ಚಲನಚಿತ್ರಗಳನ್ನು ಕಮರ್ಷಿಯಲ್ ಮತ್ತು ಕಲಾತ್ಮಕ ಎಂದು ವಿಂಗಡಿಸುವುದು ಸರಿಯಲ್ಲ: ಪಿ. ಶೇಷಾದ್ರಿ
‘ಮುನ್ನುಡಿ’ ಚಲನಚಿತ್ರದ ಮೂಲಕ ಸಿನೆಮಾ ಕ್ಷೇತ್ರದಲ್ಲಿ ಖ್ಯಾತರಾದ ಪಿ. ಶೇಷಾದ್ರಿ ಅವರು ಕನ್ನಡದ ಖ್ಯಾತ ಕಾದಂಬರಿಕಾರ, ಸಾಹಿತಿ ಡಾ. ಶಿವರಾಮ ಕಾರಂತರು ರಚಿಸಿದ ‘ಮೂಕಜ್ಜಿಯ ಕನಸುಗಳು’ ಕಾದಂಬರಿ ಆಧಾರಿತ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಳೆದೊಂದು ವರ್ಷದಿಂದ ಕುಂದಾಪುರ ಆಸುಪಾಸಿನಲ್ಲೇ ಹೆಚ್ಚಾಗಿ ಚಿತ್ರೀಕರಿಸಲ್ಪಟ್ಟ ಈ ಚಿತ್ರವು ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಗೊಂಡಿದೆ. 1977ರಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಪಾತ್ರವಾದ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯು ಶೇಷಾದ್ರಿಯ 11ನೇ ನಿರ್ದೇಶನದ ಚಿತ್ರವಾಗಿ ಗುರುತಿಸಲ್ಪಟ್ಟಿವೆ. ಈ ಚಲನಚಿತ್ರವು ಈಗಾಗಲೆ ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಮಟ್ಟದ ಚಲನಚಿತ್ರ ಉತ್ಸವದಲ್ಲಿ ಪ್ರದರ್ಶನ ಕಂಡಿವೆ. ಶುಕ್ರವಾರ ಚಲನಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರಿಗೆ ಆಗಮಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ ಅವರನ್ನು ‘ವಾರ್ತಾಭಾರತಿ’ ಮಾತನಾಡಿಸಿತು.
►‘ಮೂಕಜ್ಜಿಯ ಕನಸುಗಳು’ ಚಿತ್ರವು ಸದ್ಯದ ಸಂದರ್ಭಕ್ಕೆ ಹೇಗೆ ಮಹತ್ವ ಪಡೆಯುತ್ತದೆ?
-ಸಾಹಿತಿ ಶಿವರಾಮ ಕಾರಂತರು ಈ ಕಾದಂಬರಿಯನ್ನು ಬರೆದು 50 ವರ್ಷಗಳೇ ಕಳೆದಿವೆ. ಕಾದಂಬರಿಯ ವಸ್ತು ಆ ಕಾಲಕ್ಕೆ ಮಾತ್ರವಲ್ಲ, ಈಗಲೂ ಪ್ರಸ್ತುತ. ಮುಂದೆಯೂ ಜಿವಂತವಾಗಲಿದೆ. ಯಾಕೆಂದರೆ ಕಾದಂಬರಿಯಲ್ಲಿ ಕಾರಂತರು ‘ಮೂಕಜ್ಜಿಯ’ ಮೂಲಕ ಎತ್ತಿದ ಪ್ರಶ್ನೆಗಳು ಅಂತಹದ್ದಾಗಿತ್ತು. ಅಲ್ಲಿ ಎತ್ತಲ್ಪಟ್ಟ ಒಂದೊಂದು ಪ್ರಶ್ನೆಗಳು ಅನೇಕ ಉಪ ಪ್ರಶ್ನೆಗಳನ್ನು ಎತ್ತುತ್ತಾ ಹೋಗುತ್ತದೆ. ಹಾಗಾಗಿ ಕ್ಲಿಷ್ಟಕರ ಬದುಕಿನ ಮಧ್ಯೆಯೂ ಈ ಚಿತ್ರವು ಬೇರೆ ಬೇರೆ ಆಯಾಮಗಳ ಮೂಲಕ ಮಹತ್ವವನ್ನು ಪಡೆಯಲಿದೆ.
