varthabharthi


ಕಾಲಂ 9

ಮಸೀದಿಯ ಅವಶೇಷಗಳ ಮೇಲೆ ಮಂದಿರ ಕಟ್ಟಬಹುದೇ?

ಸುಪ್ರೀಂ ವೈರುಧ್ಯಗಳು-ಸುಪ್ರೀಂ ಪಕ್ಷಪಾತಗಳು

ವಾರ್ತಾ ಭಾರತಿ : 16 Nov, 2019
ಶಿವಸುಂದರ್

ಈ ವಿವಾದವು ದಶಕಗಳಿಂದಲೂ ಈ ದೇಶದ ಕೋಮು ಧ್ರುವೀಕರಣಕ್ಕೆ ಮತ್ತು ಹಿಂಸಾಚಾರಗಳಿಗೆ ಕಾರಣವಾಗಿತ್ತು. ಆದ್ದರಿಂದಲೇ ಏನೋ ಬಹುಸಂಖ್ಯಾತ ಜನಸಾಮಾನ್ಯರಲ್ಲಿ ಇದು ಹೇಗಾದರೂ ಬಗೆ ಹರಿಯಿತಲ್ಲ ಸಾಕು ಎಂಬ ವಿಷಣ್ಣ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ. ಮತ್ತೊಂದೆಡೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ನಿರಂತರ ದಾಳಿ ಮತ್ತು ಹಿಂಸಾಚಾರಗಳಿಗೆ ತುತ್ತಾಗಿ ಕಂಗಾಲಾಗಿರುವ ಮತ್ತು ಏಕಾಂಗಿಯಾಗಿರುವ ಮುಸ್ಲಿಮ್ ಸಮುದಾಯ ತೀರ್ಪಿನ ಬಗ್ಗೆ ಒಂದೋ ಅಸಹಾಯಕ ಮೌನವನ್ನು ತಾಳಿದೆ ಆಥವಾ ಹೇಗೋ ಇದರಿಂದ ಇನ್ನು ಮುಂದಾದರೂ ತಮ್ಮ ಮೇಲೆ ದಾಳಿಯಾಗದಿದ್ದರೆ ಸಾಕು ಎಂಬ ಆಸೆಯೊಂದಿಗೆ ತೀರ್ಪಿನ ಸ್ವಾಗತವನ್ನೂ ಮಾಡುತ್ತಿದೆ.1992ರ ಡಿಸೆಂಬರ್ 6ರಂದು ಅರೆಸ್ಸೆಸ್‌ನ ಅಂಗಸಂಸ್ಥೆಗಳು ನಿಷ್ಕ್ರಿಯ ಕಾಂಗ್ರೆಸ್ ಸರಕಾರದ ಪರೋಕ್ಷ ಸಹಕಾರದೊಂದಿಗೆ ಅಯೋಧ್ಯೆಯಲ್ಲಿದ್ದ 464 ವರ್ಷಗಳಷ್ಟು ಪುರಾತನವಾದ ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದವು. ದೇಶದ ಬಹುಸಂಖ್ಯಾತ ಜನರು ಇದು ಭಾರತದ ಸಂವಿಧಾನದ ಮೇಲೆ ನಡೆದ ದಾಳಿ ಎಂದೇ ಭಾವಿಸಿದ್ದರು. ಈಗ 2019ರ ನವೆಂಬರ್ 9 ರಂದು ಭಾರತದ ಸುಪ್ರೀಂಕೋರ್ಟಿನ ಐವರು ನ್ಯಾಯಾಧೀಶರ ಪೀಠವು ಮಸೀದಿ ಕೆಡವಿದ್ದನ್ನು ಹೀನಾಯ ಅಪರಾಧವೆಂದು ಬಣ್ಣಿಸಿದರೂ ‘‘ಸರ್ವಸಮ್ಮತಿಯಿಂದ’’ ಮಸೀದಿ ಕೆಡವಿದವರಿಗೇ ಮಂದಿರ ನಿರ್ಮಿಸಲು ಅವಕಾಶ ಕೊಟ್ಟು ಮುಸ್ಲಿಮರನ್ನು ಹೊರದಬ್ಬಿದೆ. ಇದು ಸಂವಿಧಾನ ರಕ್ಷಿಸಬೇಕಾದವರೇ ಭಾರತದ ಸಂವಿಧಾನದ ಮೇಲೆ ಮಾಡಿರುವ ದಾಳಿಯಲ್ಲವೇ?
  
 ಈ ವಿವಾದವು ದಶಕಗಳಿಂದಲೂ ಈ ದೇಶದ ಕೋಮು ಧ್ರುವೀಕರಣಕ್ಕೆ ಮತ್ತು ಹಿಂಸಾಚಾರಗಳಿಗೆ ಕಾರಣವಾಗಿತ್ತು. ಆದ್ದರಿಂದಲೇ ಏನೋ ಬಹುಸಂಖ್ಯಾತ ಜನಸಾಮಾನ್ಯರಲ್ಲಿ ಇದು ಹೇಗಾದರೂ ಬಗೆ ಹರಿಯಿತಲ್ಲ ಸಾಕು ಎಂಬ ವಿಷಣ್ಣ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ. ಮತ್ತೊಂದೆಡೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ನಿರಂತರ ದಾಳಿ ಮತ್ತು ಹಿಂಸಾಚಾರಗಳಿಗೆ ತುತ್ತಾಗಿ ಕಂಗಾಲಾಗಿರುವ ಮತ್ತು ಏಕಾಂಗಿಯಾಗಿರುವ ಮುಸ್ಲಿಮ್ ಸಮುದಾಯ ತೀರ್ಪಿನ ಬಗ್ಗೆ ಒಂದೋ ಅಸಹಾಯಕ ಮೌನವನ್ನು ತಾಳಿದೆ ಆಥವಾ ಹೇಗೋ ಇದರಿಂದ ಇನ್ನು ಮುಂದಾದರೂ ತಮ್ಮ ಮೇಲೆ ದಾಳಿಯಾಗದಿದ್ದರೆ ಸಾಕು ಎಂಬ ಆಸೆಯೊಂದಿಗೆ ತೀರ್ಪಿನ ಸ್ವಾಗತವನ್ನೂ ಮಾಡುತ್ತಿದೆ. ವಾಸ್ತವವೆಂದರೆ, ಸಾಂವಿಧಾನಿಕ ಸಂಸ್ಥೆಗಳ ಮತ್ತು ಈ ದೇಶದ ನಾಗರಿಕ ಸಮಾಜದ ವೈಫಲ್ಯಗಳೇ ಈ ಅಸಹಾಯಕತೆಯನ್ನೂ, ನ್ಯಾಯಕ್ಕಿಂತ ಜಾಸ್ತಿ ಶಾಂತಿ ಮತ್ತು ನೆಮ್ಮದಿಯನ್ನು ಬಯಸುವಂತಹ ವಿಕಟ ಸಂದರ್ಭವನ್ನು ಸೃಷ್ಟಿಸಿದೆ. ದುರಂತವೆಂದರೆ ಈ ದೇಶದಲ್ಲಿ ಸಂಘಪರಿವಾರವು ಸೃಷ್ಟಿಸಿರುವ ಭಯಾನಕ ಸನ್ನಿವೇಶದ ಪರಿಣಾಮ ಈ ದೇಶದ ಸಂವಿಧಾನದ ಪರಮೋಚ್ಚ ರಕ್ಷಕನಾದ ಸುಪ್ರೀಂಕೋರ್ಟಿನ ಮೇಲೂ ಬಿದ್ದಿರುವುದು ನಿಚ್ಚಳವಾಗಿದೆ.

