ಶಿಕ್ಷಕರ ಕೊರತೆಯ ಮಧ್ಯೆಯೂ ಖಾಸಗಿ ಶಾಲೆಗಳಿಗೆ ಸೆಡ್ಡು!
ದಡ್ಡಲಕಾಡು ಸರಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆ
ಬಂಟ್ವಾಳ, ಡಿ.2: ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ (ಕರ್ನಾಟಕ ಪಬ್ಲಿಕ್ ಸ್ಕೂಲ್)ಕ್ಕೆ ಬಂಟ್ವಾಳ ತಾಲೂಕಿನ 9 ಶಾಲೆಗಳು ಆಯ್ಕೆಯಾಗಿದ್ದು, ಆ ಪೈಕಿ ತಾಲೂಕಿನ ದಡ್ಡಲಕಾಡು ಸರಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯೂ ಒಂದು. ಮುಚ್ಚುಗಡೆಯ ಭೀತಿ ಎದುರಿಸುತ್ತಿದ್ದ ಈ ಶಾಲೆಯಲ್ಲಿ ಇದೀಗ ಪ್ರವೇಶಾತಿ ಪಡೆಯುವುದೇ ದೊಡ್ಡ ಸಾಹಸ ಎಂಬ ಮಾತು ಕೇಳಿ ಬರುತ್ತಿದೆ. ಅಷ್ಟರಮಟ್ಟಿಗೆ ಈ ಶಾಲೆಯು ತನ್ನ ಛಾಪು ಮೂಡಿಸಿದ್ದಲ್ಲದೆ ಇತರ ಶಾಲೆಗಳಿಗೆ ಮಾದರಿಯಾಗಿ ಬೆಳೆಯುತ್ತಿದೆ.
ಇಲ್ಲಿ ಶಿಕ್ಷಕರ ಕೊರತೆ ಇದೆ. ಆದಾಗ್ಯೂ ಇಲ್ಲಿ ಮಕ್ಕಳ ಸಂಖ್ಯೆ ನಿರೀಕ್ಷೆಗೂ ಮೀರಿದೆ. ಶಾಲೆಯನ್ನು ದತ್ತು ಪಡೆದ ಟ್ರಸ್ಟ್, ಎಸ್‌ಡಿಎಂಸಿ ಹಾಗೂ ಪೋಷಕರ-ಸಾರ್ವಜನಿಕರ ನಿರಂತರ ಪರಿಶ್ರಮವೇ ಇದಕ್ಕೆ ಕಾರಣವಾಗಿದೆ. ಶಿಕ್ಷಕರ ಕೊರತೆಯ ಮಧ್ಯೆಯೂ 2019-20ನೇ ಶೈಕ್ಷಣಿಕ ವರ್ಷದಿಂದ ಇಲ್ಲಿ 1ನೇ ತರಗತಿಯ ಆಂಗ್ಲಮಾಧ್ಯಮ ಶಿಕ್ಷಣ ಕಲಿಕೆಗೆ 108 ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ಗಮನಾರ್ಹ.
ಆ ಮೂಲಕ ಕೇವಲ 33 ಮಕ್ಕಳಿದ್ದ ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯು ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿ ಮಾತ್ರವಲ್ಲದೆ, ಎಲ್‌ಕೆಜಿಗೆ 77 ಮತ್ತು ಯುಕೆಜಿಗೆ 93 ಮಕ್ಕಳು ಸೇರ್ಪಡೆಯಾಗುವ ಮೂಲಕ ದಾಖಲಾತಿಯಲ್ಲೇ ವಿಶೇಷ ದಾಖಲೆ ಮಾಡಿದೆ. ಶಾಲೆಗೆ ಸುಸಜ್ಜಿತ ಕಟ್ಟಡ, ಮೂಲಭೂತ ಸೌಕರ್ಯಗಳನ್ನು ಒದಗಿಸಿರುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವುದರಿಂದ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅಂದರೆ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳನ್ನು ದಡ್ಡಲಕಾಡು ಶಾಲೆಗೆ ಸೇರಿಸಲು ಸ್ಥಳೀಯರು ಉತ್ಸಾಹ ತೋರಿದ್ದಾರೆ. ಅದರ ಫಲವಾಗಿ 2ರಿಂದ 8ನೇ ತರಗತಿಯವರೆಗೆ ಇತರ ಶಾಲೆಯ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದು, ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಈ ಶಾಲೆಯು ಪಣತೊಟ್ಟಿದೆ.
