ಈ ಉಪಚುನಾವಣೆ ಯಾರಿಗೆ ಬೇಕಾಗಿದೆ?
ಈ ಆಪರೇಷನ್ ಕಮಲದಿಂದ ಬಿಜೆಪಿಗೆ ತಕ್ಷಣದ ಅಧಿಕಾರ ದೊರಕಿದರೂ ದೀರ್ಘಕಾಲೀನ ದುಷ್ಪರಿಣಾಮ ಅದಕ್ಕಿಂತ ಭಯಂಕರವಾಗಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಇಂಥ ನಿರ್ಲಜ್ಜತನ ಮಾಡಲು ಹೋಗಿ ಕಪಾಳ ಮೋಕ್ಷವಾಗಿದೆ. ಕರ್ನಾಟಕದ ಮತದಾರರು ಹದಿನೈದು ಮತಕ್ಷೇತ್ರಗಳಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ರಾಜ್ಯ ವಿಧಾನಸಭೆಗಾಗಲಿ, ಲೋಕಸಭೆಗಾಗಲಿ ಒಮ್ಮೆ ಚುನಾವಣೆ ನಡೆದರೆ ಐದು ವರ್ಷ ಮತ್ತೆ ಚುನಾವಣೆ ನಡೆಯುವದಿಲ್ಲ. ಆದರೆ ಗೆದ್ದ ಅಭ್ಯರ್ಥಿ ಸತ್ತರೆ, ಆತನ ಆಯ್ಕೆ ಅನೂರ್ಜಿತಗೊಂಡರೆ ಅಥವಾ ಅಕಸ್ಮಾತ್ ಆತ ರಾಜೀನಾಮೆ ನೀಡಿದರೆ ಮಾತ್ರ ಅಪರೂಪಕ್ಕೆ ಒಮ್ಮೆ ಜನ ಪ್ರತಿನಿಧಿಯನ್ನು ಚುನಾಯಿಸಲು ಉಪಚುನಾವಣೆ ನಡೆಯುತ್ತದೆ.ಆದರೆ ಕರ್ನಾಟಕ ವಿಧಾನಸಭೆಯ ಹದಿನೈದು ಕ್ಷೇತ್ರಗಳಲ್ಲಿ ಈಗ ನಡೆಯುತ್ತಿರುವ ಚುನಾವಣೆ ಯಾರೋ ಸತ್ತುದ್ದಕಲ್ಲ, ಒಂದೂವರೆ ವರ್ಷದ ಹಿಂದೆ ಚುನಾಯಿತರಾಗಿದ್ದ ಹದಿನೇಳು ಮಂದಿ ಶಾಸಕರು ರಾಜೀನಾಮೆ ನೀಡಿದ್ದರಿಂದ ಈ ಚುನಾವಣೆ ನಡೆಯುತ್ತಿದೆ. ತಾವು ಹಿಂದೆ ಚುನಾಯಿತರಾಗಿದ್ದ ಪಕ್ಷಕ್ಕೆ ರಾಜೀನಾಮೆ ನೀಡಿ ಈಗ ಬಿಜೆಪಿ ಪರವಾಗಿ ಸ್ಪರ್ಧಿಸಿರುವ ಇವರ ಪರವಾಗಿ ಪ್ರಚಾರಕ್ಕೆ ಇಳಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪೀಕರ್ ಅವರಿಂದ ಮತ್ತು ಸುಪ್ರೀಂ ಕೋರ್ಟ್‌ನಿಂದ ಅನರ್ಹಗೊಂಡಿರುವ ಶಾಸಕರನ್ನು ಮತ್ತೆ ಗೆಲ್ಲಿಸುವಂತೆ ಜನರ ಬಳಿ ಗೋಗರೆಯುತ್ತಿದ್ದಾರೆ. ಗೆದ್ದವರನ್ನೆಲ್ಲ ಮಂತ್ರಿಗಳನ್ನಾಗಿ ಮಾಡುವ ಭರವಸೆ ನೀಡುತ್ತಿದ್ದಾರೆ
ಒಂದೂವರೆ ವರ್ಷಗಳ ಹಿಂದೆ ಇವರೆಲ್ಲ ಬಿಜೆಪಿ ವಿರುದ್ಧ ಸ್ಪರ್ಧಿಸಿ ಗೆದ್ದು ಬಂದಿದ್ದರು. ಗೆದ್ದ ಒಂದೂವರೆ ವರ್ಷದ ನಂತರ ಇವರಿಗೆ ಒಮ್ಮೆಲೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಜ್ಞಾನೋದಯವಾಯಿತು. ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂಬ ನೆಪ ಮುಂದೆ ಮಾಡಿ ದಿಢೀರನೆ ರಾಜೀನಾಮೆ ನೀಡಿ ಮುಂಬೈಗೆ ಪಲಾಯನ ಮಾಡಿ ಅಲ್ಲಿನ ಬಿಜೆಪಿ ಮುಖ್ಯಮಂತ್ರಿ ಫಡ್ನವೀಸ್ ವ್ಯವಸ್ಥೆ ಮಾಡಿದ್ದ ಪಂಚತಾರಾ ರೆಸಾರ್ಟ್ ಗಳಲ್ಲಿ ಅಡಗಿಕೊಂಡರು. ಇವರಲ್ಲಿ ಕೆಲವರು ಕಳಂಕಿತ ರಾಜಕಾರಣಿಗಳಗಾಗಿದ್ದರು. ಕಳೆದ ಚುನಾವಣೆಯಲ್ಲಿ ಕೇವಲ 104 ಸ್ಥಾನ ಪಡೆದು ಬಹುಮತ ಗಳಿಸುವಲ್ಲಿ ವಿಫಲಗೊಂಡಿದ್ದ ಬಿಜೆಪಿಗೆ ಸರಕಾರ ರಚಿಸಲು ಇನ್ನೂ ಏಳು ಶಾಸಕರ ಅಗತ್ಯವಿತ್ತು. ಈ ನಡುವೆ ಇವರ ಈ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರಕಾರ ಪತನಗೊಂಡು ಅಮಿತ್ ಶಾ ಅಣತಿಯಂತೆ ಯಡಿಯೂರಪ್ಪ ಸರಕಾರ ರಚಿಸಿದರು. ಈಗ ತರಾತುರಿಯಲ್ಲಿ ಮಾಡಿದ ಸರಕಾರ ಉಳಿಸಿಕೊಳ್ಳಲು ವಿಧಾನ ಸಭಾಧ್ಯಕ್ಷರಿಂದ ಅನರ್ಹರಾಗಿದ್ದ ಈ ಶಾಸಕರನ್ನು ಗೆಲ್ಲಿಸುವುದು ಬಿಜೆಪಿಗೆ ಅನಿವಾರ್ಯವಾಗಿದೆ.
ಈ ಅನರ್ಹ ಶಾಸಕರು ಸುಮ್ಮನೆ ರಾಜೀನಾಮೆ ಕೊಡಲಿಲ್ಲ. ಇವರಿಗೆ ನಾನಾ ಆಮಿಷಗಳನ್ನು ಒಡ್ಡಿ ಐಟಿ, ಈ.ಡಿ., ಸಿಬಿಐ ದಾಳಿಯ ಬೆದರಿಕೆ ಹಾಕಲಾಯಿತು. ಈ ಪ್ರಕರಣ ಸುಖಾಂತ್ಯವಾಗಲು ಸ್ಪೀಕರ್‌ರನ್ನು ಬುಕ್ ಮಾಡಲಾಗಿದೆ ಎಂಬ ಸುಳ್ಳನ್ನೂ ಹೇಳಿದರು. ಅಷ್ಟೆ ಅಲ್ಲ ಅಮಿತ್ ಶಾ ಸುಪ್ರೀಂ ಕೋರ್ಟ್ ಜಡ್ಜ್ ಗಳನ್ನು ಮ್ಯಾನೇಜ್ ಮಾಡುತ್ತಾರೆಂದು ಕಿವಿಯ ಮೇಲೆ ಹೂವಿಟ್ಟು ರಾಜೀನಾಮೆ ಕೊಡಿಸಿದರು. ಮುಂದೇನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ.
ಈ ಚುನಾವಣೆಯಲ್ಲಿ ಅನರ್ಹರನ್ನು ಗೆಲ್ಲಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಇತರ ಬಿಜೆಪಿ ಮಂತ್ರಿಗಳು ಹದಿನೈದು ಕ್ಷೇತ್ರಗಳಲ್ಲಿ ಹೌಹಾರಿ ಪ್ರಚಾರ ಮಾಡುತ್ತಾ ಮೈ ಬೆವರು ಸುರಿಸುತ್ತಿರುವದನ್ನು ನೋಡಿದರೆ ಈ ಶಾಸಕರ ಪಕ್ಷಾಂತರದಲ್ಲಿ ಇವರ ಕೈವಾಡವಿರುವುದು ಸ್ಪಷ್ಟವಾಗುತ್ತದೆ. ಸುಪ್ರೀಂ ಕೋರ್ಟ್ ತೀರ್ಪು ಬರುವ ಮುನ್ನ ಇವರಿಗೂ ತಮಗೂ ಸಂಬಂಧವೇ ಇಲ್ಲವೆಂದು ಹೇಳುತ್ತಿದ್ದ ಬಿಜೆಪಿ ನಾಯಕರಿಗೆ ದುಡ್ಡಿಗಾಗಿ ಮಾರಾಟವಾದ ಈ ಮಾನಗೆಟ್ಟವರು ಈಗ ಮಹಾತ್ಯಾಗಿಗಳಾಗಿ ಕಾಣಿಸುತ್ತಿದ್ದಾರೆ.
