varthabharthi


ನೇಸರ ನೋಡು

ಚೆನ್ನಣ್ಣ ಇನ್ನಿಲ್ಲ, ಎನ್ನಲುಂಟೆ?

ವಾರ್ತಾ ಭಾರತಿ : 1 Dec, 2019
ಜಿ.ಎನ್. ರಂಗನಾಥ್ ರಾವ್

ಬಂಡಾಯ ಸಾಹಿತ್ಯದಂತೆ ಚೆನ್ನಣ್ಣ ವಾಲೀಕಾರರ ಬದುಕು ಹೋರಾಟದ ಬದುಕು. ಛಲದಿಂದ ಸಾಧಿಸದೇ ಬಿಡದ ಹೋರಾಟ. ಆದರೆ, ಎರಡು ಮೂರು ವರ್ಷಗಳಿಂದ ದೇಹಕ್ಕಂಟಿದ ವ್ಯಾಧಿಯ ವಿರುದ್ಧ ನಡೆಸಿದ ಹೋರಾಟದಲ್ಲಿ ಅವರ ಛಲ ಸೋತಿದೆ. ಚೆನ್ನಣ್ಣ ವಾಲೀಕಾರ ಇನ್ನಿಲ್ಲ ಎನ್ನಲುಂಟೆ? ಕನ್ನಡ ಸಾಹಿತ್ಯ ಚರಿತ್ರೆಯ ಬಂಡಾಯ ಸಂಪುಟದಲ್ಲಿ ಚೆನ್ನಣ್ಣನ ದನಿ ಕೇಳಿಸುತ್ತಲೇ ಇರುತ್ತದೆ.


ಅಂದು (ಸೋಮವಾರ ನ.25) ಮಾಗಿಯ ಸೂರ್ಯನಿಗೆ ಇನ್ನೂ ಬೆಳಕಾಗಿರಲಿಲ್ಲ. ಮಂಜು ಮುಸುಕಿದ ಮಬ್ಬಿನ ಮುಂಜಾನೆ. ಮಬ್ಬಿನಲ್ಲೇ ಅದೇತಾನೆ ಬಂದಿದ್ದ ಪತ್ರಿಕೆಯನ್ನ ಕೈಗೆತ್ತಿಕೊಂಡೆ. ಶೀರ್ಷಿಕೆಗಳ ಮೇಲೆ ಕಣ್ಣಾಡಿಸುತ್ತಾ ಪುಟಗಳನ್ನು ತಿರುವಿಹಾಕಿದಂತೆ ‘ಬಂಡಾಯ ಸಾಹಿತಿ ಚೆನ್ನಣ್ಣ ವಾಲೀಕಾರ ಇನ್ನಿಲ್ಲ’ ಶೀರ್ಷಿಕೆ ಕಣ್ಣಿಗೆ ಬಿದ್ದು ಕಾವಳ ಕವಿಯಿತು. ಸ್ನೇಹಮಯಿಯಾಗಿದ್ದ, ಎಲ್ಲರನ್ನೂ ತನ್ನ ಅಂತ:ಕರಣದೊಳಗೆ ಬಿಟ್ಟುಕೊಳ್ಳುತಿದ್ದ ಕವಿ, ಕಾದಂಬರಿಕಾರ, ನಾಟಕಕಾರ, ಎಲ್ಲಕ್ಕೂ ಮಿಗಿಲಾದ ಮಾನವತಾವಾದಿ, ಅಪ್ಪಟ ಮನುಷ್ಯ ಚೆನ್ನಣ್ಣ ವಾಲೀಕಾರ ‘ಇನ್ನಿಲ್ಲ’ ಎಂಬುದನ್ನು ಒಪ್ಪಿಕೊಳ್ಳಲು ಮನಸು ಆ ಕ್ಷಣ ಸಿದ್ಧವಿರಲಿಲ್ಲ.ಅಪರೂಪದ ಗೆಳೆತನದ ಚೆನ್ನಣ್ಣ ‘ಇನ್ನಿಲ್ಲ’ ಎಂಬ ಕಟುವಾಸ್ತವ ಕ್ರಮೇಣ ಖಾತ್ರಿಯಾದಂತೆ, ಬಾಳ ಬಟ್ಟೆಯಲ್ಲಿ ಚೆನ್ನಣ್ಣ ನಡೆದ ದಾರಿ ನನ್ನ ಮನದೊಳಗೆ ತೆರೆದುಕೊಳ್ಳಲಾರಂಭಿಸಿತು.