ತೀರ್ಪಿನ ಹಿಂದಿನ ಜಾತ್ಯತೀತ ತಾತ್ವಿಕ ಬುನಾದಿ!?
ಸುಪ್ರೀಂ ಕೋರ್ಟಿನ ಮುಂದೆ ಇದ್ದ ವಿವಾದ ಸಾರಾಂಶದಲ್ಲಿ ಇಷ್ಟೇ:

ವಿವಾದಿತ 2.77 ಎಕರೆ ಜಮೀನಿನ ಒಡೆತನ ಹಿಂದೂಗಳಿಗೆ ಸೇರಬೇಕೋ ಅಥವಾ ಮುಸ್ಲಿಮರಿಗೆ ಸೇರಬೇಕೋ? ಹಾಗೂ ಅದನ್ನು ಯಾವ ಆಧಾರದಲ್ಲಿ ತೀರ್ಮಾನ ಮಾಡಬೇಕು? ವಾಸ್ತವದಲ್ಲಿ ಎರಡನೇ ಪ್ರಶ್ನೆಯ ಬಗ್ಗೆ ಅಂದರೆ ಒಡೆತನವನ್ನು ಹೇಗೆ ಬಗೆಹರಿಸಬೇಕು ಎಂಬ ವಿಷಯದ ಬಗ್ಗೆ ಸುಪ್ರೀಂಕೋರ್ಟು ಅತ್ಯಂತ ಪ್ರಶಂಸನೀಯವಾದ ತಾತ್ವಿಕ ಬುನಾದಿಯನ್ನೇ ಹಾಕಿಕೊಳ್ಳುತ್ತದೆ. 1,054 ಪುಟದ ಹಾಗೂ 806 ಪ್ಯಾರಾಗಳ ಆ ತೀರ್ಪಿನಲ್ಲಿ ಈ ನಿಲುವನ್ನು ವಿವರಿಸುವ 638-652 ಪ್ಯಾರಾಗಳು ಸಂವಿಧಾನವನ್ನು ಎತ್ತಿಹಿಡಿಯುವ ಅತ್ಯಂತ ಮೌಲಿಕ ಪ್ಯಾರಾಗಳಾಗಿವೆ. ಇಂತಹ ತಗಾದೆಗಳ ಬಗ್ಗೆ ತೀರ್ಮಾನ ಕೊಡುವಾಗ ನ್ಯಾಯಾಲಯವು ಸಾಕ್ಷಿ ಪುರಾವೆಗಳನ್ನು ಆಧರಿಸುತ್ತದೆಯೇ ವಿನಾ ಯಾವ ಧಾರ್ಮಿಕ ನಂಬಿಕೆಗಳನ್ನೂ ಅಲ್ಲ ಎಂದು ತೀರ್ಪಿನ 649, 652 ಪ್ಯಾರಾಗಳಲ್ಲೂ ಹಾಗೂ ಅಂತಿಮ ಪರಿಹಾರಗಳನ್ನು ಘೋಷಿಸುವ ಮುಂಚಿನ 795ನೇ ಪ್ಯಾರಾದಲ್ಲೂ ತನ್ನ ನಿಲುವನ್ನು ಸುಪ್ರೀಂ ಸ್ಪಷ್ಟಪಡಿಸುತ್ತದೆ. ಹಾಗೆಯೇ ಇತಿಹಾಸದಲ್ಲಿ ಆಗಿ ಹೋದ ನ್ಯಾಯಾನ್ಯಾಯಗಳಿಗೆ ವರ್ತಮಾನದ ಕಾನೂನಿನಲ್ಲಿ ನ್ಯಾಯವನ್ನು ಹುಡುಕಬಾರದೆಂದೂ 639ನೇ ಪ್ಯಾರಾದಲ್ಲಿ ಹೇಳುತ್ತದೆ. ವಿವಿಧ ಜನಾಂಗ, ಸಿದ್ಧಾಂತ, ಬಣ್ಣ ಹಾಗೂ ಧರ್ಮಗಳ ಹಿನ್ನೆಲೆಯವರಾದ ನಾವು ಇತಿಹಾಸದಲ್ಲಿ ನಮ್ಮನಮ್ಮ ಹಿನ್ನೆಲೆಗೆ ಅನುಸಾರವಾಗಿ ನ್ಯಾಯ ಹಾಗೂ ಕಾನೂನನ್ನು ಕಟ್ಟಿಕೊಳ್ಳುತ್ತಾ ಬಂದಿದ್ದೇವೆ. ಆದರೆ 1950ರಲ್ಲಿ ನಾವೆಲ್ಲರೂ ಒಮ್ಮತದಿಂದ ಸಮಾನತೆ, ಭ್ರಾತೃತ್ವದ ಮೌಲ್ಯಗಳನ್ನು ಆಧರಿಸಿ ಒಂದು ಸಂವಿಧಾನವನ್ನು ರೂಪಿಸಿಕೊಂಡಿದ್ದೇವೆ. ಹೀಗಾಗಿ ಅದೇ ನಮಗೆ ಆಧಾರವಾಗಬೇಕೇ ವಿನಾ ಇತಿಹಾಸವಲ್ಲವೆಂದೂ ಸ್ಪಷ್ಟಪಡಿಸುತ್ತದೆ.

ತೀರ್ಪಿನ 649ನೇ ಪ್ಯಾರಾದಲ್ಲಿ ಈ ವಿವಾದವು ಮೊಘಲರ, ಬ್ರಿಟಿಷರ ಹಾಗೂ ಇಂದಿನ ಸ್ವತಂತ್ರ ಭಾರತದ ವಿಭಿನ್ನ ಕಾನೂನುಗಳ ಅವಧಿಯಲ್ಲಿ ನಡೆದು ಬಂದಿದೆಯೆಂದೂ, ಮೊಘಲರ ಕಾಲದ ಘಟನಾವಳಿಗಳ ನ್ಯಾಯಸಂಹಿತೆಯನ್ನು ಇಂದಿನ ದಿನಮಾನಗಳಿಗೆ ಅಳವಡಿಸಲಾಗುವುದಿಲ್ಲವೆಂದೂ ಸುಪ್ರೀಂ ಕೋರ್ಟು ಸ್ಪಷ್ಟಪಡಿಸುತ್ತದೆ. ಆದರೆ ಸಂವಿಧಾನದ ಆರ್ಟಿಕಲ್ 372ರ ಪ್ರಕಾರ ಬ್ರಿಟಿಷರ ಕಾಲದ ಖಾಸಗಿ ಆಸ್ತಿ ಹಕ್ಕಿನ ಕಾನೂನುಗಳನ್ನು ಭಾರತದ ಸಂವಿಧಾನವೂ ಮಾನ್ಯ ಮಾಡುವುದರಿಂದ ಈ ಪ್ರಕರಣದಲ್ಲಿ ಆ ಕಾಲಘಟ್ಟಕ್ಕೆ ಸಂಬಂಧಿಸಿದ ವಿದ್ಯಮಾನಗಳನ್ನು ಪರಿಗಣಿಸಲಾಗುತ್ತಿದೆಯಷ್ಟೇ ಎಂದು ಕೂಡಾ ಸ್ಪಷ್ಟಪಡಿಸುತ್ತದೆ. ಹಾಗೆಯೇ ಪ್ಯಾರಾ 78-82ರಲ್ಲಿ ವಿಶೇಷವಾಗಿ 1991ರಲ್ಲಿ ಸಂಸತ್ತಿನಲ್ಲಿ ಅನುಮೋದಿಸಲಾದ ಉಪಾಸನಾ ಸ್ಥಳಗಳ (ವಿಶೇಷ ಅವಕಾಶ) ಕಾಯ್ದೆಯನ್ನು ಉಲ್ಲೇಖಿಸುತ್ತದೆ. ಈ ಕಾಯ್ದೆಯು ಬಾಬರಿ ಮಸೀದಿ ವಿವಾದವೊಂದನ್ನು ಹೊರತುಪಡಿಸಿ ಭಾರತದಲ್ಲಿ ಹಾಲಿ ನಡೆಯುತ್ತಿರುವ ಅಥವಾ ಮುಂದೆ ಹುಟ್ಟಿಕೊಳ್ಳುವ ಯಾವುದೇ ಐತಿಹಾಸಿಕ ಧಾರ್ಮಿಕ ಸ್ಥಳಗಳ ಸ್ವರೂಪದ ಬಗೆಗಿನ ಯಾವುದೇ ವಿವಾದವನ್ನು ಈ ಕಾಯ್ದೆಯನ್ವಯವೇ ತೀರ್ಮಾನಿಸಬೇಕು ಎಂದು ಹೇಳುತ್ತದೆ ಮತ್ತು ಈ ಕಾಯ್ದೆಯ ಪ್ರಕಾರ ಬಾಬರಿ ಮಸೀದಿ-ರಾಮ ಮಂದಿರವನ್ನು ಹೊರತುಪಡಿಸಿ ಮಿಕ್ಕೆಲ್ಲಾ ಧಾರ್ಮಿಕ ಸ್ಥಳಗಳನ್ನೂ ಅದು 1991ರ ಆಗಸ್ಟ್ 15ರಂದು ಯಾವ ಧಾರ್ಮಿಕ ಸ್ವರೂಪದಲ್ಲಿತ್ತೋ ಅದೇ ಸ್ವರೂಪದಲ್ಲೇ ಉಳಿಸಿಕೊಳ್ಳಬೇಕೆಂದು ನಿರ್ದೇಶಿಸುತ್ತದೆ ಮತ್ತು ಅದನ್ನು ಉಲ್ಲಂಘಿಸಿ ಒಂದು ಉಪಾಸನಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಯಾವುದೇ ರೀತಿಯಲ್ಲಿ ಬದಲಾಯಿಸುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುತ್ತದೆ. ಸುಪ್ರೀಂನ ಪ್ರಕಾರ ಇದು ಭಾರತದ ಜಾತ್ಯತೀತ ಸ್ವರೂಪಕ್ಕೆ ಭಾರತದ ಬದ್ಧತೆಯೂ ಆಗಿದೆ. ಹೀಗೆ ಈ ಪ್ರಕರಣವನ್ನು ಬಗೆಹರಿಸಲು ಸುಪ್ರೀಂ ಕೋರ್ಟು ಉಲ್ಲೇಖಿಸಿರುವ ನ್ಯಾಯತಾತ್ವಿಕತೆಯು ಅತ್ಯಂತ ಪ್ರಶಂಸನೀಯವೇ ಆಗಿತ್ತು. ಅಷ್ಟು ಮಾತ್ರವಲ್ಲ ಮಸೀದಿಯ ಕೆಳಗೆ ಮಂದಿರವಿತ್ತೇ ಎಂಬ ವಿಷಯದಲ್ಲೂ ಸಹ ಸುಪ್ರೀಂ ಕೋರ್ಟು ಸಾಕ್ಷಿ-ಪುರಾವೆಗಳನ್ನು ಆಧರಿಸಿ ಅತ್ಯಂತ ಮೌಲಿಕ ನಿಲುವನ್ನೇ ತಾಳುತ್ತದೆ. ಮಸೀದಿಯ ಕೆಳಗೆ ಮಂದಿರವಿರಲಿಲ್ಲ

ಬಾಬರಿ ಮಸೀದಿ ಇದ್ದ ಜಾಗದಲ್ಲಿ ಭವ್ಯವಾದ ರಾಮಮಂದಿರವಿತ್ತು. ಅದನ್ನು ನಾಶಮಾಡಿಯೇ 1528ರಲ್ಲಿ ಬಾಬರ್ ಮಸೀದಿಯನ್ನು ನಿರ್ಮಿಸಿದ ಎಂಬ ಪ್ರಚಾರವನ್ನು ಸಂಘಪರಿವಾರ ಬಹಳ ಯಶಸ್ವಿಯಾಗಿ ದೇಶದುದ್ದಕ್ಕೂ ನಡೆಸಿ ಹಿಂದೂ-ಮುಸ್ಲಿಮರ ನಡುವೆ ಅಳಿಸಲಾಗದ ಕಂದರವನ್ನು ಸೃಷ್ಟಿಸಿದೆ. ಇಂದಿನ ಈ ಅನ್ಯಾಯದ ತೀರ್ಪಿನ ಬಗ್ಗೆ ಬಹುಸಂಖ್ಯಾತರು ವಹಿಸುತ್ತಿರುವ ಮೌನಕ್ಕೆ ಸಂಘಪರಿವಾರದ ಈ ಪ್ರಚಾರವನ್ನು ಜನಸಾಮಾನ್ಯರು ನಿಜವೆಂದು ಒಪ್ಪಿಕೊಂಡುಬಿಟ್ಟಿರುವುದೂ ಸಹ ಒಂದು ಕಾರಣವೆಂದರೆ ತಪ್ಪಲ್ಲ. ಪ್ರಚಾರದ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಲು 2003ರಲ್ಲಿ ಅಲಹಾಬಾದ್ ಹೈಕೋರ್ಟ್ ಭಾರತೀಯ ಪುರಾತತ್ವ ಇಲಾಖೆಗೆ (ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ- ಎಎಸ್‌ಐ) ವಿವಾದಿತ ಜಾಗದಲ್ಲಿ ಉತ್ಖನನ ಮಾಡಿ ಮಂದಿರವಿತ್ತೇ ಎಂದು ಪರಿಶೀಲನೆ ಮಾಡಿ ವರದಿ ಸಲ್ಲಿಸಲು ಸೂಚಿಸಿತು. ಎಎಸ್‌ಐ ಬಾಬರಿ ಮಸೀದಿ ಇದ್ದ ಜಾಗವನ್ನು ಉತ್ಖನನ ಮಾಡಿದ ರೀತಿ, ಬಳಸಿದ ವಿಧಾನ ಮತ್ತು ತಂತ್ರಜ್ಞಾನ ಹಾಗೂ ಅದರ ಮೇಲ್ವಿಚಾರಣೆ ವಹಿಸಿದ್ದ ಅಧಿಕಾರಿಗಳ ಏಕಪಕ್ಷೀಯತೆಯ ಬಗ್ಗೆ 14 ದೂರುಗಳು ಸಲ್ಲಿಕೆಯಾಗಿತ್ತು. ಹೀಗಾಗಿ ನಂತರದ ಅವಧಿಯಲ್ಲಿ ಅದರ ಮುಖ್ಯಸ್ಥರಾಗಿದ್ದ ಮಣಿ ಎಂಬವರನ್ನು ಕೆಳಗಿಳಿಸಲಾಗಿತ್ತು. ನಂತರ ಎಎಸ್‌ಐ ತಲುಪಿದ ಅಭಿಪ್ರಾಯಗಳ ವೈಜ್ಞಾನಿಕತೆ ಮತ್ತು ತಾರ್ಕಿಕತೆಗಳ ಬಗ್ಗೆ ಹಲವಾರು ಪ್ರಸಿದ್ಧ ಪುರಾತತ್ವ ಸಂಶೋಧಕರು ತೀವ್ರ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು.

ಅದೇನೇ ಇರಲಿ. ಅದರ ನಡುವೆಯೂ ಎಎಸ್‌ಐ ನೀಡಿದ್ದ ವರದಿಯು ಮಸೀದಿಯ ಕೆಳಗೆ ಮಂದಿರವಿತ್ತೆಂದೂ ಖಚಿತಪಡಿಸಲಿಲ್ಲವೆಂದು ಹೈಕೋರ್ಟೇ ಹೇಳಿತ್ತು. ಆದರೂ ಸಂಘಪರಿವಾರವು ಮಸೀದಿಯ ಕೆಳಗೆ ಮಂದಿರವಿತ್ತೆಂದು ಎಎಸ್‌ಐ ಸಾಬೀತುಪಡಿಸಿದೆಯೆಂದು ಸುಳ್ಳು ಪ್ರಚಾರ ಮುಂದುವರಿಸಿತ್ತು. ವಿಷಯದ ಬಗ್ಗೆ ಸುಪ್ರೀಂ ಕೋರ್ಟು ತನ್ನ 1,054 ಪುಟಗಳ ತೀರ್ಪಿನಲ್ಲಿ ಸುಮಾರು 200 ಪುಟಗಳಷ್ಟು ವಿವರವಾಗಿ ಚರ್ಚಿಸುತ್ತದೆ. ತೀರ್ಪಿನ 447ನೇ ಪ್ಯಾರಾದಿಂದ 580ನೇ ಪ್ಯಾರಾಗಳವರೆಗೂ ಎಎಸ್‌ಐನ ವರದಿ, ಸಾಕ್ಷಿಯಾಗಿ ಅದರ ಮೌಲ್ಯ, ಈ ಪ್ರಕರಣದಲ್ಲಿ ಅದಕ್ಕಿರುವ ಬೆಲೆ ಇತ್ಯಾದಿಗಳನ್ನು ಕೂಲಂಕಷವಾಗಿ ವಿಶ್ಲೇಷಿಸುವ ಸುಪ್ರೀಂ ಕೋರ್ಟು ಖಚಿತವಾಗಿ ಈ ಕೆಳಗಿನ ತೀರ್ಮಾನಗಳನ್ನು ಹೇಳುತ್ತದೆ:
ಅ) ಎಎಸ್‌ಐ ವರದಿಯು ಮಸೀದಿಯ ಕೆಳಗೆ ಮಂದಿರವಿತ್ತೆಂದೂ ಹೇಳುವುದಿಲ್ಲ.