►ಇದು ಸಾಮಾನ್ಯ ಪ್ರೇಕ್ಷಕರನ್ನು ತಲುಪಬಹುದೇ?
-ಪ್ರೇಕ್ಷಕರನ್ನು ಸಾಮಾನ್ಯ ಅಥವಾ ಗಣ್ಯ ಅಂತ ವಿಂಗಡಿಸುವುದು ಸರಿಯಲ್ಲ. ಪ್ರೇಕ್ಷಕ, ಪ್ರೇಕ್ಷಕನೇ ಆಗಿರುವನು. ಸಿನೆಮಾ ಉದ್ಯಮವಾಗಿ ಬೆಳೆದ ಕಾರಣ ಸಿನೆಮಾ ರಂಗದಲ್ಲಿ ತೊಡಗಿಸಿಕೊಂಡವರು ಅಂದರೆ ನಿರ್ಮಾಪಕರು, ನಿರ್ದೇಶಕರು, ನಟ-ನಟಿಯರು ಹೀಗೆ ಎಲ್ಲರೂ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡಿರುತ್ತಾರೆ. ಹಾಗಾಗಿ ನಾವೆಲ್ಲಾ ಈ ಸಿನೆಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಪ್ರಯತ್ನಿಸುತ್ತಿದ್ದೇವೆ.
►ಕಾದಂಬರಿ ಆಧಾರಿತ ಕಥಾವಸ್ತುವನ್ನು ಚಲನಚಿತ್ರವಾಗಿಸುವಾಗ ಎದುರಾದ ಸವಾಲುಗಳೇನು?
-ಶಿವರಾಮ ಕಾರಂತರು ಈ ಕಾದಂಬರಿಯನ್ನು ರಚಿಸುವಾಗ ಮುಂದೊಂದು ದಿನ ಇದು ಸಿನೆಮಾ ಆಗಬಹುದು ಎಂದು ಕಲ್ಪಿಸಿರಲಿಕ್ಕಿಲ್ಲ ಅಥವಾ ಚಲನಚಿತ್ರ ಆಗಬೇಕು ಎಂದು ಆಶಿಸಿರಲಿಕ್ಕಿಲ್ಲ. ಬಹುಶಃ ಇಂದು ಕಾರಂತರು ಇದ್ದಿದ್ದರೆ ಚಲನಚಿತ್ರ ಮಾಡಲು ಅನುಮತಿಯನ್ನೂ ನೀಡುತ್ತಿರಲಿಲ್ಲವೋ ಏನೋ... ಆದರೆ, ಕಳೆದ ನಾಲ್ಕು ವರ್ಷದಿಂದ ನಾನು ಇದನ್ನು ಚಲನಚಿತ್ರ ಮಾಡಲು ಸಿದ್ಧತೆ ನಡೆಸಿದ್ದೆ. ಕಳೆದ ವರ್ಷದ ಅಕ್ಟೋಬರ್ 10ರಂದು ಇದರ ಮುಹೂರ್ತವೂ ಆಗಿತ್ತು. ಒಂದು ವರ್ಷದೊಳಗೆ ಇದರ ಚಿತ್ರೀಕರಣ ಮಾಡಿ ಮುಗಿಸಿದೆವು. ನಮ್ಮ ಇಡೀ ತಂಡವು ಇದಕ್ಕಾಗಿ ಸಾಕಷ್ಟು ಶ್ರಮಿಸಿದೆ. ಇದರಲ್ಲಿ ಕುಂದಾಪ್ರ ಕನ್ನಡವನ್ನು ಹೆಚ್ಚಾಗಿ ಬಳಸಿದ್ದೇವೆ. ಕಥಾ ವಸ್ತುವಿಗೆ ಯಾವುದೇ ಭಂಗ ಆಗದಂತೆ, ಕಾರಂತರ ವ್ಯಕ್ತಿತ್ವಕ್ಕೆ ಯಾವುದೇ ಚ್ಯುತಿ ಬಾರದಂತೆ ಸಾಕಷ್ಟು ಎಚ್ಚರಿಕೆ ವಹಿಸಿದ್ದೇವೆ. ಕಾರಂತರ ಅಕ್ಷರವನ್ನು ದೃಶ್ಯಕ್ಕೆ ಇಳಿಸುವುದು ಅಷ್ಟು ಸುಲಭದ್ದೇನೂ ಅಲ್ಲ. ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಅದ್ಭುತ ಚಿತ್ರವನ್ನು ನಿರ್ಮಿಸಿದ ಹೆಮ್ಮೆ ಇದೆ.
►ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ?
-ಕಳೆದ ಎರಡು ದಿನದಲ್ಲಿ ಕರಾವಳಿ ತೀರದ ಜನರು ನಮ್ಮೆಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ ಎಂದು ನಾನು ತುಂಬಾ ನೋವಿನಿಂದಲೇ ಹೇಳಬೇಕಾಗಿದೆ. ಶುಕ್ರವಾರ ಕುಂದಾಪುರದಲ್ಲಿ ಸಿನೆಮಾ ವೀಕ್ಷಕರ ಸಂಖ್ಯೆ 25 ದಾಟಿಲ್ಲ. ಮಂಗಳೂರಿನ ಭಾರತ್ ಸಿನೆಮಾಸ್ನಲ್ಲಿ ಕೂಡಾ ವೀಕ್ಷಕರ ಸಂಖ್ಯೆಯು 9ನ್ನು ದಾಟಿಲ್ಲ. ಕಾರಂತರ ತವರೂರಾದ ಕುಂದಾಪುರದಲ್ಲಿ 2 ಲಕ್ಷ ಜನರಿದ್ದಾರೆ. ಹೀಗಿರುವಾಗ ಯಾಕೆ ಇಂತಹ ನೀರಸ ಸ್ಪಂದನೆ ಸಿಗುತ್ತಿದೆ ಎಂದು ಅರ್ಥವಾಗುತ್ತಿಲ್ಲ.
►ಮಲ್ಟಿಫ್ಲೆಕ್ಸ್ ಥಿಯೇಟರ್ನಲ್ಲಿ ಬಿಡುಗಡೆ ಮಾಡಿದ್ದು ಇದಕ್ಕೆ ಕಾರಣ ಆಗಿರಬಹುದೇ?
-ಸಿನೆಮಾ ಪ್ರದರ್ಶನಗೊಳ್ಳತೊಡಗಿದಾಗ ರಂಗಭೂಮಿಯಲ್ಲಿ ಸಕ್ರಿಯರಾದವರು ಆತಂಕಗೊಂಡರು. ಇದೀಗ ಅಂತರ್ಜಾಲ ಸಕ್ರಿಯಗೊಂಡಾಗ ಸಿನೆಮಾ ರಂಗದವರು ಆತಂಕಗೊಳ್ಳುವುದು ಸಹಜ. ಕಾಲಕ್ಕೆ ತಕ್ಕಂತೆ ಯುವ ಜನತೆಯನ್ನು ಆಕರ್ಷಿಸಲು ಮಲ್ಟಿಫ್ಲೆಕ್ಸ್ ಥಿಯೇಟರ್ನಲ್ಲಿ ಸಿನೆಮಾ ಪ್ರದರ್ಶಿಸುವುದು ಅನಿವಾರ್ಯವಾಗಿದೆ. ಹಾಗಂತ ಅಂತರ್ಜಾಲದ ವೀಕ್ಷಣೆಯು ಸಿನೆಮಾ ಮಂದಿರಗಳಲ್ಲಿ ನೋಡುವಾಗ ಸಿಗುವ ಖುಷಿಯನ್ನು ನೀಡಲಾರವು. ಹಾಗಾಗಿ ಚಲನಚಿತ್ರ ವೀಕ್ಷಿಸುವವರ ಸಂಖ್ಯೆಯಲ್ಲಿ ಇಳಿಮುಖವಾಗಲು ಮಲ್ಟಿಫ್ಲೆಕ್ಸ್ ಥಿಯೇಟರ್ಗಳು ಕಾರಣ ಎಂದು ಹೇಳುವ ಬದಲು ಅಭಿರುಚಿಯ ಕೊರತೆ ಇದೆ ಎಂದು ನನಗೆ ಅನಿಸುತ್ತಿದೆ.