ಬಂಡಾಯಗಾರ, ಬಂಡಾಯ ಸಾಹಿತಿ ಎಂದೇ ಪ್ರಖ್ಯಾತರಾಗಿದ್ದ ಚೆನ್ನಣ್ಣ ವಾಲೀಕಾರರ ಬಂಡಾಯದ ಹಿಂದೆ ಅದಕ್ಕೆ ಪ್ರೇರಕವಾದ ಶೋಷಣೆ, ಕ್ರೌರ್ಯ, ಹಿಂಸೆಗಳು ತುಂಬಿದ್ದ ಅಮಾನುಷ ಜಗತ್ತೊಂದಿತ್ತು. ಬಾಲ್ಯದಲ್ಲೇ ಚೆನ್ನಣ್ಣನ ಪ್ರಜ್ಞೆಯಲ್ಲಿ ಬಂಡಾಯದ ಬೀಜ ಬಿತ್ತಿದ ರಾಕ್ಷಸ ಜಗತ್ತು. ಶೋಷಣೆ, ಅನ್ಯಾಯಗಳು ದಟ್ಟವಾಗಿ ಪಸರಿಸಿದ್ದ ಅಕ್ಷರವಂಚಿತ ವಾತಾವರಣದಲ್ಲಿ ಚೆನ್ನಣ್ಣನ ಜನನ. ಈಗಿನ ಕಲ್ಯಾಣ ಕರ್ನಾಟಕದ ಚಿತ್ತಾಪುರ ತಾಲೂಕಿನ ಶಂಕರವಾಡ ಗ್ರಾಮದಲ್ಲಿ, 1943ರ ಎಪ್ರಿಲ್ 6ರಂದು, ಸಾಬಮ್ಮ, ದೂಳಪ್ಪ ದಂಪತಿಗಳ ಅಕ್ಕರೆಯ ಮಗನಾಗಿ. ಬಡತನದ ಕರಿನೆರಳಿನಡಿಯಲ್ಲೇ ಶಾಬಾದಿನ ಸರಕಾರಿ ಶಾಲೆಯಲ್ಲಿ ಪ್ರೌಢಶಾಲೆಯವರಗಿನ ಓದು. ಮುಂದಿನ ಓದಿಗಾಗಿ ಕಲಬುರಗಿಗೆ ಗುಳೆ ಹೋದರು. ಶರಣ ಬಸವೇಶ್ವರ ಕಲಾ ಕಾಲೇಜಿನಲ್ಲಿ ಪದವೀಧರರಾಗಿ ಸ್ನಾತಕೋತ್ತರ ಶಿಕ್ಷಣಕ್ಕಾಗಿ ಧಾರವಾಡದ ದಾರಿ ಹಿಡಿದರು. 1971ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂಎ ಪಾಸುಮಾಡಿ ಪ್ರೌಢ ಶಾಲೆಯಲ್ಲಿ ಕನ್ನಡ ಮಾಸ್ತರರಾದರು. ಮುಧೋಳ, ಕಡಗಂಚಿ, ರಾಯಚೂರುಗಳಲ್ಲಿ ಮಾಸ್ತರಿಕೆ ನಡೆಸುತ್ತಲೇ ಅಧ್ಯಯನದಲ್ಲಿ ತೊಡಗಿಕೊಂಡು 1983ರರಲ್ಲಿ ಪಿಎಚ್‌ಡಿ, ಪೂರೈಸಿದರು. ಹೆಸರಿಗೆ ಡಾಕ್ಟರೇಟ್ ಪೂರ್ವಪ್ರತ್ಯ ಸೇರಿಕೊಂಡಿತು.1987-98ರವರೆಗೆ ಕಲಬುರಗಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ, ಪ್ರವಾಚಕರಾಗಿ ಅಧ್ಯಾಪನದಲ್ಲೂ ಸಾಹಿತ್ಯ ರಚನೆಯಲ್ಲೂ ತೊಡಗಿಕೊಂಡು ಶೋಷಣೆ ಮುಕ್ತ ಜಗತ್ತಿನ ಕನಸುಗಳನ್ನು ಬಿತ್ತಿ, ಕನಸುಗಳ-ಕಣಸುಗಳ ಕೃಷಿಮಾಡಿದರು.

