ಕಾರ್ಕಳ: ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಎನ್‌ಎಬಿಎಚ್ ಮಾನ್ಯತೆ
ಮಣಿಪಾಲ, ನ.21: ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯು ರಾಷ್ಟ್ರೀಯ ಆಸ್ಪತ್ರೆ ಮತ್ತು ಆರೋಗ್ಯ ಪೂರೈಕದಾರರ ಮಂಡಳಿ (ಎನ್‌ಎಬಿಎಚ್)ಯಿಂದ ಮಾನ್ಯತೆಯನ್ನು ಪಡೆದುಕೊಂಡಿದೆ.
ಮಣಿಪಾಲ ಮಾಹೆಯ ಪ್ರೊ ಚಾನ್ಸಲರ್ ಆದ ಡಾ.ಎಚ್‌ಎಸ್ ಬಲ್ಲಾಳ್, ಕುಲಪತಿ ಡಾ.ಎಚ್. ವಿನೋದ್ ಭಟ್ ಅವರು ಈ ಸಂಬಂಧ ಇಂದು ಕಾರ್ಕಳ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ ಬಲ್ಲಾಳ್ ಇವರಿಗೆ ಪ್ರಾಣಪತ್ರವನ್ನು ಹಸ್ತಾಂತರಿಸಿದರು.
ಮಾಹೆಯ ಪ್ರೊ ವೈಸ್ ಚಾನ್ಸಲರ್‌ಗಳಾದ ಡಾ.ಪೂರ್ಣಿಮಾ ಬಾಳಿಗಾ ಮತ್ತು ಡಾ.ಪಿ.ಎಲ್.ಎನ್.ಜಿ. ರಾವ್, ಕುಲಸಚಿವರಾದ ಡಾ.ನಾರಾಯಣ ಸಭಾಹಿತ, ಕೆಎಂಸಿ ಮಣಿಪಾಲದ ಡೀನ್ ಡಾ.ಶರತ್ ಕುಮಾರ್ ರಾವ್, ಕೆಎಂಸಿ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ಉಪಸ್ಥಿತರಿದ್ದರು.
ಈ ಮೂಲಕ ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯು ಈ ಮಾನ್ಯತೆ ಪಡೆದ ಕಾರ್ಕಳದ ಮೊದಲ ಆಸ್ಪತ್ರೆಯಾಗಿದೆ.
ರೋಗಿಗಳ ಆರೈಕೆ, ರೋಗಿಗಳ ಶಿಕ್ಷಣ ಮತ್ತು ಅರಿವು, ಶುಶ್ರೂಷಾ ಆರೈಕೆಯ ಗುಣಮಟ್ಟ, ಸಂವಹನ ಮತ್ತು ಮಾರ್ಗದರ್ಶನ ಮತ್ತು ಸೋಂಕು ನಿಯಂತ್ರಣ ಅಭ್ಯಾಸಗಳಂತಹ ಆಸ್ಪತ್ರೆಯ ಎಲ್ಲಾ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ವನ್ನು ಕಾಯ್ದುಕೊಂಡ ಆಸ್ಪತ್ರೆಗೆ ಈ ಮಾನ್ಯತೆ ನೀಡಲಾಗುತ್ತದೆ ಎಂದು ಮಾಹೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.