ಬ್ಯಾಂಕುಗಳ ವಿಲೀನ ಮತ್ತು ಸ್ಥಳೀಯ ಆರ್ಥಿಕತೆ
ಬ್ಯಾಂಕುಗಳ ವಿಲೀನೀಕರಣ ಕ್ರಮದಿಂದ ಬ್ಯಾಂಕ್ ಶಾಖೆಗಳನ್ನು ಮುಚ್ಚುವುದಿಲ್ಲ ಮತ್ತು ಉದ್ಯೋಗಗಳು ನಷ್ಟವಾಗುವುದಿಲ್ಲ ಎಂದು ಕೇಂದ್ರದ ಅರ್ಥಮಂತ್ರಿಗಳು ಹೇಳುತ್ತಿದ್ದಾರೆ. ಆದರೆ ಒಂದು ಪ್ರದೇಶದಲ್ಲಿ ಅನೇಕ ವರ್ಷಗಳಿಂದ ವ್ಯವಹಾರ ನಡೆಸುವ ಸಂಸ್ಥೆ ಅಲ್ಲಿಂದ ಕಣ್ಮರೆಯಾದಾಗ ಉದ್ಯೋಗ ನಷ್ಟಕ್ಕಿಂತಲೂ ಹೆಚ್ಚಾದ ದೀರ್ಘಕಾಲದ ಪರಿಣಾಮ ಅಲ್ಲಿನ ಆರ್ಥಿಕತೆಯ ಮೇಲೆ ಆಗುತ್ತದೆ. ಹಾಗಾಗಿ ವಿಲೀನೀಕರಣದಿಂದಾಗಿ ಸ್ಥಳೀಯ ಆರ್ಥಿಕತೆಯ ಮೇಲೆ ಆಗಬಹುದಾದ ಪರಿಣಾವುವನ್ನು ಪರಿಶೀಲಿಸುವುದು ಅಗತ್ಯ.
ಕರಾವಳಿ ಪ್ರದೇಶದಲ್ಲಿ ಹುಟ್ಟಿ ಬೆಳೆದ ಕಾರ್ಪೊರೇಶನ್ ಮತ್ತು ಸಿಂಡಿಕೇಟ್ ಬ್ಯಾಂಕುಗಳ ವಿಲೀನೀಕರಣದ ಸಾಧಕ-ಬಾಧಕಗಳ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ, ಇನ್ನೂ ನಡೆಯುತ್ತಾ ಇದೆ. ಈ ಕ್ರಮದಿಂದ ಶಾಖೆಗಳನ್ನು ಮುಚ್ಚುವುದಿಲ್ಲ ಮತ್ತು ಉದ್ಯೋಗಗಳು ನಷ್ಟವಾಗುವುದಿಲ್ಲ ಎಂದು ಕೇಂದ್ರದ ಅರ್ಥಮಂತ್ರಿಗಳ ಹೇಳಿಕೆಯೂ ಬಂದಿದೆ. ಆದರೆ ಒಂದು ಪ್ರದೇಶದಲ್ಲಿ ಅನೇಕ ವರ್ಷಗಳಿಂದ ವ್ಯವಹಾರ ನಡೆಸುವ ಸಂಸ್ಥೆ ಅಲ್ಲಿಂದ ಕಣ್ಮರೆಯಾದಾಗ ಉದ್ಯೋಗ ನಷ್ಟಕ್ಕಿಂತಲೂ ಹೆಚ್ಚಾದ ದೀರ್ಘಕಾಲದ ಪರಿಣಾಮ ಅಲ್ಲಿನ ಆರ್ಥಿಕತೆಯ ಮೇಲೆ ಆಗುತ್ತದೆ. ಹಾಗಾಗಿ ವಿಲೀನೀಕರಣದಿಂದಾಗಿ ಸ್ಥಳೀಯ ಆರ್ಥಿಕತೆಯ ಮೇಲೆ ಆಗಬಹುದಾದ ಪರಿಣಾಮವನ್ನು ಪರಿಶೀಲಿಸುವುದು ಅಗತ್ಯ. ಮೊದಲಿಗೆ ಕೆಲವು ವೈಯಕ್ತಿಕ ಘಟನೆಗಳನ್ನು ಉಲ್ಲೇಖಿಸಿ ಈ ಪರಿಶೀಲನೆಯನ್ನು ಮಾಡಲು ಇಚ್ಛೆಪಡುತ್ತೇನೆ.