ಚೆನ್ನಣ್ಣ ವಾಲೀಕಾರರದು ಕವಿ ಹೃದಯ, ಭಾವುಕ ಮನಸ್ಸು. ಅವರ ಮಾತು ಎಂಥ ವಿಕ್ಷಿಪ್ತರನ್ನೂ ಸೂಜಿಗಲ್ಲಿನಂತೆ ಸೆಳೆಯುವ ಮಮತೆಯ ಮಾತು. ಲೋಕದ ಒಡನಾಟದಲ್ಲಿ ಹತ್ತಿರವಾಗುವ ಎಲ್ಲರಲ್ಲೂ ಅಕ್ಕ-ತಂಗಿ, ಅಣ್ಣ-ತಮ್ಮಂದಿರನ್ನು ಕಾಣುವ ವಾಂಛೆ. ಪಾತ್ರರಿಗೆ ಸಹಾಯದ ಸಿಂಚನ. ಸಂವೇದನಾಶಿಲ ಮನಸ್ಸೊಂದು ಮನುಷ್ಯ ಸಂಬಂಧಗಳಿಗೆ ಸ್ಪಂದಿಸುತ್ತಿದ್ದ ಪರಿ ಇದು. ಈ ಅಂತ:ಕರಣದ ಜೊತೆಜೊತೆಯಲ್ಲೇ ಬೆಳೆದದ್ದು ಅವರ ಪ್ರಖರ ಧೀಶಕ್ತಿ. ಈ ಧೀಶಕ್ತಿಯ ಮುಖ್ಯ ಕಾಳಜಿ, ಶೋಷಣೆ ಮುಕ್ತ ಸ್ವತಂತ್ರ ಸಮಾಜ. ಇದನ್ನು ಸಾಧಿಸಲು ಹಿಡಿದ ಮಾರ್ಗ ಬಂಡಾಯ.ಚೆನ್ನಣ್ಣ ಕಾರ್ಲ್ ಮಾರ್ಕ್ಸ್‌ನ ಕ್ರಾಂತಿಯ ಓದಿನ ಜೊತೆಗೆ, ಗಾಂಧಿಯ ಅಹಿಂಸಾ ಪಥವನ್ನೂ ಬುದ್ಧನ ಶಾಂತಿ ಪಥವನ್ನೂ ಅರಿತವರಾಗಿದ್ದರು ಎಂದೇ ಅವರು ಕಂಡುಕೊಂಡ ಮಾರ್ಗ, ಅಕ್ಷರ ಬಂಡಾಯ. ಶೋಷಿತರ ಬದುಕಿನ ದನಿಯಾಗುವ ಆಸ್ಥೆಯೇ ಅವರ ಅಕ್ಷರ ಬಂಡಾಯದ ಮೂಲ ಧಾತುವಾಗಿತ್ತು. ಚೆನ್ನಣ್ಣನವರ ಸಾಹಿತ್ಯ ಸಾಧನೆಯೆಲ್ಲ ಇದೇ. ಅವರ ಅಭಿವ್ಯಕ್ತಿ ಮಾರ್ಗ ಇದೇ ಆಯಿತು. ಸ್ವಂತ ರಚನೆಗಳಲ್ಲಷ್ಟೆ ಇದರಿಂದ ತೃಪ್ತರಾಗಲಿಲ್ಲ. ಅಕ್ಷರ ಬಂಡಾಯವನ್ನು ಒಂದು ಸಾಹಿತ್ಯಿಕ ಚಳವಳಿಯಾಗಿ ಬೆಳೆಸಬೇಕೆಂಬ ಒಳಗಿನ ಹಂಬಲ ಬಹಿರಂಗ ಪ್ರಕಟವಾಗಲು ಅಚಾನಕ್ಕಾಗಿ ವ್ಯವಸ್ಥೆಯೇ ಅವಕಾಶ ಒದಗಿಸಿತು. 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ, ಸಾಹಿತ್ಯ ಪರಿಷತ್ತಿನ ಆಗಿನ ಅಧ್ಯಕ್ಷರು ಸಾಹಿತ್ಯದಲ್ಲಿ ದಲಿತ, ಬಲಿತ, ಕಲಿತ ಎಂದೆಲ್ಲ ಇರುವುದಿಲ್ಲ. ಸಾಹಿತ್ಯವೆಂದರೆ ಶುದ್ಧ ಸಾಹಿತ್ಯಎಂದು ಪ್ರತ್ಯೇಕ ದಲಿತ ಸಾಹಿತ್ಯ ಗೋಷ್ಠಿ ಏರ್ಪಡಿಸಬೇಕೆಂಬ ಮನವಿಯನ್ನು ತಿರಸ್ಕರಿಸಿದಾಗ ಬಂಡಾಯ ಸಾಹಿತ್ಯ ಸಂಘಟನೆಗೆ ಚೆನ್ನಣ್ಣ ಟೊಂಕಕಟ್ಟಿ ನಿಂತರು.ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಯ್ಯ, ಚಂಪಾ, ಕೀರಂ, ಡಿ.ಆರ್. ಮೊದಲಾದವರೊಡನೆ ಸೇರಿಕೊಂಡು ಪ್ರಥಮ ಬಂಡಾಯ ಸಾಹಿತ್ಯ ಸಮ್ಮೇಳನ ಸಂಘಟಿಸಿದರು. ಇಲ್ಲಿಂದಲೇ ಬಂಡಾಯ ಸಾಹಿತ್ಯ ಚಳವಳಿಗೆ ಬಿಜಾಂಕುರವಾಯಿತು. ಮುಂದೆ ಬದುಕಿನುದ್ದಕ್ಕೂ ಬಂಡಾಯ ಸಾಹಿತ್ಯ ಚಳವಳಿಯನ್ನು ಬೆಳೆಸುವುದರಲ್ಲಿ ತೊಡಗಿಕೊಂಡರು.

ನತದೃಷ್ಟ ಸೋದರಿಯರ ನೋವಿನ ಬದುಕನ್ನು ಪ್ರತ್ಯಕ್ಷ ಕಂಡುಕೇಳಲು ಮಹಾರಾಷ್ಟ್ರ ‘ಕೆಂಪು’ ಓಣಿಗಳ ಸುತ್ತಿಬಂದರು. ಜೋಗಿತಿಯರ ಕಂಡರು.ಕಲಬುರಗಿಯ ಚುಂಚೂರು ಮಹಾಪೂರ ಬೆತ್ತಲೆ ಸೇವ ನಿಷೇಧ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿ ಬೆತ್ತಲೆ ಸೇವೆ ನಿಷೇಧ ಹೋರಾಟದಲ್ಲಿ ಪಾಲ್ಗೊಂಡರು. ಹೀಗೆ ಶೋಷಣೆ ವಿರೋಧಿ ಕ್ರಿಯಾವಾದಿಗಳಾಗಿ ಹೋರಾಟದಲ್ಲಿ ಪಾಲ್ಗೊಳ್ಳತ್ತಾ, ಸಂವೇದನಾಶೀಲ ಕವಿಯಾಗಿ ಆ ಅನುಭವಗಳನ್ನು ಬರವಣಿಗೆಯಲ್ಲಿ ಸಾಕ್ಷಾತ್ಕಾರಗೊಳಿಸುತ್ತಾ ಬಂಡಾಯದ ಎಲ್ಲೆಗಳನ್ನು ಭೌತಿಕವಾಗಿ ಹಾಗೂ ಬೌದ್ಧಿಕವಾಗಿ ವಿಸ್ತರಿಸಿದರು. ಕೆಂಪು ಷರ್ಟಿನ, ಸರಿಸುಮಾರಿ ಆರು ಅಡಿ ಸಮೀಪದ ಭೀಮರೂಪಿ ಚೆನ್ನಣ್ಣ ವಾಲೀಕಾರ ಬರವಣಿಗೆಯಲ್ಲೂ ಗಟ್ಟಿಗರೇ. ಅವರ ಚೊಚ್ಚಲ ಕವನ ಸಂಕಲನ ‘ಕರೀತಲಿ ಮಾನವನ ಜೀ ಪದಗಳು’, ಶುರುವಿಗೇ ಸತ್ತ್ವಶಾಲಿ ಕವಿಯೊಬ್ಬನ ಆಗಮನವನ್ನು ಸಾರುವಂತೆ ಕಾವ್ಯರಸಿಕರ ಗಮನ ಸೆಳೆದಿತ್ತು. ಮುಂದಿನದೆಲ್ಲ ವರ್ಧಿಷ್ಣು ಕವಿಯ ಅವಿಶ್ರಾಂತ ಪಯಣ. ಹನ್ನೊಂದು ಕವನ ಸಂಕಲನಗಳು, ಐದು ಕಥಾ ಸಂಕಲನಗಳು, ಐದು ಕಾದಂಬರಿಗಳು, ಹನ್ನೆರಡು ನಾಟಕಗಳು, ಹನ್ನೊಂದು ಡಪ್ಪಿನಾಟಗಳು ಮೇಲೆ ಜಾನಪದ ಸಂಗ್ರಹ, ಪ್ರವಾಸ ಸಾಹಿತ್ಯ ಇತ್ಯಾದಿ. ಚೆನ್ನಣ್ಣ ವಾಲೀಕಾರರ ಸಾಹಿತ್ಯ ಗಾತ್ರದಲ್ಲಿ, ಗುಣದಲ್ಲಿ ವಿಮರ್ಶಕರಿಗೆ ಸವಾಲಾಗುವಂಥಾದ್ದೇ.
ವಾಲೀಕಾರರ ಈ ಸೃಜನಶೀಲ ಸಂಪದ ಅವರ ಷಷ್ಟಬ್ದಿದಿಯ ಸಂದರ್ಭದಲ್ಲಿ ಸಮಗ್ರ ಸಾಹಿತ್ಯ ಸಂಪುಟಗಳಾಗಿ ಪ್ರಕಟಗೊಂಡಿವೆ.