►ನೀವು ಕೇವಲ ಪ್ರಶಸ್ತಿಯನ್ನು ದೃಷ್ಟಿಯಲ್ಲಿಟ್ಟು ಚಿತ್ರ ಮಾಡುತ್ತೀರಿ ಎಂಬ ಆರೋಪ ಇದೆಯಲ್ಲ?
-ಆ ಆರೋಪದಲ್ಲಿ ಹುರುಳಿಲ್ಲ. ಯಾರಾದರು ಸುಮ್ಮನೆ ಪ್ರಶಸ್ತಿ ಕೊಡುತ್ತಾರಾ, ಗೌರವಿಸುತ್ತಾರಾ? ಏನಾದರು ಒಳ್ಳೆಯದನ್ನು ಮಾಡಿದರೆ ತಾನೆ ಗುರುತಿಸಿ, ಗೌರವಿಸುವುದು. ಹಾಗಾಗಿ ನಾನು ಕೂಡಾ ಏನಾದರು ಒಳ್ಳೆಯದನ್ನು ಮಾಡಿದ್ದೇನೆ ಎಂದು ಅರ್ಥೈಸಬಾರದೇಕೆ?. ಇನ್ನು, ಚಿತ್ರಪ್ರೇಮಿಗಳು ಹೆಚ್ಚೆಚ್ಚು ಸಂಖ್ಯೆ ಯಲ್ಲಿ ಸಿನೆಮಾ ವೀಕ್ಷಿಸಿದರೆ ಅದೇ ನನ್ನ ಪಾಲಿನ ಪ್ರಶಸ್ತಿಗಳಾಗಿವೆ.
►ಕನ್ನಡ ಚಿತ್ರೋದ್ಯಮಗಳ ಇಂದಿನ ಗತಿಯ ಕುರಿತು ನಿಮ್ಮ ಅಭಿಪ್ರಾಯ?
-ರಾಜ್ಯದಲ್ಲಿ ಆರುವರೆ ಕೋಟಿ ಜನರಿದ್ದಾರೆ. ಆ ಪೈಕಿ ಕನ್ನಡವನ್ನು ಮಾತೃಭಾಷೆ ಎಂದು ಸ್ವೀಕರಿಸಿದವರ ಸಂಖ್ಯೆ ಮೂರುವರೆ ಕೋಟಿ. ಒಂದು ಅಧ್ಯಯನದ ಪ್ರಕಾರ ರಾಜ್ಯದಲ್ಲಿ ಸಿನೆಮಾ ವೀಕ್ಷಕರ ಸಂಖ್ಯೆಯು 15 ಲಕ್ಷ. ಇವಿಷ್ಟು ಮಂದಿ ಚಿತ್ರ ವೀಕ್ಷಿಸಿದರೂ ಕೂಡಾ ಚಿತ್ರ ನಿರ್ಮಾಪಕರಿಗೆ, ನಿರ್ದೇಶಕರಿಗೆ, ನಟ-ನಟಿಯರಿಗೆ ಆತಂಕ ಎದುರಾಗದು. ಆದರೆ ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆಯು ಕಡಿಮೆಯಾಗುತ್ತಿದೆ. ಇದಕ್ಕೆ ಕನ್ನಡದಲ್ಲಿ ಒಳ್ಳೆಯ ಚಿತ್ರ ಹೊರಬರುತ್ತಿಲ್ಲ ಎನ್ನಬಹುದೇ? ಒಟ್ಟಿನಲ್ಲಿ ಚಿತ್ರರಂಗದವರು ಮಾತ್ರವಲ್ಲ, ಕನ್ನಡಿಗರು ಕೂಡಾ ಎಚ್ಚೆತ್ತುಕೊಳ್ಳಬೇಕಿದೆ. ಕನ್ನಡ ಚಿತ್ರರಂಗವು ಇಕ್ಕಟ್ಟು -ಬಿಕ್ಕಟ್ಟು-ಸಂಕಷ್ಟದ ಸ್ಥಿತಿಯಲ್ಲಿದೆ. ನವೆಂಬರ್ 29ರಂದು ರಾಜ್ಯದಲ್ಲಿ 40ಕ್ಕೂ ಅಧಿಕ ಚಲನಚಿತ್ರಗಳು ಬಿಡುಗಡೆಗೊಂಡಿವೆ. ಇದಕ್ಕೆ ನಾವು ಸಂಭ್ರಮಿಸಬೇಕೋ, ವಿಷಾದಿಸಬೇಕೋ ಎಂದು ಗೊತ್ತಾಗುತ್ತಿಲ್ಲ. ಯಾಕೆಂದರೆ ಬಿಡುಗಡೆಗೊಂಡ ಚಿತ್ರಗಳ ಪೈಕಿ ಕನ್ನಡ ಚಿತ್ರದ ಸಂಖ್ಯೆ ಕೇವಲ 9 ಆಗಿವೆ. ಉಳಿದವು ಇತರ 10 ಭಾಷೆಗಳ ಚಿತ್ರವಾಗಿವೆ. ಹರ್ಯಾಣ ಮತ್ತಿತರ ಕಡೆ ಮಾತನಾಡುವ 40 ಲಕ್ಷ ಜನಸಂಖ್ಯೆ ಹೊಂದಿರುವ ಬೆಂಗಳೂರಿನಲ್ಲಿ ಕೇವಲ 4 ಅಥವಾ 5 ಸಾವಿರ ಜನಸಂಖ್ಯೆಯಿರುವ ಭೋಜ್ಪುರಿ ಸಿನೆಮಾ ಕೂಡ ಶುಕ್ರವಾರ ಬಿಡುಗಡೆಗೊಂಡಿದೆ. ಆದರೆ ಕನ್ನಡ ಚಲನಚಿತ್ರವು ಬೇರೆ ಯಾವ ರಾಜ್ಯದಲ್ಲಿ, ಎಷ್ಟು ಸಂಖ್ಯೆಯಲ್ಲಿ ಬಿಡುಗಡೆಗೊಂಡಿವೆ ಎಂಬುದರ ಬಗ್ಗೆ ಒಮ್ಮೆ ಯೋಚಿಸಿದರೆ ಕನ್ನಡ ಚಿತ್ರರಂಗವು ಯಾವ ಸ್ಥಿತಿಯಲ್ಲಿದೆ ಎಂದು ತಿಳಿಯಬಹುದಾಗಿದೆ.
►ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರಗಳ ನಡುವೆ ಸಮನ್ವಯ ಹೇಗೆ ಸಾಧಿಸಬಹುದು?
-ಚಿತ್ರಗಳನ್ನು ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರಗಳು ಅಂತ ವಿಂಗಡಿಸುವುದು ಸರಿಯಲ್ಲ. ಹಾಗಾಗಿ ಅವುಗಳ ಮಧ್ಯೆ ಸಮನ್ವಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಚಿತ್ರವನ್ನು ಒಳ್ಳೆಯದು ಮತ್ತು ಕೆಟ್ಟದ್ದು ಎಂದು ಗುರುತಿಸಿಕೊಂಡರೆ ಸಾಕು. ಒಳ್ಳೆಯದನ್ನು ಪ್ರೇಕ್ಷಕ ಖಂಡಿತಾ ಸ್ವೀಕರಿಸುತ್ತಾನೆ. ಆವಾಗಲೇ ನಿರ್ಮಾಪಕ-ನಿರ್ದೇಶಕರ ಪರಿಶ್ರಮಕ್ಕೆ ಬೆಲೆ ಸಿಗಲಿದೆ. ಮನರಂಜನೆ ನೀಡುವುದು ಮಾತ್ರ ಸಿನೆಮಾದ ಉದ್ದೇಶವಲ್ಲ. ಸದಭಿರುಚಿ ಮೂಡಿಸುವುದು ಮತ್ತು ಮನೋವಿಕಾಸ ಮಾಡುವುದು ಕೂಡಾ ಸಿನೆಮಾದ ಭಾಗವಾಗಿದೆ.