ಟೈಲರ್, ಪ್ರಿಂಟರ್ ಮತ್ತು ಹಣ್ಣಿನ ವ್ಯಾಪಾರಿಯ ಪ್ರಶ್ನೆಗಳು:
ಇತ್ತೀಚೆಗೆ ನನ್ನ ಹೆಂಡತಿಯ ಜೊತೆಯಲ್ಲಿ ಮಂಗಳೂರಿನ ಪಾಂಡೇಶ್ವರದಲ್ಲಿ ಅನೇಕ ವರ್ಷಗಳಿಂದ ಆಕೆ ಬಟ್ಟೆ ಹೊಲಿಯಲು ಕೊಡುತ್ತಿದ್ದ ಟೈಲರ್ರಲ್ಲಿಗೆ ಹೋದಾಗ ಅವರು ಒಂದು ಪ್ರಶ್ನೆ ಕೇಳಿದರು. ‘‘ನೀವು ಕಾರ್ಪೊರೇಶನ್ ಬ್ಯಾಂಕಿನಲ್ಲಿದ್ದವರಲ್ವಾ, ಬ್ಯಾಂಕು ವಿಲೀನ ಆದ ಮೇಲೆ ಈ ಪ್ರಧಾನ ಕಚೇರಿಯಲ್ಲಿ ಉದ್ಯೋಗದಲ್ಲಿರುವ ಹೆಂಗಸರನ್ನು ಎಲ್ಲಾ ಇಲ್ಲೇ ಇಡುತ್ತಾರೆಯೇ?’’ ನಾನು ಹೇಳಿದೆ: ‘‘ಪ್ರಧಾನ ಕಚೇರಿಯನ್ನು ಮುಚ್ಚಿದಾಗ ಅವರಲ್ಲಿ ಅನೇಕ ಮಂದಿಗೆ ಬೇರೆ ಊರಿಗೆ ವರ್ಗ ಆಗಬಹುದು. ಯಾಕೆ, ನಿಮ್ಮ ವ್ಯವಹಾರಕ್ಕೆ ಧಕ್ಕೆ ಆಗಬಹುದೇ?’’ ‘‘ಆ ಆಫೀಸಿನ ತುಂಬಾ ಹೆಣ್ಮಕ್ಕಳು ಮತ್ತು ಉದ್ಯೋಗಿಗಳ ಮನೆಮಂದಿ ನಮ್ಮಲ್ಲಿಗೆ ಬರುತ್ತಾರೆ, ಅವರಿಗೆ ಮತ್ತು ಅವರ ಮಕ್ಕಳಿಗೆ ಡ್ರೆಸ್ ಹೊಲಿಸಿಕೊಳ್ಳಲು, ರವಿಕೆ ಹೊಲಿಸಿಕೊಳ್ಳಲು, ಸೀರೆಗೆ ‘ಫಾಲ್’ ಹಾಕಿಸಿಕೊಳ್ಳಲು ಇತ್ಯಾದಿ ಕೆಲಸಕ್ಕೆ. ಇನ್ನು ಅವರು ಬರುವುದು ಸಂಶಯ, ಅಲ್ಲವೇ?’’
ದಸರಾದ ಸಂದರ್ಭದಲ್ಲಿ ಚಿರಕಾಲ ಪರಿಚಯದ ಒಬ್ಬ ಮುದ್ರಣ ಕಂಪೆನಿಯ ಮಾಲಕರು ಆಯುಧ ಪೂಜೆಗೆ ಬರಹೇಳಿದ್ದರು. ಅಲ್ಲಿನ ಉದ್ಯೋಗಿಗಳಿಗೂ ನನ್ನ ಪರಿಚಯವಿದೆ. ಪೂಜೆ ಮುಗಿದು ಕಾಫಿ ಕುಡಿಯುವಾಗ ಕೇಳಿದೆ. ‘‘ಹೇಗಿದೆ ನಿಮ್ಮ ವ್ಯವಹಾರ?’’
