ಸೂರ್ಯ ಸತ್ತರೆ ಏನಾಗುತ್ತೇ?
ನಕ್ಷತ್ರಗಳಿಗೂ ಹುಟ್ಟು ಮತ್ತು ಸಾವು ಇದೆ. ಸೂರ್ಯನೂ ಇದಕ್ಕೆ ಹೊರತಲ್ಲ. ಏಕೆಂದರೆ ಸೂರ್ಯನೂ ಒಂದು ನಕ್ಷತ್ರವಲ್ಲವೇ? ಸೂರ್ಯನಿಗೆ ಹುಟ್ಟು ಇದೆ ಎಂದ ಮೇಲೆ ಸಾವೂ ಖಚಿತ. ಹಾಗಾದರೆ ಸೂರ್ಯನ ಸಾವು ಹೇಗಾಗುತ್ತದೆ? ಸೂರ್ಯ ಸತ್ತ ನಂತರ ಭೂಮಿಯಲ್ಲಿ ಆಗುವ ಬದಲಾವಣೆಗಳೇನು? ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಲೇ ಇರುತ್ತವೆ. ಆ ಎಲ್ಲಾ ಪ್ರಶ್ನೆಗಳಿಗೂ ಉತ್ತರವೇ ಈ ಬರಹ.
ಹುಟ್ಟಿದ್ದೇ ಸಾಯಲು: ಬಹುಶಃ ಸೂರ್ಯ ಹುಟ್ಟಿದಾಗಲೇ ಸಾವು ನಿರ್ಧಾರವಾಗಿರಬಹುದು. ಸೂರ್ಯನ ಒಟ್ಟು ವಯಸ್ಸು 10 ಶತಕೋಟಿ ವರ್ಷಗಳು ಎಂದು ಅಂದಾಜಿಸಲಾಗಿದೆ. ಸೂರ್ಯ ಈಗಾಗಲೇ ತನ್ನ ಅರ್ಧ ಆಯಸ್ಸನ್ನು ಪೂರೈಸಿದ್ದಾನೆ. ಸೂರ್ಯ ತನ್ನ ಸಾಯುವ ಸ್ಥಿತಿಯನ್ನು ತಲುಪಿದಾಗ ಏನಾಗುತ್ತದೆ ಎಂಬ ಕಾತರ ಎಲ್ಲರಲ್ಲೂ ಸಹಜ. ಸೂರ್ಯ ಸಾಯುವ ಸ್ಥಿತಿಯನ್ನು ತಲುಪಿದಾಗ ಅದರಲ್ಲಿನ ಮೂಲ ಹೈಡ್ರೋಜನ್ ಪ್ರೋಟಾನ್-ಪ್ರೋಟಾನ್ ಎಂಬ ಪ್ರಾಥಮಿಕ ಸರಣಿಯ ಮೂಲಕ ಹೀಲಿಯಂ ಆಗಿ ಪರಿವರ್ತನೆ ಆಗುತ್ತದೆ. ಯಾವಾಗ ಹೈಡ್ರೋಜನ್ ಹೀಲಿಯಂ ಆಗಿ ಪರಿವರ್ತನೆ ಆಗಲು ಪ್ರಾರಂಭವಾಗುತ್ತದೆಯೋ ಆ ಕ್ಷಣದಿಂದ ಸೂರ್ಯ ಸಾಯಲು ಪ್ರಾರಂಭವಾಗುತ್ತದೆ. ಅದೃಷ್ಟವಶಾತ್ ಈ ಪ್ರಕ್ರಿಯೆ ಈಗಲೇ ಪ್ರಾರಂಭವಾಗಲ್ಲ. ಏಕೆಂದರೆ ಸೂರ್ಯನಿಗೆ ಇನ್ನೂ ಸಾವಿನ ವಿಮೆ (ಡೆತ್ ಪಾಲಸಿ)ಯನ್ನು ಖರೀದಿಸಲು ಆಗಿಲ್ಲ. ಐದು ಶತಕೋಟಿ ವರ್ಷಗಳ ನಂತರವಷ್ಟೇ ಈ ಪ್ರಕ್ರಿಯೆ ಗೆ ಚಾಲನೆ ಸಿಗಲಿದೆ. ಆದಾಗ್ಯೂ ಸೂರ್ಯ ಸಾಯುವ ವೇಳೆ ಏನಾಗುತ್ತದೆ ಎಂದು ತಿಳಿಯುವ ಕಾತರವೇ? ಮುಂದೆ ಓದಿ.
