'112' ಕ್ಕೆ ಹೆಚ್ಚಿದ ಸ್ಪಂದನ: ಒಂದೇ ದಿನಕ್ಕೆ 3 ಲಕ್ಷಕ್ಕೂ ಅಧಿಕ ಕರೆಗಳು
ಸಾಂದರ್ಭಿಕ ಚಿತ್ರ
ಬೆಂಗಳೂರು, ನ.23: ಆ್ಯಂಬುಲೆನ್ಸ್, ಪೊಲೀಸ್ ಹಾಗೂ ಅಗ್ನಿಶಾಮಕ ಸೇರಿದಂತೆ ವಿವಿಧ ಸೇವೆಗಳಿಗೆ ಇದ್ದ ಸಹಾಯವಾಣಿ ಸಂಖ್ಯೆಗಳ ಬದಲಿಗೆ, ಬಂದಿರುವ 112 ಒಂದೇ ನಂಬರ್ಗೆ ಭಾರೀ ಸ್ಪಂದನ ದೊರೆಯುತ್ತಿದ್ದು, ಒಂದೇ ದಿನಕ್ಕೆ 3 ಲಕ್ಷಕ್ಕೂ ಅಧಿಕ ಮಂದಿ, ಈ ಸಂಖ್ಯೆಗೆ ಕರೆ ಮಾಡುತ್ತಿದ್ದಾರೆ.
ಕೇಂದ್ರ ಸರಕಾರದ ‘ಒನ್ ಇಂಡಿಯಾ, ಒನ್ ಎಮರ್ಜೆನ್ಸಿ’ ಭಾಗವಾಗಿ ಅ.31ರಂದು ಈ ಸೇವಾ ಸಹಾಯವಾಣಿ ಆರಂಭವಾಗಿದ್ದು, ಕೇವಲ 24 ದಿನಗಳಲ್ಲಿಯೇ ಲಕ್ಷಾಂತರ ಮಂದಿ, ಈ ನೂತನ ಸಂಖ್ಯೆಗೆ ಸ್ಪಂದಿಸಿದ್ದಾರೆ.
ಸಾರ್ವಜನಿಕರು ಸಂಪೂರ್ಣವಾಗಿ 112 ಸಂಖ್ಯೆಯನ್ನು ನೆನಪಿನಲ್ಲಿ ಇಟ್ಟುಕೊಳ್ಳುವವರೆಗೆ, ಹಾಲಿ ಇರುವ ಪೊಲೀಸ್ ಸಹಾಯವಾಣಿ 100, ಅಗ್ನಿಶಾಮಕ ಇಲಾಖೆಯ 101 ಮತ್ತು ಆ್ಯಂಬ್ಯುಲೆನ್ಸ್ ಸೇವೆಯ ಸಹಾಯವಾಣಿ ಸಂಖ್ಯೆಗಳು ಕಾರ್ಯ ನಿರ್ವಹಿಸಲಿದ್ದು, ಜತೆಗೆ 112ಕ್ಕೆ ಕರೆ ಮಾಡುವ ಮೂಲಕ ಈ ಎಲ್ಲ ತುರ್ತು ಸೇವೆಗಳನ್ನು ತ್ವರಿತಗತಿಯಲ್ಲಿ ಪಡೆದುಕೊಳ್ಳಬಹುದಾಗಿದೆ.
ಯಾವ ಕರೆಗಳು?: ಪೊಲೀಸ್, ಆ್ಯಂಬುಲೆನ್ಸ್, ಅಗ್ನಿಶಾಮಕ ಮತ್ತು ರಕ್ಷಣೆ, ಮಹಿಳೆಯರಿಗೆ ಚುಡಾಯಿಸುವುದು, ಮಕ್ಕಳ ಮೇಲಿನ ದೌರ್ಜನ್ಯ, ಬೆದರಿಕೆ ಸೇರಿದಂತೆ ಎಲ್ಲ ರೀತಿಯ ಅಪರಾಧ ಕೃತ್ಯಗಳು. ಸಂಚಾರ ದಟ್ಟಣೆ, ಗಲಭೆ, ನೈಸರ್ಗಿಕ ಅಥವಾ ಮನುಷ್ಯ ನಿರ್ಮಿತ ವಿಕೋಪಗಳು, ದುರ್ಘಟನೆಗಳು, ಅನುಮಾನಾಸ್ಪದ ವಸ್ತುಗಳು, ವ್ಯಕ್ತಿಗಳ ಕುರಿತು ಮಾಹಿತಿ ನೀಡಬಹುದು. ಹೆದ್ದಾರಿ, ನಿರ್ಜನ ಪ್ರದೇಶಗಳಲ್ಲಿ ಯಾವುದೇ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿದ್ದರೆ ನೆರವಾಗಲು ಕರೆ ಮಾಡಬಹುದು.
