varthabharthi


ನೇಸರ ನೋಡು

ಭಿನ್ನ ದನಿಗಳಿಗೆ ಮುಚ್ಚಿದ ಬಾಗಿಲು

ವಾರ್ತಾ ಭಾರತಿ : 24 Nov, 2019
ಜಿ.ಎನ್. ರಂಗನಾಥ್ ರಾವ್

ದೇಶದೊಳಗೆ ಅಸಹಿಷ್ಣುತೆಯ, ಭಿನ್ನ ದನಿಗಳನ್ನು ಹತ್ತಿಕ್ಕುವ, ಶಿಕ್ಷಿಸುವ ವಾತಾವರಣ ದಟ್ಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಬೇಕಾದ ಸರಕಾರವೇ ಭಿನ್ನದನಿಯನ್ನು ಅಡಗಿಸುವಂಥ ಕ್ರಮಗಳಿಗೆ ಕೈಹಾಕಿರುವುದು ಆತ್ಮಘಾತುಕವಾದುದು. ಮೋದಿಯವರ ಸರಕಾರ ಅಂತರ್‌ರಾಷ್ಟ್ರೀಯ ಅಭಿಪ್ರಾಯಕ್ಕೆ ಓಗೊಟ್ಟು ಆತಿಶ್ ತಸೀರ್ ಅವರ ಸಾಗರೋತ್ತರ ಭಾರತೀಯ ಪ್ರಜೆಯ ಸ್ಥಾನಮಾನವನ್ನು ರದ್ದುಪಡಿಸಿರುವ ಆಜ್ಞೆಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ತನ್ಮೂಲಕ ಭಾರತ ಪ್ರಜಾಸತ್ತಾತ್ಮಕ ಆದರ್ಶಗಳಿಗೆ, ಜಾತ್ಯತೀತ ನೀತಿಗೆ ಬದ್ಧವಾಗಿದೆ ಎಂಬ ಸಂದೇಶವನ್ನು ಅಂತರ್‌ರಾಷ್ಟ್ರೀಯ ಸಮುದಾಯಕ್ಕೆ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಸಂಜಾತರಿಗೆ ರವಾನಿಸಬೇಕು. ಇಲ್ಲವಾದಲ್ಲಿ ಮೋದಿಯವರ ಸರಕಾರ ಭಿನ್ನಮತದ ದನಿಗಳನ್ನು ಸಹಿಸುವುದಿಲ್ಲ, ಅಂಥವರಿಗೆ ಭಾರತ ಮುಕ್ತದ್ವಾರವಲ್ಲ ಎನ್ನುವ ಕಳಂಕ ಖಾಯಮ್ಮಾಗಿ ಉಳಿದುಕೊಳ್ಳಲಿದೆ.


ಇವತ್ತಿನ ಭಾರತದಲ್ಲಿ ಪ್ರಜಾಪ್ರಭುತ್ವ, ನ್ಯಾಯಾಂಗ ವ್ಯವಸ್ಥೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಜಾತ್ಯತೀತ ನೀತಿ ಇತ್ಯಾದಿಗಳೆಲ್ಲ ಅಣಕವಾಡಗಳಾಗುತ್ತಿವೆ. ನಗೆಪಾಟಲಿಗೆ ಗುರಿಯಾಗುತ್ತಿವೆ ಎಂದು ವಿದೇಶೀಯರು ಲೇವಡಿ ಮಾಡಿದರೆ ಅದು ಉತ್ಪ್ರೇಕ್ಷೆ ಎನಿಸದು. ಮೋದಿಯವರ ಸರಕಾರದ ಇತ್ತೀಚಿನ ಕೆಲವು ಕ್ರಮಗಳು, ನಿರ್ಧಾರಗಳು ಹಾಗೂ ನಮ್ಮ ನ್ಯಾಯಾಲಯಗಳ ಇತ್ತೀಚಿನ ತೀರ್ಪುಗಳು, ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ‘ಕ್ಷಿಪ್ರಕ್ರಾಂತಿ’ ನಡೆದು ಫಡ್ನವೀಸ್ ನಾಯಕತ್ವದಲ್ಲಿ ಬಿಜೆಪಿ-ಎನ್‌ಸಿಪಿ ಸರಕಾರ ಅಧಿಕಾರಕ್ಕೆ ಬಂದಿರುವ ರೀತಿ ಇತ್ಯಾದಿಗಳೆಲ್ಲ ಇದಕ್ಕೆ ಪುಷ್ಟಿಕೊಡುತ್ತವೆ. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಕೈಗೊಂಡ ಕ್ರಮವಿರಬಹುದು, ಪೌರತ್ವ ಕುರಿತಂತೆ ಕೇಂದ್ರ ಗೃಹ ಸಚಿವ ಶಾ ಅವರ ಆಲೋಚನೆಗಳಿರಬಹುದು, ಅಯೋಧ್ಯೆ ಮತ್ತು ಕರ್ನಾಟಕದ ಅನರ್ಹ ಶಾಸಕರ ಸ್ಥಾನಮಾನ-ಭವಿಷ್ಯಗಳಿಗೆ ಸಂಬಂಧಿಸಿದ ತೀರ್ಪು ಇರಬಹುದು; ಇವೆಲ್ಲವೂ ಹಾಗೂ ಇಂತಹ ಹಲವಾರು ಸಂಗತಿಗಳು ಮೇಲಿನ ಮಾತಿಗೆ ನಿದರ್ಶನವಾಗಿ ಒದಗಿ ಬರುತ್ತವೆ. ಈ ವಿದ್ಯಮಾನಗಳ ಬಗ್ಗೆ ಕೆಲವು ರಾಷ್ಟ್ರಗಳು ಹಾಗೂ ದೇಶವಿದೇಶಗಳು ಆತಂಕ ವ್ಯಕ್ತಪಡಿಸಿವೆ. ನೊಬೆಲ್ ಪ್ರಶಸ್ತಿ ವಿಜೇತ ಮೇಧಾವಿಗಳೂ ಕಳವಳಿಸಿದ್ದಾರೆ. ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಈ ರೀತಿ ಅಪಹಾಸ್ಯಕ್ಕೆ ಗುರಿಯಾಗಬೇಕಾಯಿತಲ್ಲ, ಇದಕ್ಕೆ ಕಾರಣಗಳೇನು ಎಂದು ಗಂಭೀರವಾಗಿ ಚಿಂತನಮಂಥನ ನಡೆಸಲು ಈ ವಿದ್ಯಮಾನಗಳು ದೇಶದ ಸಮಚಿತ್ತರನ್ನು ಪ್ರೇರೇಪಿಸುತ್ತಿವೆ.

ಈ ಬಗೆಯ ವಿದ್ಯಮಾನಗಳಿಗೆ ಕನ್ನಡಿ ಹಿಡಿಯುವಂತಹ ಇತ್ತೀಚಿನ ಇನ್ನೊಂದು ಪ್ರಕರಣ ಆತಿಶ್ ತಸೀರ್ ಅವರದು. ಏನು ಪ್ರಕರಣವಿದು? ಯಾರು ಈ ಆತಿಶ್ ತಸೀರ್?
  ಆತಿಶ್ ತಸೀರ್ ಖ್ಯಾತ ಪತ್ರಕರ್ತೆ ಶ್ರೀಮತಿ ತಲ್ವೀನ್ ಸಿಂಗ್ ಮತ್ತು ಪಾಕಿಸ್ತಾನ್ ಸಂಜಾತ ರಾಜಕಾರಿಣಿ ಸಲ್ಮಾನ್ ತಸೀರ್ ಅವರ ಪುತ್ರ ಹಾಗೂ ಅಂತರ್‌ರಾಷ್ಟ್ರೀಯ ಖ್ಯಾತಿಯ ಲೇಖಕ. ತಲ್ವೀನ್ ಸಿಂಗ್ ಲಂಡನ್‌ನ ‘ಸಂಡೆ ಟೈಮ್ಸ್’ಗೆ ದಕ್ಷಿಣ ಏಶ್ಯ ಬಾತ್ಮೀದಾರಳಾಗಿ ಹಾಗೂ ‘ದಿ ಸ್ಟೇಟ್ಸ್‌ಮನ್’ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ ಪತ್ರಕರ್ತೆ. ತಸೀರ್ ಜನ್ಮತಃ ಬ್ರಿಟಿಷ್ ಪ್ರಜೆಯಾದರೂ ಭಾರತದಲ್ಲೇ ತಾಯಿಯ ಪೋಷಣೆಯಲ್ಲಿ ಬೆಳೆದವರು. ಈಗ ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಆತಿಶ್ ತಸೀರ್ ಕಾದಂಬರಿಕಾರ ಹಾಗೂ ಪತ್ರಿಕಾ ಲೇಖನಕಾರ. ‘ದಿ ಟ್ವೈಸ್ ಬಾರ್ನ್:ಲೈಫ್ ಆ್ಯಂಡ್ ಡೆತ್ ಆನ್ ದಿ ಗ್ಯಾಂಜಿಸ್’ ತಸೀರರ ಇತ್ತೀಚಿನ ಕಾದಂಬರಿ. ಆತಿಶ್ ತಸೀರ್ ಅವರಿಗೆ ಎರಡು ದಶಕಗಳ ಹಿಂದೆ ಭಾರತ ಸರಕಾರ ನೀಡಿದ್ದ ‘ಸಾಗರೋತ್ತರ ಭಾರತೀಯ ಪ್ರಜೆ’ ಸ್ಥಾನಮಾನವನ್ನು ಈಗಿನ ಮೋದಿಯವರ ಸರಕಾರ ಇತ್ತೀಚೆಗೆ ರದ್ದುಗೊಳಿಸಿದೆ. ಕೇಂದ್ರದ ಈ ನಿರ್ಧಾರ ಇದೀಗ ಅಂತರ್‌ರಾಷ್ಟ್ರೀಯ ಸುದ್ದಿಯಾಗಿ ವಿಶ್ವದ ಪ್ರಮುಖರ ಗಮನ ಸೆಳೆದಿದೆ.