ಚೆನ್ನಣ್ಣ ವಾಲೀಕಾರರ ಸೃಜನಶೀಲ ಪ್ರತಿಭೆಯಲ್ಲಿ ಪ್ರಯೋಗಶೀಲತೆಯ ಒಂದು ಏಳೆಯೂ ಉಂಟು.‘ವ್ಯೋಮಾವ್ಯೋಮ’(2009) -ಸುನೀತಂಗಳ ಸಂಕಾವ್ಯಾಮೃತ (2015) ಮತ್ತು ಬೌದ್ಧ ತತ್ತ್ವದ ಮಹಾಬ್ರಹ್ಮಂಡಾಮೃತ ಕಾವ್ಯ(2016) ಮಹಾಕಾವ್ಯ ನೆಲೆಯ ಪ್ರಯೋಗಶೀಲ ಕೃತಿಗಳು. ಸಮಗ್ರ ಕಾದಂಬರಿ ಸಂಪುಟದಲಿ ಚೆನ್ನಣ್ಣ ವಾಲೀಕಾರರ ಐದು ಕಾದಂಬರಿಗಳಿವೆ. ಈ ಐದು ಕಾದಂಬರಿಗಳೂ,ಹೆಣ್ಣೂ ಒಬ್ಬಳು ದಲಿತಳು ಎಂಬ ಬಂಡಾಯ ಸಾಹಿತ್ಯದ ತಾತ್ವಿಕ ಚಿಂತನೆಯ ಪ್ರಾತನಿಧಿಕ ಕೃತಿಗಳಂತಿವೆ. ‘ಹುಲಿಗೆಮ್ಮ’,‘ಒಂದು ಹೆಣ್ಣಿನ ಒಳ ಜಗತ್ತು’ವಿನ ರತ್ನಾ,‘ಕೋಟೆ ಬಾಗಿಲ’ ಮರೆವ್ವ, ರಮಾ, ಮೀರಾ,‘ಗ್ರಾಮ ಭಾರತ’ದ ಬಸಮ್ಮ ಇವರೆಲ್ಲ ಇಂಥ ಪ್ರಾತನಿಧಿಕ ಪಾತ್ರಗಳೇ. ಈ ಐದೂ ಕಾದಂಬರಿಗಳಲ್ಲಿ ನಾವು ಹೈದರಾಬಾದ್ ಕರ್ನಾಟಕ ಪ್ರದೇಶದ ಗ್ರಾಮೀಣ ಸಮಾಜದ ಚಿತ್ರವನ್ನು ಕಾಣತ್ತೇವೆ.ಊಳಿಗಮಾನ್ಯ ಪದ್ಧತಿಯ ಹಿಡಿತದಲ್ಲಿ ಸಿಕ್ಕಿಬಿದ್ದು ನಲುಗುತ್ತಿರುವ ಸಮಾಜ. ಕೆಳಗಿನ ಕೇರಿಯವರು, ಮೇಲಿನ ಕೇರಿಯವರು ಎದುರುಬದುರಾಗಿ ನಿಂತ ಸಂದರ್ಭದ ಸಮಾಜ. ಕೆಳಗಿನ ಕೇರಿಯಲ್ಲಿ ದಲಿತ ಸಮುದಾಯವಿದ್ದರೆ, ಮೇಲಿನ ಕೇರಿಯಲ್ಲಿ ಗೌಡ, ಕುಲಕರ್ಣಿಗಳಂಥ ಒಕ್ಕಲಿಗ, ಲಿಂಗಾಯತ ಮತ್ತು ಬ್ರಾಹ್ಮಣ ಸಮುದಾಯದವರಿದ್ದಾರೆ. ಹೆಣ್ಣು ಮತ್ತು ಅಧಿಕಾರಬಲ ಈ ಎಲ್ಲ ಕಾದಂಬರಿಗಳ ಕೇಂದ್ರಬಿಂದು. ರಾಗದ್ವೇಷಗಳದೇ ದರ್ಬಾರು. ಈ ಕಾದಂಬರಿಗಳ ನರನಾಡಿಗಳಲ್ಲೆಲ್ಲ ಕಟ್ಟು ಹರಿದ ಪಂಜಿನಂತೆ ಧಗಧಗಿಸುತ್ತಿರುವ ರಾಗಭಾವೋದ್ರೇಕಗಳು (ಬನಿರ್ಂಗ್ ಫ್ಯಾಷನ್ಸ್). ಬಹುಮುಖೀ ಶೋಷಣೆ, ಕೊಲೆ, ಮಾನಭಂಗ ಇಂಥ ಅತ್ಯಾಚಾರಗಳು ಅವ್ಯಾಹತವಾಗಿ ನಡೆದರೂ ಚೆನ್ನಣ್ಣನ ಈ ಕಾದಂಬರಿ ಪ್ರಪಂಚದಲ್ಲಿ ಜೀವನಪ್ರೀತಿ, ಜೀವನೋತ್ಸಾಹಗಳಿಗೇನೂ ಕೊರತೆ ಇಲ್ಲ. ಹಾಡು-ಹಸೆ-ಹಬ್ಬ, ದೇವರು-ಉತ್ಸವ-ಜಾತ್ರೆ, ಮೊದಲಾಗಿ ಗ್ರಾಮೀಣ ಸಂಸ್ಕೃತಿ, ಎಳ್ಳಮಾಸೆಗಳಲ್ಲಿ, ಯುಗಾದಿ-ಕಾಮನ ಹಬ್ಬಗಳಲ್ಲಿ ಮೈದುಂಬಿ ಪ್ರಕಟಗೊಳ್ಳುತ್ತದೆ. ಎಣೆಯಿಲ್ಲದ ಈ ಆಚರಣೆಗಳಂತೆ ಜನರ ಒಡಲಾಳದೊಳಗಿನ ಕಾಮಕ್ರೋಧ, ಮದಮತ್ಸರಗಳಿಗೂ ಎಣೆಯಿಲ್ಲ. ಪ್ರತಿ ಹಬ್ಬ, ಉತ್ಸವಗಳ ಬೆನ್ನಿಗೇ ಒಂದು ಕೊಲೆಯೋ, ಹೆಣ್ಣಿನ ಮಾನಭಂಗವೋ ನಿಯಮದಂತೆ ಘಟಿಸುವುದನ್ನು ಕಂಡಾಗ ಸಂಭ್ರಮದ ಆಚರಣೆಗಳು ಮತ್ತು ರಾಗದ್ವೇಷಗಳು ಕೈಕೈ ಹಿಡಿದು ಜೊತೆಜೊತೆಯಾಗಿ ಸಾಗುತ್ತಿರುವಂತೆ ಭಾಸವಾಗುತ್ತದೆ.