 ಆ) ಅದರ ಪ್ರಕಾರ ಮಸೀದಿ ಇದ್ದ ಜಾಗದಲ್ಲಿ 12ನೇ ಶತಮಾನಕ್ಕೆ ಸಂಬಂಧಪಟ್ಟ ಕೆಲವು ಇಸ್ಲಾಮೇತರ ಅವಶೇಷಗಳು ಮಾತ್ರ ಕಂಡುಬಂದಿವೆ. ಆದರೆ ಅವು ಒಂದು ರಾಮಮಂದಿರದ ಅವಶೇಷಗಳಂತೂ ಅಲ್ಲವೆಂಬುದನ್ನು ಎಎಸ್‌ಐ ಖಚಿತಪಡಿಸುತ್ತದೆ. ಇ) ಈ ಅವಶೇಷಗಳು 12ನೇ ಶತಮಾನಕ್ಕೆ ಸಂಬಂಧಪಟ್ಟವು. ಮಸೀದಿ ನಿರ್ಮಾಣವಾಗಿರುವುದು 1528ರಲ್ಲಿ. ಇವೆರಡರ ನಡುವೆ 400 ವರ್ಷಗಳಷ್ಟು ಕಾಲಾವಧಿ ಇದೆ. ಈ ಸುದೀರ್ಘ ಕಾಲಾವಧಿಯಲ್ಲಿ ಇಲ್ಲಿದ್ದ ನಿರ್ಮಾಣವು ಪ್ರಾಕೃತಿಕ ಕಾರಣದಿಂದಲೂ ನಾಶವಾಗಿರಬಹುದು. ಈ) ಹಾಗೂ ಅಲ್ಲಿ ಇದ್ದ ಕಟ್ಟಡವನ್ನು ನಿರ್ನಾಮಗೊಳಿಸಿಯೇ ಮಸೀದಿಯನ್ನು ಕಟ್ಟಲಾಗಿದೆಯೆನ್ನುವುದಕ್ಕೆ ಯಾವ ಪುರಾವೆಯನ್ನು ಈ ಉತ್ಖನನ ಒದಗಿಸುವುದಿಲ್ಲ. ಹೀಗೆ ಎಎಸ್‌ಐ ವರದಿಯು ಮಸೀದಿಯ ಕೆಳಗೆ ಮಂದಿರವಿತ್ತೆಂಬ ಅಭಿಪ್ರಾಯವನ್ನು ಹೇಳಿಲ್ಲವೆಂದು ಸುಪ್ರೀಂ ಕೋರ್ಟು ಖಚಿತಪಡಿಸುತ್ತದೆ ಮತ್ತು ಈ ಕಾರಣದಿಂದ ರಾಮಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆಯೆಂಬ ವಾದಕ್ಕೆ ಅರ್ಥವಿಲ್ಲವೆಂದು ಅಭಿಪ್ರಾಯಪಡುತ್ತದೆ.  

ಅಷ್ಟು ಮಾತ್ರವಲ್ಲ. ಮಸೀದಿಯ ಒಳಾವರಣದ ಪ್ರವೇಶಕ್ಕೆ ಸಂಬಂಧಪಟ್ಟಂತೆ 1857-58ರಲ್ಲಿ ಹಿಂದೂ ಮುಸ್ಲಿಮರ ನಡುವೆ ಘರ್ಷಣೆಯಾಗಿತ್ತು ಎಂಬ ಪುರಾವೆಯನ್ನು ಪರಿಗಣಿಸುವ ಸುಪ್ರೀಂ ಕೋರ್ಟು 1857ರಿಂದ ಮಂದಿರದ ಒಳಾವರಣದಲ್ಲಿ ಅಂದರೆ ವಿವಾದಿತವಾದ 2.77 ಎಕರೆಯಲ್ಲಿ ಮುಸ್ಲಿಮರು ನಿರಂತರವಾಗಿ ನಮಾಝ್ ಮಾಡುತ್ತಾ ಬಂದಿದ್ದರೆಂಬುದನ್ನು ಒಪ್ಪಿಕೊಳ್ಳುತ್ತದೆ ಹಾಗೂ 1936ರಲ್ಲಿ ಮುಸ್ಲಿಮರು ನಮಾಜ್ ಮಾಡದಂತೆ ಹಿಂದೂಗಳು ಕಾನೂನುಬಾಹಿರವಾಗಿ ತಡೆದರು ಎಂಬುದನ್ನು ದಾಖಲಿಸುತ್ತದೆ ಹಾಗೂ ಅಂತಿಮವಾಗಿ 1949ರ ಡಿಸೆಂಬರ್ 22ರ ಮಧ್ಯರಾತ್ರಿ ಕೆಲವರು ಕಾನೂನುಬಾಹಿರವಾಗಿ ನಡುಗುಮ್ಮಟದ ಅಡಿಯಲ್ಲಿ ರಾಮಲಲ್ಲಾನ ಮೂರ್ತಿಯನ್ನು ತಂದಿಟ್ಟು ಮಸೀದಿಯ ಪಾವಿತ್ರ್ಯವನ್ನು ನಾಶಗೊಳಿಸಿದರು ಮತ್ತು ಆದ್ದರಿಂದಲೇ ಮುಸ್ಲಿಮರು ಅಲ್ಲಿ ನಮಾಝ್ ಮಾಡದಂತಾಗಿ ಅವರನ್ನು ಅಲ್ಲಿಂದ ಕಾನೂನುಬಾಹಿರವಾಗಿ ಹೊರಗಟ್ಟಲಾಯಿತು ಎಂಬುದನ್ನೂ ಸಹ ಒಪ್ಪಿಕೊಳ್ಳುತ್ತದೆ ಹಾಗೂ 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿನ್ನು ಕೆಡವಿದ್ದು ಒಂದು ಹೀನಾಯ ಅಪರಾಧವೆಂದೂ ಸಹ ಸುಪ್ರೀಂ ಒಪ್ಪಿಕೊಳ್ಳುತ್ತದೆ. ಹೀಗೆ ಸುಪ್ರೀಂ ಕೋರ್ಟಿನ ಪ್ರಕಾರ ಕ್ರಿ.ಶ. 1528ರಿಂದ ಅಲ್ಲಿ ಮಸೀದಿಯಿದ್ದದ್ದು ನಿಜ. ಆ ಮಸೀದಿಯ ಕೆಳಗೆ ಮಂದಿರವಿರಲಿಲ್ಲ ಅಥವಾ ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದ್ದಲ್ಲ ಎಂಬುದೂ ನಿಜ. ಹಾಗೆಯೇ ಏನಿಲ್ಲವೆಂದರೂ 1857ರಿಂದ 1949ರವರೆಗೆ ಅಲ್ಲಿ ನಮಾಝ್ ಮಾಡುತ್ತಿದ್ದದ್ದು ನಿಜ.