ಗಂಭೀರವಾದ ಹಸಿರುಮನೆ ಪರಿಣಾಮ : ಸೂರ್ಯ ಸಾಯುವ ಸ್ಥಿತಿ ತಲುಪಿದಾಗ ಹೈಡ್ರೋಜನ್‌ನ ಬಳಕೆ ಹೆಚ್ಚುತ್ತದೆ. ಆಗ ಸೂರ್ಯ ಹೆಚ್ಚು ಪ್ರಕಾಶಮಾನವಾಗಿ ಉರಿಯುತ್ತಾನೆ. ಈ ಪ್ರಕಾಶಮಾನತೆಯಿಂದ ಭೂಮಿ ಹೆಚ್ಚಿನ ಶಾಖವನ್ನು ಪಡೆಯುತ್ತದೆ. ಭೂಮಿಯ ಮೇಲೆ ಕಾರ್ಬನ್ ಡೈ ಆಕ್ಸೈಡ್, ಮೀಥೇನ್ ಮತ್ತು ನೈಟ್ರಸ್ ಆಕ್ಸೈಡ್ ಮುಂತಾದ ಅನಿಲಗಳು ನಮ್ಮ ವಾಯುಮಂಡಲಕ್ಕೆ ಹೊದಿಕೆಯಾಗುತ್ತವೆ. ಈ ಅನಿಲಗಳ ಅಗಾಧವಾದ ಶಕ್ತಿಯಿಂದ ಭೂಮಿಯು ಹೆಚ್ಚಿನ ಬಿಸಿಯನ್ನು ಪಡೆದುಕೊಳ್ಳುತ್ತದೆ. ಇದರಿಂದ ಭೂಮಿಯ ಮೇಲಿನ ನೀರು ಹೆಚ್ಚಿನ ಪ್ರಮಾಣದಲ್ಲಿ ಆವಿಯಾಗುತ್ತದೆ ಮತ್ತು ವಾತಾವರಣದಲ್ಲಿ ದಟ್ಟವಾದ ಮೋಡ ಸೃಷ್ಟಿಯಾಗುತ್ತದೆ. ಈ ಮೋಡ ಸ್ವಲ್ಪ ಕಾಲ ಸೂರ್ಯನ ವಿಕಿರಣದಿಂದ ಭೂಮಿಯನ್ನು ರಕ್ಷಿಸುತ್ತದೆ. ಆದರೆ ಕ್ರಮೇಣವಾಗಿ ಭೂಮಿಯ ಶಾಖ ಹೆಚ್ಚುತ್ತಾ ಸಾಗುತ್ತದೆ. ಈ ಶಾಖ ಎಷ್ಟಿರುತ್ತದೆ ಎಂದರೆ ಸಾಗರಗಳ ನೀರು ಕುದಿಯುವಷ್ಟು ಇರುತ್ತದೆ ಎಂಬುದು ಆತಂಕ. ಈ ಹಂತದಲ್ಲಿ ಭೂಮಿಯ ಮೇಲೆ ಜೀವಿಗಳು ಅಸ್ತಿತ್ವದಲ್ಲಿರುವುದು ಸಾಧ್ಯವೇ ಇಲ್ಲ. ಅದನ್ನು ಮೀರಿ ಉಳಿದ ಜೀವಿ ಭವಿಷ್ಯದಲ್ಲಿ ನೀರಿನ ಕೊರತೆ ಮತ್ತು ಅತಿಯಾದ ಶಾಖವನ್ನು ಅನುಭವಿಸುವಂತಾಗುತ್ತದೆ.
ಸೂರ್ಯನ ಗಾತ್ರ ಹೆಚ್ಚಳ : ಸಾಮಾನ್ಯವಾಗಿ ನಕ್ಷತ್ರಗಳು ಸಾಯುವ ಸ್ಥಿತಿ ತಲುಪಿದಾಗ ಕೆಂಪು ಕುಬ್ಜ ಹಂತ ತಲುಪಿ, ಅವುಗಳ ಶಕ್ತಿ ದುರ್ಬಲಗೊಳ್ಳುತ್ತದೆ. ಆದರೆ ನಮ್ಮ ಸೂರ್ಯನಲ್ಲಿ ಇದಕ್ಕಿಂತ ಭಿನ್ನವಾದ ಪ್ರಕ್ರಿಯೆ ಜರುಗುತ್ತದೆ. ಸೂರ್ಯ ಸಾಯುವ ವೇಳೆಗೆ ಪ್ರಕಾಶಮಾನ ಸ್ಥಿತಿ ಹೆಚ್ಚುವ ಜೊತೆಜೊತೆಗೆ ಆತನ ಗಾತ್ರವೂ ಹೆಚ್ಚುತ್ತದೆ. ಇದನ್ನು ಕೆಂಪು ದೈತ್ಯ ಹಂತ ಎನ್ನಲಾಗುತ್ತದೆ. ಕೆಂಪುದೈತ್ಯ ಹಂತದಲ್ಲಿ ಸೂರ್ಯನ ಉಷ್ಣತೆ 2000 ದಿಂದ 3000 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಸೂರ್ಯನ ಮೇಲ್ಮೈ ತಾಪಮಾನ 5000ದಿಂದ 9000 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ಪ್ರಮಾಣಕ್ಕೆ ಹೋಲಿಸಿದರೆ ಕೆಂಪುದೈತ್ಯ ಸ್ಥಿತಿಯ ಉಷ್ಣತೆ ಕಡಿಮೆ ಎಂದೇ ಹೇಳಬಹುದು.
ಶ್ವೇತ ಕುಬ್ಜ : ಪಂಜೆ ಮಂಗೇಶರಾಯರ ಮೂಡುವನು ರವಿ ಕವನದ ಕೊನೆ ಸಾಲುಗಳು ಹೀಗಿವೆ. ಏರುವನು ರವಿ ಏರುವನು, ಬಾನೊಳು ಸಣ್ಣಗೆ ತೋರುವನು. ಈ ಸಾಲುಗಳು ಅಕ್ಷರಶಃ ಸೂರ್ಯನ ಅವಸಾನವನ್ನು ತಿಳಿಸುತ್ತವೆ. ಪ್ರಕಾಶಮಾನವಾಗಿ ಬೆಳಗಿದ ಸೂರ್ಯ ಗಾತ್ರದಲ್ಲಿ ಹೆಚ್ಚುತ್ತಾನೆ. ಗಾತ್ರ ಹೆಚ್ಚುತ್ತಾ ಸಾಗಿ ಕ್ರಮೇಣವಾಗಿ ಕುಗ್ಗುತ್ತಾ ಸಾಗುತ್ತದೆ. ಅಂತಿಮವಾಗಿ ಸೂರ್ಯನ ಮೂಲ ಗಾತ್ರಕ್ಕಿಂತ ಚಿಕ್ಕ ಗಾತ್ರ ಹೊಂದುತ್ತದೆ. ಇದನ್ನೇ ಶ್ವೇತ ಕುಬ್ಜ ಎನ್ನುತ್ತಾರೆ. ಆಗ ಸೂರ್ಯ ಕಡಿಮೆ ಶಕ್ತಿ ಹೊಂದಿರುತ್ತಾನೆ ಮತ್ತು ದೀರ್ಘಾಯುಷ್ಯ ಹೊಂದುತ್ತಾನೆ. ಮುಂದೆ ಶತ ಶತಕೋಟಿ ವರ್ಷಗಳ ಕಾಲ ಬೆಳಕು ಚೆಲ್ಲಲು ಸಿದ್ಧ್ದನಾಗುತ್ತಾನೆ.
ಭೂಮಿಯ ಕಕ್ಷೆ ಬದಲಾಗುತ್ತದೆ : ನಿಸ್ಸಂಶಯವಾಗಿ ಸೂರ್ಯ ಸಾಯುವ ವೇಳೆಗೆ ಭೂಮಿಯ ಮೇಲೆ ಯಾವುದೇ ಜೀವಿಗಳು ಇರುವುದಿಲ್ಲ. ಆದಾಗ್ಯೂ ಭೂಮಿ ಚಲಿಸುತ್ತಲೇ ಇರುತ್ತದೆ. ಸೂರ್ಯ ಕೆಂಪು ದೈತ್ಯ ಹಂತ ತಲುಪಿದಾಗ ಮೂರನೇ ಒಂದು ಭಾಗದಷ್ಟು ಭೂಮಿಗೆ ಹತ್ತಿರದಲ್ಲಿರುತ್ತಾನೆ. ಆಗ ಭೂಮಿಯು ಗರಿಗರಿಯಾದ ಹಾಟ್ ಚಿಪ್ಸ್‌ನಂತೆ ಬಿಸಿಬಿಸಿಯಾಗಿರುತ್ತದೆ. ಈ ಹಂತದಲ್ಲಿ ಆಶ್ಚರ್ಯಕರ ಮತ್ತು ವಿರುದ್ಧವಾದ ಪ್ರಕ್ರಿಯೆ ನಡೆಯುತ್ತದೆ. ಸೂರ್ಯನ ಭೂಮಿಯ ಸಮೀಪಕ್ಕೆ ಬರುತ್ತಿದ್ದಂತೆ ಭೂಮಿ ಮತ್ತು ಇತರ ಗ್ರಹಗಳ ಮೇಲಿನ ಗುರುತ್ವಾಕರ್ಷಣೆ ವಾಸ್ತವವಾಗಿ ದುರ್ಬಲಗೊಳ್ಳುತ್ತದೆ. ಈ ದುರ್ಬಲಗೊಳ್ಳುವಿಕೆ ಭೂಮಿಯ ಕಕ್ಷಾ ಪಥವನ್ನು ಬದಲಿಸುತ್ತದೆ.
ಅನ್ಯ ಗ್ರಹಗಳಲ್ಲಿ ಜೀವಾಂಕುರ: ಸೂರ್ಯ ಕೆಂಪು ದೈತ್ಯನಾಗುವ ವೇಳೆಗೆ ಭೂಮಿಯ ಮೇಲೆ ಜೀವಿಗಳು ನಾಶವಾಗುತ್ತವೆ. ಆಗ ಜೀವಗಳು ಸಂಪೂರ್ಣವಾಗಿ ನಾಶವಾದವು ಎಂದರ್ಥವಲ್ಲ. ಗುರು ಮತ್ತು ಶನಿಗಳು ಅನೇಕ ಉಪಗ್ರಹಗಳನ್ನು ಹೊಂದಿವೆ. ಆ ಗ್ರಹಗಳು ವಾಸಯೋಗ್ಯ ಗ್ರಹಗಳಾಬಹುದು. ಗುರುಗ್ರಹದ ಉಪಗ್ರಹಗಳಾದ ಯುರೋಪ ಮತ್ತು ಗ್ಯಾನಿಮಿಡಗಳು ಪ್ರಸ್ತುತ ಮಂಜುಗಡ್ಡೆ ಹೊಂದಿವೆ. ಆದರೆ ಸೂರ್ಯನ ಗಾತ್ರ ಹೆಚ್ಚಳವಾದಾಗ ಬಹುಶಃ ಆ ಮಂಜುಗಡ್ಡೆ ಕರಗಿ ನೀರಾಗುವ ಮತ್ತು ಅಲ್ಲಿ ಜೀವಾಂಕುರವಾಗುವ ಸಾಧ್ಯತೆಗಳು ಇವೆ. ಜೀವಿಗಳಿಗೆ ಸೂಕ್ತವಾದ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಗೆಲಾಕ್ಸಿಗಳ ವಿಲೀನ : ಸೂರ್ಯನ ಮರಣದಿಂದಾಗಿ ಹೊಸ ಆಕಾಶಕಾಯ ಉಂಟಾಗುವುದಿಲ್ಲ. ಬದಲಾಗಿ ಕ್ಷೀರಪಥ ಮತ್ತು ಆಂಡ್ರೋಮಿಡಾ ಗೆಲಾಕ್ಸಿಗಳು ಪರಸ್ಪರ ಒಂದುಗೂಡುತ್ತವೆ. ಗಂಟೆಗೆ 4,02,000 ಕಿ.