ಪೌರತ್ವ ಮಸೂದೆಗೆ ಅರುಣಾಚಲ ಪ್ರದೇಶ ಬಿಜೆಪಿ ಸರಕಾರದ ವಿರೋಧ
ಗುವಾಹಟಿ, ನ. 22: ಸಂಸತ್ತಿನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ವಿರೋಧ ಈಶಾನ್ಯದಲ್ಲಿ ತೀವ್ರಗೊಂಡಿದೆ.
ನಿರ್ದಿಷ್ಟ ತಿದ್ದುಪಡಿ ಮಾಡದ ಪೌರತ್ವ ಮಸೂದೆಯನ್ನು ನಿಸ್ಸಂದೇಹವಾಗಿ ವಿರೋಧಿಸಲಾಗುವುದು ಎಂದು ಅರುಣಾಚಲಪ್ರದೇಶದ ಬಿಜೆಪಿ ಸರಕಾರ ಹೇಳಿದೆ. ಈ ವರ್ಷದ ಆರಂಭದಲ್ಲಿ ಪೌರತ್ವ ಮಸೂದೆ ವಿರೋಧಿಸಿದ್ದ ಅಸ್ಸಾಂ ಬಿಜೆಪಿಯ ಮಿತ್ರ ಪಕ್ಷ ಅಸ್ಸಾಂ ಗಣಪರಿಷತ್, ತಾನು ಕೂಡ ಮಸೂದೆಗೆ ಬೆಂಬಲ ನೀಡಲಾರೆ ಎಂದು ಹೇಳಿದ ಎರಡು ದಿನಗಳ ಬಳಿಕ ಈ ಹೇಳಿಕೆ ಹೊರಬಿದ್ದಿದೆ.
ಮಸೂದೆ ಮಂಡಿಸುವ ಮೊದಲು ಸಮಾಲೋಚನೆಗೆ ನಾವು ಮುಕ್ತವಾಗಿದ್ದೇವೆ ಎಂದು ಅದು ಹೇಳಿದೆ. ಮಸೂದೆ ವಿರೋಧಿಸಿ 18 ಗಂಟೆಗಳ ಬಂದ್‌ಗೆ ಕರೆ ನೀಡಿದ ಬಳಿಕ ಮಣಿಪುರದಲ್ಲಿ ಪ್ರತಿಭಟನೆ ನಡೆದಿತ್ತು.
ಪೌರತ್ವ ತಿದ್ದುಪಡಿ ಮಸೂದೆ ಕುರಿತ ಅಂತಿಮ ಸಭೆ ನಡೆದ ಬಳಿಕ ಸರಕಾರ, ಇತರ ರಾಜಕೀಯ ಪಕ್ಷಗಳು, ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು, ಸಮುದಾಯ ಆಧಾರಿತ ಸಂಘಟನೆಗಳು ಹಾಗೂ ಸಮಾಲೋಚನಾ ಸಮಿತಿ, 1873ರ ಬಂಗಾಳ ಪೂರ್ವ ಮುಂಚೂಣಿ ನಿಯಂತ್ರಣ ಹಾಗೂ 1986ರ ಚಿನ್ ಹಿಲ್ಸ್ ನಿಯಂತ್ರಣವನ್ನು ಮಸೂದೆಯಲ್ಲಿ ಒಳಗೊಳಿಸುವಂತೆ ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ.