ಸಂತೆಯಲ್ಲಿ ನನ್ನ ಮಗ ಕಾಣೆಯಾಗಿದ್ದಾನೆ...ಹುಡುಕಿ ಕೊಡ್ತೀಯ?
ಪತ್ರಕರ್ತ ಎಂಜಲು ಕಾಸಿ ಜೇಬು ತುಂಬಾ ಕಾರ್ಡ್‌ಗಳನ್ನು ಇಟ್ಟುಕೊಂಡು ಮಾರ್ಕೆಟ್‌ಗೆ ಹೊರಟ. ಆತನ ಹೆಂಡತಿ ಸೂಸಿ ಒಳಗಿನಿಂದಲೇ ಕೂಗಿ ಹೇಳಿದಳು ‘‘ಅಂದ ಹಾಗೆ ಎಲ್ಲ ಫ್ರೆಶ್ ಇದ್ದದ್ದು ತನ್ನಿ. ಕೊಳೆತದ್ದನ್ನು ಹಿಡ್ಕೊಂಡು ಬರ್ಬೇಡಿ...’’ ಸರಿ ಎಂದವನೇ ಸಂತೆ ತಲುಪಿಯೇ ಬಿಟ್ಟ. ರಸ್ತೆ ಬದಿಯಲ್ಲಿ ವಿವಿಧ ತರಕಾರಿ, ವಸ್ತುಗಳನ್ನು ಇಟ್ಟುಕೊಂಡು ‘ಬನ್ನಿ ಬನ್ನಿ....ಅಗ್ಗದಲ್ಲಿ....’’ ಎಂದು ಕರೆಯುತ್ತಿದ್ದರು. ನೇರವಾಗಿ ತರಕಾರಿ ರಾಶಿ ಹಾಕಿದಲ್ಲಿಗೆ ಹೋದ ‘‘ಫ್ರೆಶ್ ಏನಿದೆ...?’’ ಕೇಳಿದ.
‘‘ಎಲ್ಲವು ಫ್ರೆಶ್ಶೇ ತೆಗೆದುಕೊಳ್ಳಿ....’’ ಅಂಗಡಿಯಾತ ಹೇಳಿದ.
‘‘ಎಂತ ಫ್ರೆಶ್...ಅದಿರಲಿ ಕಡಿಮೆಯದ್ದು ಏನುಂಟು...?’’ ಕಾಸಿ ಕೇಳಿದ.
‘‘ಕಡಿಮೆಗೆ ಈಗಷ್ಟೇ ಗುಜರಾತ್‌ನಿಂದ ಬಂದ ಗಾಂಧಿ ಬದನೆಕಾಯಿ ಉಂಟು....ಒಂದು ಕಿಲೋ ಗಾಂಧೀಜಿ ಕೊಡ್ಲಾ....’’
‘‘ಏ...ಬೇಡಪ್ಪ....ಅದು ಒಣಗಿ ಹೋಗಿದೆ.... ಹಿಂಡಿದರೆ ಹನಿ ರಸ ಇಲ್ಲ....ಓ ಅಲ್ಲಿ ಉಂಟಲ್ಲ....ವಲ್ಲಭಭಾಯ್ ಪಟೇಲ್...ಅದಕ್ಕೆಷ್ಟು ಕೆಜಿಗೆ....’’
‘‘ನೋಡಿ...ಅದು ನರೇಂದ್ರ ಮೋದೀಜಿಯವರೆ ಬೆವರು ಸುರಿಸಿ ಅವರ ತೋಟದಲ್ಲಿ ಬೆಳೆಸಿದ್ದು. ಮೊದಲೆಲ್ಲ ಕಡಿಮೆ ರೇಟಿಗೆ ಸಿಗುತ್ತಿತ್ತು...ಈಗ ಕೊಡುವ ಹಾಗಿಲ್ಲ....ಕೆಜಿಗೆ ನೂರು ರೂಪಾಯಿ...’’
‘‘ಕೆ. ಜಿ.ಗೆ ನೂರು ರೂಪಾಯಿ? ಎಂತದಿದು...ಈ ರೇಟಿಗೆ ಕೊಂಡು ನಾವು ಪದಾರ್ಥ ಮಾಡುವುದು ಹೇಗೆ?’’
‘‘ನೋಡಿ...ಮೊದಲಿನ ಪಟೇಲರಲ್ಲ ಅದು. ಆರೆಸ್ಸೆಸ್ ಮತ್ತು ಕಾಂಗ್ರೆಸ್‌ನ್ನು ಕಸಿ ಮಾಡಿ ಮೋದಿ ಬೆಳೆಸಿರುವುದು. ಅದನ್ನು ಚೆನ್ನಾಗಿ ಹುರಿದು ಅದಕ್ಕೆ ರುಚಿಗೆ ತಕ್ಕಷ್ಟು ಗೋಳ್ವಾಲ್ಕರ್, ಹೆಡಗೇವಾರ್‌ನ್ನು ಬೆರೆಸಿ ನೋಡಿ....ಪರಿಮಳಕ್ಕೆ ನಿಮ್ಮ ಮನೆ ಮುಂದೆ ಜನರ ಸಂತೆಯೇ ಇರುತ್ತದೆ....’’ ತರಕಾರಿ ಮಾರುವಾತ ಹೇಳಿದ.
‘‘ಮೊದಲೆಲ್ಲ ಒಳ್ಳೆಯ ನೆಹರೂ ತರಕಾರಿ ಬರುತ್ತಿತ್ತು. ಈಗ ಯಾಕೆ ನೀವು ಇಟ್ಟಿಲ್ಲ....’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ನಿಮಗೆ ಗೊತ್ತಿಲ್ವ? ನಮ್ಮ ದೇಹದ ಎಲ್ಲ ರೋಗಗಳಿಗೂ ನೆಹರೂ ತರಕಾರಿ ತಿಂದಿರೋದೆ ಕಾರಣವಂತೆ. ಅದಕ್ಕೆ ಸರಕಾರ ನೆಹರೂ ತರಕಾರಿ ಬ್ಯಾನ್ ಮಾಡಿದ್ದಾರೆ. ನೆಹರೂ ತರಕಾರಿ ಬಾಯಿಗೆ ಮಾತ್ರ ರುಚಿ, ಆದರೆ ದೇಹಕ್ಕೆ ಹಾನಿ ಎನ್ನುವುದು ಕೃಷಿ ವಿಜ್ಞಾನಿ ಪ್ರಧಾನಿ ಮೋದಿಯವರ ಇತ್ತೀಚಿನ ಸಂಶೋಧನೆ....’’
‘‘ಅದೇನೋ ಗೊತ್ತಿಲ್ಲ....ನನ್ನ ಹಿರಿಯರೆಲ್ಲ ನೆಹರೂ ತರಕಾರಿ ತಿಂದೇ ಬೆಳೆದಿರುವುದು... ಅವರಿಗೆ ಏನೂ ಆಗಿಲ್ಲ....’’
‘‘ನೋಡಿ....ನೆಹರೂ ತರಕಾರಿ ಈಗ ಸಿಗಲ್ಲ...ಬೇಕಾದ್ರೆ ಹೊಸದಾದ ಕಾಂಗ್ರೆಸ್ ತರಕಾರಿ ಮಾರಾಟಕ್ಕಿದೆ....ಶಿವಸೇನೆ ಮತ್ತು ಎನ್‌ಸಿಪಿ ಗೊಬ್ಬರ ಹಾಕಿ ಬೆಳೆಸಿದ ತರಕಾರಿ. ಅದರಲ್ಲಿ ಸ್ವಲ್ಪ ನೆಹರೂ ಅಂಶಾನೂ ಇದೆ. ಹಿಂಬದಿಯಲ್ಲಿ ರಾಶಿ ಹಾಕಿದ್ದೇವೆ. ಬೇಕಾದ್ರೆ ಕಡಿಮೆಗೆ ಕೊಡುವಾ’’
‘‘ಅದು ಬೇಡ. ಮೈಯೆಲ್ಲ ತುರಿಕೆ....’’ ಕಾಸಿ ಉತ್ತರಿಸಿದ.
‘‘ಓ ಅಲ್ಲಿ ಸುಪ್ರೀಂಕೋರ್ಟ್‌ನ ಅಂಗಳದಲ್ಲಿ ಬೆಳೆಸಿದ ಸುಪ್ರೀಂ ತರಕಾರಿಗೆ ಎಷ್ಟು....?’’
‘‘ತಗೊಳ್ಳಿ...ಮೊನ್ನೆ ಮೊನ್ನೆ ಬಂದದ್ದು. ಸುಪ್ರೀಂಕೋರ್ಟ್ ಸಾವಯವ ಗೊಬ್ಬರ ಹಾಕಿ ಬೆಳೆಸಿದ ತರಕಾರಿ. ಈಗ ದೇಶಾದ್ಯಂತ ಇದು ಜನಪ್ರಿಯ. ಎಲ್ಲ ಪಕ್ಷಗಳೂ, ನಾಯಕರಿಗೂ ಈ ತರಕಾರಿ ಎಂದರೆ ಇಷ್ಟ. ಕೋಮು ಕ್ಯಾನ್ಸರ್ ಈ ತರಕಾರಿ ತಿಂದರೆ ಸಂಪೂರ್ಣ ವಾಸಿಯಂತೆ. ಎಲ್ಲರಿಗೂ ಇಷ್ಟವಾಗಿದೆ....’’