ಮೀ. ವೇಗದಲ್ಲಿ ಈ ಎರಡೂ ಗೆಲಾಕ್ಸಿಗಳು ಪರಸ್ಪರ ವೇಗವಾಗಿ ಚಲಿಸಿ ಒಂದಾಗುತ್ತವೆ. ಈ ಎರಡೂ ಬೃಹತ್ ಆಕಾಶಕಾಯಗಳು ಪರಸ್ಪರ ಒಡೆದು ಹೋಗದೇ ಒಂದಾಗುತ್ತವೆ. ವಾಸ್ತವವಾಗಿ ಸೂರ್ಯನನ್ನು ಒಳಗೊಂಡ ನಮ್ಮ ಸೌರವ್ಯೆಹ ಉತ್ತಮವಾಗಿರುತ್ತದೆ. ಅದೃಷ್ಟವಶಾತ್ ಸೂರ್ಯನ ಜೀವನಚಕ್ರ ಪೂರ್ಣಗೊಳ್ಳುವವರೆಗೂ ನಾವು ಜೀವಂತವಾಗಿದ್ದರೆ ಈ ಎರಡೂ ಗೆಲಾಕ್ಸಿಗಳು ಒಂದಾಗುವುದನ್ನು, ಅದರ ನಿವಾಸಿಗಳಂತೆ ಸುದೀರ್ಘ ಬೆಳಕಿನ ಪ್ರದರ್ಶನವನ್ನು ಸವಿಯಬಹುದು.
ಹೊರಗಿನ ಗ್ರಹಗಳಿಗೂ ಶಾಖದ ಅನುಭವ: ಈಗಾಗಲೇ ಹೇಳಿದಂತೆ ಸೂರ್ಯ ಸಾಯಲು ಪ್ರಾರಂಭಿಸಿದಾಗ ಗಾತ್ರ ದೊಡ್ಡದಾಗುತ್ತದೆ ಮತ್ತು ಹೆಚ್ಚು ಪ್ರಕಾಶಮಾನವಾಗುತ್ತದೆ. ಈ ಶಾಖವು ಸೂರ್ಯನ ಸಮೀಪದ ಗ್ರಹಗಳು ಹೊತ್ತಿ ಉರಿಯುವಂತೆ ಮಾಡುತ್ತದೆ. ಅಷ್ಟೇ ಅಲ್ಲ ದೂರದ ಘನೀಕೃತ ಗ್ರಹಗಳ ಉಷ್ಟಾಂಶ ಹೆಚ್ಚಳಕ್ಕೂ ಕಾರಣವಾಗುತ್ತದೆ. ಹೊರಗಿನ ಗ್ರಹಗಳಾದ ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳಿಗೂ ಹೆಚ್ಚು ಶಾಖದ ಅನುಭವವಾಗುತ್ತದೆ. ಇದರಿಂದ ಆ ಗ್ರಹಗಳ ಪರಿಭ್ರಮಣೆಗಳಲ್ಲಿ ವ್ಯತ್ಯಾಸವಾಗುತ್ತದೆ.
ಮಾನವ ಜೀವನ ಅಸಾಧ್ಯ: ಸೂರ್ಯ ಸಾಯುವ ವೇಳೆಗೆ ಭೂಮಿಯ ಮೇಲ್ಮೈ ಶಾಖ ಅಧಿಕವಾಗುವ ಪರಿಣಾಮದಿಂದ ಭೂಮಿಯ ಮೇಲೆ ಮಾನವ ಜೀವನ ಅಸಾಧ್ಯ. ಒಂದು ವೇಳೆ ಭವಿಷ್ಯದಲ್ಲಿ ಹೊಸ ಶಾಖ ವಿರೋಧಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಕೊಂಡು ಬದುಕಿದರೂ ಸಹ ಕುಡಿಯಲು ನೀರು ಮತ್ತು ತಿನ್ನಲು ಆಹಾರ ದೊರೆಯುವುದಿಲ್ಲ. ಸೂರ್ಯ ಸಾಯುವ ವೇಳೆಗೂ ಮುನ್ನ ಬೇರೆ ಗ್ರಹಗಳಲ್ಲಿ ಮಾನವ ವಾಸ ಮಾಡಲು ಪ್ರಾರಂಭಿಸಿದರೂ ಭೂಮಿಯ ಮೇಲಿನ ಮಾನವನ ಸ್ಥಿತಿಗತಿ ಅರಿಯಲು ಸಾಧ್ಯವಿಲ್ಲ. ಏಕೆಂದರೆ ಈಗಿನ ಇಂಟರ್‌ನೆಟ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳೂ ಅಸ್ತವ್ಯಸ್ತಗೊಳ್ಳುತ್ತವೆ.
