ಮೇರಮಜಲು ಗ್ರಾಪಂ ಸದಸ್ಯ, ಪತ್ನಿ ಮೇಲೆ ತಲವಾರು ದಾಳಿ ಪ್ರಕರಣ : ಮೂವರು ಸೆರೆ
ಯೋಗೀಶ್ ಪ್ರಭು ಅವರ ಮನೆ
ಬಂಟ್ವಾಳ : ಮೇರಮಜಲು ಗ್ರಾಪಂನ ಕಾಂಗ್ರೆಸ್ ಬೆಂಬಲಿತ ಸದಸ್ಯ ಹಾಗೂ ಅವರ ಪತ್ನಿಯ ಮೇಲೆ ಶುಕ್ರವಾರ ಮುಂಜಾನೆ ತಂಡವೊಂದು ಮನೆಗೆ ನುಗ್ಗಿ ತಲವಾರಿನಿಂದ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೇರಮಜಲು ಪಕಳಪಾದೆ ನಿವಾಸಿಗಳಾದ ಪ್ರಸಾದ್ ಬೆಳ್ಚಾಡ, ಶ್ರೀಪತಿ ಆಚಾರ್ಯ ಹಾಗೂ ಕಾರ್ತಿಕ್ ಆಚಾರ್ಯ ಎಂಬವರನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆದಿದ್ದು, ಮುಂದಿನ ಕ್ರಮ ಕೈಗೊಂಡಿರುದ್ದಾರೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ನೇತೃತ್ವದ ಎಸ್ಸೈ ಪ್ರಸನ್ನ ಅವರ ತಂಡ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಘಟನೆಯ ವಿವರ:
ಶುಕ್ರವಾರ ಬೆಳಗ್ಗೆ 4 ಗಂಟೆಯ ಸುಮಾರಿಗೆ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳ ತಂಡ ಮೇರಮಜಲು ಗ್ರಾಪಂನ ಕಾಂಗ್ರೆಸ್ ಬೆಂಬಲಿತ ಸದಸ್ಯ, ಮಾಜಿ ಅಧ್ಯಕ್ಷ, ಬಡ್ಡೂರು ನಿವಾಸಿ ಯೋಗೀಶ್ ಪ್ರಭು ಹಾಗೂ ಅವರ ಪತ್ನಿ ಶೋಭಾ ಅವರ ಮೇಲೆ ತಲವಾರು ದಾಳಿ ನಡೆಸಿ ಪರಾರಿಯಾಗಿತ್ತು. ಗಾಯಗೊಂಡ ಇವರಿಬ್ಬರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಪಿ ಭೇಟಿ
ಘಟನಾ ಸ್ಥಳಕ್ಕೆ ದ.ಕ. ಎಸ್ಪಿ ಲಕ್ಮೀಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಪೂರ್ಣ ಮಾಹಿತಿ ಪಡೆದುಕೊಂಡ ಅವರು ಶೀಘ್ರವಾಗಿ ಆರೋಪಿಗಳ ಪತ್ತೆಗೆ ಕ್ರಮಕೈಕೊಳ್ಳಲಾಗಿದೆ ಎಂದು ತಿಳಿಸಿದ್ದರು. ಈ ಸಂದರ್ಭ ಅಡಿಷನಲ್ ಎಸ್ಪಿ ವಿಕ್ರಮ್ ಅಮ್ಟೆ ಹಾಜರಿದ್ದರು.