ಅವರು ಹೇಳಿದರು: ‘‘ಈಗಾಗಲೇ ಮೂರು ತಿಂಗಳಿನಿಂದ ಆರ್ಡರ್ ಇಲ್ಲ, ಈಗ ಬ್ಯಾಂಕು ಮಂಗಳೂರಿನಿಂದ ಹೋಗುತ್ತದಲ್ಲ, ಇನ್ನು ಅವರ ಕೆಲಸವೂ ಇರುವುದಿಲ್ಲ. ಇಲ್ಲಿರುವ ಅಧಿಕಾರಿಗಳ ಮತ್ತು ನೌಕರರ ಯೂನಿಯನ್ಗಳೂ ಅವರ ಸುತ್ತೋಲೆ, ಮಾಸಿಕ ಪತ್ರಿಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಲು ಬೇಕಾದ ಗೈಡುಗಳನ್ನು ನಮಗೆ ಮುದ್ರಿಸಲು ಕೊಡುತ್ತಿದ್ದರು. ಇನ್ನು ಅದೆಲ್ಲಾ ಏನಾಗುತ್ತದೆಯೋ?’’. ನಾನು ಕೇಳಿದೆ: ‘‘ನಿಮ್ಮ ಉದ್ಯೋಗಿಗಳು?’’
‘‘ಇಷ್ಟರ ತನಕ ಏನು ಮಾಡಿಲ್ಲ, ಸರ್; ಹೀಗೆಯೇ ಮುಂದುವರಿದರೆ ಅವರಿಗೆ ನಾವು ಸಂಬಳ ಹೇಗೆ ಕೊಡುವುದು?’’
ಸೆಂಟ್ರಲ್ ಮಾರ್ಕೆಟ್ಗೆ ಹೋದಾಗ ಪರಿಚಯದ ತರಕಾರಿ ಮತ್ತು ಹಣ್ಣು ಮಾರುವ ವ್ಯಾಪಾರಿಯೊಬ್ಬರು ಕೇಳಿರು: ‘‘ಸರ್, ನಿಮ್ಮ ಬ್ಯಾಂಕು ಇಲ್ಲಿಂದ ಹೋಗುತ್ತದಂತೆ. ನಿಮ್ಮ ಬ್ಯಾಂಕಿನವರು ತುಂಬ ಮಂದಿ ಬರುತ್ತಿದ್ದರು, ಇನ್ನು ಏನಾಗುತ್ತದೆ?’’
ಈ ರೀತಿಯ ಆತಂಕಪೂರಿತ ಪ್ರಶ್ನೆಗಳು ಬ್ಯಾಂಕುಗಳ ವಿಲೀನದಿಂದ ಆಗಬಹುದಾದ ಬಾಧಕಗಳ ಮುನ್ಸೂಚನೆಗಳು. ಈ ಕುರಿತು ಕಾರ್ಪೊರೇಶನ್ ಬ್ಯಾಂಕಿನಲ್ಲಿ ನನ್ನ ಕಿರಿಯ ಸಹೋದ್ಯೋಗಿಗಳಾಗಿದ್ದು ಈಗ ಹಿರಿಯ ಅಧಿಕಾರಿಗಳಾಗಿರುವ ಅನೇಕರಲ್ಲಿ ವಿಷಯದ ಕುರಿತು ಚರ್ಚಿಸಿದೆ. ಬ್ಯಾಂಕಿನ ಉದ್ಯೋಗಿ ಸಂಘಗಳ ನಾಯಕರೊಡನೆ ಮಾತನಾಡಿದೆ. ಸ್ಥಳೀಯ ಆರ್ಥಿಕತೆಗೆ ಇದರಿಂದಾಗಿ ಗಾಢವಾದ ಪ್ರಭಾವ ಆಗಲಿದೆ ಎಂದು ಅವರೆಲ್ಲರ ಅಭಿಪ್ರಾಯ. ಈ ಅಭಿಪ್ರಾಯಕ್ಕೆ ಪೂರಕವಾಗಿ ಅವರು ಕೊಟ್ಟ ಮಾಹಿತಿಯನ್ನೂ ನಾವು ಪರಿಶೀಲಿಸಬೇಕು.