ಅನ್ಯ ವಾಸಸ್ಥಳದ ಹುಡುಕಾಟ: ಸೂರ್ಯ ಸಾಯುವ ಸಮಯಕ್ಕೆ ನಾವು ಯಾವ ತಂತ್ರಜ್ಞಾನವನ್ನು ಹೊಂದಬೇಕೆಂದು ನಿಖರವಾಗಿ ಊಹಿಸುವುದು ಕಷ್ಟ. ಆದರೆ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಈಗಾಗಲೇ ದೂರದ ಗ್ರಹಗಳಿಗೆ ಪ್ರಯಾಣ ಬೆಳೆಸಿದ್ದೇವೆ. ವಾಸಯೋಗ್ಯ ಗ್ರಹಗಳನ್ನು ಅರಸಿ ಹೊರಟಿದ್ದೇವೆ. 2030ರ ವೇಳೆಗೆ ಮಂಗಳನ ಅಂಗಳದಲ್ಲಿ ಮಾನವ ಜೀವನ ಪ್ರಾರಂಭಿಸುವ ಯೋಜನೆ ಇದೆ. ಹೊಸ ಗೆಲಾಕ್ಸಿಗಳತ್ತ ಹೊರಟ ನಮ್ಮ ಪಯಣ ಮಂಗಳನ ಅಂಗಳಕ್ಕೆ ಹೋಗುವುದು ದೊಡ್ಡದೇನಲ್ಲ. ನೀಲ್‌ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟಾಗ ಮಾನವನಿಗೆ ಇದು ಸಣ್ಣ ಹೆಜ್ಜೆ, ಆದರೆ ಮನುಕುಲಕ್ಕೆ ದೈತ್ಯ ಹೆಜ್ಜೆ ಎಂದು ಹೇಳಿದ ಮಾತು ಅಕ್ಷರಶಃ ಸತ್ಯವಾಗಿದೆ. ಈ ಹಿಂದೆ ಭೂಮಿಗೆ ಬರುವ ಗಂಡಾಂತರಗಳನ್ನು ಅರಿತು ಅದನ್ನು ತಪ್ಪಿಸಲು ಪ್ರಯತ್ನಿಸಿದ್ದೇವೆ. ನಮ್ಮ ಪಕ್ಕದ ಗ್ರಹಗಳನ್ನು ಮಾತ್ರ ತೋರಿಸಲು ಶಕ್ತವಾಗಿದ್ದ ದೂರದರ್ಶಕಗಳ ಸಾಮರ್ಥ್ಯ ಈಗ ಬ್ರಹ್ಮಾಂಡಗಳ ಆಚೆ ವಿಸ್ತರಿಸಿದೆ. ಹಾಗಾಗಿ ಭವಿಷ್ಯದಲ್ಲಿ ಏನಾಗುತ್ತದೆಂದು ಅರಿಯುವ ಎಲ್ಲಾ ಸಾಧ್ಯತೆಗಳು ಲಭ್ಯವಾಗುತ್ತವೆ. ಅದಕ್ಕೆ ತಕ್ಕದಾದ ಪ್ರತಿತಂತ್ರಗಳನ್ನು ರೂಪಿಸಿಕೊಂಡು ಬೇರೆ ಗ್ರಹಗಳತ್ತ ಮುಖಮಾಡುವ ದಿನಗಳು ದೂರವಿಲ್ಲ.