ಹೇಗೆ ಮಾಡಬೇಕು?: ಮೊಬೈಲ್ನಲ್ಲಿ 112 ಡಯಲ್ ಮಾಡಬೇಕು. ಮೊಬೈಲ್ನ ಪವರ್ ಬಟನ್ ಅನ್ನು ಮೂರು ಬಾರಿ ನಿರಂತರವಾಗಿ ಪ್ರೆಸ್ ಮಾಡಿದರೂ 112ಗೆ ಕರೆ ಹೋಗುತ್ತದೆ. ಬೇಸಿಕ್ ಮೊಬೈಲ್ನಲ್ಲಿ 5 ಅಥವಾ 9ನ್ನು ಸ್ವಲ್ಪಹೊತ್ತು ಒತ್ತಿ ಹಿಡಿದರೆ 112ಕ್ಕೆ ಸಂಪರ್ಕ ದೊರೆಯಲಿದೆ. ಅಷ್ಟೇ ಅಲ್ಲದೆ, 112 ಇಂಡಿಯಾ ಆ್ಯಪ್ ಡೌನ್ಲೋಡ್ ಮಾಡಿ ಅದರ ಮೂಲಕವೂ ಕರೆ, ಮಾಹಿತಿ ನೀಡಬಹುದು.
ನೆರವು ಹೀಗೆ ಸಿಗುತ್ತದೆ?: ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಪೊಲೀಸ್ ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ ಕಚೇರಿ ಆವರಣದಲ್ಲಿ ಸ್ಥಾಪಿಸಲಾಗಿರುವ ಅತ್ಯಾಧುನಿಕ ಕೇಂದ್ರದಲ್ಲಿ ತುರ್ತು ಸ್ಪಂದನೆ ನಿಯಂತ್ರಣ ಕೊಠಡಿ ಇದೆ. ಇಲ್ಲಿನ ಸಿಬ್ಬಂದಿ ಕರೆ ಸ್ವೀಕರಿಸಲು ಮತ್ತು ಅವುಗಳನ್ನು ಸಂಬಂಧಪಟ್ಟ ಜಿಲ್ಲೆಗಳಿಗೆ ರವಾನಿಸಲು ತರಬೇತಿ ಹೊಂದಿರುತ್ತಾರೆ.
ಕರೆ ಮಾಡಿ 8ನ್ನು ಒತ್ತಿದರೆ ಕಾಲ್ ಟೇಕರ್ ಸ್ಪಂದಿಸುತ್ತಾರೆ. ಬಳಿಕ ಕರೆ ಮಾಡಿದವರು ಹೆಸರು, ತುರ್ತು ನೆರವು ಬೇಕಾಗಿರುವ ವಿಳಾಸ, ಯಾವ ರೀತಿಯ ನೆರವು ಬೇಕೆಂಬುದನ್ನು ತಿಳಿಸಬೇಕು. ವಿಳಾಸ ತಿಳಿಯದಿದ್ದರೆ ಟವರ್ ಲೊಕೇಷನ್ ಇಲ್ಲವೇ ಜಿಪಿಎಸ್ ಮೂಲಕ ಜಾಗವನ್ನು ತಿಳಿದುಕೊಳ್ಳಲಾಗುತ್ತದೆ. ಬಳಿಕ, ಸ್ಥಳೀಯ ಇಲಾಖಾ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿ ಶೀಘ್ರದಲ್ಲೆ ಸಂಕಷ್ಟದಲ್ಲಿರುವ ವ್ಯಕ್ತಿ, ಸ್ಥಳಕ್ಕೆ ತಲುಪಲು ಸೂಚಿಸುತ್ತಾರೆ.
ಮಿಸ್ ಕಾಲ್ಗೂ ಸ್ಪಂದನ
ಕೆಲ ಸಮಯದಲ್ಲಿ ಕರೆಗಳು ಹೆಚ್ಚಾದ ವೇಳೆ, ಪೊಲೀಸ್ ನಿಯಂತ್ರಣ ಕೊಠಡಿ ಕರೆ ಸ್ವೀಕರಿಸದಿದ್ದರೆ, ಮಿಸ್ ಕಾಲ್ ಎಂದು ದಾಖಲಾಗುತ್ತದೆ. ನಂತರ ಕೊಠಡಿಯಿಂದಲೇ ವಾಪಸ್ ಕರೆ ಮಾಡಲಾಗುತ್ತದೆ.