ಪೂರಕವಾದ ಮಾಹಿತಿ:
ಭಾರತದ ಆದ್ಯಂತ ಸುಮಾರು 2,500 ಶಾಖೆಗಳನ್ನು ಹೊಂದಿ, 19,000 ಉದ್ಯೋಗಿಗಳು ಕೆಲಸ ಮಾಡುವ ಕಾರ್ಪೊರೇಶನ್ ಬ್ಯಾಂಕಿನ ಪ್ರಧಾನ ಕಚೇರಿ ಸಣ್ಣ ಊರಾದ ಮಂಗಳೂರಿನಲ್ಲಿ ಇದೆ ಎಂಬುದು ಕರಾವಳಿಯ ಹೆಮ್ಮೆಯ ವಿಚಾರ. ಈ ಕಚೇರಿಯಲ್ಲಿಯೇ ಸುಮಾರು 500ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ನೌಕರರು (ಸುಮಾರು 150 ಮಂದಿ ಮಹಿಳೆಯರೂ ಸೇರಿದಂತೆ) ದುಡಿಯುತ್ತಿದ್ದಾರೆ. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು (ಮ್ಯಾನೇಜಿಂಗ್ ಡೈರೆಕ್ಟರ್) ಮತ್ತು ಕಾರ್ಯಕಾರಿ ನಿರ್ದೇಶಕರು (ಎಕ್ಸಿಕ್ಯುಟಿವ್ ಡೈರೆಕ್ಟರ್), ಸುಮಾರು 75 ಮಂದಿ ಉನ್ನತ ಹುದ್ದೆಯ ಅಧಿಕಾರಿಗಳು ಮತ್ತು ಮಧ್ಯಸ್ತರದ ಅಧಿಕಾರಿಗಳು-ಎಲ್ಲರೂ ಇಲ್ಲಿಂದಲೇ ಬ್ಯಾಂಕಿನ ವ್ಯವಹಾರವನ್ನು ನಿಯಂತ್ರಿಸುತ್ತಾರೆ. ನಿರ್ದೇಶಕ ಮಂಡಳಿಯ, ಶೇರುದಾರರ ಮತ್ತು ಲೆಕ್ಕಪರಿಶೋಧಕರ ಸಭೆಗಳು, ರಿಸರ್ವ್ ಬ್ಯಾಂಕಿನ ಅಧಿಕಾರಿಗಳ ಭೇಟಿ ಮತ್ತು ಚರ್ಚೆ ಎಲ್ಲವೂ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿಯೇ ನಡೆಯುತ್ತಿರುತ್ತವೆ. ರಾಷ್ಟ್ರಮಟ್ಟದ ಬ್ಯಾಂಕಿನ ‘ಮಿದುಳು’ ಸಣ್ಣ ನಗರವಾದ ಮಂಗಳೂರಿನಿಂದಲೇ ಕಾರ್ಯವೆಸಗುತ್ತದೆ ಎಂದರೆ ಉತ್ಪ್ರೇಕ್ಷೆಯಲ್ಲ. ಕಾರ್ಪೊರೇಶನ್ ಬ್ಯಾಂಕು ಮುಂಬೈಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜೊತೆ ವಿಲೀನವಾದಾಗ ಮಂಗಳೂರಿನಲ್ಲಿ ಪ್ರಧಾನ ಕಚೇರಿಯ ಅಗತ್ಯ ಇರುವುದಿಲ್ಲ. ಇದರ ಪರಿಣಾಮವು ಮುಖ್ಯವಾಗಿ ಈ ಕೆಳಗಿನ ಆರ್ಥಿಕ/ವಾಣಿಜ್ಯ ಚಟುವಟಿಕೆಗಳ ಮೇಲೆ ಆಗಲಿದೆ:
1. ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಕಾರ್ಮಿಕರ ಉದ್ಯೋಗ
2. ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ವಿವಿಧ ಸೇವೆಗಳನ್ನು ನೀಡುವ ಸೇವಾ ಸಂಸ್ಥೆಗಳ ವಹಿವಾಟು 3. ಬ್ಯಾಂಕಿನ ದೈನಂದಿನ ಉಪಯೋಗಕ್ಕೆ ಬೇಕಾದ ಸರಕುಗಳ ಪೂರೈಕೆ 4. ಅಧಿಕಾರಿಗಳು ಮತ್ತು ನೌಕರರಿಗೆ ಅಗತ್ಯವಿದ್ದ ಮೂಲಸೌಕರ್ಯಗಳು
