ಹೃದಯಾಘಾತವಾದಾಗ ಪ್ರಥಮ ಚಿಕಿತ್ಸೆಯ ಬಗ್ಗೆ ನಿಮಗೆ ಗೊತ್ತಿರಲಿ
ಹೃದ್ರೋಗ ಈ ವಿಶ್ವದಲ್ಲಿ ಸಂಭವಿಸುವ ಸಾವುಗಳಿಗೆ ಪ್ರಮುಖ ಕಾರಣವಾಗಿದೆ. ಹೃದಯಾಘಾತವಂತೂ ಮುಹೂರ್ತವಿಟ್ಟುಕೊಂಡು ಸಂಭವಿಸುವುದಿಲ್ಲ. ಅದು ಯಾವಾಗ ಬೇಕಾದರೂ,ಯಾರಿಗೆ ಬೇಕಾದರೂ ಉಂಟಾಗಬಹುದು. ಹೃದಯಾಘಾತವುಂಟಾದಾಗ ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗೆ ಪ್ರಥಮ ಚಿಕಿತ್ಸೆ ದೊರೆಯುವುದಿಲ್ಲ ಮತ್ತು ಇದು ಸಾವುಗಳು ಹೆಚ್ಚಲು ಕಾರಣವಾಗಿದೆ. ಹೃದಯಾಘಾತಕ್ಕೆ ಚಿಕಿತ್ಸೆ ವಿಳಂಬವಾದರೆ ಅದು ರೋಗಿಯ ಪ್ರಾಣಕ್ಕೇ ಕುತ್ತು ತರಬಹುದು. ಹೆಚ್ಚಿನ ಜನರಿಗೆ ಹೃದಯಾಘಾತದ ಲಕ್ಷಣಗಳೇ ಗೊತ್ತಿಲ್ಲ,ಇದರಿಂದಾಗಿ ಬಹಳಷ್ಟು ಜನರು ಆಸ್ಪತ್ರೆಗೆ ಸಾಗಿಸುವ ಮೊದಲೇ ಕೊನೆಯುಸಿರೆಳೆಯುತ್ತಾರೆ. ಹೃದಯಾಘಾಕ್ಕೀಡಾದ ವ್ಯಕ್ತಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕಿದರೆ ಬದುಕುಳಿಯುವ ಅವಕಾಶ ಹೆಚ್ಚುತ್ತದೆ.
ತಲೆ ಹಗುರವಾಗುವಿಕೆ, ತಲೆ ಸುತ್ತುವಿಕೆ, ಬವಳಿ ಬರುವುದು, ಬೆವರುವಿಕೆ, ವಾಕರಿಕೆ, ಉಸಿರಾಟದ ತೊಂದರೆ, ಭುಜಗಳು, ತೋಳುಗಳು, ಕುತ್ತಿಗೆ, ಬೆನ್ನು, ದವಡೆ ಮತ್ತು ಮೇಲು ಹೊಟ್ಟ್ಟೆಯಲ್ಲಿ ನೋವು ಇವು ಹೃದಯಾಘಾತದ ಲಕ್ಷಣಗಳಾಗಿವೆ.
ಹೃದಯಾಘಾತವು ಸಾಮಾನ್ಯವಾಗಿ 15 ನಿಮಿಷಗಳಿಗೂ ಹೆಚ್ಚು ಕಾಲ ಎದೆನೋವನ್ನುಂಟು ಮಾಡುತ್ತದೆ. ಆದರೆ ಕೆಲವೊಮ್ಮೆ ಯಾವುದೇ ಲಕ್ಷಣಗಳು ಪ್ರಕಟಗೊಳ್ಳದೆ ದಿಢೀರ್ ಆಗಿ ಹೃದಯಾಘಾತವು ಸಂಭವಿಸುತ್ತದೆ. ವ್ಯಕ್ತಿಗೆ ಹೃದಯಾಘಾತವುಂಟಾದಾಗ ಏನು ಮಾಡಬೇಕು ಎನ್ನುವ ಬಗ್ಗೆ ಮಾಹಿತಿಯಿಲ್ಲಿದೆ..........
