ಕಾಂಗ್ರೆಸ್ನೊಂದಿಗೆ ಸಭೆಗೆ ಮೊದಲು ಪ್ರಧಾನಿ ಭೇಟಿಯಾಗಲಿದ್ದಾರೆ ಶರದ್ ಪವಾರ್
ಹೊಸದಿಲ್ಲಿ, ನ.20: ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗೆ ಮೈತ್ರಿ ಸರಕಾರ ರಚನೆ ಸಂಬಂಧ ಕಾಂಗ್ರೆಸ್ ಹಾಗೂ ಎನ್ಸಿಪಿ ನಡುವೆ ನಡೆಯಲಿರುವ ಪ್ರಮುಖ ಸಭೆಗೆ ಮೊದಲು ಎನ್ಸಿಪಿ ಸುಪ್ರಿಮೋ ಶರದ್ ಪವಾರ್ ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆ ಕುರಿತಂತೆ ಪ್ರಧಾನಿ ಜೊತೆ ಚರ್ಚಿಸಲಿದ್ದಾರೆ.
ಪವಾರ್ ಇಂದು ಮಧ್ಯಾಹ್ನ 12:30ಕ್ಕೆ ಪ್ರಧಾನಿಯನ್ನು ಭೇಟಿಯಾಗಲಿದ್ದಾರೆ. ಆ ಬಳಿಕ ಪ್ರಧಾನಿಯನ್ನು ಭೇಟಿಯಾಗಲಿರುವ ಮಹಾರಾಷ್ಟ್ರದ ಸರ್ವಪಕ್ಷಗಳ ನಿಯೋಗಕ್ಕೆ ಪವಾರ್ ನೇತೃತ್ವವಹಿಸಲಿದ್ದಾರೆ.
ನಾನು ಇಂದು ಎನ್ಸಿಪಿ ಹಾಗೂ ಬಿಜೆಪಿ ಪಕ್ಷಗಳನ್ನು ಶ್ಲಾಘಿಸಲು ಬಯಸುತ್ತೇನೆ. ಈ ಎರಡು ಪಕ್ಷಗಳು ಸಂಸತ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತವೆ. ಬಿಜೆಪಿ ಸಹಿತ ಇತರ ಪಕ್ಷಗಳು ಈ ಎರಡು ಪಕ್ಷಗಳಿಂದ ಪಾಠ ಕಲಿಯಬೇಕಾಗಿದೆ ಎಂದು ಚಳಿಗಾಲದ ಅಧಿವೇಶನಕ್ಕೆ ಮೊದಲು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಎನ್ಸಿಪಿಯನ್ನು ಹೊಗಳಿದ್ದರು.
ಮೋದಿ ಹಾಗೂ ಪವಾರ್ ಮಹಾರಾಷ್ಟ್ರದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ವಾಕ್ಸಮರ ನಡೆಸಿದ್ದರು. ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಹೊರಗಿಟ್ಟು ಹೊಸ ಸರಕಾರ ರಚನೆಯ ಪ್ರಯತ್ನ ಸಾಗುತ್ತಿರುವಾಗ ಪ್ರಧಾನಿಯನ್ನು ಪವಾರ್ ಭೇಟಿ ಮಾಡುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.