ಬ್ಯಾರಿ ಅಕಾಡಮಿ ಸ್ಥಾಪನೆ ಬಳಿಕ ಬಹುತೇಕ ಸಂಸ್ಥೆಗಳು ಮೌನಕ್ಕೆ ಶರಣಾಗಿವೆ: ಪ್ರೊ.ಬಿ.ಎಂ.ಇಚ್ಲಂಗೋಡು
ಭವಿಷ್ಯದಲ್ಲಿ ಬ್ಯಾರಿ ಭಾಷೆ, ಸಾಹಿತ್ಯದ ಉಳಿವಿನ ಬಗ್ಗೆ?
ನಮ್ಮ ಮುಂದಿನ ಪೀಳಿಗೆಗೆ ಬ್ಯಾರಿ ಭಾಷೆ, ಸಾಹಿತ್ಯದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಎಲ್ಲರೂ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ಬ್ಯಾರಿ ಸಮುದಾಯದ ಶ್ರೀಮಂತರಿಗಂತೂ ಬ್ಯಾರಿ ಭಾಷೆಯ ಮೇಲೆ ಅಭಿಮಾನವೇ ಇಲ್ಲ ಎಂದರೆ ತಪ್ಪಾಗಲಾರದು. ತುಳು-ಕೊಂಕಣಿ ಉದ್ಯಮಿಗಳಿಗೆ ಇರುವಷ್ಟು ಅಭಿಮಾನ ಬ್ಯಾರಿ ಶ್ರೀಮಂತರು-ಉದ್ಯಮಿಗಳಿಗೆ ಇದ್ದಿದ್ದರೆ ಖಂಡಿತಾ ಈ ಭಾಷೆಯನ್ನು ಉಳಿಸಿಬೆಳೆಸಬಹುದು.
ಹಿರಿಯ ಸಂಶೋಧಕ, ಶಿಕ್ಷಣ ತಜ್ಞ, ಬಳಕೆದಾರರ ಹಿತರಕ್ಷಕ, ಸಾಹಿತಿ, ಪತ್ರಕರ್ತ, ನಿವೃತ್ತ ಉಪನ್ಯಾಸಕ ಪ್ರೊ.ಬಿ.ಎಂ.ಇಚ್ಲಂಗೋಡು ಇದೀಗ ಇಳಿವಯಸ್ಸಿನಲ್ಲೂ ಸಂಶೋಧನೆ, ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ವಯಸ್ಸು 83 ದಾಟಿದರೂ ಕಾರ್ಯಚಟುವಟಿಕೆಯಿಂದ ದೂರ ಸರಿದಿಲ್ಲ. ಸಾಹಿತ್ಯ ರಚನೆ, ಸಂಶೋಧನೆಯಲ್ಲಿ ಈಗಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಬಳಕೆದಾರರ ಹಿತರಕ್ಷಣೆಗಾಗಿ ಸಲಹೆ- ಮಾರ್ಗದರ್ಶನ, ಕಾನೂನು ಹೋರಾಟ ಮಾಡುತ್ತಿದ್ದಾರೆ. ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದಂತೆ ಪ್ರಮುಖ ಸಂಶೋಧಕರಲ್ಲಿ ಓರ್ವರಾದ ಪ್ರೊ.ಇಚ್ಲಂಗೋಡು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯರೂ ಆಗಿದ್ದರು. ಬ್ಯಾರಿ ಅಕಾಡಮಿಯ ಗೌರವ ಪ್ರಶಸ್ತಿಗೂ ಪಾತ್ರರಾಗಿದ್ದ ಪ್ರೊ.ಇಚ್ಲಂಗೋಡು ಅವರ ಜೊತೆ ‘ವಾರ್ತಾಭಾರತಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
►ಈ ಇಳಿ ವಯಸ್ಸಿನಲ್ಲೂ ಸಾಹಿತ್ಯ ರಚನೆ, ಸಂಶೋಧನಾ ಕ್ಷೇತ್ರ, ಬಳಕೆದಾರರ ಹಿತರಕ್ಷಣೆಗಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದರ ಗುಟ್ಟೇನು?
- ಸಾಹಿತ್ಯ, ಸಂಶೋಧನೆ ನನ್ನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಬಾಲ್ಯದಲ್ಲೇ ನನಗೆ ಬರೆಯುವ ಮತ್ತು ಓದುವ ಹವ್ಯಾಸವಿತ್ತು. ಪದವಿಯಲ್ಲಿರುವಾಗಲೇ ನಾನು ಊರಿನಲ್ಲಿ ಸುಮಾರು 400 ಸದಸ್ಯರನ್ನು ಒಳಗೊಂಡ ಗ್ರಾಮ ಸೇವಾ ಸಂಘವನ್ನು ಕಟ್ಟಿದ್ದೆ. ಆ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೆ. ಉಪನ್ಯಾಸಕ ವೃತ್ತಿಯ ಪತ್ರಿಕೆ, ಸಮಾಜ ಸೇವೆ, ಸಂಶೋಧನೆಯು ನನ್ನ ಉಸಿರಾಗಿತ್ತು. ನಿವೃತ್ತಿಯ ಬಳಿಕ ನನ್ನ ವೈದ್ಯರು ಒಂದು ಸಲಹೆ ನೀಡಿದರು. ಅಂದರೆ ಪ್ರಾಯ 80 ದಾಟಿದ ಬಳಿಕ ನೀವು ‘ವಯಸ್ಸಾಯಿತು’ ಅಂತ ಸುಮ್ಮನಿರಬೇಡಿ. ಹಿಂದಿನಂತೆ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾಗಿರಿ. ಯಾವ ಕಾರಣಕ್ಕೂ ಕಾಲಹರಣ ಮಾಡಬೇಡಿ ಎಂದರು. ಅದರಂತೆ ಈಗಲೂ ನಾನು ಚಾಚೂ ತಪ್ಪದೆ ಅವೆಲ್ಲವನ್ನೂ ಪಾಲಿಸಿಕೊಂಡು ಬಂದಿದ್ದೇನೆ.
►ಬ್ಯಾರಿ ಸಂಶೋಧನಾ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದವರಲ್ಲಿ ನೀವು ಪ್ರಮುಖರು. ಸಂಶೋಧನೆಯ ಆರಂಭದ ದಿನಕ್ಕೂ ಈಗಿನ ವಿದ್ಯಮಾನಕ್ಕೂ ಯಾವ ವ್ಯತ್ಯಾಸ ಕಾಣುವಿರಿ?
- ಶಾಲೆ-ಕಾಲೇಜಿನಲ್ಲಿರುವಾಗಲೇ ನನಗೆ ‘ಬ್ಯಾರಿ’ಯ ಬಗ್ಗೆ ಜಿಜ್ಞಾಸೆ ಉಂಟಾಗಿತ್ತು. ಈ ಮಧ್ಯೆ ನನ್ನ ಶಿಕ್ಷಕರು ನನ್ನನ್ನು ‘ಬ್ಯಾರಿ’ ಎಂದು ಹಿಯಾಳಿಸುತ್ತಿದ್ದರು. ಇದನ್ನು ನಾನು ಗಂಭೀರವಾಗಿ ಪರಿಗಣಿಸಿದೆ. ನನಗೆ ಆರಂಭದಲ್ಲೇ ಸಂಶೋಧನೆ ಕ್ಷೇತ್ರದಲ್ಲಿ ಆಸಕ್ತಿ ಇತ್ತು. ಬೇರೆ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ಅವಕಾಶವಿದ್ದರೂ ಕೂಡಾ ಸದಾ ಹೊಸ ಹುಡುಕಾಟವನ್ನು ಬಯಸುವ ನಾನು ನನ್ನ ಶಿಕ್ಷಕರ ಅವಹೇಳನಕ್ಕೆ ತಕ್ಕ ಉತ್ತರ ನೀಡಬೇಕು ಎಂದು ನಿರ್ಧರಿಸಿ ಬ್ಯಾರಿ ಕ್ಷೇತ್ರವನ್ನೇ ಸಂಶೋಧನೆಗೆ ಆಯ್ಕೆ ಮಾಡಿಕೊಂಡೆ. ಹಾಗಂತ ನಾನೇ ಈ ಕ್ಷೇತ್ರದ ಮೊದಲಿಗ ಎನ್ನಲಾರೆ. ನನಗಿಂತ ಮುಂಚೆಯೇ ಹಿರಿಯ ಸಾಹಿತಿ ಅಹ್ಮದ್ ನೂರಿ ‘ಮೈಕಾಲ’ ಎಂಬ ಕೃತಿಯಲ್ಲಿ ‘ಬ್ಯಾರಿ’ಯ ಬಗ್ಗೆ ಬೆಳಕು ಚೆಲ್ಲಿದ್ದರು. ಆರಂಭದ ದಿನಗಳಲ್ಲಿ ನಾನು ಸಾಕಷ್ಟು ವಿರೋಧ ಎದುರಿಸಬೇಕಾಗಿ ಬಂತು. ಆವಾಗ ನನಗೆ ಮಾನಸಿಕ ಸ್ಥೈರ್ಯ ನೀಡಿದವರು ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ನವರು. ಅವರ ಸಹಕಾರದಿಂದ ನಾನು ಈ ಕ್ಷೇತ್ರದಲ್ಲಿ ಮತ್ತಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತಾಯಿತು. ಈಗ ಸಾಹಿತ್ಯ ಅಕಾಡಮಿ, ಸಂಘ ಸಂಸ್ಥೆಗಳ ಸಹಿತ ಎಲ್ಲಾ ಅವಕಾಶಗಳಿದ್ದರೂ ಕೂಡ ಯಾರೂ ಈ ಕ್ಷೇತ್ರದತ್ತ ಆಸಕ್ತಿ ವಹಿಸಲು ಮುಂದೆ ಬರುತ್ತಿಲ್ಲ.