ಇವೆಲ್ಲವನ್ನೂ ನಿಜವೆಂದು ಒಪ್ಪಿಕೊಳ್ಳುವ ಸುಪ್ರೀಂ ಮಸೀದಿಯಿದ್ದ ಜಾಗವನ್ನು ಮಾತ್ರ ಮಂದಿರ ಕಟ್ಟಲು ಬಿಟ್ಟುಕೊಡಲು ಕಾರಣವೇನು? ಪಕ್ಷಪಾತಿ ತರ್ಕ-ಪಕ್ಷಪಾತಿ ಪರಿಹಾರ

 ನಂಬಿಕೆಗಳಿಗಿಂತ ಸಾಕ್ಷಿ ಪುರಾವೆಯನ್ನು ಮುಖ್ಯವಾಗಿಸಿಕೊಳ್ಳಬೇಕೆಂಬ ತತ್ವ ಹಾಗೂ ಮಸೀದಿ ಇದ್ದದ್ದನ್ನು ಹಾಗೂ ಅಲ್ಲಿ ನಿರಂತರವಾಗಿ ನಡೆಯುತ್ತಿದ್ದದ್ದು ನಮಾಝ್ ಮಾತ್ರ ಎಂಬುದನ್ನು ಸಾಬೀತುಪಡಿಸುವ ಸಾಕ್ಷ್ಯ ಪುರಾವೆಗಳನ್ನು ಒಪ್ಪಿಕೊಂಡ ಮೇಲೆ ಈ ಜಾಗ ಮಸೀದಿಗೆ ಸೇರಿದ್ದೆಂದು ತೀರ್ಪು ನೀಡಬೇಕಲ್ಲವೇ? ಆದರೆ ಅದಕ್ಕೆ ತದ್ವಿರುದ್ಧವಾಗಿ ವಿವಾದಿತ ಜಾಗ ಮುಸ್ಲಿಮರಿಗೆ ಸೇರಿದ್ದಲ್ಲ ಹಿಂದೂಗಳಿಗೆ ಸೇರಿದ್ದು ಎಂಬ ತೀರ್ಮಾನಕ್ಕೆ ಸುಪ್ರೀಂ ಕೋರ್ಟು ಬಂದದ್ದಾದರೂ ಹೇಗೆ?

ಇಲ್ಲಿಂದಾಚೆಗೆ ಸ್ಮಶಾನ ಶಾಂತಿ ಹಾಗೂ ಸಾಂವಿಧಾನಿಕ ನ್ಯಾಯಗಳ ನಡುವೆ ಆಯ್ಕೆ ಮಾಡಿಕೊಳ್ಳಬೇಕಾದ ಒತ್ತಡವೇ ತೀರ್ಪಿನ ತರ್ಕದಲ್ಲಿ ಗೋಚರಿಸುತ್ತಾ ಹೋಗುತ್ತದೆ... ಈಗಾಗಲೇ ಹೇಳಿದಂತೆ ಸುಪ್ರೀಂಕೋರ್ಟು 1528ರಲ್ಲಿ ವಿವಾದಿತ ಜಾಗದಲ್ಲಿ ಮೊಘಲರು ಬಾಬರಿ ಮಸೀದಿಯನ್ನು ನಿರ್ಮಿಸಿದರೆಂಬುದನ್ನು ಒಪ್ಪಿಕೊಳ್ಳುತ್ತದೆ. ಹಾಗೂ ಅದರ ಹೊರ ಆವರಣದಲ್ಲಿ ರಾಮ್ ಚಬೂತರ್ ಮತ್ತು ಸೀತಾ ರಸೋಯಿ ಎನ್ನುವ ಜಾಗಗಳಲ್ಲಿ ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದರೆಂಬುದನ್ನು ವಿದೇಶಿ ಪ್ರವಾಸಿ ಫ್ಲಿಂಚ್ ಮತ್ತು ಪಾದ್ರಿ ಟಿಫ್ಲೆಂತರ್ ತಮ್ಮ ಟಿಪ್ಪಣಿಗಳಲ್ಲಿ ದಾಖಲಿಸಿರುವುದನ್ನು ಪಾಕ್ಷಿಕ ಪುರಾವೆಯಾಗಿ ಸ್ವೀಕರಿಸುತ್ತದೆ. ಆದರೆ ವಿಚಿತ್ರವೆಂದರೆ ಮಸೀದಿಯ ಒಳಾವರಣದಲ್ಲಿ ನಮಾಝ್ ಹಾಗೂ ಇನ್ನಿತರ ಧಾರ್ಮಿಕ ಕ್ರಿಯೆಗಳಿಗಾಗಿ ಮೊಘಲ್ ದೊರೆಗಳು ಕೊಡುತ್ತಿದ್ದ ವಾರ್ಷಿಕ ಕೊಡುಗೆಗಳನ್ನು ದಾಖಲಿಸಿದರೂ ತನ್ನ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವಾಗ ಪರಿಗಣಿಸುವುದಿಲ್ಲ.

ಅಯೋಧ್ಯೆ ಇದ್ದ ಔಧ್ ಪ್ರಾಂತವು 1856ರಲ್ಲಿ ಬ್ರಿಟಿಷರ ಸುಪರ್ದಿಗೆ ಒಳಪಡುತ್ತದೆ. 1857-58ರಲ್ಲಿ ಈ ವಿವಾದಿತ ಜಾಗದಲ್ಲಿ ಧಾರ್ಮಿಕ ಕಾರಣಗಳಿಗಾಗಿ ಮತ್ತು ಅನಧಿಕೃತ ಪ್ರವೇಶಗಳ ಕಾರಣಗಳಿಗಾಗಿ ಹಿಂದೂ-ಮುಸ್ಲಿಮರ ನಡುವೆ ಕೋಮು ಗಲಭೆ ಸಂಭವಿಸುತ್ತದೆ. ಆಗ ಬ್ರಿಟಿಷ್ ಆಡಳಿತವು ಸೀತಾ ರಸೋಯಿ ಮತ್ತು ರಾಮ್ ಚಬೂತರ್ ಇದ್ದ ಹೊರ ಆವರಣ ಹಾಗೂ ಮೂರು ಗುಮ್ಮಟಗಳಿದ್ದ ಮಸೀದಿಯ ಒಳಾವರಣವನ್ನು ಬೇರ್ಪಡಿಸಿ ಕಬ್ಬಿಣದ ಸರಳುಗಳ ತಡೆಗೋಡೆಯನ್ನು ನಿರ್ಮಿಸುತ್ತದೆ. ಅಲ್ಲಿಂದಾಚೆಗೆ ಹೊರ ಆವರಣದಲ್ಲಿ ಹಿಂದೂಗಳು ಹಾಗೂ ಒಳಾವರಣದಲ್ಲಿ ಅಂದರೆ ಮಸೀದಿಯಲ್ಲಿ ಮುಸ್ಲಿಮರು ನಿರಂತರವಾಗಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆಂದೂ ಸುಪ್ರೀಂ ಕೋರ್ಟು ಒಪ್ಪಿಕೊಳ್ಳುತ್ತದೆ. ಆದರೆ ಅದರ ಜೊತೆಜೊತೆಗೆ 1857ಕ್ಕೆ ಹಿಂದೆಯೂ ಮತ್ತು ಆ ನಂತರವೂ ಒಳಾವರಣದಲ್ಲಿ ಅಂದರೆ ಮಸೀದಿ ಇದ್ದ ಜಾಗದಲ್ಲಿ ರಾಮನು ಜನ್ಮ ತಾಳಿದ್ದನೆಂಬ ನಂಬಿಕೆಯನ್ನೂ ಹಿಂದೂಗಳು ಮುಂದುವರಿಸಿಕೊಂಡು ಬಂದಿದ್ದಾರೆಂದೂ ದಾಖಲಿಸುತ್ತದೆ.

