'ಸಂಸದ ಗೌತಮ್ ಗಂಭೀರ್ ನಾಪತ್ತೆ'...!
Photo: ANI
ಹೊಸದಿಲ್ಲಿ: 'ಗೌತಮ್ ಗಂಭೀರ್ ನಾಪತ್ತೆ' ಎಂಬ ಶೀರ್ಷಿಕೆ ಹೊತ್ತ ಪೋಸ್ಟರ್ ಗಳು ದೆಹಲಿಯ ಐಟಿಒ ಪ್ರದೇಶದಲ್ಲಿ ರವಿವಾರ ರಾರಾಜಿಸುತ್ತಿದ್ದವು. ರಾಜಧಾನಿಯ ವಾಯುಮಾಲಿನ್ಯ ಸಮಸ್ಯೆ ಬಗ್ಗೆ ಚರ್ಚಿಸಲು ಕರೆದಿದ್ದ ಮಹತ್ವದ ಸಂಸದೀಯ ಸಮಿತಿ ಸಭೆಗೆ ಪೂರ್ವ ದೆಹಲಿ ಸಂಸದ ಗೈರುಹಾಜರಾದ ಹಿನ್ನೆಲೆಯಲ್ಲಿ ಗಂಭೀರ್ ನಾಪತ್ತೆ ಎಂಬ ಪೋಸ್ಟರ್ ಗಳನ್ನು ಹಚ್ಚಲಾಗಿದೆ.
"ನೀವು ಎಲ್ಲಾದರೂ ನೋಡಿದ್ದೀರಾ? ಇಂಧೋರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಜಿಲೇಬಿ ತಿನ್ನುತ್ತಿದ್ದ ಗಂಭೀರ್ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಇಡೀ ದೆಹಲಿ ಅವರಿಗಾಗಿ ಹುಡುಕುತ್ತಿದೆ" ಎಂದು ಪೋಸ್ಟರ್ ನಲ್ಲಿ ಬರಹವಿದೆ.
ಭಾರತ- ಬಾಂಗ್ಲಾದೇಶ ಕ್ರಿಕೆಟ್ ಪಂದ್ಯಕ್ಕೆ ವೀಕ್ಷಕ ವಿವರಣೆಗಾರರಾಗಿ ಗಂಭೀರ್ ಕಾರ್ಯನಿರ್ವಹಿಸಿದ ಬಗ್ಗೆ ಆಮ್ ಆದ್ಮಿ ಪಾರ್ಟಿ, ದೆಹಲಿಯ ಸಂಸದನ ವಿರುದ್ಧ ವಾಗ್ದಾಳಿ ನಡೆಸಿತ್ತು.
ಮಾಜಿ ಕ್ರಿಕೆಟ್ ಆಟಗಾರ ವಿ.ವಿ.ಎಸ್.ಲಕ್ಷ್ಮಣ್ ಅವರು ಶುಕ್ರವಾರ ಗಂಭೀರ್ ಜತೆ ಜಿಲೇಜಿ ಸವಿಯುತ್ತಿರುವ ಚಿತ್ರವನ್ನು ಶೇರ್ ಮಾಡಿದ್ದರು. "ಹೊಟ್ಟೆಪಾಡಿಗಾಗಿ ವಾಯುಮಾಲಿನ್ಯ ಕುರಿತ ಸಭೆಯನ್ನು ತಪ್ಪಿಸಿಕೊಂಡಿದ್ದಾಗಿ ನಮ್ಮ ಸಂಸದರು ಹೇಳುತ್ತಿದ್ದಾರೆ. ಇದೇ ವೇಳೆ ಸಂಸದರ ವೇತನವನ್ನು ಕ್ಷೇತ್ರಕ್ಕೆ ದೇಣಿಗೆಯಾಗಿ ನೀಡುವುದಾಗಿ ಹೇಳಿದ್ದಾರೆ. ಸಮರ್ಥಿಸಲಾಗದ್ದನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಜಿಲೇಬಿಯಂತೆ ಸುರುಳಿ ಸುತ್ತಿದ್ದಾರೆ" ಎಂದು ಎಎಪಿಯ ಅತಿಶಿ ಮರ್ಲೇನಾ ಟ್ವಿಟ್ಟರ್ನಲ್ಲಿ ಕುಟುಕಿದ್ದಾರೆ.