ಬಾಬರಿ ತೀರ್ಪು: ಮರುಪರಿಶೀಲನೆ ಅರ್ಜಿ ಅಭಿಯಾನಕ್ಕೆ ಹರ್ಷ ಮಂದರ್ ಚಾಲನೆ
ಹೊಸದಿಲ್ಲಿ, ನ.22: ಖ್ಯಾತ ಸಾಮಾಜಿಕ ಹೋಟಗಾರ ಹಾಗೂ ಮಾಜಿ ಸರಕಾರಿ ಅಧಿಕಾರಿ ಹರ್ಷ ಮಂದರ್ ಅವರು ಅಯೋಧ್ಯೆ-ಬಾಬರಿ ಮಸೀದಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಜಂಟಿಯಾಗಿ ಮರುಪರಿಶೀಲನೆ ಅರ್ಜಿಯ ಸಲ್ಲಿಕೆಗಾಗಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ತೀರ್ಪಿನ ವಿರುದ್ಧ ಜಂಟಿ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸುವ ಪರಿಕಲ್ಪನೆಯನ್ನು ಹಲವಾರು ಜನರು ಬೆಂಬಲಿಸಿದ್ದಾರೆ.
‘ವ್ಯಾಪಕ ಶ್ರೇಣಿಯ ಪ್ರಜೆಗಳು,ಅಜ್ಞೇಯತಾವಾದಿಗಳು ಮತ್ತು ನಾಸ್ತಿಕರು ಸೇರಿದಂತೆ ವಿವಿಧ ಧರ್ಮಗಳ ಜನರು, ರೈತರು, ಕಾರ್ಮಿಕರು, ಶಿಕ್ಷಣ, ಕಾನೂನು, ಮಾಧ್ಯಮ ಮತ್ತು ಕಲಾ ಕ್ಷೇತ್ರಗಳಲ್ಲಿಯ ವೃತ್ತಿಪರರು ಸೇರಿದಂತೆ ಎಲ್ಲ ಕ್ಷೇತ್ರಗಳ ಮತ್ತು ಎಲ್ಲ ಸ್ತರಗಳ,ಆದರೆ ಸಂವಿಧಾನದ ಪೀಠಿಕೆಯಲ್ಲಿಯ ಜಾತ್ಯತೀತತೆ, ಸಮಾಜವಾದ, ನ್ಯಾಯ, ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವದ ವೌಲ್ಯಗಳಿಗೆ ಬದ್ಧರಾದ ಜನರಿಂದ ಸಾಮೂಹಿಕವಾಗಿ ಈ ಅರ್ಜಿಯು ಸಲ್ಲಿಕೆಯಾಗಬೇಕೆಂದು ನಾವು ಒಮ್ಮತವನ್ನು ಹೊಂದಿದ್ದೇವೆ ’ಎಂದು ಮಂದರ್ ತಿಳಿಸಿದರು. ಸದ್ಯದ ವಾತಾವರಣದಲ್ಲಿ ಪೀಡಿತ ಜನರ ನೈತಿಕತೆಯನ್ನು ಹೆಚ್ಚಿಸಲು ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತು ಫ್ರೆಂಚ್ ತತ್ವಜ್ಞಾನಿ ಜೀನ್ ಪಾಲ್ ಸಾರ್ತ್ರೆ ಅವರ ಪ್ರಸಿದ್ಧ ಉಕ್ತಿಗಳನ್ನೂ ಮಂದರ್ ಉಲ್ಲೇಖಿಸಿದರು.
‘ಸರಿಯಾಗಿದ್ದನ್ನು ಮಾಡಲು ಎಂದಿಗೂ ಅಂಜಿಕೆ ಬೇಡ. ನಾವು ಗಮನಿಸಬೇಕಾದ ವಿಷಯವನ್ನು ಕಡೆಗಣಿಸಿದರೆ ನಮ್ಮ ಆತ್ಮಕ್ಕೆ ನಾವು ಮಾಡಿಕೊಳ್ಳುವ ಗಾಯಕ್ಕೆ ಹೋಲಿಸಿದರೆ ಸಮಾಜದ ದಂಡನೆ ತೀರ ಸಣ್ಣದು ’ಎಂದು ಮಾರ್ಟಿನ್ ಲೂಥರ್ ಕಿಂಗ್ ಹೇಳಿದ್ದರು.
‘ನೀವು ಗೆಲ್ಲಬೇಕೆಂದು ಫ್ಯಾಶಿಸಂ ವಿರುದ್ಧ ಹೋರಾಡುವುದಲ್ಲ. ಅದು ಫ್ಯಾಶಿಸಂ ಆಗಿರುವುದರಿಂದ ನೀವು ಅದರ ವಿರುದ್ಧ ಹೋರಾಡಬೇಕು ’ಎಂದು ಸಾರ್ತ್ರೆ ಹೇಳಿದ್ದರು.