡುವ ಅವಕಾಶ ನೀಡಿರುವುದು ಸೋಜಿಗ ಎನಿಸುವುದಿಲ್ಲವೇ? ಇದು ನಮ್ಮನ್ನು ಕಾಡಬೇಕಿರುವ ಪ್ರಶ್ನೆ ಅಲ್ಲವೇ?
ಸಂವಿಧಾನ ಕೇವಲ ಅಕ್ಷರ ಸಮೂಹದ ಗ್ರಂಥ ಅಲ್ಲ. ಎಷ್ಟು ಪುಟಗಳಿವೆ, ಎಷ್ಟು ಪದಗಳಿವೆ ಎನ್ನುವುದಕ್ಕಿಂತಲೂ ಈ ಸಂವಿಧಾನದಲ್ಲಿ ಎಂತಹ ಮೌಲ್ಯಗಳು ಅಂತರ್ಗತವಾಗಿವೆ ಎಂದು ನೋಡಿದಾಗ ಈ ಮೌಲ್ಯಗಳು ಕ್ರಮೇಣ ನಶಿಸಿಹೋಗುತ್ತಿರುವುದನ್ನೂ ಗಮನಿಸಬೇಕಿದೆ. ಡಾ. ಬಿ. ಆರ್. ಅಂಬೇಡ್ಕರ್ ಸಂವಿಧಾನ ಶಿಲ್ಪಿಹೌದೋ ಅಲ್ಲವೋ ಎಂದು ಯೋಚಿಸುವ, ವಾದ ಪ್ರತಿವಾದ ಮಂಡಿಸುವ ಅವಶ್ಯಕತೆಯಿಲ್ಲ. ಇದು ಸ್ವೀಕೃತ ಸತ್ಯ ಮತ್ತು ಅಂತಿಮ ಸತ್ಯವೂ ಹೌದು. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ವಹಿಸಿದ ಪಾತ್ರ ಮತ್ತು ಸಮ ಸಮಾಜಕ್ಕಾಗಿ ಅವರು ರೂಪಿಸಿದ ಸಾಂವಿಧಾನಿಕ ನಿಯಮಗಳು ಬಹುಮುಖಿ ಭಾರತದ ಸಂರಕ್ಷಣೆಯ ಸಾಧನಗಳಾಗಿರುವುದನ್ನು ಯಾರಿಂದಲೂ ಅಲ್ಲಗಳೆಯಲಾಗುವುದಿಲ್ಲ. ಕರ್ನಾಟಕದ ಐಎಎಸ್ ಅಧಿಕಾರಿಯೊಬ್ಬರ ಅಧಿಕೃತ ಆದೇಶದ ಸುತ್ತ ನಡೆಯುತ್ತಿರುವ ವಾದ ಪ್ರತಿವಾದಗಳನ್ನು ಬದಿಗಿಟ್ಟು ನೋಡಿದಾಗ, ಉಮಾಶಂಕರ್ ಎಂಬ ಅಧಿಕಾರಿ ಸಾಂಕೇತಿಕವಾಗಿ ಕಾಣುತ್ತಾರೆ. ಇಂತಹ ಮನಸ್ಥಿತಿ ಸಾರ್ವತ್ರಿಕವಾಗುತ್ತಿದೆ ಎನ್ನುವುದನ್ನೂ ಗಮನಿಸಬೇಕಲ್ಲವೇ? ಅಂಬೇಡ್ಕರ್ ಮತ್ತು ಅವರ ಸಂಗಾತಿಗಳು ಬಯಸಿದ ಪರಿಪೂರ್ಣ ಪ್ರಜಾತಂತ್ರ ವ್ಯವಸ್ಥೆ ಸಂಪೂರ್ಣ ಶಿಥಿಲವಾಗುತ್ತಿರುವುದನ್ನು ಗಂಭೀರವಾಗಿ ಚರ್ಚಿಸಬೇಕಲ್ಲವೇ? ಸಂವಿಧಾನವನ್ನು ಕುರಿತ ಆದೇಶ ಹೊರಡಿಸಿದ ಅಧಿಕಾರಿಗಳನ್ನು ಶಿಕ್ಷಿಸುವ ಸರಕಾರವೇ ಅನ್ಯ ಪಕ್ಷಗಳಿಂದ ಹೊರಬಂದು ಸುಪ್ರೀಂಕೋರ್ಟ್‌ನಲ್ಲಿ ಅನರ್ಹರೆಂದು ಘೋಷಿಸಲ್ಪಟ್ಟ ಜನಪ್ರತಿನಿಧಿಗಳನ್ನು ಭವಿಷ್ಯದ ಸಚಿವರನ್ನಾಗಿ, ಶಾಸಕರನ್ನಾಗಿ ಮಾಡಲು ಹೊರಟಿರುವುದನ್ನು ಹೇಗೆ ವಿಶ್ಲೇಷಿಸುವುದು?
