ಮನಪಾದಲ್ಲಿ ಕಾಂಗ್ರೆಸ್ ಪ್ರಬಲ ವಿಪಕ್ಷವಾಗಿ ಕಾರ್ಯ: ಶಶಿಧರ ಹೆಗ್ಡೆ
ಮಂಗಳೂರು ಮಹಾನಗರ ಪಾಲಿಕೆಯ ಈ ಹಿಂದಿನ ಆರು ಅವಧಿಯಲ್ಲಿ ಐದು ಅವಧಿಗಳಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ ಈ ಬಾರಿ ಮತ್ತೆ ವಿಪಕ್ಷವಾಗಿ ಕಾರ್ಯ ನಿರ್ವಹಿಸಲಿದೆ. ಮನಪಾದ 7ನೇ ಅವಧಿಗೆ ನ. 12ರಂದು ನಡೆದ ಚುನಾವಣೆಯ ಫಲಿತಾಂಶ ನ. 14ರಂದು ಪ್ರಕಟಗೊಂಡಿದ್ದು, 60 ವಾರ್ಡ್‌ಗಳಲ್ಲಿ 44 ಸ್ಥಾನಗಳಲ್ಲಿ ಬಿಜೆಪಿ, ಕಾಂಗ್ರೆಸ್ 14 ಹಾಗೂ ಎಸ್‌ಡಿಪಿಐ 2 ಸ್ಥಾನಗಳನ್ನು ಗಳಿಸಿತ್ತು. ಮತ್ತೆ ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮನಪಾ ಸದಸ್ಯ, ಮಾಜಿ ಮೇಯರ್, ಮುಖ್ಯ ಸಚೇತರಾಗಿ ಹಾಗೂ ವಿಪಕ್ಷ ನಾಯಕರಾಗಿಯೂ ಕಾರ್ಯ ನಿರ್ವಹಿಸಿರುವ ಶಶಿಧರ ಹೆಗ್ಡೆ ಅವರೊಂದಿಗೆ ವಾರ್ತಾಭಾರತಿ ನಡೆಸಿದ ಕಿರು ಸಂದರ್ಶನ ಇದಾಗಿದೆ.
ಮತ್ತೆ ವಿಪಕ್ಷವಾಗಿ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದ್ದೀರಿ?
ಶಶಿಧರ ಹೆಗ್ಡೆ: ಈವರೆಗಿನ ಏಳು ಅವಧಿಯಲ್ಲಿ ಈ ಹಿಂದೆ ಒಂದು ಬಾರಿ 2007ರಿಂದ 2012ರವರೆಗೆ ವಿಪಕ್ಷವಾಗಿ ಪಕ್ಷದ ಸದಸ್ಯರು ಕಾರ್ಯ ನಿರ್ವಹಿಸಿದ್ದೇವೆ. ನಗರದಲ್ಲಿ ಆಡಳಿತ ಪಕ್ಷಕ್ಕೆ ಅಭಿವೃದ್ಧಿ ಪೂರಕವಾದ ಮಾರ್ಗದರ್ಶನದೊಂದಿಗೆ ಪ್ರಬಲ ವಿಪಕ್ಷವಾಗಿ ಕಾರ್ಯ ನಿರ್ವಹಿಸಲು ನಾವು ಸಿದ್ಧರಿದ್ದೇವೆ.
ಮನಪಾದ ಈ ಹಿಂದಿನ ಎಲ್ಲ ಆಡಳಿತಕ್ಕೆ ಹೋಲಿಸಿದರೆ ವಿಪಕ್ಷವಾಗಿಯೂ ಸಂಖ್ಯಾಬಲ ಕಡಿಮೆಯಿದೆಯಲ್ಲಾ?
ಶಶಿಧರ ಹೆಗ್ಡೆ: ನಮ್ಮ ಸಂಖ್ಯೆ ಕಡಿಮೆ ಇದ್ದರೂ ನಮ್ಮಲ್ಲಿ ಬಹುತೇಕರು ಅನುಭವಿ ಸದಸ್ಯರು. ನಗರದ ಬಗ್ಗೆ ಮಾಹಿತಿ ಹಾಗೂ ಅನುಭವ ಹೊಂದಿರುವವರು. ಹಾಗಾಗಿ, ನಾವು ಪ್ರಬಲ ವಿಪಕ್ಷವಾಗಿ ನಗರದ ಅಭಿವೃದ್ಧಿಗೆ ಆಡಳಿತ ಪಕ್ಷಕ್ಕೆ ಸಲಹೆ, ಸೂಚನೆಯೊಂದಿಗೆ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಕೆಲಸವನ್ನು ಮಾಡಲಿದ್ದೇವೆ.
ಮನಪಾ ಹಲವು ತಿಂಗಳುಗಳಿಂದ ಆಡಳಿತಾಧಿಕಾರಿ ಕೈಯ್ಯಲ್ಲಿದೆ. ಇದರಿಂದ ಅಭಿವೃದ್ಧಿಗೆ ತೊಂದರೆ ಆಗುತ್ತಿದೆಯೇ?
ಶಶಿಧರ ಹೆಗ್ಡೆ: ಖಂಡಿತವಾಗಿಯೂ ಯಾವುದೇ ಆಡಳಿತ ವ್ಯವಸ್ಥೆಯಲ್ಲಿ ಆಡಳಿತಾಧಿಕಾರಿ ಆಡಳಿತ ಜಾಸ್ತಿ ಆದಾಗ ಜನರ ಸಮಸ್ಯೆ, ತೊಂದರೆಗಳನ್ನು ನಿವಾರಿಸುವಲ್ಲಿ ತೊಂದರೆ ಆಗುವುದು ಸಹಜ. ಜತೆಗೆ ಅಭಿವೃದ್ಧಿ ಕುಂಠಿತ ಆಗುತ್ತದೆ. ಈಗಾಗಲೇ ಅದನ್ನು ನಾವು ಕಾಣುತ್ತಿದ್ದೇವೆ. ಹಾಗಾಗಿ, ಈಗಾಗಲೇ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಆದಷ್ಟು ಶೀಘ್ರವಾಗಿ ಆಡಳಿತ ವಹಿಸಿಕೊಂಡು ಜನ ಸಾಮಾನ್ಯರ ಸಮಸ್ಯೆಗಳ ಜತೆಗೆ ನಗರದ ಅಭಿವೃದ್ಧಿಗೆ ಪೂರಕವಾದ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಿದೆ.
ವಿಪಕ್ಷ ನಾಯಕರ ಆಯ್ಕೆ ಆಗಿದೆಯೇ?
ಶಶಿಧರ ಹೆಗ್ಡೆ: ಇನ್ನೂ ಆಗಿಲ್ಲ. ಪಕ್ಷದಲ್ಲಿ ಹಿರಿಯ ಹಾಗೂ ಅನುಭವಿ ಸದಸ್ಯರಾದ ಲ್ಯಾನ್ಸಿಲಾಟ್ ಪಿಂಟೊ, ಭಾಸ್ಕರ್, ಅಬ್ದುಲ್ ರವೂಫ್, ಪ್ರವೀಣ್ ಚಂದ್ರ ಆಳ್ವ ಮತ್ತಿತರರು ಇದ್ದಾರೆ. ಕೌನ್ಸಿಲ್ ಆರಂಭಕ್ಕೆ ಮುಂಚಿತವಾಗಿ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಹಿರಿಯರ ಸಲಹೆ, ಮಾರ್ಗದರ್ಶನದ ಮೇರೆಗೆ ವಿಪಕ್ಷ ನಾಯಕರ ಆಯ್ಕೆ ನಡೆಯಲಿದೆ.