‘‘ತಿನ್ನುವುದಕ್ಕೆ ರುಚಿಯಾಗಿರುತ್ತದೆ. ಆದರೆ ನಿಧಾನಕ್ಕೆ ದೇಹ ವಿವಿಧ ರೋಗಗಳ ಆವಾಸಸ್ಥಾನವಾಗುತ್ತದೆ ಎನ್ನುವುದು ಕೆಲವರು ಹೇಳುತ್ತಿದ್ದಾರೆ...’’
‘‘ನೋಡೀ...ಅವರೆಲ್ಲ ವಿದೇಶಿ ತರಕಾರಿ ಪ್ರಿಯರು. ಇದು ಅಪ್ಪಟ ವೈದಿಕ ಕಾಲದಲ್ಲಿ ಬೆಳೆಯುತ್ತಿದ್ದ ತರಕಾರಿ. ಸ್ವತಃ ಅಯೋಧ್ಯೆಯ ಮಣ್ಣಿನಲ್ಲಿ ಸುಪ್ರೀಂಕೋರ್ಟ್ ನೇತೃತ್ವದಲ್ಲಿ ಬೆಳೆದು ಕೊಯ್ಯಲಾಗಿದೆ. ತೆಗೆದುಕೊಳ್ಳಿ....’’
‘‘ಒಂದು ಸ್ವಲ್ಪ ಗಾಂಧಿ ತರಕಾರಿ ಕೊಡಿ. ನೆಹರೂ ತರಕಾರಿ ಇದ್ದಿದ್ದರೆ ತೆಗೆದುಕೊಳ್ಳುತ್ತಿದ್ದೆ....ಸ್ವಲ್ಪ ಶಿವಾಜಿ ಮಸಾಲಾ, ಟಿಪ್ಪುಸುಲ್ತಾನ್ ಉಪ್ಪು ಕೂಡ ಇರಲಿ...’’ ಎಂದ. ಅಂಗಡಿಯಾತ ಎಲ್ಲವನ್ನೂ ಕೊಟ್ಟ.
ಸ್ವಲ್ಪ ದೂರದಲ್ಲಿ ಅದೇನೋ ಹರಾಜು ಕೂಗುತ್ತಿದ್ದರು.
ನೋಡಿದರೆ ‘ಬಿಎಸ್ಸೆನ್ನೆಲ್...ಎಲ್‌ಐಸಿ....ಭಾರತ್ ಪೆಟ್ರೋಲಿಯಂ....ಹಾಲ್....’’ ಹೀಗೆ ವಿವಿಧ ವಸ್ತುಗಳನ್ನು ಹರಾಜು ಕೂಗಲಾಗುತ್ತಿತ್ತು. ಇದೆಲ್ಲ ನಮಗಲ್ಲ....ಎಂದು ಮುಂದೆ ನಡೆದ. ಹರಾಜು ಕೂಗುತ್ತಿದ್ದವರ ಧ್ವನಿ ಚಿರಪರಿಚಿತವಿತ್ತು...ಯಾರಿದು....? ನೋಡಿದರೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು. ಮೆಲ್ಲಗೆ ಅಲ್ಲಿಂದ ಜಾರಿದ. ಒಂದು ಮೂಲೆಯಲ್ಲಿ ಗುಜರಿ ಅಂಗಡಿಯಿತ್ತು. ಭರ್ಜರಿ ವ್ಯಾಪಾರ ನಡೆಯುತ್ತಿತ್ತು.
