ಎನ್ಸಿಪಿಗೆ ಹತ್ತಿರವಾಗುತ್ತಿರುವ ಸುಳಿವನ್ನು ನೀಡಿತ್ತಾ ಬಿಜೆಪಿ?
ಹೊಸದಿಲ್ಲಿ, ನ.23: ಮಹಾರಾಷ್ಟ್ರ ರಾಜಕಾರಣದಲ್ಲಿ ಶನಿವಾರ ಬೆಳಗ್ಗೆ ನಡೆದ ಬೆಳವಣಿಗೆಗಳ ಬಳಿಕ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್ಸಿಪಿ)ಮೈತ್ರಿಪಕ್ಷ ಕಾಂಗ್ರೆಸ್ಗೆ ಕೈಕೊಟ್ಟಿತಾ? ಅಥವಾ ಶರದ್ ಪವಾರ್ ನೇತೃತ್ವದ ಎನ್ಸಿಪಿಯ ಒಂದು ಬಣ ಬಿಜೆಪಿಯೊಂದಿಗೆ ಕೈಜೋಡಿಸಿದೆಯೇ?ಎಂಬ ಗೊಂದಲ ಏರ್ಪಟ್ಟಿದೆ. ಬಿಜೆಪಿ, ಎನ್ಸಿಪಿಯೊಂದಿಗೆ ಹತ್ತಿರವಾಗುತ್ತಿರುವ ಸುಳಿವು ಈ ಹಿಂದೆಯೇ ನೀಡಿತ್ತೇ?ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಶರದ್ ಪವಾರ್ ನೇತೃತ್ವದ ಪಕ್ಷ ವಿಪಕ್ಷ ಸ್ಥಾನದಲ್ಲಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಸಭೆಯ 250ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಎನ್ಸಿಪಿಯನ್ನು ಹಾಡಿಹೊಗಳಿದ್ದರು.
ನಾನು ಇಂದು ಎರಡು ಪಕ್ಷಗಳಾದ ಎನ್ಸಿಪಿ ಹಾಗೂ ಬಿಜೆಡಿಯನ್ನು ಪ್ರಶಂಶಿಸುವೆ. ಈ ಪಕ್ಷಗಳು ಸಂಸದೀಯ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತವೆ ಎಂದು ಹೇಳಿದ್ದರು.
ಎರಡು ದಿನಗಳ ಹಿಂದೆಯಷ್ಟೇ ಶರದ್ ಪವಾರ್ ಸಂಸತ್ತಿನಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದರು. ಮಹಾರಾಷ್ಟ್ರದ ರೈತರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಚರ್ಚಿಸಿದ್ದು, ಬೆಳೆ ಹಾನಿ ನಷ್ಟ ಹಾಗೂ ರಾಜ್ಯದಲ್ಲಿ ರೈತರ ಬಿಕ್ಕಟ್ಟನ್ನು ಪರಿಹರಿಸಲು ತಕ್ಷಣವೇ ಮಧ್ಯಪ್ರವೇಶಿಸುವಂತೆ ಪ್ರಧಾನಿ ಬಳಿ ವಿನಂತಿಸಿದ್ದೇನೆ ಎಂದು ಪವಾರ್ ಹೇಳಿದ್ದರು.
ಎನ್ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆ ನಡುವೆ ಮಹಾರಾಷ್ಟ್ರದಲ್ಲಿ ಮೈತ್ರಿಕೂಟ ರಚಿಸಲು ಮಾತುಕತೆ ನಡೆಯುತ್ತಿರುವಾಗಲೇ ಪವಾರ್ ಅವರು ಪ್ರಧಾನಿಯನ್ನು ಸಂಸತ್ತಿನ ಅವರ ಚೇಂಬರ್ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.