ವೇಶ್ಯಾವಾಟಿಕೆಯನ್ನು ಪ್ರತ್ಯಕ್ಷ ನೋಡಿ ವೇಶ್ಯೆಯರ ಜೀವನ ಚಿತ್ರಿಸುವ ಪ್ರಯತ್ನ ಕನ್ನಡಕ್ಕೆ ಹೊಸತೇನಲ್ಲ. ತರಾಸು ಮೊದಲಾದ ಲೇಖಕರು ಇಂಥ ಪ್ರಯತ್ನಮಾಡಿದ್ದು ‘ಮಸಣದ ಹೂವು’ ನಿದರ್ಶನ ನಮ್ಮೆದುರಿಗಿದೆ.ವಾಲೀಕಾರರ ‘ಹುಲಿಗೆವ್ವ’ ಕಾದಂಬರಿಯೂ ಇದೇ ಜಾಡಿನಲ್ಲಿ ಸಾಗುವ ಕೃತಿ. ಚೆನ್ನಣ್ಣನ ಕಾದಂಬರಿಗಳನ್ನು ಪ್ರಗತಿಶೀಲರ ‘ಮಸಣದ ಹೂವು;’,‘ನಗ್ನ ಸತ್ಯ’,‘ಶನಿಸಂತಾನ’ ಮೊದಲಾದ ಕೃತಿಗಳೊಂದಿಗಿಟ್ಟು ನೋಡುವ ತೌಲನಿಕ ವಿಮರ್ಶೆ ಕುತೂಹಲಕಾರಿ ಅಧ್ಯಯನವಾದೀತು. ಸಮಗ್ರ ನಾಟಕ ಸಂಪುಟದಲ್ಲಿನ ಹನ್ನೊಂದು ನಾಟಕಗಳ ಭೂಮಿಕೆಯೂ ಶೋಷಿತ ಪ್ರಪಂಚವೇ. ಈ ನಾಟಕಗಳಲ್ಲಿ ಚೆನ್ನಣ್ಣ ಸಮಕಾಲೀನ ಸಮಾಜ,.ಚರಿತ್ರೆ ಮತ್ತು ಪುರಾಣ ಪ್ರಸಂಗಗಳನ್ನು ಆಯ್ದುಕೊಂಡು ಶೋಷಣೆಯ ಸಾರ್ವಕಾಲಿಕ ವಿಕಟ ರೂಪಗಳ ದರ್ಶನ ಮಾಡಿಸುತ್ತಾರೆ.
ಆರ್ಯರ ಕಾಲದಿಂದ ಆಧುನಿಕ ಕಾಲದವರೆಗೆ ಕೆಳವರ್ಗಗಳನ್ನು ನಾನಾ ಮುಖವಾಡ ಧರಿಸಿದ ವರ್ಣ, ವರ್ಗ ಅಧಿಕಾರದಿಂದ ಹತ್ತಿಕ್ಕುತ್ತಾ ಬಂದ ಮೇಲ್ವರ್ಗದವರ ಬಣ್ಣ ಬಯಲು ಮಾಡುವುದು. ಇವರಿಂದ ಶೋಷಣೆಗೀಡಾದವರನ್ನು ಜಾಗೃತಗೊಳಿಸಿ ಎಲ್ಲರ ಜೊತೆ ಸ್ಪರ್ಧೆಗಿಳಿಯಲು ಸರಿಸಮಾನರಾಗಿ ಬಾಳಲು... 