5. ಬ್ಯಾಂಕಿನ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ-ಸಿಎಸ್ ಆರ್- (ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ)ಯ ಚಟುವಟಿಕೆಗಳು
ಗುತ್ತಿಗೆ ಕಾರ್ಮಿಕರು:
ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಅನೇಕ ಗುತ್ತಿಗೆ ಆಧಾರಿತ ಉದ್ಯೋಗಿಗಳು ಕಾರ್ಯನಿರತರಾಗಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಬ್ಯಾಂಕು ಅಧಿಕೃತವಾಗಿ ಕೊಡುವ ಕಾರುಗಳನ್ನು ಚಲಾಯಿಸುವ ಡ್ರೈವರುಗಳು (ಸುಮಾರು 75), ಪ್ರಧಾನ ಕಚೇರಿಗೆ ಅಗತ್ಯವಾದ ಭದ್ರತಾ ಸಿಬ್ಬಂದಿ, ಬಹುಮಹಡಿಯ ಎರಡು ದೊಡ್ಡ ಕಟ್ಟಡಗಳ ಸ್ವಚ್ಛತೆ ಕಾಪಾಡುವ ನೈರ್ಮಲ್ಯದ ಕಾರ್ಮಿಕರು, ತಾತ್ಕಾಲಿಕವಾಗಿ ನೇಮಕವಾದ ಪೇದೆಗಳು ಮತ್ತು ಕಚೇರಿಯ ಕ್ಯಾಂಟೀನ್ನಲ್ಲಿ ಕೆಲಸ ಮಾಡುವ ಸಿಬ್ಬಂದಿ-ಮುಂತಾದವರ ಅಗತ್ಯ ಪ್ರಧಾನ ಕಚೇರಿಯನ್ನು ವರ್ಗಾಯಿಸಿದಾಗ ಉಳಿಯುವುದಿಲ್ಲ. ಇವರಲ್ಲಿ ಹೆಚ್ಚಿನವರು ವಿಶೇಷ ವಿದ್ಯಾರ್ಹತೆ ಹೊಂದಿರುವುದಿಲ್ಲವಾದುದರಿಂದ ಅವರಿಗೆ ಬೇರೆ ಕಡೆ ಉದ್ಯೋಗ ಸಿಗುವುದು ಕಷ್ಟ.
ಸೇವಾ ಸಂಸ್ಥೆಗಳ ವಹಿವಾಟು:
ಅಂಚೆ, ಕೊರಿಯರ್, ದೂರವಾಣಿ, ವಿದ್ಯುತ್, ನೀರು, ಪೀಠೋಪಕರಣಗಳ ನಿರ್ವಹಣೆ, ಮುದ್ರಣ ಸೇವೆ, 500ಕ್ಕೂ ಮಿಕ್ಕಿದ ವಾಹನಗಳ ರಿಪೇರಿ ಮತ್ತು ಅವುಗಳಿಗೆ ಇಂಧನ ಪೂರೈಕೆ, ಟ್ರಾವೆಲ್ ಏಜೆನ್ಸಿ, ಬಾಡಿಗೆ ಕಾರುಗಳ ಸೇವೆ, ಜಾಹೀರಾತು ಸೇವೆೆ-ಇನ್ನೂ ಅನೇಕ ತರದ ಅಗತ್ಯಸೇವೆಗಳನ್ನು ನೀಡುವ ಕಂಪೆನಿಗಳಿಗೆ/ಸಂಸ್ಥೆಗಳಿಗೆ ಬಹುದೊಡ್ಡ ಗಿರಾಕಿ ಇಲ್ಲದಾಗುತ್ತದೆ.
ಸರಕುಗಳ ಪೂರೈಕೆ:
ಒಂದು ದೊಡ್ಡ ಕಚೇರಿಯನ್ನು ಮುಚ್ಚಿದಾಗ ಅಲ್ಲಿನ ಉದ್ಯೋಗಸ್ತರಿಗೆ ಮತ್ತು ಸಂಸ್ಥೆಗೆ ದಿನನಿತ್ಯವೂ ಬೇಕಾಗುವ ಸರಕುಗಳಿಗೆ ಬೇಡಿಕೆ ಕುಂಠಿತವಾಗಲಿದೆ. ಕಚೇರಿಯ ಮತ್ತು ಮನೆಯ ಪೀಠೋಪಕರಣಗಳು, ಮುದ್ರಣ ಸಾಮಗ್ರಿ, ಕಂಪ್ಯೂಟರ್ ಮತ್ತು ಅದಕ್ಕೆ ಸಂಬಂಧಿಸಿದ ಪರಿಕರಗಳು, ಮೊಬೈಲು ಮತ್ತು ಸ್ಥಿರ ದೂರವಾಣಿ ಉಪಕರಣಗಳು ಮುಂತಾದವುಗಳ ಅವಶ್ಯಕತೆ ಕಡಿಮೆಯಾಗಲಿದೆ.
