ವಾಮಂಜೂರು ವಿದ್ಯಾಜ್ಯೋತಿ ಶಾಲೆಯಲ್ಲಿ ಮಕ್ಕಳ ಹಬ್ಬ
ಮಂಗಳೂರು, ನ.16: ವಾಮಂಜೂರಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಮನೋರಂಜನೆಗಾಗಿ ಶನಿವಾರ ದಿನಪೂರ್ತಿ ‘ಮಕ್ಕಳ ಹಬ್ಬ’ ಹಾಗೂ ಆಹಾರೋತ್ಸವ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಜೊತೆಗೆ ಅವರಲ್ಲಿ ದೇಶಭಕ್ತಿ ಹುಟ್ಟಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಒಬ್ಬರ ನಂಬಿಕೆಗೆ ಇನ್ನೊಬ್ಬರು ಬೆಲೆ ಕೊಡುವಂತಹ ವಾತಾವರಣ ಸೃಷ್ಟಿಯಾಗಬೇಕು. ಎಲ್ಲ ಧರ್ಮದವರೊಂದಿಗೆ ಪ್ರೀತಿಯಿಂದ ಬದುಕಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಸ್ಟರ್ ಜ್ಯೂಲಿಯೆಟ್ ಮಾತನಾಡಿ, ಈ ಮಕ್ಕಳ ಹಬ್ಬ ನೋಡುವಾಗ ಬಾಲ್ಯದ ನೆನಪಾಗುತ್ತದೆ. ಇಲ್ಲಿ ಒಬ್ಬರು ಇನ್ನೊಬ್ಬರೊಂದಿಗೆ ಸೇರಿಕೊಂಡು ಹಾಡಿ, ನಲಿಯುತ್ತಿದ್ದಾರೆ. ಮಕ್ಕಳೇ ಈ ಸಮಾಜದ ಬಲವಾಗಿದ್ದು, ಎಲ್ಲರೂ ಅನ್ಯೋನ್ಯವಾಗಿ ಸಂತೋಷದಿಂದ ಬದುಕಬೇಕು ಎಂದರು.
ಸ್ಥಳೀಯ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ವಾಮಂಜೂರು ಚರ್ಚ್ನ ಫಾ. ಸಿಪ್ರಿಯನ್ ಪಿಂಟೋ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಿಸ್ಟರ್ ಮಾರ್ಲೆಟ್, ಸಿಸ್ಟರ್ ಜೋಯೆಲ್ ಲಾಸ್ರಾದೊ ಹಾಗೂ ಪಿಟಿಎ ಅಧ್ಯಕ್ಷ ಅಬ್ದುಲ್ ರಝಾಕ್, ಶಾಲೆಯ ಮಾಜಿ ಪಿಟಿಎ ಅಧ್ಯಕ್ಷ ರೋಶನ್ ಕಾಮತ್ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಸಿಲ್ವಿಯಾ ಸಿಕ್ವೇರ ಸ್ವಾಗತಿಸಿದರು. ಮೇಘಶ್ರೀ ಮತ್ತು ಸಂಧ್ಯಾ ಉಳಾಯಿಬೆಟ್ಟು ನಿರೂಪಿಸಿದರು. ಸಿಸ್ಟರ್ ವೆರೋನಿಕಾ ವಂದಿಸಿದರು.
ಬಗೆಬಗೆಯ ಖಾದ್ಯ: ಶಾಲಾ ಮೈದಾನ ಹಾಗೂ ವೇದಿಕೆಯ ಎದುರಿನ ವಿಶಾಲ ಜಾಗದಲ್ಲಿ ಬೆಳಗ್ಗೆ 10 ಗಂಟೆಗೆ ಬಹು ವಿಧದ ಖಾದ್ಯ ಸೊತ್ತು ಮಾರಾಟ, ಗೇಮ್ಸ್ ಸ್ಟಾಲುಗಳು ತೆರೆದುಕೊಂಡಿದ್ದವು. ಶಾಲಾ ಆಡಳಿತದಿಂದ ಮೊದಲೇ ವ್ಯವಸ್ಥೆಗೊಳಿಸಲಾಗಿದ್ದ ‘ನಗದು ಕೂಪನ್’ ಮೂಲಕ ಆಹಾರ ಸೊತ್ತು ಖರೀದಿ ಹಾಗೂ ಗೇಮ್ಸ್ನಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿತ್ತು.
ಬೇಲ್ಪೂರಿ, ಸೇವ್ ಪೂರಿ, ಕಬ್ಬಿನ ಹಾಲು, ಲಿಂಬೆ ಸರಬತ್ತು, ಗೋಲ್ ಗುಪ್ಪ, ಐಸ್ಕ್ರೀಂ, ಸ್ವೀಟ್ ಕಾರ್ನ್... ಹೀಗೆ ಪ್ರತಿಯೊಂದು ಸ್ಟಾಲುಗಳಲ್ಲಿ ಮಕ್ಕಳು ಹಾಗೂ ಅವರ ಪಾಲಕರು ಸರತಿ ಸಾಲಿನಲ್ಲಿ ನಿಂತು ಖರೀದಿಸಿದರು. ಮತ್ತೊಂದು ಕಡೆಯಲ್ಲಿ ಫ್ರೈಡ್ ರೈಸ್, ನೂಡಲ್ಸ್, ಗೋಬಿ ಮಂಚೂರಿ, ಕಬಾಬ್, ನೀರು ದೋಸೆ, ಪತ್ರೋಡೆ ಹಾಗೂ ಬಾಯಲ್ಲಿ ನೀರೂರಿಸುವ ಇತರ ಖಾದ್ಯಗಳು ಸಿದ್ಧವಾಗಿದ್ದವು.
ಶಾಲಾ ಮಕ್ಕಳು ವಿವಿಧ ನೃತ್ಯ, ಸಂಗೀತ ಪ್ರದರ್ಶಿಸಿದರು. ಒಂದೆಡೆ ಹಾಡಿಗೆ ಮಕ್ಕಳು ಕುಣಿದು ಸಂತೋಷ ವ್ಯಕ್ತಪಡಿಸಿದರು. ಸಂಜೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.