ಈ ಹಂತದಲ್ಲಿ ಸುಪ್ರೀಂ ಕೋರ್ಟು ಒಂದು ವಿಚಿತ್ರ ತರ್ಕವನ್ನು ಮುಂದಿಡುತ್ತದೆ. ಹೇಳಿಕೇಳಿ ಇದೊಂದು ಸಿವಿಲ್ ವ್ಯಾಜ್ಯ. ಇಲ್ಲಿ ಹಿಂದೂ ಸಂಘಟನೆಗಳು ಮತ್ತು ಸಾಕ್ಷಾತ್ ರಾಮಲಲ್ಲಾನೆ ಅಹವಾಲುದಾರರಾಗಿದ್ದಾರೆ. ಈ ವಿವಾದಿತ 2.77 ಎಕರೆ ಜಾಗ ತಮ್ಮ ‘ಒಡೆತನಕ್ಕೆ’ ಸೇರಬೇಕೆಂದು ಅವರ ಅಹವಾಲು. ಮತ್ತೊಂದೆಡೆ ಈ ಜಾಗವನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕೆಂಬುದು ಮುಸ್ಲಿಮರ ವಾದ. ಹೀಗಾಗಿ ಇದು ಭೂಮಿಯ ಒಡೆತನಕ್ಕೆ ಸಂಬಂಧಪಟ್ಟ ವ್ಯಾಜ್ಯ. ಆದ್ದರಿಂದ ವಾದಿ-ಪ್ರತಿವಾದಿಗಳಿಬ್ಬರೂ ಕೇವಲ ಬಳಕೆಯನ್ನು ಮಾತ್ರವಲ್ಲ ಒಡೆತನಕ್ಕೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಹಾಜರುಪಡಿಸಬೇಕಿರುತ್ತದೆ. ಅದಿಲ್ಲದಾಗ ಬಳಕೆ ಹಾಗೂ ಇನ್ನಿತರ ಪುರಾವೆಗಳನ್ನು ನೀಡಿದಾಗ ಮಾತ್ರ ಸಂಭಾವ್ಯತೆಗಳನ್ನು ಆಧರಿಸಿ ಸಿವಿಲ್ ವ್ಯಾಜ್ಯದ ಡಿಕ್ರಿಯಾಗುತ್ತದೆ. ಮಸೀದಿಯ ಹೊರಗಿನ ಹೊರ ಆವರಣದ ಬಗ್ಗೆ ಮುಸ್ಲಿಮರು ಯಾವುದೇ ಒಡೆತನದ ಕಾಗದ ಪತ್ರಗಳನ್ನು ಹಾಜರು ಪಡಿಸಿಲ್ಲ ಎನ್ನುವ ಕೋರ್ಟು, ಹಾಗೆಯೇ ಅಲ್ಲಿ ಮುಸ್ಲಿಮರು ಯಾವುದೇ ಬಗೆಯ ಪ್ರಾರ್ಥನೆಯನ್ನು ಸಲ್ಲಿಸುತ್ತಿರಲಿಲ್ಲ ಎಂದು ಕೂಡಾ ಹೇಳುತ್ತದೆ. ಅದಕ್ಕೆ ಪ್ರತಿಯಾಗಿ ಹೊರ ಆವರಣದ ಮೇಲೆ ಹಿಂದೂಗಳು ಯಾವುದೇ ಒಡೆತನ ಪತ್ರಗಳನ್ನು ಸಲ್ಲಿಸದಿದ್ದರೂ ನಿರಂತರವಾಗಿ ಪೂಜೆ ಸಲ್ಲಿಸುತ್ತಿದ್ದಾರೆಂಬುದು ಸಾಬೀತಾಗಿದೆಯೆಂಬ ಏಕೈಕ ಕಾರಣಕ್ಕೆ ಮಸೀದಿಯ ಹೊರ ಆವರಣವು ಹಿಂದೂಗಳಿಗೆ ಸೇರಬೇಕೆಂದು ಸುಪ್ರೀಂ ಕೋರ್ಟು ತೀರ್ಮಾನಿಸುತ್ತದೆ. ಹಾಗಿದ್ದಲ್ಲಿ ಒಳ ಆವರಣಕ್ಕೆ ಅಂದರೆ ಮಸೀದಿ ಇದ್ದ ಜಾಗದ ವಿಷಯದಲ್ಲೂ ಇದೇ ತರ್ಕ ಅನ್ವಯವಾಗಬೇಕಲ್ಲವೇ? ಅಂದರೆ ಮಸೀದಿಯ ಜಾಗದ ಒಡೆತನ ಪತ್ರವನ್ನು ಹಾಜರು ಪಡಿಸದಿದ್ದರೂ ಯಾರು ಅಲ್ಲಿ ನಿರಂತರವಾಗಿ ಪ್ರಾರ್ಥನೆ ಸಲ್ಲಿಸುತ್ತಾ ಬಂದಿದ್ದಾರೋ ಅವರಿಗೇ ಅದರ ಒಡೆತನವೆಂದೂ ಡಿಕ್ರಿಯಾಗಬೇಕಲ್ಲವೇ?

ಸುಣ್ಣ ಒಂದು ಕಣ್ಣಿಗೆ-ಬೆಣ್ಣೆ ಮತ್ತೊಂದಕ್ಕೆ

ಆದರೆ ಇಲ್ಲಿ ಸುಪ್ರೀಂ ಕೋರ್ಟು ವಿಚಿತ್ರ ತರ್ಕವನ್ನು ಮುಂದಿಡುತ್ತದೆ. ಅದರ ಪ್ರಕಾರ 1857ರಿಂದಾಚೆಗೆ ಒಳಾವರಣದಲ್ಲಿ ಮುಸ್ಲಿಮರೇ ನಮಾಝ್ ಮಾಡುತ್ತಾ ಬಂದಿರುವುದು ನಿಜ. ಆದರೆ 1857ಕ್ಕೆ ಮುಂಚೆ ಅಲ್ಲಿ ಮುಸ್ಲಿಮರು ನಮಾಝ್ ಮಾಡುತ್ತಿದ್ದಕ್ಕಾಗಲೀ ಅಥವಾ ಅವರ ಒಡೆತನದಲ್ಲಿ ಇದ್ದದ್ದಕ್ಕಾಗಲೀ ಯಾವುದೇ ಪುರಾವೆಯನ್ನು ಒದಗಿಸುವುದಿಲ್ಲ ಎಂಬ ವಿಚಿತ್ರ ಅಭಿಪ್ರಾಯಕ್ಕೆ ತಲುಪುತ್ತದೆ. ಹಾಗೂ ಮುಸ್ಲಿಮರ ಮೇಲೆ ಕೇವಲ ಪ್ರಾರ್ಥನೆ ಸಲ್ಲಿಸುತ್ತಿದ್ದ ದಾಖಲೆಗಳನ್ನು ಮಾತ್ರವಲ್ಲದೆ ಒಡೆತನವನ್ನು ಸಾಬೀತು ಮಾಡಬೇಕೆಂಬ, ಹಿಂದೂಗಳ ಮೇಲೆ ಹೇರದಿದ್ದ ಹೆಚ್ಚುವರಿ ಹೊರೆಯನ್ನು ಮುಸ್ಲಿಮರ ಮೇಲೆ ಹೇರುತ್ತದೆ. ಇದು ಯಾವ ನ್ಯಾಯ? ಹೊರ ಆವರಣದ ಕಥೆ ಏನೇ ಇರಲಿ. ಒಳಾವರಣದಲ್ಲಿ ಅಂದರೆ ಮೂರು ಗುಮ್ಮಟಗಳ ಮಸೀದಿ ಇದ್ದ ಜಾಗದಲ್ಲಿ 1528ರಲ್ಲೇ ಮಸೀದಿಯನ್ನು ನಿರ್ಮಿಸಿದ್ದು ನಿಜ ಎಂದು ಕೋರ್ಟು ಒಪ್ಪಿಕೊಂಡಿದೆಯಷ್ಟೆ. ಒಂದು ಮಸೀದಿಯನ್ನು ಅದೂ ಒಬ್ಬ ಮುಸ್ಲಿಮ್ ದೊರೆಯ ಕಾಲದಲ್ಲಿ ಏಕೆ ನಿರ್ಮಿಸಲಾಗುತ್ತದೆ? ನಮಾಝ್‌ಗೆ ತಾನೇ?