‘‘ನೋಡಿ....ಒಂದೆರಡು ವಿಶ್ವವಿದ್ಯಾಲಯಗಳಿವೆ....ಗುಜರಿಗೆ ತೆಗೆದುಕೊಳ್ಳುತ್ತೀರಾ?’’ ಯಾರೋ ಕೇಳುತ್ತಿದ್ದರು. ಎಲ್ಲೋ ನೋಡಿದಂತಿದೆಯಲ್ಲ, ಎಂದು ದಿಟ್ಟಿಸಿದ. ನೋಡಿದರೆ ಕೇಂದ್ರ ಮಾನವ ಸಂಪನ್ಮೂಲ ಸಚಿವರು. ಕೆಲವು ವಿಶ್ವವಿದ್ಯಾನಿಲಯಗಳ ಜೊತೆಗೆ ನಿಂತಿದ್ದಾರೆ. ಒಂದು ಮೂಲೆಯಲ್ಲಿ ವಿವಿಧ ಶಾಸಕರು ಲೈಟ್ ಕಂಬದ ಕೆಳಗೆ ನಿಂತು ಇವನಿಗೆ ಕಣ್ಣು ಹೊಡೆದರು. ಕಾಸಿಗೆ ನಾಚಿಕೆಯಾಯಿತು. ಸಂಘಪರಿವಾರದಿಂದ ಇಷ್ಟೆಲ್ಲ ಸಂಸ್ಕೃತಿ ರಕ್ಷಕರಿದ್ದರೂ ಇವರು ಬಹಿರಂಗವಾಗಿಯೇ ದಂಧೆ ನಡೆಸುತ್ತಿದ್ದಾರಲ್ಲ, ಬೇಗ ಬೇಗನೇ ಹೆಜ್ಜೆಯಿಟ್ಟ. ಒಬ್ಬ ಶಾಸಕರು ‘‘ಇಡೀ ದಿನಕ್ಕೆ ರೇಟು ಜಾಸ್ತಿಯಾಗತ್ತೆ...ಗಂಟೆ ಲೆಕ್ಕದಲ್ಲಿ ಬೇಕಾದರೆ ಓಕೆ....’’ ಎಂದು ಚರ್ಚೆ ನಡೆಸುತ್ತಿದ್ದರು. ‘‘ನೋಡು...ಜೆಡಿಎಸ್‌ನೋರು ನಮಗಾಗಿ ಈಗಾಗಲೇ ಕಾಯ್ತಿ ಇದ್ದಾರೆ...ಸುಮ್ಮನೆ ಡಿಮಾಂಡ್ ಮಾಡ್‌ಬ್ಯಾಡ...’’ ಎಂದಂತಾಯಿತು. ಯಾರಿದು? ನೋಡಿದರೇ....ಚೂಪು ಮೀಸೆಯ ನಾಯಕರು. ಎಲ್ಲಿ ಪೊಲೀಸ್ ರೈಡಾಗಿ ಬಿಟ್ಟು, ತಪ್ಪಿ ನನ್ನನ್ನು ಎತ್ತಿಕೊಂಡು ಹೋಗುತ್ತಾರೋ ಎನ್ನುತ್ತಾ ಓಡ ತೊಡಗಿದ.
ಒಂದೆಡೆ ಬ್ಯಾಂಕುಗಳು ರಾಶಿ ರಾಶಿಯಾಗಿ ಬಿದ್ದಿದ್ದವು. ಕೊಳ್ಳುವವರೇ ಇರದೇ ರಿಸರ್ವ್ ಬ್ಯಾಂಕ್ ಗವರ್ನರ್ ನೊಣ ಓಡಿಸುತ್ತಿದ್ದರು. ಮಗದೊಂದೆಡೆ ದೊಂಬರಾಟದವರು ಮ್ಯಾಜಿಕ್ ಶೋ ನಡೆಸುತ್ತಿದ್ದರು. ದೇಶದ ಒಂದೊಂದೇ ಸೊತ್ತುಗಳನ್ನು ಟೋಪಿಯೊಳಗೆ ಹಾಕಿ ಮಾಯ ಮಾಡುತ್ತಿದ್ದರು. ಏನಿದು? ನೋಡಿದರೆ ಅನಿಲ್ ಅಂಬಾನಿ. ಹಗ್ಗದ ಮೇಲೆ ಮೋದಿ, ಶಾ ಎಲ್ಲರೂ ಕುಣಿಯುತ್ತಿದ್ದರು. ಸುತ್ತ ಸೇರಿದ ಜನರೆಲ್ಲ ಸಂಭ್ರಮದಿಂದ ನಗುತ್ತಿದ್ದರು.
ಒಂದು ಮೂಲೆಯಲ್ಲಿ ಒಬ್ಬ ಮುದುಕಿ ಕೂತು ಅಳುತ್ತಿದ್ದಳು. ಕಾಸಿಗೆ ಕರುಳು ಕಿತ್ತು ಬಂತು. ಹೋಗಿ ಕೇಳಿದ ‘‘ತಾಯಿ ಯಾರು ನೀನು?’’
‘‘ನನ್ನ ಮಗ ಈ ಸಂತೆಯಲ್ಲಿ ನಾಪತ್ತೆಯಾಗಿದ್ದಾನಪ್ಪ. ಹುಡುಕಿ ಕೊಡ್ತೀಯ?’’
‘‘ನಿನ್ನ ಮಗನ ಹೆಸರೇನಮ್ಮ?’’
‘‘ಸ್ವರಾಜ್ಯ’’
‘‘ನಿನ್ನ ಹೆಸರೇನಮ್ಮ?’’
‘‘ಭಾರತ ಮಾತೆ’’