ಉದ್ಯೋಗಿಗಳ ಅವಶ್ಯಕತೆಗಳು:
ಬಹುತೇಕ ಮಂದಿ ಉದ್ಯೋಗಿಗಳು ಪರ ಊರಿನವರಾಗಿದ್ದು ಅವರ ಉಪಯೋಗಕ್ಕೆ ನೂರಾರು ಬಾಡಿಗೆ ಮನೆಗಳು, ಅವರ ಮಕ್ಕಳ ವಿದ್ಯೆಗೆ ಅಗತ್ಯವಾದ ಶಾಲೆ-ಕಾಲೇಜುಗಳು, ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಗುತ್ತಿಗೆ ವಾಹನಗಳು, ಮನೆ ಸಾಮಾನುಗಳು. ತರಕಾರಿ, ಹಣ್ಣು ಹಂಪಲುಗಳು ಮತ್ತು ಮನೆಗೆ ಅಗತ್ಯವಾದ ಸೇವೆಗಳನ್ನು ಪೂರೈಸುವ ಸಂಸ್ಥೆಗಳು-ಇವುಗಳ ಕುರಿತಾದ ಬೇಡಿಕೆಗಳಿಗೆ ಹೊಡೆತ ಬೀಳಲಿದೆ. ಮನೆಕೆಲಸಕ್ಕೆ ಬರುತ್ತಿದ್ದ ಮಹಿಳೆಯರ ಆದಾಯಕ್ಕೆ ಏಟು ಬೀಳಲಿದೆ. ಅನೇಕರು ಬೇರೆ ರಾಜ್ಯದವರಾಗಿರುವುದರಿಂದ ಅವರ ನೆಂಟರಿಷ್ಟರು ಬರುವ ಮೂಲಕವೂ ನಗರದ ವಿಭಿನ್ನ ಚಟುವಟಿಕೆಗಳಿಗೆ ಉತ್ತೇಜನ ಲಭಿಸುತ್ತಿತ್ತು. ಇಲ್ಲಿನ ಪ್ರಸಿದ್ಧ ಐಸ್ ಕ್ರೀಮ್ ಪಾರ್ಲರುಗಳಿಗೆ, ಹೊಟೇಲುಗಳಿಗೆ, ದೇವಸ್ಥಾನಗಳಿಗೆ, ಬೀಚ್ಗಳಿಗೆ ಬರಲಿರುವ ಸಂದರ್ಶಕರ ಪ್ರಮಾಣ ಇಳಿಮುಖವಾಗಲಿದೆ.
ವರ್ಷಂಪ್ರತಿ ಸುಮಾರು ಮೂರರಲ್ಲಿ ಒಂದರಷ್ಟು ಮಂದಿ ವಿವಿಧ ಸ್ತರದ ಅಧಿಕಾರಿಗಳು (150) ವರ್ಗವಾಗಿ ಬೇರೆ ಕಡೆಗೆ ತೆರಳುತ್ತಾರೆ. ಅವರ ಮನೆ ಸಾಮಾನುಗಳನ್ನು ಪರ ಊರಿಗೆ ಸಾಗಿಸುವ ಕಂಪೆನಿಗಳ, ಅಷ್ಟೇ ಮಂದಿ ಮಂಗಳೂರಿಗೆ ವರ್ಗವಾಗಿ ಬರುವಾಗ ಅವರ ಮನೆ ಸಾಮಾನುಗಳನ್ನು ಇಲ್ಲಿಗೆ ತರುವ ಕಂಪೆನಿಗಳ ವ್ಯವಹಾರ ಇನ್ನು ಕುಗ್ಗಲಿದೆ.
ಹೆಚ್ಚಿನ ಉದ್ಯೋಗಿಗಳು ಕಚೇರಿಗೆ ಹೋಗಿ ಬರಲು ಮತ್ತು ಗ್ರಾಹಕರನ್ನು ಭೇಟಿಯಾಗಲು ಸುಗಮವಾಗಲೆಂದು ಬ್ಯಾಂಕಿನ ಸಾಲದ ಮೂಲಕ ವಾಹನಗಳನ್ನು ಖರೀದಿಸುವ ಹವ್ಯಾಸ ಬೆಳೆಸಿದ್ದಾರೆ. ಹೊಸತಾಗಿ ಸೇರುವ ಉದ್ಯೋಗಿಗಳೂ ಆ ಸೌಕರ್ಯವನ್ನು ಪಡೆಯುತ್ತಾರೆ. ವಾಹನಗಳ ಡೀಲರುಗಳಿಗೆ, ಪೆಟ್ರೋಲು ಬಂಕುಗಳಿಗೆ, ವಾಹನಗಳ ರಿಪೇರಿ ಮಾಡುವ ಮತ್ತು ಅವುಗಳನ್ನು ತೊಳೆಯುವ ಸ್ವೋದ್ಯೋಗಸ್ಥರಿಗೆ ಇನ್ನು ಮೊದಲಿನಷ್ಟೆ ವ್ಯವಹಾರ ಉಳಿಯುವುದು ಅಸಾಧ್ಯ.
