ಎಚ್ಚರಿಕೆ, ನಿಯಮಿತವಾಗಿ ಆ್ಯಂಟಿಬಯಾಟಿಕ್ಗಳನ್ನು ಸೇವಿಸುತ್ತಿದ್ದರೆ ಈ ರೋಗಕ್ಕೆ ತುತ್ತಾಗುವ ಅಪಾಯವಿದೆ
ಸಾಂದರ್ಭಿಕ ಚಿತ್ರ
ಅನಾರೋಗ್ಯವಿದ್ದಾಗ ನಾವು ಸೇವಿಸುವ ಆ್ಯಂಟಿಬಯಾಟಿಕ್ಗಳು ಚಿಕಿತ್ಸೆ ನೀಡುತ್ತವೆ,ಹೀಗಾಗಿ ನಿಜಕ್ಕೂ ಅವು ನಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತವೆ. ಆದರೆ ಯಾವುದೇ ಆದರೂ ಅತಿಯಾದರೆ ಕೆಟ್ಟದ್ದೇ,ಔಷಧಿಗಳೂ ಇದಕ್ಕೆ ಹೊರತಾಗಿಲ್ಲ. ಆ್ಯಂಟಿಬಯಾಟಿಕ್ಗಳು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ನಾವು ಅನಾರೋಗ್ಯದಿಂದ ಚೇತರಿಸಿಕೊಳ್ಳುವಂತೆ ಮಾಡುತ್ತವೆ,ಆದರೆ ನಿಯಮಿತ ಪ್ರಮಾಣದಲ್ಲಿ ತೆಗೆದುಕೊಂಡರೆ ಮಾತ್ರ. ಅತಿಯಾಗಿ ಆ್ಯಂಟಿಬಯಾಟಿಕ್ಗಳನ್ನು ಸೇವಿಸುವುದರಿಂದ ವ್ಯಕ್ತಿಯು ಭವಿಷ್ಯದಲ್ಲಿ ಪಾರ್ಕಿನ್ಸನ್ಸ್ ರೋಗಕ್ಕೆ ಗುರಿಯಾಗುವ ಅಪಾಯವು ಹೆಚ್ಚುತ್ತದೆ ಎನ್ನುವುದನ್ನು ಫಿನ್ಲಂಡ್ನ ಯುನಿವರ್ಸಿಟಿ ಆಫ್ ಹೆಲ್ಸಿಂಕಿಯ ಸಂಶೋಧಕರು ತಮ್ಮ ಇತ್ತೀಚಿನ ಅಧ್ಯಯನದಲ್ಲಿ ಬಹಿರಂಗಗೊಳಿಸಿದ್ದಾರೆ.
ಸಂಶೋಧಕರು ಸುಮಾರು 14,000 ಪಾರ್ಕಿನ್ಸನ್ಸ್ ರೋಗಿಗಳ ವೈದ್ಯಕೀಯ ವರದಿಗಳನ್ನು ಅಧ್ಯಯನಕ್ಕೊಳಪಡಿಸಿ ದ್ದರು. ಇವುಗಳಿಂದ ಲಭ್ಯ ಮಾಹಿತಿಗಳನ್ನು ಸುಮಾರು 40,000 ಆರೋಗ್ಯವಂತ ವ್ಯಕ್ತಿಗಳ ವೈದ್ಯಕೀಯ ವರದಿಗಳೊಂದಿಗೆ ಹೋಲಿಸಿದಾಗ ಕೆಲವು ಓರಲ್ ಆ್ಯಂಟಿಬಯಾಟಿಕ್ಗಳು ಕರುಳಿನಲ್ಲಿಯ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುವ ಮೂಲಕ ಪಾರ್ಕಿನ್ಸನ್ಸ್ ಡಿಸೀಸ್ನಂತಹ ನರಗಳಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ ಎನ್ನುವುದು ಬೆಳಕಿಗೆ ಬಂದಿತ್ತು.
ಕೆಲವು ಸಾಮಾನ್ಯ ಆ್ಯಂಟಿಬಯಾಟಿಕ್ಗಳು ಕರುಳಿನಲ್ಲಿಯ ಒಳ್ಳೆಯ ಬ್ಯಾಕ್ಟೀರಿಯಾಗಳ ಮೇಲೆ ವಿನಾಶಕರ ಪರಿಣಾಮವನ್ನುಂಟು ಮಾಡುತ್ತವೆ. ಇಂದಿನ ದಿನಗಳಲ್ಲಿ ಹೆಚ್ಚಿನ ರೋಗಗಳು ಕರುಳಿನ ಆರೋಗ್ಯದೊಂದಿಗೆ ನಂಟು ಹೊಂದಿವೆ. ನರಶಾಸ್ತ್ರೀಯ ರೋಗಗಳು ಮತ್ತು ಅತಿಯಾದ ಆ್ಯಂಟಿಬಯಾಟಿಕ್ಗಳು ಹೀಗೆ ಪರಸ್ಪರ ಸಂಬಂಧ ಹೊಂದಿರಬಹುದು ಎಂದು ಸಂಶೋಧಕರು ವರದಿಯಲ್ಲಿ ಹೇಳಿದ್ದಾರೆ.