ಸಾಗರೋತ್ತರ ಭಾರತೀಯ ಪ್ರಜೆ ಸ್ಥಾನಮಾನಕ್ಕಾಗಿ ಸಲ್ಲಿಸಿದ್ದ ಅರ್ಜಿಯಲ್ಲಿ ಆತಿಶ್ ತಸೀರ್ ಅವರು ತಮ್ಮ ತಂದೆ ಪಾಕಿಸ್ತಾನಿ ಸಂಜಾತರೆಂಬುದನ್ನು ಮರೆಮಾಚಿದ್ದರು ಎಂಬುದು ಅವರ ಸಾಗರೋತ್ತರ ಭಾರತೀಯ ಸ್ಥಾನಮಾನವನ್ನು ರದ್ದುಪಡಿಸಿರುವುದಕ್ಕೆ ಮೋದಿ ಸರಕಾರ ನೀಡಿರುವ ಕಾರಣ. ಆದರೆ ಇದೊಂದು ಕುಂಟು ನೆಪವಷ್ಟೆ. ಭಾರತ ಸರಕಾರ ಹತ್ತೊಂಬತ್ತು ವರ್ಷಗಳ ಹಿಂದೆ, ಅಂದರೆ 2000ನೇ ಇಸವಿಯಲ್ಲಿ ಆತಿಶ್ ತಸೀರ್ ಅವರಿಗೆ ಭಾರತೀಯ ಸಂಜಾತ (ಪರ್ಸನ್ ಆಫ್ ಇಂಡಿಯನ್ ಒರಿಜಿನ್-ಪಿಐಒ) ಕಾರ್ಡನ್ನು ನೀಡಿದೆ. 2016ರಲ್ಲಿ ಸಾಗರೋತ್ತರ ಭಾರತೀಯ ಪ್ರಜೆ ಸ್ಥಾನಮಾನವನ್ನು ಮಂಜೂರುಮಾಡಿದೆ. ಹೀಗಿರುವಾಗ ತಸೀರ್ ಅವರು ಈಗ ಇದ್ದಕ್ಕಿದ್ದ ಹಾಗೆ ಏಕೆ ಭಾರತ ಸರಕಾರಕ್ಕೆ ಅನಪೇಕ್ಷಿತ ವ್ಯಕ್ತಿಯಾದರು? 2016ರ ನಂತರ ಏನೆಲ್ಲ ಘಟಿಸಿರಬಹುದು? ತಸೀರ್ ಸತ್ಯ ಮರೆಮಾಚಿದ್ದರು ಎಂಬುದು ಈಗ ಹೇಗೆ ದಿಢೀರನೆ ಬೆಳಕಿಗೆ ಬಂತು?

ನರೇಂದ್ರ ಮೋದಿಯರ ವಿಚಾರಧಾರೆ ಮತ್ತು ಅವರ ಆಡಳಿತ ಶೈಲಿಯ ಕಟು ಟೀಕಾಕಾರರಾಗಿರುವ ಆತಿಶ್ ತಸೀರ್ ‘ಇಂಡಿಯಾ ಟುಡೆ’ ನಿಯತಕಾಲಿಕಕ್ಕೆ ನೀಡಿರುವ ಸಂದರ್ಶನದಲ್ಲಿ, ಮೋದಿಯವರನ್ನು, ಭಾರತದಲ್ಲಿ ಭೀತಿ ರಾಜಕಾರಣ ಮತ್ತು ಸೇಡಿನ ರಾಜಕಾರಣದ ರೂವಾರಿ ಎಂದು ವರ್ಣಿಸಿರುವುದುಂಟು. ಈ ವರ್ಷದ ಮೇ ತಿಂಗಳಿನಲ್ಲಿ ಭಾರತದ ಸದ್ಯದ ಪರಿಸ್ಥಿತಿ ಕುರಿತು ಆತಿಶ್ ತಸೀರ್ ಅವರು ‘ಟೈಮ್’ ನಿಯತಕಾಲಿಕದಲ್ಲಿ ಒಂದು ಲೇಖನ ಬರೆದರು. ಆ ಲೇಖನದಲ್ಲಿ ಮೋದಿಯವರನ್ನು ‘ಮಹಾನ್ ವಿಚ್ಛಿದ್ರಕಾರಿ’(ಡಿವೈಡರ್ ಇನ್ ಚೀಫ್) ಎಂದು ಬಣ್ಣಿಸಿದ್ದರು ಹಾಗೂ ಮೋದಿಯವರ ರಾಜಕಾರಣವನ್ನು, ಭೇದ ಕಲ್ಪಿಸುವ, ಒಡಕು ಉಂಟುಮಾಡುವ ರಾಜಕಾರಣ ಎಂದು ಬಣ್ಣಿಸಿದ್ದರು. ಈ ಲೇಖನ ಬರೆದದ್ದಕ್ಕಾಗಿ ಮೋದಿ ಸರಕಾರ ಆತಿಶ್ ತಸೀರ್ ಅವರಿಗೆ ನೀಡಿದ ಶಿಕ್ಷೆ, ಸಾಗರೋತ್ತರ ಭಾರತೀಯ ಪ್ರಜೆಯ ಸ್ಥಾನಮಾನದ ರದ್ದತಿ ಎಂಬುದು ಹಗಲು ಬೆಳಕಿನಷ್ಟು ಸ್ಪಷ್ಟ. ಇಲ್ಲವಾದಲ್ಲಿ ಎರಡು ದಶಕಗಳ ಕಾಲ ಸುಮ್ಮನಿದ್ದ ಸರಕಾರಕ್ಕೆ ತಸೀರ್ ಅವರು ವಾಸ್ತವ ಸಂಗತಿಗಳನ್ನು ಮರೆಮಾಚಿದ್ದಾರೆ ಎಂದು ಈಗ ಜ್ಞಾನೋದಯವಾಗಲು ಬೇರೇನು ಕಾರಣವಿದ್ದೀತು? ಇದು ಪ್ರತೀಕಾರ ಕ್ರಮವಷ್ಟೇ ಅಲ್ಲ, ಲೇಖಕನೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದಿರುವ ಪ್ರಚ್ಛನ್ನ ಹಲ್ಲೆ.

ಆತಿಶ್ ತಸೀರ್ ಭಾರತದಲ್ಲಿ ಹುಟ್ಟಿ ಬೆಳೆದವರು. ಅವರ ಓದು ವಿದ್ಯಾಭ್ಯಾಸಗಳು ನಡೆದದ್ದು ಕೊಡೈಕನಾಲ್‌ನ ಇಂಟರನ್ಯಾಷನಲ್ ಸ್ಕೂಲ್ ಮತ್ತು ಆಮ್ಹೆಸ್ಟ್ ಕಾಲೇಜಿನಲ್ಲಿ. ಅವರು ಭಾರತೀಯರು. ಅವರು ಹಿಂದುವೂ ಹೌದು ಮುಸಲ್ಮಾನರೂ ಹೌದು. ಭಾರತೀಯ ಸಂಜಾತ ಪೌರತ್ವ ರದ್ದುಗೊಳಿಸಿರುವ ಸರಕಾರದ ನಿರ್ಧಾರದಿಂದಾಗಿ ಅವರು ಇನ್ನು ಮುಂದೆ ಭಾರತಕ್ಕೆ ಭೇಟಿಕೊಡುವಂತಿಲ್ಲ. ಭಾರತಕ್ಕೆ ತೆರಳಲು ವಿಸಾ ಅರ್ಜಿ ಸಲ್ಲಿಸಲು ಅನರ್ಹರಾಗುತ್ತಾರೆ. ವೀಸಾ ನೀಡುವ ರಾಯಭಾರ ಕಚೇರಿ ಅವರ ಹೆಸರನ್ನು ಕಪ್ಪುಪಟ್ಟಿಯಲ್ಲಿ ಸೇರಿಸುತ್ತದೆ. ಸಾಗರೋತ್ತರ ಭಾರತೀಯ ಪ್ರಜೆಯ ಸ್ಥಾನಮಾನ ಕೋರಿ ಎರಡು ದಶಕಗಳ ಹಿಂದೆ ಸಲ್ಲಿಸಿದ ಅರ್ಜಿಯಲ್ಲಿ ತಮ್ಮ ತಂದೆ ಪಾಕಿಸ್ತಾನಿ ಸಂಜಾತರೆಂಬುದನ್ನು ಮರಮಾಚಿ ವಸ್ತುಸಂಗತಿಯನ್ನು ಬಚ್ಚಿಟ್ಟಿದಾರೆ, ಸುಳ್ಳು ಹೇಳಿದ್ದಾರೆ ಎಂಬ ಕೇಂದ್ರ ಸರಕಾರದ ವಾದವನ್ನು ತಸೀರ್ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಖಚಿತವಾಗಿ ನಿರಾಕರಿಸಿದ್ದಾರೆ. ‘‘ನನ್ನ ತಂದೆ ತಾಯಿ ಮದುವೆಯಾಗಿಯೇ ಇರಲಿಲ್ಲ. ನಾನು ಹುಟ್ಟುವವರೆಗೆ ಮಾತ್ರ ಅವರಿಬ್ಬರ ನಡುವೆ ಸಂಬಂಧವಿತ್ತು. ಭಾರತದಲ್ಲಿ ನನ್ನ ತಾಯಿಯೇ ಸಂಪೂರ್ಣವಾಗಿ ನನ್ನನ್ನು ಸಾಕಿ ಸಲಹಿ ಬೆಳೆಸಿದರು. ಬಾಲ್ಯದಲ್ಲಿ ತಂದೆ ನನ್ನೊಡನೆ ಯಾವರೀತಿಯ ಒಡನಾಟವನ್ನೂ ಹೊಂದಿರಲಿಲ್ಲ. ನನ್ನ ಪಾಲನೆ ಪೋಷಣೆಗೆ ಜೀವನಾಂಶವನ್ನೂ ನೀಡುತ್ತಿರಲಿಲ್ಲ. ಇದೆಲ್ಲವನ್ನೂ ನಾನು ನನ್ನ ಪುಸ್ತಕಗಳಲ್ಲಿ ಮತ್ತು ಲೇಖನಗಳಲ್ಲಿ ಈಗಾಗಲೇ ಬರೆದಿದ್ದೇನೆ. ಹೀಗಾಗಿ ನನ್ನ ನಡವಳಿಕೆಯಲ್ಲಿ ಮುಚ್ಚುಮರೆ ಏನೂ ಇಲ್ಲ’’ ಎಂದಿರುವ ತಸೀರ್ ‘‘ಭಾರತ ನನ್ನ ವಾಸ್ತವ. ಅದರ ಬಗ್ಗೆ ನಾನು ಬರೆಯುತ್ತೇನೆ. ಈ ಇಪ್ಪತ್ತು ವರ್ಷಗಳಲ್ಲಿ ಯಾವ ಸರಕಾರವೂ ನನ್ನ ‘ಸಾಗರೋತ್ತರ ಭಾರತೀಯ ಪ್ರಜೆ’ ಎಂಬ ಸ್ಥಾನಮಾನವನ್ನು ಪ್ರಶ್ನಿಸಿಲ್ಲ. ನಾನು ಪ್ರಧಾನ ಮಂತ್ರಿ ಮೋದಿಯವರನ್ನು ಟೀಕಿಸಿ ಬರೆದ ನಂತರ ಈಗಿನ ಸರಕಾರ ನನಗೆ ಭಾರತೀಯ ಪ್ರಜೆ ಸ್ಥಾನಮಾನ ರದ್ದುಗೊಳಿಸುವ ನೋಟಿಸ್ ಕಳಿಸಿದೆ’’ ಎಂದಿದ್ದಾರೆ. ಆದರೆ ಕೇಂದ್ರ ಸರಕಾರ ಇದೆಲ್ಲವನ್ನೂ ನಿರಾಕರಿಸಿದೆ.

‘‘ನಾನು ಭಾರತೀಯ. ಸರಕಾರ ಏಕೆ ನನ್ನನ್ನು ದೇಶಭ್ರಷ್ಟನನ್ನಾಗಿಸುತ್ತಿದೆ? ನನ್ನನ್ನು ಗಡೀಪಾರು ಮಾಡುತ್ತಿದೆ?’’ ಎನ್ನುವುದು ತಸೀರ್ ಅವರು ಎತ್ತಿರುವ ಗಂಭೀರ ಪ್ರಶ್ನೆ. ಸಾಗರೋತ್ತರ ಭಾರತೀಯ ಪ್ರಜೆ ಸ್ಥಾನಮಾನ ರದ್ದುಗೊಳಿಸಿರುವ ಮೋದಿ ಸರಕಾರದ ಕ್ರಮವನ್ನು ತಸೀರ್ ಅವರು, ಏಶ್ಯದ ಬೆಳಕು ಎನ್ನಲಾದ ಭಾರತ ನಡೆಸಿರುವ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ’ವೆಂದು ಬಣ್ಣಿಸಿದ್ದಾರೆ. ಆತಿಶ್ ತಸೀರ್ ಅವರು ಪಾಶ್ಚಿಮಾತ್ಯ ಮಾಧ್ಯಮಗಳಿಗೆ ಸುಪರಿಚಿತರು.ಸಾಹಿತ್ಯವಲಯಗಳಲ್ಲಿ ಪ್ರತಿಭಾನ್ವಿತ ಲೇಖಕ ಎಂಬ ಮಾನ್ಯತೆ ಪಡೆದವರು. ಎಂದೇ ಮೋದಿಯವರ ಸರಕಾರದ ಈ ಕ್ರಮ ರಾಷ್ಟ್ರ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ನೊಬೆಲ್ ಪ್ರಶಸ್ತಿ ವಿಜೇತರೂ ಸೇರಿದಂತೆ ಅಂತರ್‌ರಾಷ್ಟ್ರೀಯ ಖ್ಯಾತಿಯ ಇನ್ನೂರ ಐವತ್ತಕ್ಕೂ ಹೆಚ್ಚು ಮಂದಿ ಸಾಹಿತಿಗಳು, ಪತ್ರಕರ್ತರು ಮತ್ತು ಕ್ರಿಯಾವಾದಿಗಳು(ಆಕ್ಟಿವಿಸ್ಟ್) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ತಸೀರ್ ಅವರ ಸಾಗರೋತ್ತರ ಭಾರತೀಯ ಪ್ರಜೆ ಸ್ಥಾನಮಾನವನ್ನು ರದ್ದಗೊಳಿಸಿರುವ ತೀರ್ಮಾನವನ್ನು ಪುನರ್ ಪರಿಶೀಲಿಸುವಂತೆ ಆಗ್ರಹಪಡಿಸಿದ್ದಾರೆ. ಒರಾನ್ ಪಾಮುಖ್, ಸಲ್ಮಾನ್ ರಶ್ದಿ, ಅಮಿತಾವ್ ಘೋಷ್, ಜೋನಾಥನ್ ಫಾನ್ ಜೆನ್ ಮೊದಲಾದ ಖ್ಯಾತ ನಾಮರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ತಸೀರ್ ಅವರನ್ನು, ಅವರು ಬರೆದ ಲೇಖನದ ವಿರುದ್ಧ ಸೇಡು ತೀರಿಸಿಕೊಳ್ಳುವ ಕ್ರಮವಾಗಿ ತೀವ್ರವಾದ ಪ್ರತೀಕಾರಕ್ಕೆ ಗುರಿಪಡಿಸಲಾಗಿದೆ ಹಾಗೂ ಲೇಖಕರಿಗೆ ದೇಶದೊಳಕ್ಕೆ ಪ್ರವೇಶ ನಿರಾಕರಿಸುವ ಈ ಕ್ರಮ ಭಾರತದ ಬಹುತ್ವ, ವೈವಿಧ್ಯತೆ ಮತ್ತು ಮುಕ್ತ ಚರ್ಚೆಯ ಪರಂಪರೆಗೆ ಘಾತುಕವಾಗಲಿದೆ ಎಂದು ಇವರೆಲ್ಲ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಸಾಹಿತಿಗಳ ಅಂತರ್‌ರಾಷ್ಟ್ರೀಯ ಸಂಘಟನೆಯಾದ ‘ಪೆನ್’, ಮೋದಿ ಸರಕಾರದ ಈ ಕ್ರಮವನ್ನು ಕಟುವಾಗಿ ಟೀಕಿಸಿದೆ.

ಮೋದಿ ಸರಕಾರದ ಈ ಕ್ರಮ ಭಾರತದ ಸಹಿಷ್ಣುತೆ ಬಗ್ಗೆ ದೇಶವಿದೇಶಗಳಿಗೆ ತಪ್ಪುಸಂದೇಶವನ್ನು ರವಾನಿಸಿದೆ. ಭಿನ್ನಮತೀಯರಿಗೆ ಭಾರತದಲ್ಲಿ ತೆರೆದ ಬಾಗಿಲ ಸ್ವಾಗತವಿಲ್ಲ ಎನ್ನುವ ತಪ್ಪುಸಂದೇಶದಿಂದಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ಕುಗ್ಗಿದೆ. ಅಲ್ಲದೆ ಮೋದಿ ಸರಕಾರದ ಇಬ್ಬಗೆಯ ನೀತಿಯನ್ನು ಜಗಜ್ಜಾಹೀರು ಗೊಳಿಸಿದೆ. ವಿದೇಶಗಳಲ್ಲಿ ಚದುರಿಹೋಗಿರುವ ಭಾರತೀಯರ ಪ್ರತಿಭೆ, ವಿದ್ವತ್ತು ಮತ್ತು ತಂತ್ರಜ್ಞಾನಗಳನ್ನು ದೇಶದ ಅಭಿವೃದ್ಧಿ ಸಾಧನವಾಗಿ ಬಳಸಿಕೊಳ್ಳಬೇಕೆಂಬುದು ಮೋದಿಯವರ ಇಚ್ಛೆ. ಅದಕ್ಕಾಗಿ ಅವರು ವಿದೇಶಗಳಿಗೆ ಹೋದಾಗಲೆಲ್ಲ ಅಲ್ಲಿರುವ ಭಾರತೀಯ ಪ್ರತಿಭೆಗಳನ್ನು ಸ್ವದೇಶದ ಅಭಿವೃದ್ಧಿಯತ್ತ ಸೆಳೆಯುವ ಪ್ರಯತ್ನ ಮಾಡುತ್ತಿರುತ್ತಾರೆ. ಇತ್ತೀಚೆಗೆ ಹೂಸ್ಟನ್‌ನಲ್ಲಿ ನಡೆಸಿದ ‘ಹೌಡಿ-ಮೋದಿ’ ಪ್ರಯೋಗ ಇದಕ್ಕೊಂದು ನಿದರ್ಶನ. ಆದರೆ ಒಂದು ಲೇಖನ ಬರೆದ ಕಾರಣಕ್ಕಾಗಿ ಆತಿಶ್ ತಸೀರ್ ಅವರ ಸಾಗರೋತ್ತರ ಭಾರತೀಯ ಪ್ರಜೆ ಸ್ಥಾನಮಾನವನ್ನು ರದ್ದುಪಡಿಸುವಂಥ ಕ್ರಮ ಮೋದಿಯವರ ಮೇಲಿನ ಆಶಯಕ್ಕೆ ತದ್ವಿರುದ್ಧವಾದುದು. ಇಂತಹ ಕ್ರಮಗಳು ಸರಕಾರದ ಆಶಯಗಳಿಗೆ ತಿರುಗುಬಾಣವಾಗಬಹುದು. ಅಂತರ್‌ರಾಷ್ಟ್ರೀಯ ವಲಯದಲ್ಲಿ ಈಗಾಗಲೇ ಭಾರತದ ಬಗ್ಗೆ ಪ್ರತಿಕೂಲಕರ ಅಭಿಪ್ರಾಯ ಮೂಡಿದೆ ಎಂಬುದಕ್ಕೆ ವಿದೇಶಗಳ ಹಲವು ಮೂಲಗಳಿಂದ ಬಂದಿರುವ ಪ್ರತಿಕ್ರಿಯೆಯೇ ಸಾಕ್ಷಿ.

 ಇಂತಹ ಕ್ರಮಗಳು, ನೀತಿಧೋರಣೆಗಳು ಭಾರತದ ಬಹುತ್ವ ಮತ್ತು ಭಿನ್ನಮತವನ್ನು ಗೌರವಿಸುವ ಪರಂಪರೆಗೆ ತೀವ್ರ ಧಕ್ಕೆಯುಂಟುಮಾಡಲಿದೆ ಎಂಬ ಮಾತುಗಳಲ್ಲಿ ತಥ್ಯವಿಲದೆ ಇಲ್ಲ. ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಹಿಷ್ಣುತೆ ನಮ್ಮ ಪರಮ ಮೌಲ್ಯ. ನಿಜ, ಭಾರತದಲ್ಲಿನ ಈಗಿನ ಸ್ಥಿತಿಗತಿಗಳ ಬಗ್ಗೆ ಪಾಶ್ಚಾತ್ಯ ಪತ್ರಿಕೆಗಳ ದೃಷ್ಟಿ-ನಿಲುವುಗಳು ಪಕ್ಷಪಾತದಿಂದ ಕೂಡಿರಬಹುದು.ಕೆಲವೊಮ್ಮೆ ಭಾರತ ವಿರೋಧಿಯೂ ಆಗಿರಬಹುದು. ಪ್ರಸಕ್ತ ಭಾರತದಲ್ಲಿ ಅರ್ಥವ್ಯವಸ್ಥೆಯೂ ಸೇರಿದಂತೆ ಎಲ್ಲವೂ ನೆಟ್ಟಗಿದ್ದಿದ್ದರೆ ದೇಶವಿದೇಶಗಳ ಪತ್ರಿಕೆಗಳ ವರದಿ-ವಿಶ್ಲೇಷಣೆಗಳೂ ಚೆನ್ನಾಗಿರುತ್ತಿದ್ದವು ಎನ್ನುವವರೂ ಇದ್ದಾರೆ. ಭಾರತದ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಅಂತರ್‌ರಾಷ್ಟ್ರೀಯ ವಲಯಗಳಲ್ಲಿ ಹೆಚ್ಚಿನ ಕಾಳಜಿ ವ್ಯಕ್ತವಾಗುತ್ತಿದೆ. ಭಾರತವು ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ನೀತಿಗಳಿಂದ ವಿಮುಖವಾಗಿರುತ್ತದೆಯೇ ಎನ್ನುವ ನೈಜ ಕಳಕಳಿಯ ಮಾತುಗಳೂ ಕೇಳಿ ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಇಡುವ ಒಂದೊಂದು ಹೆಜ್ಜೆಯೂ ನಮ್ಮ ಪರಂಪರೆಯನ್ನು ಮರೆಯದ ಎಚ್ಚರಿಕೆಯ ಹೆಜ್ಜೆಯಾಗಬೇಕಾಗುತ್ತದೆ.