ಸಿಎಸ್ಆರ್ ಚಟುವಟಿಕೆಗಳು:
ಸಾಮಾಜಿಕ ಜವಾಬ್ದಾರಿಯ ಅಂಗವಾಗಿ ಬ್ಯಾಂಕು ಇಲ್ಲಿನ ಸಾಮಾಜಿಕ ಸೇವಾ ಸಂಘಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಶಾಲೆಗಳಿಗೆ ಧನಸಹಾಯ ನೀಡುವ ಪದ್ಧತಿ ಅನುಸರಿಸುತ್ತಾ ಬಂದಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದ ವಿಚಾರಗೋಷ್ಠಿಗಳನ್ನು ಏರ್ಪಡಿಸಲು ಅನುದಾನ ನೀಡಿದೆ. ವಿಚಾರಸಂಕಿರಣಗಳಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳು ಭಾಗವಹಿಸಿ ವಿಚಾರವಿನಿಮಯವನ್ನು ನಡೆಸುತ್ತಾರೆ; ಇದು ವಿದ್ಯಾರ್ಥಿಗಳಿಗೂ ಜ್ಞಾನಾರ್ಜನೆಗೆ ಪ್ರೇರಕವಾಗುತ್ತದೆ. ನಗರದಲ್ಲಿ ಬ್ಯಾಂಕಿನ ಶತಮಾನೋತ್ಸವದ ನೆನಪಿನಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ಸ್ಥಾಪಿಸಿದೆ. ಉಡುಪಿಯಲ್ಲಿ ನಾಣ್ಯ ಸಂಗ್ರಹಾಲಯವಿದೆ. ಇವುಗಳ ಭವಿಷ್ಯವೇನು ಎಂದು ಮುಂಬೈಯಲ್ಲಿ ತೀರ್ಮಾನವಾಗಬೇಕು.
ಅಂಕೆಸಂಖ್ಯೆಗಳು ತಿಳಿಸದ ಆರ್ಥಿಕತೆ:
ಈ ಉದಾಹರಣೆಗಳನ್ನು ಉಲ್ಲೇಖಿಸುವ ಉದ್ದೇಶ ವಿಲೀನದ ಪ್ರಕ್ರಿಯೆಯ ಭಾಗವಾಗಿ ಕರಾವಳಿಯಿಂದ ಕಾರ್ಪೊರೇಶನ್ ಬ್ಯಾಂಕಿನ ಮತ್ತು ಮಣಿಪಾಲದ ಸಿಂಡಿಕೇಟ್ ಬ್ಯಾಂಕಿನ ಪ್ರಧಾನ ಕಚೇರಿಗಳನ್ನು ಮುಚ್ಚಿದಾಗ ಸ್ಥಳೀಯ ಆರ್ಥಿಕತೆಗೆ ಆಗಬಹುದಾದ ಪರಿಣಾಮದ ಬಗ್ಗೆ ನಾಗರಿಕರ ಗಮನ ಸೆಳೆಯುವುದಷ್ಟೆ. ಆರ್ಥಿಕತೆ ಎಂಬುದು ಅಂಕೆಸಂಖ್ಯೆಗಳಿಗೆ ಸೀಮಿತವಾದ ಒಂದು ಪರಿಕಲ್ಪನೆಯಲ್ಲ. ಕೇಂದ್ರಸರಕಾರದ ನಿರ್ಧಾರದಿಂದ ಆಗಬಹುದಾದ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳು ವಿತ್ತ ಸಚಿವೆ ಹೇಳಿಕೊಂಡಷ್ಟು ಸರಳವಲ್ಲ ಎಂಬುದನ್ನು ಜನತೆ ಗಮನಿಸಬೇಕು.