ಇನ್ನು ಒಂದು ತಿಂಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಕರ್ನಾಟಕದ ಕೆಲವು ಕ್ಷೇತ್ರಗಳ ಮತದಾರರು ಅನರ್ಹರ ಹಣೆಪಟ್ಟಿ ಹೊತ್ತ ರಾಜಕೀಯ ನಾಯಕರನ್ನು ಆಯ್ಕೆ ಮಾಡಬೇಕಿದೆ ಅಥವಾ ತಿರಸ್ಕರಿಸಬೇಕಿದೆ. ಅಧಿಕಾರಕ್ಕಾಗಿ, ಸ್ವಾರ್ಥಕ್ಕಾಗಿ, ಸ್ವಹಿತಾಸಕ್ತಿಗಾಗಿ ಪಕ್ಷನಿಷ್ಠೆಯನ್ನೂ ಬದಿಗಿಟ್ಟು ಆಡಳಿತಾರೂಢ ಸರಕಾರವನ್ನು ಉರುಳಿಸಿದ ಈ ನಾಯಕರನ್ನು ಮತ್ತೊಂದು ಪಕ್ಷದ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಇಲ್ಲಿ ಸಂವಿಧಾನ ಮತ್ತು ಕಾನೂನುಗಳಿಗಿಂತಲೂ ನೈತಿಕ ಮೌಲ್ಯಗಳು ನಮ್ಮನ್ನು ಕಾಡಬೇಕಲ್ಲವೇ ? ನಾವು ನಿಮ್ಮನ್ನು ಐದು ವರ್ಷಗಳ ಕಾಲ ಪ್ರತಿನಿಧಿಯಾಗಿರಲು ಆಯ್ಕೆ ಮಾಡಿದ್ದೇವೆ, ಮತ್ತೇಕೆ ನಮ್ಮ ಮುಂದೆ ಮತಭಿಕ್ಷೆ ಬೇಡುತ್ತಿದ್ದೀರಿ? ಎಂದು ಸಾರ್ವಜನಿಕರು ಪ್ರಶ್ನಿಸಿದರೆ ಅನರ್ಹ ಪಟ್ಟಿ ಹೊತ್ತ ಈ ನಾಯಕರು ಏನೆಂದು ಉತ್ತರಿಸಲು ಸಾಧ್ಯ? ದೇಶದ ಸರ್ವೋಚ್ಚ ನ್ಯಾಯಾಲಯ ಇಂತಹ ಒಂದು ವಿಡಂಬನೆಗೆ ಅವಕಾಶ ನೀಡಿದೆ ಎಂದರೆ ಯಾರನ್ನು ಮೊರೆ ಹೋಗುವುದು? ಮಹಾರಾಷ್ಟ್ರದ ಬೆಳವಣಿಗೆಗಳನ್ನು ನೋಡಿದಾಗ ಮುಂಬರುವ ದಿನಗಳಲ್ಲಿ ಇದೇ ಪ್ರಹಸನದ ಪುನರಾವರ್ತನೆಯಾಗುವುದಿಲ್ಲ ಎಂದು ಖಚಿತವಾಗಿ ಹೇಳಲು ಸಾಧ್ಯವೇ? ಹರ್ಯಾಣದಲ್ಲಿ ಜೆಜೆಪಿ ಪಕ್ಷದೊಡನೆ ಸಮ್ಮಿಶ್ರ ಸರಕಾರ ನಡೆಸುತ್ತಿರುವ ಬಿಜೆಪಿ ಇದೇ ಮಾರ್ಗವನ್ನು ತುಳಿಯುವುದಿಲ್ಲ ಎಂದು ಪ್ರಮಾಣೀಕರಿಸಲು ಸಾಧ್ಯವೇ ?