ತಾವು ಮಾರಾಟವಾಗಿದ್ದನ್ನು ಸಮರ್ಥಿಸಿಕೊಳ್ಳುವ ಇವರು ತಾವು ಮಾಡಿದ್ದು ಪಕ್ಷಾಂತರ ತಪ್ಪೇನು ಎಂದು ಲಜ್ಜೆಗೆಟ್ಟು ಹೇಳುತ್ತಿದ್ದಾರೆ. ಒಂದು ಪಕ್ಷದ ಸಿದ್ಧಾಂತ, ಕಾರ್ಯಕ್ರಮದ ಬಗ್ಗೆ ಭಿನ್ನಾಭಿಪ್ರಾಯ ಬಂದು ಪಕ್ಷ ಬದಲಿಸಿದರೆ ಇವರ ತಪ್ಪನ್ನು ಒಪ್ಪಿಕೊಳ್ಳಬಹುದು. ಆದರೆ ಇವರು ಯಾಕೆ ಪಕ್ಷ ಬದಲಿಸಿದರು, ಅದಕ್ಕಾಗಿ ಎಷ್ಟು ಅಮೇಧ್ಯ ಪಡೆದರು ಎಂಬುದು ನಿಖರವಾಗಿ ಅಲ್ಲದಿದ್ದರೂ ಸಂಕ್ಷಿಪ್ತವಾಗಿ ಎಲ್ಲರಿಗೆ ಗೊತ್ತಿದೆ.ಅದಕ್ಕಾಗಿಯೆ ಸ್ಪೀಕರ್ ರಮೇಶ್ ಕುಮಾರ ಇವರನ್ನು ಅನರ್ಹಗೊಳಿಸಿದರು. ಸುಪ್ರೀಂ ಕೋರ್ಟ್ ಇವರ ಅನರ್ಹತೆಯ ಕುರಿತು ಸ್ಪೀಕರ್ ತೀರ್ಮಾನ ಎತ್ತಿ ಹಿಡಿಯಿತು. ಆದರೆ ಅನರ್ಹತೆಯ ಅವಧಿಯನ್ನು ಈ ವಿಧಾನ ಸಭೆಯ ಅವಧಿ ಮುಗಿಯುವವರೆಗೆ ವಿಸ್ತರಿಸಲು ನಿರಾಕರಿಸಿತು. ಇವರ ಅನರ್ಹತೆಯ ಬಗ್ಗೆ ಮತದಾರರೇ ತೀರ್ಮಾನಿಸಲಿ ಎಂದು ಸುಪ್ರೀಂ ಕೋರ್ಟ್ ಮತದಾರರಿಗೆ ಬಿಟ್ಟು ಕೊಟ್ಟಿತು. ಈಗ ಜನರು ಈ ಬಗ್ಗೆ ತೀರ್ಮಾನಿಸಬೇಕಾಗಿದೆ. ಇದು ಬರೀ ಎರಡು ಅಥವಾ ಮೂರು ಪಕ್ಷಗಳ ನಡುವಿನ ಸ್ಪರ್ಧೆ ಮಾತ್ರವಲ್ಲ. ಇದು ಸಂವಿಧಾನದ ಭವಿಷ್ಯದ ಮೇಲೆ ಪರಿಣಾಮ ಬೀರುವ ಚುನಾವಣೆ. ಈ ಚುನಾವಣೆಯಲ್ಲಿ ಇವರು ಗೆದ್ದರೆ ಈ ದೇಶದ ಸಂವಿಧಾನವೇ ಪರಾಭವಗೊಂಡಂತಾಗುತ್ತದೆ.