ಇಸ್ಲಾಮ್ ಕಾನೂನಿನ ಪ್ರಕಾರ ಒಮ್ಮೆ ಮುಸ್ಲಿಂ ಧಾರ್ಮಿಕ ಕಾರ್ಯಗಳಿಗೆಂದು ಒಂದು ಸ್ಥಳವನ್ನು ಕೊಡುಗೆಯಾಗಿ ನೀಡಿದ ಮೇಲೆ ಅದು ಶಾಶ್ವತ ಧಾರ್ಮಿಕ ಕೊಡುಗೆ-ವಕ್ಫ್-ಆಗುತ್ತದೆ. ಅದನ್ನು ಪಡೆದುಕೊಂಡವರು ಬೇರೆ ವಿಷಯಗಳಿಗೆ ಬಳಸಲು ಬರುವುದಿಲ್ಲ. ಕೊಟ್ಟವರೂ ವಾಪಸ್ ಪಡೆದುಕೊಳ್ಳಲು ಬರುವುದಿಲ್ಲ. ಒಮ್ಮೆ ವಕ್ಫ್ ಆದ ಮೇಲೆ ಅದು ಶಾಶ್ವತ ವಕ್ಫ್ ಆಗುತ್ತದೆ. ಹೀಗಾಗಿ ಅದರ ಒಡೆತನ ಹಾಗೂ ಧಾರ್ಮಿಕ ಸ್ವರೂಪ ವಿವಾದಾತೀತ ಮತ್ತು ಶಾಶ್ವತ. ಈ ಕಾನೂನು ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟೇ ಹಲವು ಪ್ರಕರಣಗಳಲ್ಲಿ ಹಲವಾರು ಸಾರಿ ಸ್ಪಷ್ಟಪಡಿಸಿದೆ. ಆದ್ದರಿಂದ ಒಮ್ಮೆ ಅಲ್ಲಿ 1528ರಲ್ಲಿ ಮಸೀದಿಯಿತ್ತೆಂದು ಕೋರ್ಟು ಒಪ್ಪಿಕೊಂಡ ನಂತರ ಅದರ ಒಡೆತನ ಯಾರದ್ದು ಎಂದು ಕೇಳುವುದೇ ಸದುದ್ದೇಶದ ಪ್ರಶ್ನೆಯಲ್ಲ. ಅಷ್ಟು ಮಾತ್ರವಲ್ಲದೆ ಬ್ರಿಟಿಷ್ ಕಾಲದ ಹಿಂದಿನ ವಿದ್ಯಮಾನಗಳನ್ನು ಈ ಸಿವಿಲ್ ತಗಾದೆಗೆ ಸಂಬಂಧಿಸಿದಂತೆ ಪರಿಗಣಿಸುವುದಿಲ್ಲ ಎಂದೂ ಕೂಡಾ ಈ ಮೊದಲೇ ಸುಪ್ರೀಂ ಕೋರ್ಟು ಸ್ಪಷ್ಟಪಡಿಸಿತ್ತಲ್ಲವೇ?

ಬ್ರಿಟಿಷ್ ಕಾಲಾವಧಿಯುದ್ದಕ್ಕೂ ಅಲ್ಲಿ ನಮಾಝ್ ನಡೆಯುತ್ತಿತ್ತೆಂದು ಪುರಾವೆಗಳ ಮೂಲಕ ಸ್ಪಷ್ಟವಾಗಿದೆಯೆಂದೂ ಸುಪ್ರೀಂ ಕೋರ್ಟು ಒಪ್ಪಿಕೊಳ್ಳುತ್ತದೆ. ಕೇವಲ ಧಾರ್ಮಿಕ ರಿವಾಜುಗಳೇ ಹೊರ ಆವರಣದಲ್ಲಿ ಹಿಂದೂ ಒಡೆತನವನ್ನು ಸಾಬೀತು ಮಾಡುವುದಾದಲ್ಲಿ ಮುಸ್ಲಿಂ ಧಾರ್ಮಿಕ ರಿವಾಜುಗಳು ಮಾತ್ರವಿದ್ದ ಒಳಾವರಣದಲ್ಲಿ ಕೂಡಾ ಮುಸ್ಲಿಂ ಒಡೆತನ ಸಾಬೀತಾಯಿತೆಂದು ಪರಿಗಣಿತವಾಗಬೇಕಲ್ಲವೇ?

ಆದರೆ, ಇಲ್ಲ!. ಬಹುಸಂಖ್ಯಾತರ ನಂಬಿಕೆ ಪುರಾವೆಗಿಂತ ಹೆಚ್ಚಿನದ್ದು!
ಒಳಾವರಣದಲ್ಲಿ ನಮಾಝ್ ನಡೆಯುತ್ತಿರುವುದು ನಿಜವಾದರೂ ಒಡೆತನಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಮುಸ್ಲಿಮರು ಕೊಟ್ಟಿಲ್ಲವಾದ್ದರಿಂದ ಒಳಾವರಣ ಅವರದ್ದೆಂದು ಸಾಬೀತಾಗುವುದಿಲ್ಲ ಎಂದು ಸುಪ್ರೀಂ ಕೋರ್ಟು ತೀರ್ಮಾನಕ್ಕೆ ಬರುತ್ತದೆ!!!

ಹಾಗಿದ್ದರೆ ಹಿಂದೂಗಳು ಒಳಾವರಣದ ಒಡೆತನವನ್ನಿರಲಿ ಪೂಜೆಗೆ ಬಳಸುತ್ತಿದ್ದುದನ್ನಾದರೂ ಸಾಬೀತುಪಡಿಸಿದ್ದಾರೆಯೇ? ಸುಪ್ರೀಂಕೋರ್ಟೇ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸುವಂತೆ ಹಿಂದೂಗಳೂ 1857ಕ್ಕೆ ಮುಂಚೆ ಒಳಾವರಣದಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸುತ್ತಿದ್ದುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಇಬ್ಬರು ಪ್ರವಾಸಿಗಳು 1857ಕ್ಕೆ ಮುಂಚೆ ಒಳಾವರಣದಲ್ಲಿ ಹಿಂದೂಗಳು ಪ್ರಾರ್ಥನೆ ಮಾಡುತ್ತಿದ್ದರೆಂದು ದಾಖಲಿಸಿದ್ದಾರಾದರೂ ಅದರಲ್ಲಿ ಹಲವಾರು ವೈರುಧ್ಯದ ಸಂಗತಿಗಳಿವೆ ಯೆಂದು ಕೋರ್ಟೇ ಒಪ್ಪಿಕೊಳ್ಳುತ್ತದೆ ಮತ್ತು ಅದನ್ನು ಪ್ರಬಲ ಏಕಮಾತ್ರ ಪುರಾವೆಯಾಗಿ ಒಪ್ಪಲಾಗದೆಂದೂ ಹೇಳುತ್ತದೆ. 1857ರ ನಂತರವಂತೂ ಒಳಾವರಣದಲ್ಲಿ ಹಿಂದೂಗಳು ಪೂಜೆ ಮಾಡುತ್ತಿರಲಿಲ್ಲವೆಂಬುದು ನಿರ್ವಿವಾದವಾಗಿ ಸಾಬೀತಾಗಿದೆ ಎಂದೂ ಹೇಳುತ್ತದೆ.
ಆದರೆ..