ಪ್ರಜಾತಂತ್ರ ವ್ಯವಸ್ಥೆ ಊರ್ಜಿತವಾಗಲು ನೈತಿಕತೆ ಮುಖ್ಯ. ಪ್ರಜೆಗಳ ಬಳಿ ಮತಭಿಕ್ಷೆ ಬೇಡಲು ಬರುವ ನಾಯಕರಲ್ಲಿ ಯಾವ ಮೌಲ್ಯಗಳೂ ಇಲ್ಲದಿದ್ದರೂ ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸುವ ಕನಿಷ್ಠ ಪ್ರಜ್ಞೆಯಾದರೂ ಇರಬೇಕು. ಇಂದಿನ ಪರಿಸ್ಥಿತಿಯಲ್ಲಿ ಇದು ನಶಿಸಿಹೋಗಿದೆ ಎಂದು ಹೇಳಲೇಬೇಕಿದೆ. ಪಕ್ಷಾಂತರ ನಿಷೇಧ ಕಾನೂನು ಕಸದ ಬುಟ್ಟಿ ಸೇರುವ ಸಂಭವ ನಿಚ್ಚಳವಾಗುತ್ತಿದೆ. ಆಡಳಿತಾರೂಢ ಸರಕಾರವನ್ನು ಉರುಳಿಸಿ ತಮ್ಮ ಅಧಿಕಾರ ದಾಹವನ್ನು ನೀಗಿಸಿಕೊಳ್ಳಲು ಜನಪ್ರತಿನಿಧಿಗಳು ಅನರ್ಹತೆಯ ಸುಲಭ ಮಾರ್ಗವನ್ನು ಕಂಡುಕೊಂಡಂತಾಗಿದೆ. ವಿರೋಧ ಪಕ್ಷಗಳಿಗೆ ಬಹುಮತ ಸಾಬೀತುಪಡಿಸಲು ಕಾಲಾವಕಾಶವನ್ನೇ ನೀಡದೆ ರಾಷ್ಟ್ರಪತಿ ಆಳ್ವಿಕೆ ಹೇರುವ ಮೂಲಕ ಮಹಾರಾಷ್ಟ್ರದ ರಾಜ್ಯಪಾಲರು ಮತ್ತೊಂದು ಹೊಸ ರಾಜಕೀಯ ಪರಂಪರೆಗೆ ನಾಂದಿ ಹಾಡಿದ್ದಾರೆ. ರಾಜ್ಯಪಾಲರ ಹುದ್ದೆ ಸರ್ವೋಚ್ಚ ನ್ಯಾಯಾಲಯದಷ್ಟೇ ಮಹತ್ವ ಇರುವ ಒಂದು ಸಾಂವಿಧಾನಿಕ ಸ್ಥಾನ. ಈಗ ಎರಡೂ ಕಡೆ ಮೌಲ್ಯಾಧಾರಿತ ರಾಜಕಾರಣ ಸೋತಂತೆ ಕಾಣುತ್ತಿದೆ. ಸಮಯಸಾಧಕ, ಅವಕಾಶವಾದಿ ರಾಜಕಾರಣ ಗೆಲುವಿನ ನಗೆ ಬೀರುತ್ತಿದೆ. ಕಪ್ಪುಹಣದ ನಿರ್ಮೂಲನೆಗೆ ಪಣತೊಟ್ಟಿರುವ ರಾಜಕೀಯ ಪಕ್ಷಗಳು ಅಧಿಕಾರ ಗಳಿಸಲು ಕಪ್ಪುಹಣದ ಹೊಳೆಯನ್ನೇ ಹರಿಸುತ್ತಿರುವುದನ್ನು ಕಂಡೂ ಕಾಣದಂತೆ ಸುಮ್ಮನಿದ್ದೇವೆ.
