ಚೆನ್ನೈ, ಬೆಂಗಳೂರಿನ ನಲ್ಲಿ ನೀರು ಕುಡಿಯಲು ಅರ್ಹವಲ್ಲ: ವರದಿ
ಹೊಸದಿಲ್ಲಿ, ನ. 16 : ದೇಶದ 21 ರಾಜಧಾನಿ ನಗರಗಳಲ್ಲಿಯ ನಲ್ಲಿ ನೀರಿನ ಗುಣಮಟ್ಟ ಕುರಿತು ಕೇಂದ್ರದ ಇತ್ತೀಚಿನ ಅಧ್ಯಯನ ವರದಿಯು ಈ ಪೈಕಿ ಹೆಚ್ಚಿನ ನಗರಗಳಲ್ಲಿನ ನೀರು ಕುಡಿಯಲು ಅರ್ಹವಾಗಿಲ್ಲ ಎಂದು ತಿಳಿಸಿದೆ. ಮುಂಬೈ ಮಹಾನಗರದಿಂದ ಸಂಗ್ರಹಿಸಲಾಗಿದ್ದ ನೀರಿನ ಸ್ಯಾಂಪಲ್ ಮಾತ್ರ ಗುಣಮಟ್ಟ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು,ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮವಿಲಾಸ ಪಾಸ್ವಾನ್ ಅವರು ಶನಿವಾರ ಬಿಡುಗಡೆಗೊಳಿಸಿದ ಅಧ್ಯಯನ ವರದಿಯು ಹೇಳಿದೆ.
ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ನಿಗದಿಗೊಳಿಸಿರುವ ಮಾನದಂಡಗಳಿಗೆ ಅನುಗುಣವಾಗಿದೆಯೇ ಎನ್ನುವುದನ್ನು ಪರೀಕ್ಷಿಸಲು ಮೊದಲ ಎರಡು ಹಂತಗಳಲ್ಲಿ ದೇಶಾದ್ಯಂತ 21 ರಾಜಧಾನಿ ನಗರಗಳಿಂದ ನಲ್ಲಿ ನೀರಿನ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿತ್ತು. ಪ್ರಧಾನಿಯವರ ಜಲ ಜೀವನ್ ಅಭಿಯಾನದ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಈ ಅಧ್ಯಯನವನ್ನು ನಡೆಸಲಾಗಿತ್ತು ಎಂದು ಪಾಸ್ವಾನ್ ತಿಳಿಸಿದರು.
ಬೆಂಗಳೂರು, ಚಂಡಿಗಡ, ತಿರುವನಂತಪುರ, ಪಾಟ್ನಾ, ಭೋಪಾಲ, ಗುವಾಹಟಿ, ಗಾಂಧಿನಗರ, ಲಕ್ನೋ, ಜಮ್ಮು, ಜೈಪುರ,ಡೆಹರಾಡೂನ್,ಚೆನ್ನೈ ಮತ್ತು ಕೋಲ್ಕತಾ ಈ 21 ನಗರಗಳಲ್ಲಿ ಸೇರಿವೆ.
ನಲ್ಲಿ ನೀರು ಕುಡಿಯಲು ಅರ್ಹವಾಗುವಂತೆ ಮಾಡಲು ಕೇಂದ್ರವು ಯಾವ ನೆರವನ್ನು ನೀಡಬಹುದು ಎನ್ನುವುದನ್ನು ಸ್ಪಷ್ಟಪಡಿಸುವಂತೆ ಕೋರಿ ತಾನು ರಾಜ್ಯ ಸರಕಾರಗಳಿಗೆ ಪತ್ರಗಳನ್ನು ಬರೆದಿರುವುದಾಗಿ ಪಾಸ್ವಾನ್ ತಿಳಿಸಿದರು.
ಬಿಐಎಸ್ ನಿಯಮಾವಳಿಗಳಂತೆ ವಿಕಿರಣಶೀಲ ವಸ್ತು ಪರೀಕ್ಷೆ ಸೇರಿದಂತೆ 48 ಮಾನದಂಡಗಳಡಿ ಕುಡಿಯುವ ನೀರಿನ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ಆದರೆ ಹಾಲಿ ಅಧ್ಯಯನದಲ್ಲಿ ವಿಕಿರಣಶೀಲ ವಸ್ತು ಮತ್ತು ಕ್ಲೋರಿನ್ ಶೇಷಗಳ ಪರೀಕ್ಷೆಗಳನ್ನು ಕೈಬಿಡಲಾಗಿತ್ತು ಎಂದು ಸಚಿವಾಲಯವು ತಿಳಿಸಿದೆ.
ಹೈದರಾಬಾದ್,ಭುವನೇಶ್ವರ,ರಾಂಚಿ,ರಾಯಪುರ,ಅಮರಾವತಿ ಮತ್ತು ಶಿಮ್ಲಾಗಳಿಂದ ಸಂಗ್ರಹಿಸಲಾಗಿದ್ದ ನೀರಿನ ಸ್ಯಾಂಪಲ್ಗಳ ಪೈಕಿ ಒಂದು ಅಥವಾ ಹೆಚ್ಚಿನವು ಬಿಐಎಸ್ ಮಾನದಂಡಗಳಿಗೆ ಅನುಗುಣವಾಗಿಲ್ಲ.
ಮೂರನೆ ಹಂತದಲ್ಲಿ ಈಶಾನ್ಯ ರಾಜ್ಯಗಳ ರಾಜಧಾನಿಗಳು ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಗುರುತಿಸಿರುವ ಸ್ಮಾರ್ಟ್ ಸಿಟಿಗಳ ಹಾಗೂ ನಾಲ್ಕನೇ ಹಂತದಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳ ನೀರಿನ ಸ್ಯಾಂಪಲ್ಗಳನ್ನು ಪರೀಕ್ಷೆಗೊಳಪಡಿಸಲಾಗುವುದು ಎಂದು ಸಚಿವಾಲಯವು ತಿಳಿಸಿದೆ.