ಸುಪ್ರೀಂ ಕೋರ್ಟಿನ ಪ್ರಕಾರ ಹಿಂದೂಗಳು ಮಸೀದಿಯಿದ್ದ ಜಾಗವೇ ರಾಮ ಜನಸ್ಥಾನವೆಂದು ನಂಬಿಕೊಂಡು ಬಂದಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಅದರ ಬಗ್ಗೆ ಐವರು ನ್ಯಾಯಾಧೀಶರಲ್ಲಿ ಒಬ್ಬರು ಪ್ರತ್ಯೇಕವಾಗಿ 116 ಪುಟಗಳ ಟಿಪ್ಪಣಿಯನ್ನೂ ನೀಡಿದ್ದಾರೆ. ಹೀಗೆ, ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಗಮನಿಸಿದಾಗ ಒಳಾವರಣದ ಮೇಲೆ ಅಂದರೆ ಮಸೀದಿಯಿದ್ದ ಜಾಗದ ಮೇಲೆ ಹಿಂದೂಗಳ ಒಡೆತನವೇ ಇರುವ ಸಾಧ್ಯತೆಯ ಕಡೆಗೇ ತಕ್ಕಡಿ ವಾಲುತ್ತದೆ ಎಂದು ಅಭಿಪ್ರಾಯ ಪಟ್ಟು ಸುಪ್ರೀಂ ಕೋರ್ಟು ವಿವಾದಿತ ಜಾಗವನ್ನು ಇಡಿಯಾಗಿ ಹಿಂದೂಗಳ ವಶಕ್ಕೆ ನೀಡಿ ಮುಸ್ಲಿಮರನ್ನು ಹೊರದಬ್ಬಿದೆ.

ಅಂದರೆ ಒಡೆತನ ಹಾಗೂ ಪೂಜೆಯ ಯಾವ ಪುರಾವೆಗಳನ್ನು ಹಿಂದೂ ಸಂಘಟನೆಗಳು ಒದಗಿಸದಿದ್ದರೂ ಅದು ರಾಮಜನ್ಮಸ್ಥಾನ ಎಂದು ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆಯೆಂಬ ನಂಬಿಕೆಯ ಸಂಗತಿಯೇ ಈ ತೀರ್ಪನ್ನು ಪ್ರಭಾವಿಸಿದೆ. ಆದರೆ ಮುಸ್ಲಿಮರನ್ನು ಕಾನೂನು ಬಾಹಿರವಾಗಿ ಮಸೀದಿಯಿಂದ 1949ಕ್ಕೆ ಹೊರಕ್ಕೆಸಲಾಯಿತೆಂದೂ ಮತ್ತು 1992ರಲ್ಲಿ ಬಾಬರಿ ಮಸೀದಿ ಕೆಡವಿ ಹೀನಾಯ ಅಪರಾಧ ಮಾಡಿರುವುದನ್ನು ಗುರುತಿಸುವ ನ್ಯಾಯಾಲಯ ಅದಕ್ಕೆ ಖಾಜಿ ನ್ಯಾಯ ಮಾಡುವಂತೆ ಮುಸ್ಲಿಮರಿಗೂ ಅಯೋಧ್ಯೆಯಲ್ಲೇ ಐದು ಎಕರೆ ಜಮೀನನ್ನು ಕೊಡಬೇಕೆಂದು ಆದೇಶಿಸಿದೆ.
ಆದರೆ ಅದೇ ಸಮಯದಲ್ಲಿ ಬಾಬರಿ ಮಸೀದಿ ಕೆಡವಿದ ವಿಶ್ವಹಿಂದೂ ಪರಿಷತ್ತೇ ರಾಮಲಲ್ಲಾನ ಗಾರ್ಡಿಯನ್ ಆಗಿರುವುದರಿಂದ 2.77 ಎಕರೆ ದಕ್ಕುವುದು ಅವರಿಗೆ ಮತ್ತು ಕೋರ್ಟು ಮಾಡಿರುವ ಆದೇಶದ ಪ್ರಕಾರ ಅವರನ್ನೂ ಒಳಗೊಂಡಿರುವ ಟ್ರಸ್ಟೇ ರಾಮಮಂದಿರ ನಿರ್ಮಾಣ ಮಾಡಲಿದೆ!.

ಮುಂದೇನು?
ಅ) ಯಾರು ಮೇಲ್ಮನವಿ ಸಲ್ಲಿಸಿದರೂ ಬಿಟ್ಟರೂ ಮಸೀದಿ ಇದ್ದ ಜಾಗ ವಿವಾದಾತೀತವಾಗಿ ಮುಸ್ಲಿಮರಿಗೇ ದಕ್ಕುವುದು ನ್ಯಾಯ ಎಂಬುದನ್ನು ದಾಖಲಿಸಬೇಕು. ಇಲ್ಲದಿದ್ದರೆ ಇದೇ ಮೇಲ್ಪಂಕ್ತಿಯಾಗಿ ಉಳಿದ ಕಡೆಗಳಿಗೂ ಹರಡುತ್ತದೆ. ಈಗಾಗಲೇ ಸಂಘಪರಿವಾರದ ಮುಖ್ಯಸ್ಥರು ಕೊಟ್ಟಿರುವ ಹೇಳಿಕೆಯಲ್ಲಿ ಕಾಶಿ ಮತ್ತು ಮಥುರಾಗಳಲ್ಲಿನ ಮಸೀದಿಯನ್ನೂ ವಿಮೋಚನೆ ಮಾಡುವ ಘೋಷಣೆಗಳಾಗಿವೆ. ಅದರ ನಾಶವನ್ನು ಈ ತೀರ್ಪಿನ ತರ್ಕ ಸಮರ್ಥಿಸಿಬಿಡುತ್ತದೆ.

ಆ) ಬಾಬರಿ ಮಸೀದಿ ನಾಶಕ್ಕೆ ಕಾರಣವಾದ ಸಂಸ್ಥೆ ಮತ್ತು ವ್ಯಕ್ತಿಗಳನ್ನು ಸರಕಾರ ಮಾಡುವ ಟ್ರಸ್ಟಿನಿಂದ ಹೊರಗಿಡಬೇಕು ಹಾಗೂ ಎಲ್ಲಿಯ ತನಕ ಬಾಬರಿ ಮಸೀದಿ ನಾಶಕ್ಕೆ ಕಾರಣವಾದವರಿಗೆ ಕಠಿಣ ಶಿಕ್ಷೆಯಾಗುವುದಿಲ್ಲವೋ ಅಲ್ಲಿಯವರೆಗೆ ಟ್ರಸ್ಟ್ ರಚನೆ ಹಾಗೂ ಮಂದಿರ ನಿರ್ಮಾಣ ಇತ್ಯಾದಿಗಳನ್ನು ಮುಂದೂಡಬೇಕು. ಸರಕಾರದ ಹಣವನ್ನು ಮಂದಿರ ನಿರ್ಮಾಣಕ್ಕೆ ವ್ಯಯಿಸಬಾರದು.

ಇ) ಉಪಾಸನಾ ಸ್ಥಳಗಳ ವಿಶೇಷ ಅವಕಾಶ ಕಾಯ್ದೆ-1991ನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಹಾಗೂ ಈ ಕಾಯ್ದೆಯನ್ನು ಭಾರತದ ಸಂವಿಧಾನದ ಮೂಲರಚನೆಯೆಂದು ಪರಿಗಣಿಸಿ ಅದನ್ನು ಪಾರ್ಲಿಮೆಂಟು ಮತ್ತು ಕೋರ್ಟುಗಳ ಪರಾಮರ್ಶೆಗೆ ಮತ್ತು ತಿದ್ದುಪಡಿಗೆ ಒಳಗಾಗದಂತೆ ಶೆಡ್ಯೂಲ್ 9ಕ್ಕೆ ಸೇರಿಸಬೇಕು.

ಈ) ರಾಮನ ಹೆಸರಲ್ಲಿ ರಕ್ತ ಹರಿಸಿದ್ದು ಸಾಕು. ಜನರ ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ದಾಳಗಳನ್ನಾಗಿ ಮಾಡಿಕೊಳ್ಳುವ ಕೋಮುವಾದಿ ರಾಜಕಾರಣವನ್ನು ಸೋಲಿಸುವತ್ತ ಜನರ ಬದುಕಿನ ಸಮಸ್ಯೆಗಳನ್ನು ಮುನ್ನೆಲೆಗೆ ತರುವೆಡೆ ಚಳವಳಿಗಳು ಶ್ರಮಿಸಬೇಕು. ಬೆವರು, ರಕ್ತ ಮತ್ತು ಭಾವಗಳ ಐಕ್ಯತೆಯಲ್ಲಿ ಮಾತ್ರ ನಿಜ ಭಾರತ ನಿರ್ಮಾಣವಾಗಲು ಸಾಧ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)