ನ.30-ಡಿ.1: ಮಂಗಳೂರಿನಲ್ಲಿ ಶ್ವಾನ ಪ್ರದರ್ಶನ
ಮಂಗಳೂರು, ನ.29: ಕರಾವಳಿ ಕೆನೈನ್ ಕ್ಲಬ್ ಮಂಗಳೂರು ವತಿಯಿಂದ ನ.30 ಹಾಗೂ ಡಿ.1ರಂದು ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆ ನಗರದ ನೆಹರೂ ಮೈದಾನದಲ್ಲಿ ನಡೆಯಲಿದೆ ಎಂದು ಕ್ಲಬ್‌ನ ಕಾರ್ಯದರ್ಶಿ ವಿಶ್ವನಾಥ್ ಕಾಮತ್ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಮತ್ತು ರಾಷ್ಟ್ರದ ನಾನಾ ಜಿಲ್ಲೆಗಳಿಂದ 30ಕ್ಕೂ ಅಧಿಕ ಪ್ರಭೇದಗಳ ಶ್ವಾನಗಳು 200ಕ್ಕೂ ಅಧಿಕ ಸಂಖ್ಯೆಯಲ್ಲಿ ಪರಸ್ಪರ ಸ್ಪರ್ಧಿಸಲಿದೆ. ಈ ಕ್ಲಬ್ ಕಳೆದ 8 ವರ್ಷಗಳಿಂದ ಮಂಗಳೂರು ಹಾಗೂ ಉಡುಪಿಯಲ್ಲಿ ಸ್ಪರ್ಧೆ ನಡೆಸುತ್ತಾ ಬಂದಿದೆ. ಸತತ 2ನೇ ಬಾರಿಗೆ ಜರ್ಮನ್ ಶೆಪರ್ಟ್ ತಳಿಯ ಸ್ಪರ್ಧೆ ಏರ್ಪಡಿಸಲಾಗಿದೆ. 80ಕ್ಕೂ ಅಧಿಕ ಶ್ವಾನಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದೆ ಎಂದರು.
ರಾಟ್‌ವೈಲರ್ ಮತ್ತು ಗೋಲ್ಡನ್ ರಿಟ್ರೀವರ್ ಈ ಎರಡೂ ತಳಿಯ ವಿಶಿಷ್ಟ ಸ್ಪರ್ಧೆಯು ಆಯೋಜಿಸಲಾಗಿದ್ದು, ಈ ಮೂರು ಸ್ಪರ್ಧೆ ಗಳು ನ.30ರಂದು ನಡೆಯಲಿದೆ. ಅತಿಥಿಗಳಾಗಿ ಮನಪಾ ಸದಸ್ಯ ದಿವಾಕರ್ ಪಾಂಡೇಶ್ವರ್ ಹಾಗೂ ಮಂಗಳೂರು ದಕ್ಷಿಣ ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಪ್ರವೀಣ್ ಕೊಡಿಯಾಲ್‌ಬೈಲ್ ಭಾಗವಹಿಸಲಿದ್ದಾರೆ. ಆಸ್ಟ್ರೇಲಿಯಾದ ತೀರ್ಪುಗಾರ ವಿಲಯಂ ಬಿಲ್ ಸ್ಮಿತ್ ಹಾಗೂ ಥಾಯ್‌ಲ್ಯಾಂಡ್‌ನ ಚಕ್ಕಪ್ಪನ್ ಚಂತರಾಸ್ಮಿ ಆಗಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ದಿಲೀಪ್ ಕುಮಾರ್ ಹಾಗೂ ನಿಶ್ವಿತ್ ರಾವ್ ಉಪಸ್ಥಿತರಿದ್ದರು.