ಮೇಲ್ವರ್ಗದವರ ಹೊಯ್ಕಯ್ ಆಗಿ ನಿಲ್ಲಲು ಅವರಲ್ಲಿ ಅಂಥ ವ್ಯಕ್ತಿತ್ವ ರೂಪಿಸುವುದು... (ಕೋಟೆ ಬಾಗಿಲು-ಕಾದಂಬರಿ ಮುನ್ನುಡಿಯಲ್ಲಿ) ಸಾಹಿತಿ ಚೆನ್ನಣ್ಣ ವಾಲೀಕಾರರರ ಸಾಹಿತ್ಯ ಪ್ರಣಾಳಿಕೆಯಂತಿರುವ ಮೇಲಿನ ಮಾತುಗಳಲ್ಲಿ ಅವರ ಆಸೆ ಆಕಾಂಕ್ಷೆ, ಕಾಳಜಿಗಳು ಸ್ಪಷ್ಟ. ಇದನ್ನು ಬರವಣಿಗೆಯಲ್ಲಿ ಸಾಧಿಸಲು ಅವರು ಕಂಡುಕೊಳ್ಳುವ ಮಾರ್ಗ ಜಾನಪದ ವಿವೇಕದ್ದು ಹಾಗೂ ಗಾಂಧೀಜಿ, ಅಂಬೇಡ್ಕರರದು. ಆದಿಮ ಸಮಾಜದ ಪಳೆಯುಳಿಕೆ ಎನ್ನಬಹುದಾದ ಬರ್ಬರ ವಾಸ್ತವತೆಯ ಎದುರು ವಾಲೀಕಾರರು ಜಾನಪದ ವಿವೇಕವನ್ನು ಮುಖಾಮುಖಿಯಾಗಿಸುತ್ತಾರೆ. ದಾಸಯ್ಯನ ಪದಗಳು, ಭಜನೆ ಪದಗಳು, ಅನುಭಾವದ ಹಾಡುಗಳನ್ನು ಪ್ರಸಕ್ತ ಸನ್ನಿವೇಶಗಳೊಂದಿಗೆ ತಳಕು ಹಾಕುತ್ತಲೇ ಬದುಕಿನ ಇತ್ಯಾತ್ಮಕ ಮೌಲ್ಯಗಳನ್ನು ಹೊಳೆಯಿಸುತ್ತಾರೆ.

ಕವಿ ಸಹಜವಾದ ಭಾವನಾತ್ಮಕ ಸಂವೇದನೆ ಹಾಗೂ ಬಂಡಾಯ ಸಂವೇದನೆಗೆ ಸಹಜವಾದ ಚಿಂತನಪರೆತಗಳ ಒಂದು ವಿಶಿಷ್ಟ ಹದವನ್ನು ಚೆನ್ನಣ್ಣನ ಬರವಣಿಗೆಯಲ್ಲಿ ನಾವು ಕಾಣುತ್ತೇವೆ. ಜಾನಪದ ವಿವೇಕ ಹಾಗೂ ಜಾನಪದ ಭಾಷೆಯನ್ನು ವರ್ತಮಾನಕ್ಕೆ ಒಗ್ಗಿಸಿಕೊಳ್ಳುವುದರಲ್ಲಿ ಚೆನ್ನಣ್ಣ ವಾಲೀಕಾರರ ಜಾನಪದ ಪ್ರಜ್ಞೆ ಅತಿಶಯವಾದುದು. ಅಂತೆಯೇ ಐದು ಹೆಡೆಯ ಹಾವು ಇತ್ಯಾದಿ ಜಾನಪದ ಹಾಗೂ ಪುರಾಣಗಳ ಸಂಕೇತವನ್ನು ಆಧುನಿಕ ಮನಶಾಸ್ತ್ರೀಯ ಹಿನ್ನೆಲೆಯಲ್ಲಿ ಕಾದಂಬರಿಗಳ ಕೇಂದ್ರ ಪ್ರತಿಮೆಯಾಗಿ ಬಳಸಿಕೊಳ್ಳುವ ಕ್ರಮವೂ ಅರ್ಥವತ್ತಾದುದು. ಇದು ಅವರ ಕಾವ್ಯ ಹಾಗೂ ಗದ್ಯ ಕೃತಿಗಳೆರಡಕ್ಕೂ ಅನ್ವಯಿಸುವ ಮಾತು. ಚೆನ್ನಣ್ಣ ವಾಲೀಕಾರರ ಸಾಹಿತ್ಯದ ಮಾತು ಬಂದಾಗ ಎರಡು ಆಕ್ಷೇಪಣೆಗಳು ಕೇಳಿ ಬರುತ್ತವೆ. ಒಂದು, ಅವರ ಭಾಷೆ ಅರ್ಥವಾಗುವುದಿಲ್ಲ ಎನ್ನುವುದು, ಮತ್ತೊಂದು ಅವರ ಕೃತಿಗಳಿಗೆ ವಿಮರ್ಶೆಯ ನ್ಯಾಯ ಸಂದಿಲ್ಲ ಎನ್ನುವುದು. ಇವೆರಡೂ ಅರ್ಧಸತ್ಯದ ಮಾತುಗಳು. ಚೆನ್ನಣ್ಣನ ಭಾಷೆ ಹೈದರಾಬಾದ್ ಕರ್ನಾಟಕದ ಆಡುನುಡಿ.ಆದ್ದರಿಂದ ಆ ಪ್ರದೇಶದ ಉಪ ಭಾಷೆಯ ಪರಿಚಯವಿಲ್ಲದವರಿಗೆ ಚೆನ್ನಣ್ಣನ ಕೃತಿಗಳು ಕಬ್ಬಿಣದ ಕಡಲೆ ಎನಿಸಬಹುದು. ಚೆನ್ನಣ್ಣನವರ ಕೃತಿಗಳ ಬಗ್ಗೆ ವಿಮರ್ಶೆ ಅಷ್ಟೋ ಇಷ್ಟೋ ಬಂದಿರುವುದುಂಟು. ವಿಮರ್ಶೆಯ ಪೂರ್ಣ ನ್ಯಾಯ ಸಿಕ್ಕಿಲ್ಲ ಎಂಬುದೂ ನಿಜವಿರಬಹದು. ಚೆನ್ನಣ್ಣನ ಕೃತಿಗಳೊಂದಿಗೆ ಅನುಸಂಧಾನ ವಿಮರ್ಶಕರಿಂದ ಹೆಚ್ಚಿನ ಸಂಯಮವನ್ನು ಬೇಡುವ ಕೆಲಸ. ಅನುಸಂಧಾವೆನ್ನುವುದು ಕೃತಿಯೊಳಗೆ ಹಾಸುಹೊಕ್ಕಾಗಿ ಒಳಗೊಂಡೂ ಒಂದು ವಸ್ತುನಿಷ್ಠ ದೂರವನ್ನು ಕಾಯ್ದುಕೊಳ್ಳುತ್ತಾ ಪರಾಮರ್ಶಿಸ ಬೇಕಾದ ಕೆಲಸ.