ಸ್ನಾಯುಗಳ ಸೆಟೆತ,ಮಂದಗತಿ,ಕೈಕಾಲುಗಳಲ್ಲಿ ನಡುಕ ಇವು ವ್ಯಕ್ತಿಯು ಪಾರ್ಕಿನ್ಸನ್ಸ್ ರೋಗಕ್ಕೆ ಗುರಿಯಾಗುವ ಸಾಕಷ್ಟು ಮೊದಲೇ ಕಾಣಿಸಿಕೊಳ್ಳುವ ಲಕ್ಷಣಗಳಾಗಿವೆ. ಮಲಬದ್ಧತೆ ಮತ್ತು ಜೀರ್ಣಾಂಗ ಕ್ರಿಯೆಯಲ್ಲಿ ಅಸಮತೋಲನದಿಂದಾಗಿ ಉಂಟಾಗುವ ಕರುಳಿನ ಕಿರಿಕಿರಿ ಇವು ಪಾರ್ಕಿನ್ಸನ್ಸ್ ರೋಗದೊಂದಿಗೆ ಗುರುತಿಸಿಕೊಂಡಿರುವ ಇತರ ಉದರ ಸಂಬಂಧಿತ ಸಮಸ್ಯೆಗಳಾಗಿವೆ.
ಸಂಶೋಧನೆಯು ಆ್ಯಂಟಿಬಯಾಟಿಕ್ಗಳ ಅತಿಯಾದ ಸೇವನೆಯ ಬಗ್ಗೆ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿರುವುದು ಭವಿಷ್ಯದಲ್ಲಿ ರೋಗಿಗಳಿಗೆ ಅವುಗಳನ್ನು ಶಿಫಾರಸು ಮಾಡುವ ವೈದ್ಯರ ಪರಿಪಾಠದ ಮೇಲೆ ಪರಿಣಾಮವನ್ನುಂಟು ಮಾಡಬಹುದು. ಅತಿಯಾದ ಆ್ಯಂಟಿಬಯಾಟಿಕ್ ಸೇವನೆಯಿಂದ ಶರೀರದಲ್ಲಿ ಆ್ಯಂಟಿಬಯಾಟಿಕ್ ಪ್ರತಿರೋಧವುಂಟಾಗುವ ಜೊತೆಗೆ ಕರುಳಿನಲ್ಲಿಯ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುವ ಮತ್ತು ಕೆಲವು ಕಾಯಿಲೆಗಳನ್ನುಂಟು ಮಾಡುವ ಅವುಗಳ ಸಾಮರ್ಥ್ಯವನ್ನು ವೈದ್ಯರು ಗಮನದಲ್ಲಿಟ್ಟು ಕೊಳ್ಳಬೇಕಾಗುತ್ತದೆ.
ಹೀಗಾಗಿ ಸಣ್ಣಪುಟ್ಟ ಅನಾರೋಗ್ಯಗಳಿಗೆ ಆ್ಯಂಟಿಬಯಾಟಿಕ್ಗಳನ್ನು ಸೇವಿಸಬಾರದು. ಶರೀರವು ಸ್ವಯಂ ಆಗಿ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಅವಕಾಶ ನೀಡಬೇಕು,ಇಲ್ಲದಿದ್ದರೆ ಈ ಔಷಧಿಗಳು ರೋಗಿಯನ್ನು ಇತರ ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ ಸಿಲುಕಿಸುತ್ತವೆ ಎಂದು ವರದಿಯು ಶಿಫಾರಸು ಮಾಡಿದೆ.
ಆ್ಯಂಟಿಬಯಾಟಿಕ್ಗಳ ಬಳಕೆಯನ್ನು ನಿಯಂತ್ರಿಸಬೇಕು. ಅಗತ್ಯವಿದ್ದರೆ ಮಾತ್ರ ಶಿಫಾರಸು ಮಾಡಿರುವ ನಿಗದಿತ ಪ್ರಮಾಣದಲ್ಲಿ ಅವುಗಳನ್ನು ಸೇವಿಸಬೇಕು ಎನ್ನುತ್ತಾರೆ ವೈದ್ಯರು.