►ಈ ಚಿತ್ರಕ್ಕೆ ಆರಂಭದ ದಿನಗಳಲ್ಲಿ ಸಿಕ್ಕಿದ ಸ್ಪಂದನೆಯ ಬಗ್ಗೆ ನೀವು ಆತಂಕಿತರಾಗಿದ್ದೀರಿ? ಪ್ರೇಕ್ಷಕರ ಮನ ಗೆಲ್ಲಲು ನೀವು ಪರ್ಯಾಯ ವ್ಯವಸ್ಥೆ ಮಾಡುವಿರಾ?
-ಇದೊಂದು ಸಂಕೀರ್ಣ ಕಥಾವಸ್ತುವುಳ್ಳ ಕಾದಂಬರಿ ಆಧಾರಿತ ಚಲನಚಿತ್ರವಾದ ಕಾರಣ ಯುವ ಜನತೆಯನ್ನೇ ನಾವು ಹೆಚ್ಚು ಕೇಂದ್ರೀಕರಿಸಿದ್ದೇವೆ. ಅದಕ್ಕಾಗಿ ಈಗಾಗಲೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ವಿದ್ಯಾರ್ಥಿಗಳಲ್ಲಿ ಈ ಚಲನಚಿತ್ರವನ್ನು ವೀಕ್ಷಿಸುವ ಅಭಿರುಚಿ ಬೆಳೆಸಲು ಪ್ರಯತ್ನಿಸಿದ್ದೇವೆ. ಅಧಿಕಾರಿ ವರ್ಗದಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿವೆ. ನಮಗೆ ಲಾಭ ಬೇಡ. ಹೂಡಿದ ಬಂಡವಾಳ ಮರಳಿ ಸಿಕ್ಕರೆ ಸಾಕು. ಆ ಬಂಡವಾಳದಿಂದ ಮತ್ತೊಂದು ಚಿತ್ರ ನಿರ್ಮಿಸಲು, ನಿರ್ದೇಶಿಸಲು ಸಾಧ್ಯವಿದೆ.
►ಇಂದಿನ ರಾಜಕೀಯ ಸ್ಥಿತಿಗತಿಗಳು ಸಿನೆಮಾ ಮಾಧ್ಯಮಗಳ ಮೇಲೆ ಪ್ರಭಾವ ಬೀರಿದೆಯೇ?
-ಕರ್ನಾಟಕದಲ್ಲಿ ಅಂತಹ ಯಾವ ಪ್ರಭಾವ ಕಾಣುತ್ತಿಲ್ಲ. ತಮಿಳುನಾಡು ಮತ್ತು ಆಂದ್ರಪ್ರದೇಶದಲ್ಲಿ ಚಲನಚಿತ್ರ ಮತ್ತು ರಾಜಕಾರಣ ಜೊತೆ ಜೊತೆಯಾಗಿ ಸಾಗುತ್ತಿದೆ. ಕರ್ನಾಟಕದಲ್ಲಿ ಕೆಲವು ನಟ- ನಟಿಯರು, ನಿರ್ಮಾಪಕರು ರಾಜಕಾರಣದಲ್ಲಿ ತೊಡಗಿಸಿಕೊಂಡರೂ ಕೂಡಾ ಸಂಪೂರ್ಣವಾಗಿ ಪರಸ್ಪರ ನಿಯಂತ್ರಣ ಸಾಧಿಸಿದ ಇತಿಹಾಸವಿಲ್ಲ.