ಸಾಹಿತ್ಯ ಕೃತಿಯೊಂದರ ಮೌಲ್ಯಮಾಪನದ ಮಾನ ದಂಡಗಳು ಕೃತಿಯೊಳಗೇ ಅಂತರ್ಗತವಾಗಿರುತ್ತದೆ ಎನ್ನುವುದು ನವ್ಯ ವಿಮರ್ಶೆಯ ಸೂತ್ರಗಳಲ್ಲೊಂದು. ವಿಮರ್ಶೆಯು, ವಿಶ್ಲೇಷಣೆ, ಅರ್ಥೈಸುವಿಕೆ, ವ್ಯಾಖ್ಯಾನಗಳ ಕ್ರಮದಲ್ಲಿ ಕೃತಿಯನ್ನು ಪುನರ್ರಚಿಸುತ್ತ, ಅದರ ಮಾನದಂಡಗಳನ್ನು ಶೋಧಿಸಬೇಕಾಗುತ್ತದೆ.ಈ ರೀತಿ ಚೆನ್ನಣ್ಣ ಮಾತ್ರವಲ್ಲ, ನವೋದಯದಿಂದ ಬಂಡಾಯದವರೆಗೆ ನಮ್ಮ ಪ್ರಮುಖ ಲೇಖಕರ ಕೃತಿಗಳ ಪುನರ್ರಚನೆಯಾಗ ಬೇಕಿದೆ. ಇಂಥ ಪುನರ್ರಚನಾ ಕಾರ್ಯದಿಂದ ಮೂಲ ಕೃತಿಗಳ ಓದಿನ ತೊಡಕು ನಿವಾರಣೆಯಾಗಬಹುದು, ಆಸ್ವಾದನೆಗೆ ಸಹಾಯಕವಾಗಬಹುದು. ವಿಮರ್ಶೆ ಮಾಡಬೇಕಾದ ಕೆಲಸಗಳಲ್ಲಿ ಇದೂ ಒಂದು. ಕನ್ನಡ ಶಾಸ್ತ್ರೀಯ ಭಾಷೆ ಯೋಜನೆಗಳು ಇತ್ತ ಗಮನಹರಿಸಬೇಕು. ಒಂದೆರಡು ವರ್ಷಗಳ ಹಿಂದೆ ಸಮಾರಂಭವೊಂದರಲ್ಲಿ ಕಂಡಾಗ ಭೀಮಕಾಯ ಗುಬ್ಬಚ್ಚಿಯಂತಾಗಿತ್ತು. ಬಂಡಾಯ ಸಾಹಿತ್ಯದಂತೆ ಚೆನ್ನಣ್ಣ ವಾಲೀಕಾರರ ಬದುಕು ಹೋರಾಟದ ಬದುಕು. ಛಲದಿಂದ ಸಾಧಿಸದೇ ಬಿಡದ ಹೋರಾಟ. ಆದರೆ, ಎರಡು ಮೂರು ವರ್ಷಗಳಿಂದ ದೇಹಕ್ಕಂಟಿದ ವ್ಯಾಧಿಯ ವಿರುದ್ಧ ನಡೆಸಿದ ಹೋರಾಟದಲ್ಲಿ ಅವರ ಛಲ ಸೋತಿದೆ. ಚೆನ್ನಣ್ಣ ವಾಲೀಕಾರ ಇನ್ನಿಲ್ಲ ಎನ್ನಲುಂಟೆ? ಕನ್ನಡ ಸಾಹಿತ್ಯ ಚರಿತ್ರೆಯ ಬಂಡಾಯ ಸಂಪುಟದಲ್ಲಿ ಚೆನ್ನಣ್ಣನ ದನಿ ಕೇಳಿಸುತ್ತಲೇ ಇರುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)