►ಬ್ಯಾರಿ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸಂಶೋಧಕರನ್ನು ಕಾಣಬಹುದು. ಆದರೆ ಹೊಸ ಸಂಶೋಧಕರು ಯಾಕೆ ಕಂಡುಬರುತ್ತಿಲ್ಲ್ಲ?
- ನನ್ನೊಂದಿಗೆ ಡಾ.ಸುಶೀಲಾ ಉಪಾ ಧ್ಯಾಯ, ಡಾ.ವಹಾಬ್ ದೊಡ್ಡಮನೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ ಬಳಿಕ ಯಾವೊಬ್ಬ ಹೊಸ ಸಂಶೋಧಕ ಬ್ಯಾರಿಯಲ್ಲಿ ಕಂಡು ಬಂದಿಲ್ಲ. ಯಾಕೆಂದರೆ ಅವರಿಗೆ ಆಸಕ್ತಿಯೇ ಇಲ್ಲ. ನಾನೇ ಅನೇಕ ಕಾಲೇಜಿನ ಹತ್ತಾರು ಉಪನ್ಯಾಸಕರು, ಶಿಕ್ಷಕರಿಗೆ ಈ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ಸಲಹೆ, ಮಾರ್ಗದರ್ಶನ ನೀಡಿದ್ದೆ. ಆದರೆ ಯಾರೂ ಮುಂದೆ ಬಂದಿಲ್ಲ, ಬರುತ್ತಿಲ್ಲ. ಕೆಲವು ಮಂದಿ ಬಂದಿದ್ದರೂ ಅವರೆಲ್ಲರೂ ಬ್ಯಾರಿಯೇತರರಾಗಿದ್ದರು.
►ಬ್ಯಾರಿ ಭಾಷೆಯನ್ನು ಉಳಿಸಲು ಏನು ಮಾಡಬಹುದು?
- ಹಿಂದೆ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯ ಅಭಿವೃದ್ಧಿಗಾಗಿ ಅನೇಕ ಸಂಘ ಸಂಸ್ಥೆಗಳು ಸಕ್ರಿಯವಾಗಿ ಕೆಲಸ ಮಾಡುತ್ತಿತ್ತು. ಎಲ್ಲರೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸ್ಥಾಪನೆಗಾಗಿ ಹೋರಾಟ ಮಾಡಿದ್ದರು. ಅಕಾಡಮಿ ಸ್ಥಾಪನೆಗೊಂಡ ಬಳಿಕ ಬಹುತೇಕ ಸಂಸ್ಥೆಗಳು ವೌನಕ್ಕೆ ಶರಣಾಗಿವೆ. ಅಕಾಡಮಿಯು ಬ್ಯಾರಿ ನಿಘಂಟು, ಬ್ಯಾರಿ ವ್ಯಾಕರಣವನ್ನು ಹೊರ ತಂದಿದೆ. ಅನೇಕ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿವೆ. ಆದರೆ ಅವೆಲ್ಲವೂ ಗೋದಾಮಿನಲ್ಲಿ ಶೇಖರಣೆಯಾಗಿವೆ. ಅವುಗಳನ್ನು ಓದುಗರ ಕೈ ಸೇರುವಂತೆ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅಕಾಡಮಿಯು ಕಲೆಗೆ ಮಾತ್ರ ಪ್ರೋತ್ಸಾಹ ನೀಡುತ್ತಿದೆ. ಕಲೆಯು ಶಾಶ್ವತವಲ್ಲ. ಅದು ತಾತ್ಕಾಲಿಕವಾಗಿದೆ. ಅದನ್ನು ಅಕಾಡಮಿಯ ಮುಖ್ಯಸ್ಥರು ತಿಳಿದುಕೊಂಡು ಕಾರ್ಯಪ್ರವೃತ್ತರಾಗಬೇಕು.
►ಯುವ ಪೀಳಿಗೆಗೆ ನಿಮ್ಮ ಸಲಹೆ- ಸಂದೇಶವೇನು?
