ಶಬರಿಮಲೆ ದೇವಾಲಯಕ್ಕೆ ವಿಶೇಷ ಕಾನೂನು ರೂಪಿಸಿ: ಕೇರಳ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶ
PTI
ಹೊಸದಿಲ್ಲಿ, ನ. 20: ಶಬರಿಮಲೆ ದೇವಾಲಯ ನಿರ್ವಹಿಸಲು ನಾಲ್ಕು ವಾರಗಳ ಒಳಗೆ ವಿಶೇಷ ಕಾನೂನು ರೂಪಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಕೇರಳ ಸರಕಾರಕ್ಕೆ ನಿರ್ದೇಶಿಸಿದೆ.
ನಾಲ್ಕು ವಾರಗಳ ಒಳಗೆ ಕರಡನ್ನು ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಬಿ.ಆರ್. ಗವಾಯಿ ಹಾಗೂ ಸುಭಾಷ್ ರೆಡ್ಡಿ ನೇತೃತ್ವದ ಮೂವರು ಸದಸ್ಯರ ಪೀಠ ರಾಜ್ಯ ಸರಕಾರಕ್ಕೆ ಸೂಚಿಸಿದೆ. ಅಲ್ಲದೆ, ಪ್ರಕರಣದ ವಿಚಾರಣೆಯನ್ನು 2020 ಜನವರಿ 3ನೇ ವಾರಕ್ಕೆ ಮುಂದೂಡಿದೆ.
ತಮ್ಮ ಹಕ್ಕುಗಳಿಗೆ ರಕ್ಷಣೆ ನೀಡಬೇಕು ಎಂದು ಪಂದಳ ರಾಜ ಕುಟುಂಬ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ಶಬರಿಮಲೆ ದೇವಾಲಯಕ್ಕೆ ಎಲ್ಲಾ ಪ್ರಾಯ ಗುಂಪಿನ ಮಹಿಳೆಯರಿಗೆ ಪ್ರವೇಶಾವಕಾಶ ನೀಡಿ 2018 ಸೆಪ್ಟಂಬರ್ 28ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಪ್ರಶ್ನಿಸಿದ ಮನವಿಗಳಲ್ಲಿ ರಾಜ ಕುಟುಂಬದ ಮನವಿ ಕೂಡ ಒಳಗೊಂಡಿದೆ.
ಕಳೆದ ವಾರ ಸುಪ್ರೀಂ ಕೋರ್ಟ್ ಈ ಪುನರ್ ಪರಿಶೀಲನಾ ಮನವಿಯನ್ನು ಏಳು ಸದಸ್ಯರ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಿತ್ತು.
56 ಮರು ಪರಿಶೀಲನಾ ಅರ್ಜಿ, ನಾಲ್ಕು ಹೊಸ ರಿಟ್ ಅರ್ಜಿ ಹಾಗೂ 5 ವರ್ಗಾವಣೆ ಅರ್ಜಿ ಸೇರಿದಂತೆ 65 ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ. ಜನಸಾಮಾನ್ಯರ ನಂಬಿಕೆಯ ಮಧ್ಯೆಪ್ರವೇಶಿಸುವ ಬಗ್ಗೆ ಸುಪ್ರೀಂ ಕೋರ್ಟ್ಗೆ ಇರುವ ಅಧಿಕಾರವನ್ನು ಈ ಮನವಿಗಳು ಪ್ರಶ್ನಿಸಿದ್ದವು.
ಶಬರಿಮಲೆ ಅಯ್ಯಪ್ಪ ಬ್ರಹ್ಮಾಚಾರಿ ಹಾಗೂ ಋತುಚಕ್ರದ ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶಿಸುವ ಮೂಲಕ ಶತಮಾನಗಳ ಹಳೆಯ ನಂಬಿಕೆಗೆ ಅಡ್ಡಿ ಉಂಟು ಮಾಡಬಾರದು ಎಂದು ಈ ಮನವಿಗಳು ವಾದಿಸಿದ್ದವು.