ವಿಭಿನ್ನ ಅಭಿಪ್ರಾಯವನ್ನು ಗೌರವಿಸುವಂತಹ ಸಹಿಷ್ಣುತೆಯನ್ನು ತೋರದಿದ್ದಲ್ಲಿ ಅದರಿಂದ ಭಾರತದ ಜಾತ್ಯತೀತ ಪ್ರಜಾಸತ್ತೆಯ ವರ್ಚಸ್ಸಿಗೆ ತೀವ್ರ ಹಾನಿಯುಂಟಾಗಲಿದೆ. ಭಾರತ ಪ್ರಜಾಸತ್ತಾತ್ಮಕ ಜಾತ್ಯತೀತ ರಾಷ್ಟ್ರ. ಅಲ್ಲಿ ಭೇದಭಾವ ಇಲ್ಲ, ಎಲ್ಲ ರೀತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಉಂಟು ಎನ್ನುವ ಅಂತರ್‌ರಾಷ್ಟ್ರೀಯ ಭಾವನೆಗೆ ಭಂಗ ಉಂಟಾಗಲಿದೆ. ಕಾಶ್ಮೀರದಲ್ಲಿ ಪ್ರಜೆಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುವಂತಹ ದಮನಕಾರಿ ಕ್ರಮಗಳ ನಂತರದ ಇಂಥದೊಂದು ಕ್ರಮದಿಂದಾಗಿ ಆಗಿರುವ ಹಾನಿ ಮತ್ತಷ್ಟು ಕಳವಳಕಾರಿಯಾದುದು. ಇಲ್ಲಿ ಅಂತರ್‌ರಾಷ್ಟ್ರೀಯ ವಲಯದಲ್ಲಿ ಭಾರತದ ವರ್ಚಸ್ಸಿಗೆ ಆಗಿರುವ ಹಾನಿಯಷ್ಟೇ ಮುಖ್ಯವಾದುದು ನಮ್ಮ ಸಹಿಷ್ಣುತೆ ಮತ್ತು ಪ್ರಜಾಸತ್ತಾತ್ಮಕ ಸಂಪ್ರದಾಯ ಮತ್ತು ಪರಂಪರೆಗಳು. ದೇಶದೊಳಗೆ ಅಸಹಿಷ್ಣುತೆಯ, ಭಿನ್ನ ದನಿಗಳನ್ನು ಹತ್ತಿಕ್ಕುವ, ಶಿಕ್ಷಿಸುವ ವಾತಾವರಣ ದಟ್ಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಬೇಕಾದ ಸರಕಾರವೇ ಭಿನ್ನದನಿಯನ್ನು ಅಡಗಿಸುವಂಥ ಕ್ರಮಗಳಿಗೆ ಕೈಹಾಕಿರುವುದು ಆತ್ಮಘಾತುಕವಾದುದು. ಮೋದಿಯವರ ಸರಕಾರ ಅಂತರ್‌ರಾಷ್ಟ್ರೀಯ ಅಭಿಪ್ರಾಯಕ್ಕೆ ಓಗೊಟ್ಟು ಆತಿಶ್ ತಸೀರ್ ಅವರ ಸಾಗರೋತ್ತರ ಭಾರತೀಯ ಪ್ರಜೆಯ ಸ್ಥಾನಮಾನವನ್ನು ರದ್ದುಪಡಿಸಿರುವ ಆಜ್ಞೆಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ತನ್ಮೂಲಕ ಭಾರತ ಪ್ರಜಾಸತ್ತಾತ್ಮಕ ಆದರ್ಶಗಳಿಗೆ, ಜಾತ್ಯತೀತ ನೀತಿಗೆ ಬದ್ಧವಾಗಿದೆ ಎಂಬ ಸಂದೇಶವನ್ನು ಅಂತರ್‌ರಾಷ್ಟ್ರೀಯ ಸಮುದಾಯಕ್ಕೆ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಸಂಜಾತರಿಗೆ ರವಾನಿಸಬೇಕು. ಇಲ್ಲವಾದಲ್ಲಿ ಮೋದಿಯವರ ಸರಕಾರ ಭಿನ್ನಮತದ ದನಿಗಳನ್ನು ಸಹಿಸುವುದಿಲ್ಲ, ಅಂಥವರಿಗೆ ಭಾರತ ಮುಕ್ತದ್ವಾರವಲ್ಲ ಎನ್ನುವ ಕಳಂಕ ಖಾಯಮ್ಮಾಗಿ ಉಳಿದುಕೊಳ್ಳಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)