ಒಂದು ಪಕ್ಷದಿಂದ ಹೊರಬಂದು, ಸರ್ವೋಚ್ಚ ನ್ಯಾಯಾಲಯದಲ್ಲಿ ಅನರ್ಹರೆಂದು ಪರಿಗಣಿಸಲ್ಪಟ್ಟ ಶಾಸಕರನ್ನು ಹೆಮ್ಮೆಯಿಂದ ಪಕ್ಷಕ್ಕೆ ಸೇರಿಸಿಕೊಳ್ಳುವುದೇ ಅಲ್ಲದೆ ಅವರಲ್ಲಿ ಭಾವೀ ಮಂತ್ರಿಗಳಿದ್ದಾರೆ ಎಂದು ಘೋಷಿಸುವ ಮಟ್ಟಿಗೆ ನೈತಿಕತೆ ಕುಸಿದಿದೆ. ಎಲ್ಲ ರಾಜ್ಯಗಳಲ್ಲೂ ಉಪ ಮುಖ್ಯಮಂತ್ರಿಯ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿಯನ್ನು ನೋಡಿದರೆ ಅಧಿಕಾರ ರಾಜಕಾರಣದ ವಾಸ್ತವ ಅರಿವಾಗುತ್ತದೆ. ಇಡೀ ದೇಶದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿರಬೇಕು ಎನ್ನುವ ಸರ್ವಾಧಿಕಾರಿ ಧೋರಣೆಯಿಂದ ಬಿಜೆಪಿ ತನ್ನ ಸುತ್ತಮುತ್ತಲಿನ ಎಲ್ಲವನ್ನೂ ನುಂಗಿಹಾಕಲು ಯತ್ನಿಸುತ್ತಿದೆ. ಮತ್ತೊಂದೆಡೆ ಅಧಿಕಾರ ಗ್ರಹಣವೇ ಅಂತಿಮ ಗುರಿ ಎಂದು ಭಾವಿಸುವ ಪ್ರಾದೇಶಿಕ ಪಕ್ಷಗಳು ತಮ್ಮ ಸ್ವಾಭಿಮಾನವನ್ನೂ ಲೆಕ್ಕಿಸದೆ ಪೀಠದಾಹಿಗಳಾಗುತ್ತಿವೆ. ನ್ಯಾಯಾಂಗವೂ ಸೇರಿದಂತೆ ಎಲ್ಲ ಸಾಂವಿಧಾನಿಕ ಸಂಸ್ಥೆಗಳೂ ಅಧಿಕಾರ ರಾಜಕಾರಣದ ಚೌಕಟ್ಟಿನಲ್ಲಿ ಕಳೆದುಹೋಗುತ್ತಿರುವುದನ್ನು ನೋಡಿದರೆ ಈ ದೇಶ ಎತ್ತ ಸಾಗುತ್ತಿದೆ ಎಂಬ ಆತಂಕ ಉಂಟಾಗುತ್ತದೆ. ಅಪರಾಧ ಮಾಡಿದವರಿಗೆ ಶಿಕ್ಷೆ ನೀಡುವ ಬದಲು ಬಹುಮಾನ ನೀಡುವ ಹೊಸ ಪರ್ವವನ್ನು ಅಯೋಧ್ಯೆಯ ತೀರ್ಪಿನಲ್ಲಿ, ಅನರ್ಹ ಶಾಸಕರ ತೀರ್ಪಿನಲ್ಲಿ ಕಾಣುತ್ತಿದ್ದೇವೆ. ಮತ್ತೊಂದೆಡೆ ಯಾವುದೇ ಅಪರಾಧವನ್ನು ಮಾಡದೆ ನ್ಯಾಯಕ್ಕಾಗಿ ಹೋರಾಡುವ ಒಂಟಿ ದನಿಗಳನ್ನು ಶಿಕ್ಷಿಸಲಾಗುತ್ತಿದೆ. ಕಳೆದುಹೋದ ಮೌಲ್ಯಗಳನ್ನು ಮರಳಿ ಪಡೆಯಬೇಕಾದ ಅನಿವಾರ್ಯತೆಯನ್ನು ನಾಗರಿಕ ಸಮಾಜ ಎದುರಿಸುತ್ತಿದೆ. ದುರಂತ ಎಂದರೆ ರಾಷ್ಟ್ರೀಯತೆಯ ಉನ್ಮಾದದಲ್ಲಿ ಸ್ವಂತಿಕೆಯನ್ನೇ ಕಳೆದುಕೊಂಡಿರುವ ಸುಶಿಕ್ಷಿತ ಸಮಾಜದ ಒಂದು ವರ್ಗ ಹೆಚ್ಚಿನ ಸಂಖ್ಯೆಯಲ್ಲಿದ್ದು ತನ್ನ ಪ್ರಜ್ಞೆಯನ್ನೇ ಕಳೆದುಕೊಂಡಿದೆ.
ಈ ಪ್ರಜ್ಞೆಯನ್ನು ಮರಳಿ ಪಡೆಯುವುದೋ, ಅವನತಿಯ ದಾರಿ ಹಿಡಿದಿರುವ ಮೌಲ್ಯಗಳ ಮರುಶೋಧನೆ ನಡೆಸುವುದೋ? ರಾಜಕಾರಣ ಜಾಗೃತಿಯನ್ನು ಬಯಸುವುದಿಲ್ಲ ಆದರೆ ಜಾಗೃತ ಮನಸ್ಸುಗಳು ರಾಜಕಾರಣದ ಒಳಸುಳಿಗಳನ್ನು ಗ್ರಹಿಸಲು ಸದಾ ಸಿದ್ಧವಾಗಿರುತ್ತವೆ. ಈ ಜಾಗೃತ ಮನಸ್ಸುಗಳೂ ಈಗ ಜಾತಿ, ಧರ್ಮ, ಮಂದಿರ, ಮಸೀದಿಗಳ ನಶೆಯಿಂದ ನಿಷ್ಕ್ರಿಯವಾಗುತ್ತಿವೆ. ಈ ನಿಷ್ಕ್ರಿಯತೆಯಿಂದ ಹೊರಬರಲು ಅವಕಾಶವೇ ಇಲ್ಲದಂತಹ ದಮನಕಾರಿ ಆಡಳಿತ ವ್ಯವಸ್ಥೆಯನ್ನು ಪೋಷಿಸಲಾಗುತ್ತಿದೆ. ಈ ವಿಕೃತ ವ್ಯವಸ್ಥೆಯಲ್ಲಿ ಬಾಳಲು ಸಾರ್ವಭೌಮ ಪ್ರಜೆಗಳು ಅನರ್ಹರೋ ಅಥವಾ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಅಸಂಖ್ಯಾತ ಪ್ರಜೆಗಳನ್ನು ಆಳಲು ರಾಜಕೀಯ ನಾಯಕರು ಅನರ್ಹರೋ? ಈ ಪ್ರಶ್ನೆಯೊಂದಿಗೇ ನಮ್ಮೆದುರಿನ ಸವಾಲುಗಳನ್ನು ಎದುರಿಸಬೇಕಿದೆ.