ಕನ್ನಡ ಭಾಷೆ, ಸಾಹಿತ್ಯಗೆ ಜೈನ ಕವಿಗಳ ಕೊಡುಗೆ ಅಪಾರ: ಮ.ನಾ.ಹೆಬ್ಬಾರ್
ಕಾಪು, ನ.17: ಭಾರತದ ಪರಂಪೆರೆಯ ಭಾಷೆಗಳಲ್ಲಿ ಕನ್ನಡ ಕೂಡ ಪುರಾತನ ಮತ್ತು ಸಮೃದ್ಧವಾದ ಭಾಷೆಯಾಗಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಸಮೃದ್ಧ ಗೊಳ್ಳುವಲ್ಲಿ ಜೈನ ಕವಿಗಳು ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಸಾಹಿತಿ ಮರೂರು ನಾರಾಯಣ ಹೆಬ್ಬಾರ್ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ವತಿಯಿಂದ ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಆಯೋಜಿಸಲಾದ ಶಾಲೆಯತ್ತ ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದಾಖಲೆಗಳ ಪ್ರಕಾರ ಆದಿ ಕವಿ ಪಂಪನಿಂದ ಹಿಡಿದು ಇಂದಿನ ಕನ್ನಡದ ಸಮೃದ್ಧ ಸಾಹಿತ್ಯ ಪರಂಪರೆಯಲ್ಲಿ ಹಾಗೂ ಕನ್ನಡ ಭಾಷಾಶೈಲಿಯಲ್ಲಿ ನಿರಂತರ ಬದಲಾವಣೆ ಕಂಡು ಬರುತ್ತಿದ್ದರೂ ಇದರಿಂದ ಕನ್ನಡದ ಶ್ರೀಮಂತಿಕೆಗೆ ಯಾವುದೇ ತೊಡಕು ಆಗಿಲ್ಲ ಎಂದರು.
ಹಳೇ ಕನ್ನಡಗಳಲ್ಲಿ ವೌಲ್ಯಧಾರಿತ ಸಾಹಿತ್ಯ ಜೊತೆಗೆ ಭಾಷೆಯ ಜೋಡಣೆ ಯಾಗುತ್ತಿತ್ತು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಸಾಹಿತ್ಯವನ್ನೂ ವಿಂಗಡಿಸಿ ನೋಡಲಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಅದರ ಪರಂಪರೆಯನ್ನು ಉಳಿಸಿ, ಬೆಳೆಸುವಲ್ಲಿ ಎಲ್ಲರೂ ಕೈ ಜೋಡಿಸಬೇಕಾಗಿೆ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿ, ಮಾತೃಭಾಷೆಯೇ ನಮ್ಮೆಲ್ಲಾ ಯೋಚನೆಗಳಿಗೆ ಪ್ರಾರಂಭವನ್ನು ನೀಡುತ್ತದೆ. ಮಾತೃಭಾಷೆಯಲ್ಲಿ ಪ್ರಾರಂಭಿಸಿದ ಯೋಚನೆಗಳನ್ನು ಇತರ ಭಾಷೆಗಳಿಗೆ ಅನುವಾದ ಮಾಡಿಕೊಂಡು ನಾವು ಮಾತನಾಡುತ್ತೇವೆ ಮತ್ತು ಯೋಜನೆಗಳನ್ನು ಅನುಷ್ಟಾನಕ್ಕೆ ತರುತ್ತಿದ್ದೇವೆ. ಇತರ ಭಾಷೆಗಳ ಪ್ರಭಾವದಿಂದ ಕುಂಠಿತಗೊಳ್ಳುತ್ತಿರುವ ಕನ್ನಡ ವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮ ವಹಿಸುವ ಅಗತ್ಯ ಇದೆ ಎಂದರು.
ಮುಖ್ಯ ಅತಿಥಿಯಾಗಿ ವಿದ್ಯಾನಿಕೇತನ ಸಮೂಹ ವಿದ್ಯಾಸಂಸ್ಥೆಯ ಮುಖ್ಯ ಅಡಳಿತಾಧಿಕಾರಿ ಪ್ರೊ.ವಿ.ಕೆ.ಉದ್ಯಾವರ ಮಾತನಾಡಿದರು. ಸಾಹಿತಿ ಮುದ್ದು ಮೂಡುಬೆಳ್ಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ದರು. ಶಾಲಾ ಕನ್ನಡ ಸಂಘದ ಅಧ್ಯಕ್ಷೆ ಸಂಜನಾ, ಕಸಾಪ ಕಾಪು ತಾಲೂಕು ಸಮಿತಿ ಪದಾಧಿಕಾರಿಗಳಾದ ಪ್ರೊ.ವೈ.ಭಾಸ್ಕರ್ ಶೆಟ್ಟಿ ಶಿರ್ವ, ಇನ್ನಾ ಉದಯ ಕುಮಾರ್ ಶೆಟ್ಟಿ, ಪ್ರೊ.ಸತ್ಯರಂಜನಿ ಕಟಪಾಡಿ, ಹರೀಶ್ ಕಟಪಾಡಿ ಉಪಸ್ಥಿತರಿದ್ದರು.
ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ವಿದ್ಯಾಧರ್ ಪುರಾಣಿಕ್ ಸ್ವಾಗತಿಸಿದರು. ಕಸಾಪ ತಾಲೂಕು ಸಮಿತಿ ಸದಸ್ಯೆ ಸುದಕ್ಷಿಣೆ ಪ್ರಸ್ತಾವಿಕವಾಗಿ ಮಾತನಾಡಿದರು. ಅನುಷ್ಕಾ ಬಹುಮಾನಿತರ ಪಟ್ಟಿ ವಾಚಿಸಿ ದರು. ಕಾಪು ತಾಲೂಕು ಘಟಕದ ಗೌರವ ಕಾರ್ಯದರ್ಶಿ ವಿದ್ಯಾ ಅಮ್ಮಣ್ಣಾಯ ವಂದಿಸಿದರು. ವಿದ್ಯಾರ್ಥಿನಿ ದಿಶಾ ಕಾರ್ಯಕ್ರಮ ನಿರೂಪಿಸಿದರು.