ಈ ಉಪಚುನಾವಣೆಗಳಿಗೆ ಚುನಾವಣಾ ಆಯೋಗ ನೂರಾರು ಕೋಟಿ ರೂಪಾಯಿ ಖರ್ಚುಮಾಡಬೇಕಾಗುತ್ತದೆ. ಅದಲ್ಲದೆ ಅಭ್ಯರ್ಥಿಗಳು ಪ್ರಚಾರಕ್ಕೆ ಮಾಡುವ ಖರ್ಚು ವೆಚ್ಚ ಎಲ್ಲ ಲೆಕ್ಕಹಾಕಿದರೆ ಇಂದಿನ ಆರ್ಥಿಕ ಹಿಂಜರಿತದ ದಿನಗಳಲ್ಲಿ ಇಂಥ ದುಬಾರಿ ವೆಚ್ಚದ ಅನಗತ್ಯವಾದ ಚುನಾವಣೆ ಬೇಕಾಗಿತ್ತೇ? ಇದಕ್ಕಾಗಿ ಜನರ ತೆರಿಗೆಯ ಹಣ ಖರ್ಚಾಗುವುದಿಲ್ಲವೇ? ಜೆಎನ್‌ಯು ಮಕ್ಕಳು ಹಾಸ್ಟೆಲ್ ಶುಲ್ಕ ಹೆಚ್ಚಳ ವಿರುದ್ಧ ಹೋರಾಟಕ್ಕೆ ಇಳಿದರೆ ಜನರ ತೆರಿಗೆ ಹಣದ ಬಗ್ಗೆ ಮಾತಾಡುವ ದೀಡ ಪಂಡಿತರು ಕಾಸಿಗಾಗಿ ಮಾರಾಟವಾಗಿ ಮತ್ತೆ ಚುನಾವಣೆ ನಡೆಯಲು ಕಾರಣರಾದ ಈ ಹರಾಮಖೋರರ ಬಗ್ಗೆ ಬಾಯಲ್ಲಿ ಬೆಣ್ಣೆ ಇಟ್ಟುಕೊಂಡು ಕುಳಿತಿದ್ದಾರೆ.
ವಾಸ್ತವವಾಗಿ ಹಿಂದಿನ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ಹೋಲಿಕೆ ಮಾಡಿದರೆ ನಂತರ ಅಸ್ತಿತ್ವಕ್ಕೆ ಬಂದುದು ಸಂಪೂರ್ಣವಾದ ನೀತಿ ಭ್ರಷ್ಟ ಅನೈತಿಕ ಸರಕಾರ. ಮಾನ ಮರ್ಯಾದೆಯನ್ನು ಗಾಳಿಗೆ ತೂರಿ ಸಂವಿಧಾನ ಬಾಹಿರ ಮಾರ್ಗಗಳನ್ನು ಅನುಸರಿಸಿ ಬಿಜೆಪಿ ಸರಕಾರ ನೆಲೆಯೂರಿತು. ಈ ಉಪಚುನಾವಣೆಯಲ್ಲಿ ಖರೀದಿ ಮಾಡಲ್ಪಟ್ಟ ಸರಕುಗಳನ್ನು ಗೆಲ್ಲಿಸಿಕೊಂಡು ಅಧಿಕಾರ ಗಟ್ಟಿಗೊಳಿಸಿಕೊಂಡ ನಂತರವೂ ನೈತಿಕವಾಗಿ ಈ ಸರಕಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ತಾಂತ್ರಿಕ ಕಾರಣಗಳಿಂದ ಮಾತ್ರ ಅದು ಆಡಳಿತ ನಡೆಸಬೇಕಾಗುತ್ತದೆ
ಈ ಉಪಚುನಾವಣೆಯ ಪ್ರಚಾರದಲ್ಲಿ ಮುಖ್ಯ ಮಂತ್ರಿಯಾದಿ ಆಡಳಿತ ಪಕ್ಷದ ನಾಯಕರೆಲ್ಲ ನೀತಿ ನಿಯಮಾವಳಿ ಮೀರಿ ಪ್ರಚಾರ ಮಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಲಿಂಗಾಯತ ವೀರಶೈವರ ಮತಗಳು ಬಿಜೆಪಿ ಬಿಟ್ಟು ಬೇರೆ ಕಡೆ ಹೋಗಬಾರದು ಎಂದು ಪ್ರಚಾರ ಭಾಷಣ ಮಾಡಿದರು. ಇದನ್ನು ಯಾವ ಮಠಾಧೀಶರೂ ವಿರೋಧಿಸಿ ಹಾಗೆಲ್ಲ ಮಾತನಾಡಬಾರದು, ನಮ್ಮ ಧರ್ಮದ ಹೆಸರು ಬಳಸಿಕೊಳ್ಳಬೇಡಿ ಎಂದು ಹೇಳಲಿಲ್ಲ.
ಈ ಆಪರೇಷನ್ ಕಮಲದಿಂದ ಬಿಜೆಪಿಗೆ ತಕ್ಷಣದ ಅಧಿಕಾರ ದೊರಕಿದರೂ ದೀರ್ಘಕಾಲೀನ ದುಷ್ಪರಿಣಾಮ ಅದಕ್ಕಿಂತ ಭಯಂಕರವಾಗಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಇಂಥ ನಿರ್ಲಜ್ಜತನ ಮಾಡಲು ಹೋಗಿ ಕಪಾಳ ಮೋಕ್ಷವಾಗಿದೆ. ಕರ್ನಾಟಕದ ಮತದಾರರು ಹದಿನೈದು ಮತಕ್ಷೇತ್ರಗಳಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.