ಹೃದಯಘಾತಕ್ಕೆ ಗುರಿಯಾದ ವ್ಯಕ್ತಿ ಎಚ್ಚರವಾಗಿದ್ದರೆ ಮತ್ತು ಪ್ರತಿಕ್ರಿಯಿಸುತ್ತಿದ್ದರೆ ಹೀಗೆ ಮಾಡಿ. 324 ಎಂಜಿ ಮಕ್ಕಳ ಆ್ಯಸ್ಪಿರಿನ್ ಅಥವಾ 325 ಎಂಜಿ ವಯಸ್ಕರ ಆ್ಯಸ್ಪಿರಿನ್ ನೀಡಿ. ಕುಡಿಯಲು ನೀರು ಅಥವಾ ಆಹಾರವನ್ನು ರೋಗಿಗೆ ನೀಡಬೇಡಿ. ರೋಗಿಯು ಆರಾಮದ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ. ಸಾಧ್ಯವಾದರೆ ರೋಗಿಯ ಬಳಿ ಇರುವ ಮಾತ್ರೆಗಳ ಮಾಹಿತಿಯನ್ನು ಪಡೆದುಕೊಳ್ಳಿ. ರೋಗಿಯು ಎದೆನೋವಿನ ಬಗ್ಗೆ ದೂರಿಕೊಳ್ಳುತ್ತಿದ್ದರೆ ಮತ್ತು ವೈದ್ಯರು ನೈಟ್ರೋಗ್ಲಿಸರಿನ್ ಶಿಫಾರಸು ಮಾಡಿದ್ದಿದ್ದರೆ ಅದನ್ನು ಸೇವಿಸಲು ನೀಡಿ. ರೋಗಿಯು ಪ್ರಜ್ಞಾಹೀನನಾಗಿದ್ದು ಮತ್ತು ಸಹಜವಾಗಿ ಉಸಿರಾಡುತ್ತಿದ್ದರೆ ಆತನನ್ನು ಕೆಳಕ್ಕೆ ಕುಳಿರಿಸಿ ತಲೆಯು ಎತ್ತಿದ ಸ್ಥಿತಿಯಲ್ಲಿ ಆರಾಮದಾಯಕವಾಗಿರುವಂತೆ ನೋಡಿಕೊಳ್ಳಿ. ಇದು ಜೊಲ್ಲು ಬಾಯಿಯಿಂದ ಹರಿದು ಹೋಗುವಂತೆ ಮಾಡುವ ಮೂಲಕ ಉಸಿರಾಟಕ್ಕೆ ತೊಂದರೆಯನ್ನು ನಿವಾರಿಸುತ್ತದೆ.
ವ್ಯಕ್ತಿಯು ಪ್ರಜ್ಞಾಹೀನನಾಗಿದ್ದು ಉಸಿರಾಟ ನಿಂತಿದ್ದರೆ ಸಿಪಿಆರ್( ಕಾರ್ಡಿಯೊಪಲ್ಮನರಿ ರೆಸುಸಿಯೇಷನ್) ನೆರವಾಗುತ್ತದೆ. ಇದು ಆಸ್ಪತ್ರೆಗೆ ಸಾಗಿಸುವ ಮೊದಲು ವ್ಯಕ್ತಿಯ ಸ್ಥಿತಿಯನ್ನು ಸುಧಾರಿಸುವಂತೆ ಮಾಡುತ್ತದೆ. ರೋಗಿಯನ್ನು ಆಸ್ಪತ್ರೆಗೆ ಸಾಗಿಸುವ ಮುನ್ನ ಸಿಪಿಆರ್ ಮಾಡುವುದರಿಂದ ರೋಗಿಯು ಬದುಕುಳಿಯುವ ಸಾಧ್ಯತೆ ಶೇ.12 ರಷ್ಟಿರುತ್ತದೆ.
ಸಿಪಿಆರ್ ಮಾಡುವುದು ಹೇಗೆ?
ವ್ಯಕ್ತಿಯ ಎದೆಯ ಮೇಲೆ,ತೊಟ್ಟಿನ ಸಮೀಪ ನಿಮ್ಮ ಒಂದು ಕೈಗಳನ್ನು ಒಂದರ ಮೇಲೊಂದಿಟ್ಟು ಗಟ್ಟಿಯಾಗಿ ಮತ್ತು ವೇಗವಾಗಿ ಒತ್ತಿ. ನಿಮಿಷಕ್ಕೆ ಕನಿಷ್ಠ 100ರಿಂದ 200 ಸಲ ಒತ್ತಲು ಪ್ರಯತ್ನಿಸಿ. ಸಿಪಿಆರ್ ಮಾಡುವಾಗ ಗಾಬರಿಗೊಳ್ಳಬೇಡಿ.
ಡಿಫೈಬ್ರಿಲೇಷನ್ ಹೃದಯಾಘಾತವುಂಟಾದವರಿಗೆ ನೀಡುವ ಇನ್ನೊಂದು ಪ್ರಥಮ ಚಿಕಿತ್ಸೆಯಾಗಿದೆ. ಡಿಫೈಬ್ರಿಲೇಟರ್ ಪೋರ್ಟೇಬಲ್ ಎಲೆಕ್ಟ್ರಾನಿಕ್ ಸಾಧನವಾಗಿದ್ದು ಹೃದಯ ಬಡಿತವನ್ನು ಪುನರಾಂರಭಿಸಲು ಅದಕ್ಕೆ ವಿದ್ಯುತ್ ಆಘಾತವನ್ನು ನೀಡುತ್ತದೆ. ಈ ಯಂತ್ರಗಳು ತುಂಬ ಉಪಕಾರಿಯಾಗಿದ್ದು,ರೋಗಿಯ ಪ್ರಾಣವನ್ನು ಉಳಿಸಬಲ್ಲವು.