-ಯುವ ಪೀಳಿಗೆಯು ಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮುನ್ನ ಆ ಬಗ್ಗೆ ಆಸಕ್ತಿ ವಹಿಸಬೇಕು. ಆಸಕ್ತಿ ಇಲ್ಲದೆ ಕೇವಲ ಯಾರದೋ ಒತ್ತಡದ ಮೇಲೆ ಕೆಲಸ ಮಾಡಲು ಮುಂದಾದರೆ ಅದರಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಅದನ್ನು ಅರ್ಥ ಮಾಡಿಕೊಂಡು ಮುನ್ನುಗ್ಗಬೇಕು.
►ಬಳಕೆದಾರರ ಹಿತರಕ್ಷಣೆಗಾಗಿ ತಾವು ಈಗಲೂ ಸಕ್ರಿಯರಾಗಿರುವಿರಿ. ಈ ಬಗ್ಗೆ ಏನು ಹೇಳುವಿರಿ?
- ನನಗೆ ಬಾಲ್ಯದಲ್ಲೇ ಅನ್ಯಾಯ, ಅಕ್ರಮದ ವಿರುದ್ಧ ಪ್ರಶ್ನಿಸುವ ಮನೋಭಾವವಿತ್ತು. ಹಾಗಾ ಗಿಯೇ ನಾನು ಬಳಕೆದಾರರ ಹಿರತಕ್ಷಣೆಗಾಗಿ ತೊಡಗಿಸಿಕೊಂಡೆ. ಪತ್ರಿಕೆಯೊಂದನ್ನೂ ಹೊರತರುತ್ತಿದ್ದೇನೆ. ಈಗಲೂ ಗ್ರಾಹಕರಿಗೆ ಸಲಹೆ-ಸೂಚನೆ ನೀಡುತ್ತಿದ್ದೇನೆ. ಅದಕ್ಕಾಗಿ ನನ್ನ ಕಚೇರಿಯನ್ನೇ ತೆರೆದಿಟ್ಟಿದ್ದೇನೆ. ದಿನಂಪ್ರತಿ ನಾಲ್ಕೈದು ಗ್ರಾಹಕರು ಅನ್ಯಾಯದ ವಿರುದ್ಧ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಕಾನೂನು ಹೋರಾಟಕ್ಕೂ ನಾನು ಅವರಿಗೆ ನೆರವು ನೀಡುತ್ತಿದ್ದೇನೆ.
►ನೀವು ಶಿಕ್ಷಣ, ಸಂಶೋಧನೆ, ಅಧ್ಯಯನ, ಸಮಾಜಸೇವೆ, ಸಾಹಿತ್ಯ ರಚನೆ, ಪತ್ರಿಕೆ ಸ್ಥಾಪನೆ...ಹೀಗೆ ಏಕಕಾಲಕ್ಕೆ ತೊಡಗಿಸಿಕೊಳ್ಳಲು ಹೇಗೆ ಸಾಧ್ಯವಾಯಿತು?
- ಮೊದಲೇ ತಿಳಿಸಿದಂತೆ ಯಾವುದೇ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಮುಖ್ಯ. ನನಗೆ ಈ ಎಲ್ಲಾ ರಂಗದಲ್ಲೂ ಅತೀವ ಆಸಕ್ತಿ ಇತ್ತು. ಹಾಗಾಗಿ ಏಕಕಾಲಕ್ಕೆ ಇವೆಲ್ಲಾ ರಂಗದಲ್ಲಿ ತೊಡಗಿಸಿಕೊಳ್ಳಲು ನನಗೆ ಸಾಧ್ಯವಾಯಿತು. ಅಂದಹಾಗೆ ನಾನು ಯಾವತ್ತೂ ಕೂಡಾ ಪ್ರತಿಫಲ ನಿರೀಕ್ಷಿಸಿ ಕೆಲಸ ಮಾಡಿಲ್ಲ. ಬ್ಯಾರಿ ಕ್ಷೇತ್ರಕ್ಕೆ ಸಂಬಂಧಿಸಿ ನಾನು ಅಧ್ಯಯನದಲ್ಲಿ ತೊಡಗಿಸಿಕೊಂಡಾಗಲೂ ನಾನು ಏನನ್ನೂ ನಿರೀಕ್ಷಿಸಿರಲಿಲ್ಲ. ನನ್ನನ್ನು ಟೀಕಿಸಿದವರೇ ಬಳಿಕ ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉದಾಹರಣೆಯೂ ಉಂಟು. ಅದೇ ನನಗೆ ದಕ್ಕಿದ ಅತೀ ದೊಡ್ಡ ಗೌರವ ಎಂದು ನಾನು ಭಾವಿಸುವೆ.