ಮಂಗಳೂರು: ನ.19ರಂದು ನಂದಿನಿ ಕೋಲ್ಡ್ ಕಾಫಿ, ಕಷಾಯ ಮಾರುಕಟ್ಟೆಗೆ
ಮಂಗಳೂರು, ನ.16: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 66ನೆ ಸಹಕಾರಿ ಸಪ್ತಾಹದ ಅಂಗವಾಗಿ ಈ ಬಾರಿ ಗ್ರಾಹಕರಿಗೆ ನೂತನ ಉತ್ಪನ್ನಗಳಾದ ನಂದಿನಿ ಕೋಲ್ಡ್ ಕಾಫಿ ಹಾಗೂ ನಂದಿನಿ ಕಷಾಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಎರಡೂ ಉತ್ಪನ್ನಗಳು 200 ಮಿ.ಲೀ. ಸಿಪಿಪಿ ಬಾಟಲುಗಳಲ್ಲಿ ನ.19ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಕುಲಶೇಖರದ ಕೋರ್ಡೆಲ್ ಸಭಾಂಗಣದಲ್ಲಿ ಅಂದು ಸಪ್ತಾಹದ ಅಂಗವಾಗಿ ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕ ಸೇರ್ಪಡೆ, ತಂತ್ರಜ್ಞಾನ ಅಳವಢಿಕೆ ಹಾಗೂ ಗಣಕೀಕರಣ ದಿನಾಚರಣೆಯನ್ನು ಆಚರಿಸಲಾಗುವುದು. ಸಮಾರಂಭದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನಂದಿನಿ ಕಷಾಯ ಬಿಡುಗಡೆ ಮಾಡಲಿರುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವೇದವ್ಯಾಸ ಕಾಮತ್ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ನಂದಿನಿ ಕೋಲ್ಡ್ ಕಾಫಿಯನ್ನು ಬಿಡುಗಡೆಗೊಳಿಸುವರು. ಇದೇ ವೇಳೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ನಂದಿನಿ ಪನೀರ್ (500 ಗ್ರಾಂ ಪ್ಯಾಕೆಟ್) ಹಾಗೂ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್. ನಂದಿನಿ ಪೇಡಾ (25 ಗ್ರಾಂ)ನ ಬಿಡಿ ಪ್ಯಾಕ್ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿರುವರು. ಇದೇ ಸಂದರ್ಭದಲ್ಲಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಒಕ್ಕೂಟದಿಂದ ತಯಾರಿಸಿದ ‘ನನ್ನಾಸೆಯ ನಂದಿನಿ’ ಎಂಬ ಸಾಕ್ಷ ಚಿತ್ರವನ್ನು ಬಿಡುಗಡೆ ಮಾಡಲಿರುವರು.
ನಂದಿನಿ ಕಷಾಯವನ್ನು ಸ್ಟೆರಿಲೈಸ್ಡ್ ಹೋಮೋಜಿನೈಸ್ಡ್ ಡಬಲ್ ಟೋನ್ಡ್ ಹಾಲು, ನೈಸರ್ಗಿಕವಾಗಿ ದೊರೆಯುವ ಸಾಂಬಾರ ಪದಾರ್ಥಗಳಾದ ಕೊತ್ತಂಬರಿ, ಜೀರಿಗೆ, ಅರಿಸಿಣ, ಚಕ್ಕೆ, ಲವಂಗ, ಒಣ ಶುಂಠಿ, ಕರಿಮೆಣಸು, ಬಿಳಿ ಮೆಣಸು ಮತ್ತು ಬೆಲ್ಲ ಮಿಶ್ರಣದಿಂದ ತಯಾರಿಸಲಾಗಿದೆ. 180 ದಿನ ಜೀವಿತಾವಧಿಯನ್ನು ಇದು ಹೊಂದಿರುತ್ತದೆ. ಮಿಲ್ಕ್ ಪಾರ್ಲರ್ಗಳಲ್ಲಿ ಬಿಡುಗಡೆಯ ದಿನದಂದು ಗ್ರಾಹಕರಿಗೆ ಕಷಾಯ ಹಾಗೂ ಕಾಫಿಯನ್ನು ಉಚಿತವಾಗಿ ವಿತರಿಸಲು ಚಿಂತಿಸಲಾಗಿದೆ. ಕಾಫಿ ಸದ್ಯ ದಿನವೊಂದಕ್ಕೆ 5000 (200 ಮಿ.ಲೀ.) ಬಾಟಲ್ಗಳನ್ನು ಮಾರುಕಟ್ಟೆಗೆ ಒದಗಿಸಾಗುವುದು ಎಂದವರು ಹೇಳಿದರು.
ನಂದಿನಿ ಕೋಲ್ಡ್ ಕಾಫಿಯನ್ನು ಸ್ಟೆರಿಲೈಸ್ಡ್ ಹೋಮೋಜಿನೈಸ್ಡ್ ಡಬಲ್ ಟೋನ್ಡ್ ಹಾಲು ಸಕ್ಕರೆ, ಸ್ಪೆಷಲ್ ಇನ್ಸ್ಟಂಟ್ ಕಾಫಿ ಹುಡಿ ಬಳಸಿ ತಯಾರಿಸಲಾಗಿದೆ. ನಂದಿನಿ ಪೇಡಾ 25 ಗ್ರಾಂನ ಬಿಡಿ ಪ್ಯಾಕ್ 10 ರೂ. ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಅವರು ವಿವರ ನೀಡಿದರು.
ನಂದಿನಿ ಪನೀರ್ಗೆ ಬೇಡಿಕೆ ಹೆಚ್ಚಾಗುತ್ತಿದೆ. ಸದ್ಯ ಒಂದು ಕೆಜಿ ಹಾಗೂ 200 ಗ್ರಾಂ ಪ್ಯಾಕೇಟ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಮನೆಗಳ ಉಪಯೋಗಕ್ಕೆ ಸಲುವಾಗಿ ಇದೀಗ 500 ಗ್ರಾಂ ಪ್ಯಾಕೆಟ್ ಬಿಡುಗಡೆಗೊಳ್ಳಲಿದೆ. ಸದ್ಯ ದಿನವೊಂದಕ್ಕೆ 2000 ಕೆಜಿಗೂ ಅಧಿಕ ಬೇಡಿಕೆ ಇದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ, ಪ್ರಕಾಶ್ಚಂದ್ರ ಶೆಟ್ಟಿ, ನಿರ್ದೇಶಕರಾದ ಕಾಪು ದಿವಕರ ಶೆಟ್ಟಿ, ನರಸಿಂಹ ಕಾಮತ್, ಕೆ.ಪಿ. ಸುಚರಿತ ಶೆಟ್ಟಿ, ಬಿ. ಸುಧಾಕರ ರೈ, ಸುಭದ್ರ ರಾವ್, ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ವಿ. ಹೆಗ್ಡೆ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.