ಬಾದಾಮಿ ಎಣ್ಣೆಯ ಆರೋಗ್ಯಲಾಭಗಳು ನಿಮಗೆ ಗೊತ್ತಿರಲಿ
ಜನಪ್ರಿಯ ಡ್ರೈ ಫ್ರುಟ್‌ಗಳಲ್ಲಿ ಒಂದಾಗಿರುವ ಬಾದಾಮಿ ಹೇರಳ ಪೋಷಕಾಂಶಗಳನ್ನು ಒಳಗೊಂಡಿದೆ. ಆರೋಗ್ಯಕರವಾಗಿರಲು ಬಾದಾಮಿ ಸೇವನೆ ಅತ್ಯುಪಯುಕ್ತ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇತ್ತೀಚಿಗೆ ಬಾದಾಮಿಯ ಎಣ್ಣೆಯು ಬಾದಾಮಿಗಿಂತ ಹೆಚ್ಚು ಜನಪ್ರಿಯವಾಗುತ್ತಿದೆ. ಇಲ್ಲಿದೆ ಅದು ನೀಡುವ ಆರೋಗ್ಯಲಾಭಗಳ ಕುರಿತು ಮಾಹಿತಿ.......
► ಹೃದಯವನ್ನು ಆರೋಗ್ಯಯುತವಾಗಿರಿಸುತ್ತದೆ
ಬಾದಾಮಿ ಎಣ್ಣೆಯ ಶೇ.70ರಷ್ಟು ಭಾಗವು ಮೊನೊಸ್ಯಾಚ್ಯುರೇಟೆಡ್ ಫ್ಯಾಟ್ ಅಥವಾ ಅಪರ್ಯಾಪ್ತ ಕೊಬ್ಬನ್ನು ಒಳಗೊಂಡಿದೆ. ಇದು ಒಳ್ಳೆಯ ಕೊಬ್ಬು ಆಗಿದ್ದು,ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಅಧಿಕವಾಗಿದ್ದರೆ ಅದು ಹೃದ್ರೋಗಗಳಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ,ಆದರೆ ಹೆಚ್ಚಿನ ಮಟ್ಟದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೃದಯಕ್ಕೆ ರಕ್ಷಣೆಯನ್ನು ನೀಡುತ್ತದೆ.
► ತೂಕವನ್ನು ತಗ್ಗಿಸಲು ನೆರವಾಗುತ್ತದೆ
ಶರೀರದ ತೂಕವನ್ನು ತಗ್ಗಿಸಿಕೊಳ್ಳಲು ಬಯಸುವವರು ಕೊಬ್ಬಿನ ಸೇವನೆಯನ್ನು ಕಡಿಮೆಗೊಳಿಸಬೇಕು ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಇದಕ್ಕೆ ವಿರುದ್ಧವಾಗಿ ಅಪರ್ಯಾಪ್ತ ಅಥವಾ ಆರೋಗ್ಯಕರ ಕೊಬ್ಬಿನಿಂದ ಸಮೃದ್ಧ ಆಹಾರವು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ಅಪರ್ಯಾಪ್ತ ಕೊಬ್ಬು ಶರೀರದಲ್ಲಿಯ ಕೊಬ್ಬನ್ನು ಕಡಿಮೆ ಮಾಡಲು ನೆರವಾಗುವುದಷ್ಟೇ ಅಲ್ಲ,ತೂಕ ಇಳಿಕೆಯನ್ನೂ ಉತ್ತೇಜಿಸುತ್ತದೆ. ಜೊತೆಗೆ ಶರೀರದ ಒಟ್ಟಾರೆ ಚಯಪಚಯದಲ್ಲಿ ನೆರವಾಗುತ್ತದೆ ಮತ್ತು ಆರೋಗ್ಯಯುವಾಗಿರಿಸುತ್ತದೆ.
► ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ
ಅತ್ಯಂತ ಆರೋಗ್ಯಕರ ಬೀಜಗಳಲ್ಲೊಂದಾಗಿರುವ ಬಾದಾಮಿಯು ಟೈ ಪ್ 2 ಮಧುಮೇಹದ ಅಪಾಯವನ್ನು ತಗ್ಗಿಸುವ ಜೊತೆಗೆ ರಕ್ತದಲ್ಲಿಯ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಬಾದಾಮಿ ಎಣ್ಣೆಯಲ್ಲಿರುವ ಮೊನೊಅನ್‌ಸ್ಯಾಚ್ಯುರೇಟೆಡ್ ಮತ್ತು ಪೊಲಿಅನ್‌ಸ್ಯಾಚ್ಯುರೇಟೆಡ್ ಕೊಬ್ಬುಗಳು ರಕ್ತದಲ್ಲಿಯ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತವೆ ಎನ್ನುವುದನ್ನು ಅಧ್ಯಯನಗಳು ಸಾಬೀತುಗೊಳಿಸಿವೆ. ಬೆಳಿಗ್ಗೆ ಬಾದಾಮಿ ಎಣ್ಣೆಯನ್ನೊಳಗೊಂಡ ಬ್ರೇಕ್‌ಫಾಸ್ಟ್ ಸೇವಿಸುವವರಲ್ಲಿ ದಿನವಿಡೀ ರಕ್ತದಲ್ಲಿಯ ಸಕ್ಕರೆ ಮಟ್ಟ ಕಡಿಮೆಯಾಗಿರುತ್ತದೆ.
► ಚರ್ಮದ ಕಲೆಗಳು ಮತ್ತು ಹಾನಿಯನ್ನು ಕಡಿಮೆ ಮಾಡುತ್ತದೆ
ಅತ್ಯುತ್ತಮ ಉತ್ಕರ್ಷಣ ನಿರೋಧಕ ಮತ್ತು ತೇವಗೊಳಿಸುವ ಗುಣಗಳನ್ನು ಹೊಂದಿರುವ ಬಾದಾಮಿ ಎಣ್ಣೆಯನ್ನು ಹಲವಾರು ಸೌಂದರ್ಯ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಎಣ್ಣೆಯಲ್ಲಿರುವ ವಿಟಾಮಿನ್ ಇ ಮೊಡವೆಗಳನ್ನು ಕಡಿಮೆ ಮಾಡುವ ಜೊತೆಗೆ ಚರ್ಮದಲ್ಲಿನ ಕಲೆಗಳನ್ನು ನಿವಾರಿಸಿ ಚರ್ಮವನ್ನು ಮೃದು ಮತ್ತು ಸ್ವಚ್ಛವಾಗಿರಿಸುತ್ತದೆ. ಅಲ್ಲದೆ ಬಿಸಿಲಿನಿಂದ ಹಾನಿಯ ವಿರುದ್ಧ ಚರ್ಮಕ್ಕೆ ರಕ್ಷಣೆ ನೀಡುತ್ತದೆ ಮತ್ತು ಚರ್ಮಕ್ಕೆ ಅಕಾಲಿಕ ವಯಸ್ಸಾಗುವುದನ್ನು ತಡೆಯುತ್ತದೆ. ಒಣ ಮತ್ತು ಸಂವೇದನಾ ಶೀಲ ಚರ್ಮವನ್ನು ಹೊಂದಿರುವವರ ಪಾಲಿಗೆ ಎಣ್ಣೆಯಲ್ಲಿನ ತೇವಗೊಳಿಸುವ ಗುಣವು ಜಾದೂವನ್ನೇ ಮಾಡುತ್ತದೆ.
► ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ
ಕೂದಲಿನ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಬಾದಾಮಿ ಎಣ್ಣೆಯು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅದರಲ್ಲಿರುವ ವಿಟಾಮಿನ್ ಇ ಉತ್ಕರ್ಷಣ ನಿರೋಧಕದಂತೆ ಕಾರ್ಯಾಚರಿಸುವ ಮೂಲಕ ವಿಷವಸ್ತುಗಳನ್ನು ನಿವಾರಿಸುತ್ತದೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ. ಕೂದಲಿನ ತೇವಾಂಶವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ ಮತ್ತು ಒಣ ಕೂದಲನ್ನು ತಡೆಯುವ ಮೂಲಕ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ನೈಸರ್ಗಿಕ ಮಸಾಜ್ ಎಣ್ಣೆಯಂತೆ ಕಾರ್ಯ ನಿರ್ವಹಿಸುವ ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದು ಮಾತ್ರವಲ್ಲ,ಕೂದಲನ್ನು ಹೊಳೆಯುವಂತೆ ಮಾಡುವ ಜೊತೆಗೆ ಅದನ್ನು ಸಿಕ್ಕು ಮತ್ತು ಗಂಟುಗಳಿಂದ ಮುಕ್ತವಾಗಿರಿಸುತ್ತದೆ.