ನ. 24ರಂದು ಕೊಡವರಿಗೆ ಸ್ವಾಯತ್ತತೆ, ಹಕ್ಕೊತ್ತಾಯ: ಎನ್.ಯು.ನಾಚಪ್ಪ
ಮಂಗಳೂರು, ನ. 20: ಭಾರತದ ಸಂವಿಧಾನದ 6ನೆ ಶೆಡ್ಯೂಲ್ ಪ್ರಕಾರ ಕೊಡವರಿಗೆ ಸ್ವಾಯತ್ತತೆಯನ್ನು ನೀಡಬೇಕು ಈ ನಿಟ್ಟಿನಲ್ಲಿ ನ. 24ರಂದು ಈ ಬಾರಿಯೂ ಕೊಡವ ನ್ಯಾಶನಲ್ ಡೇಯನ್ನು ಮಡಿಕೇರಿಯಲ್ಲಿ ಆಚರಿಸಿ ಹಕ್ಕೊತ್ತಾಯ ನಡೆಸಲಾಗುವುದು ಎಂದು ಕೊಡವ ನ್ಯಾಶನಲ್ ಕೌನ್ಸಿಲ್‌ನ ಅಧ್ಯಕ್ಷ ಎನ್.ಯು.ನಾಚಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವಯಂ ನಿರ್ಣಯ ಹಕ್ಕು ವಿನಾಶದಂಚಿನಲ್ಲಿರುವ ಸೂಕ್ಷ್ಮಾತೀ ಸೂಕ್ಷ್ಮ ಅಲ್ಪ ಸಂಖ್ಯಾತ ಕೊಡವ ಬುಡಕಟ್ಟು ಕುಲವನ್ನು ವಿಶ್ವ ಸಂಸ್ಥೆಯ ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೇಕು ಎಂಬ ನಿರ್ಣಯ ಮಂಡಿಸಲಾಗುವುದು ಎಂದು ಎಂ.ಸಿ.ನಾಣಯ್ಯ ತಿಳಿಸಿದ್ದಾರೆ.
16ನೆ ಲೋಕ ಸಭೆಯ ಮುಕ್ತಾಯದ ವೇಳೆಗೆ ಈಶಾನ್ಯ ಭಾರತದ 10 ಸ್ವಾಯತ್ತ ಪ್ರದೇಶಗಳಿಗೆ ಹೆಚ್ಚುವರಿ ಸ್ವಾಯತ್ತೆಗಾಗಿ ಮೋದಿ ನೇತೃತ್ವದ ಕೇಂದ್ರ ಸರಕಾರ ವಿಶೇಷ ಶಾಸನ ರಚಿಸಲು ಗೃಹ ಸಚಿವಾಲಯ ತೊಡಗಿದ್ದು ಶೀಘ್ರದಲ್ಲಿ ಶಾಸನ ರಚನೆಯಾಗಲಿದೆ. ಜಮ್ಮು ಕಾಶ್ಮೀರ, ಲಡಾಕ್ ಮತ್ತು ಲೇಹ್ ನಲ್ಲಿ ಬೌದ್ಧರಿಗೆ ಎರಡು ಪ್ರತ್ಯೇಕ ಸ್ವಾಯತ್ತ ಪ್ರದೇಶ ಕಲ್ಪಿಸಲಾಗಿದೆ ಅದೇ ರೀತಿ ಕೊಡವರ ಬುಡಕಟ್ಟಿನ ಸಂರಕ್ಷಣೆಗೆ ಸರಕಾರ ಸ್ವಾ ಯತ್ತತೆ ನೀಡಬೇಕು ಎಂದು ಸಿಎನ್‌ಸಿ ಕಳೆದ 29 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದೆ ಎಂದು ಈ ಬಾರಿಯೂ ಈ ಬಗ್ಗೆ ನ. 24ರಂದು ಕೊಡಗಿನ ಮಡಿಕೇರಿಯಲ್ಲಿರುವ ಗಾಂಧಿ ಮೈದಾನದಲ್ಲಿ ಬೃಹತ್ ಹಕ್ಕೋತ್ತಾಯ ನಡೆಯಲಿದೆ ಎಂದು ನಾಚಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಿಎನ್‌ಸಿಯ ಪದಾಧಿಕಾರಿಗಳಾದ ಕಲಿಯಂಡ ಪ್ರಕಾಶ್, ಲೆ.ಕಂ.ಬಿ.ಎಂ.ಪಾರ್ವತಿ, ಕೆ.ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.