ಶಾಲಾ ವಾತಾವರಣ ಹಾಗೂ ಬೋಧನಾ ಮಾಧ್ಯಮ ಖಾಸಗಿ ಶಾಲೆಗಳನ್ನು ಮೀರಿಸುವಷ್ಟರ ಮೆಟ್ಟಿಗೆ ಬೆಳೆದು ನಿಂತಿದೆ. ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬೋಧನೆ ಮಾಡಲಾಗುತ್ತಿದೆ. ನುರಿತ ಮತ್ತು ತರಬೇತಿ ಪಡೆದ ಶಿಕ್ಷಕರೇ ಇಲ್ಲಿರುವುದರಿಂದ ಮಕ್ಕಳು ಕನ್ನಡದ ಜೊತೆಗೆ ಇಂಗ್ಲಿಷ್‌ನಲ್ಲಿ ಮಾತನಾಡಲು, ಬರೆಯಲು ಕಲಿಯುತ್ತಿದ್ದಾರೆ. ದತ್ತು ಪಡೆದ ಟ್ರಸ್ಟ್, ಶಾಲಾಭಿವೃದ್ಧಿ ಸಮಿತಿ ಹಾಗೂ ದಾನಿಗಳ ಸಹಕಾರದಿಂದ ಸಮವಸ್ತ್ರ, ನೋಟ್ ಪುಸ್ತಕ, ಶೂ, ಸಾಕ್ಸ್ ಅನ್ನು ಉಚಿತವಾಗಿ ನೀಡಲಾಗಿದೆ. ಉತ್ತಮ ಪರಿಸರ ಪ್ರಜ್ಞೆ ಮೂಡಿಸಲು ಸಸಿಗಳನ್ನು ನೆಡಲಾಗಿದ್ದು, ಸರಕಾರದ ಅಕ್ಷರ ದಾಸೋಹ ಯೋಜನೆಯಡಿ ತರಕಾರಿ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಈ ತರಕಾರಿಗಳನ್ನು ಅಕ್ಷರ ದಾಸೋಹಕ್ಕೆ ಬಳಸಲಾಗುತ್ತಿದೆ.
ರಾಜ್ಯದಲ್ಲೇ ಮಾದರಿ ಶಾಲೆ: ಶಾಲಾ ದತ್ತು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಅಂಚನ್‌ರ ನಿರಂತರ ಹೋರಾಟದಿಂದ ದಡ್ಡಲಕಾಡು ಸರಕಾರಿ ಶಾಲೆ ರಾಜ್ಯದಲ್ಲೇ ಮಾದರಿ ಶಾಲೆಯಾಗಿ ಬೆಳೆಯುತ್ತಿದೆ. ಸಾರ್ವಜನಿಕರ ಸಹಕಾರದೊಂದಿಗೆ ಮುನ್ನುಗ್ಗುತ್ತಿದೆ.
ಶಾಲೆಯ ಸಾಧನೆ ಕೊಂಡಾಡಿದ ರಾಜ್ಯಪಾಲರು: ಈ ಶಾಲೆಯ 2ನೇ ಅಂತಸ್ತಿನ ಕಟ್ಟಡ ಉದ್ಘಾಟನೆಗೆ ಬಂದ ರಾಜ್ಯಪಾಲರು ಶಾಲೆಯ ಸಾಧನೆಯನ್ನು ಕೊಂಡಾಡಿದ್ದರು. ಇದೀಗ ದಡ್ಡಲಕಾಡು ಶಾಲೆಯ 3ನೇ ಹಂತದ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಹೊಸ ಕೊಠಡಿಗಳು, ಆವರಣ ಗೋಡೆ, ಸಭಾಂಗಣ ನಿರ್ಮಾಣಗೊಳ್ಳಲಿದೆ. ಇತ್ತೀಚೆಗೆ 100ಕ್ಕಿಂತಲೂ ಅಧಿಕ ಮಂದಿ ವಿದ್ಯಾರ್ಥಿಗಳ ಪೋಷಕರು ಈ ಶಾಲೆಗಾಗಿ ಶ್ರಮದಾನ ನಡೆಸಿದ್ದಾರೆ.
ಶಿಕ್ಷಕರದ್ದೇ ಮೊದಲ ಬೇಡಿಕೆ: ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗುವ ಸಾಧ್ಯತೆಯಿದ್ದು, ಹೆಚ್ಚುವರಿ 7 ಕೊಠಡಿಗಳು, ಕ್ರೀಡೋಪಕರಣಗಳು, ವಾಚನಾಲಯದ ಅವಶ್ಯ ಇದೆ. ಇಷ್ಟೆಲ್ಲ ಹೈಟೆಕ್ ಸ್ಪರ್ಶವಾಗಿರುವ ಈ ಶಾಲೆಗೆ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಆತಂಕವನ್ನು ಪೋಷಕರು ಮತ್ತು ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದು, ಕೂಡಲೇ ಶಿಕ್ಷಕರನ್ನು ನಿಯೋಜಿಸಬೇಕೆಂದು ಒತ್ತಡವೂ ಕೇಳಿ ಬರುತ್ತಿದೆ.
ಉಚಿತ ಸ್ಮಾರ್ಟ್ ಕ್ಲಾಸ್, ಯೋಗ, ನೃತ್ಯ, ಕರಾಟೆ, ಸಂಗೀತ
1976ರಲ್ಲಿ ಬೆರಳೆಣಿಕೆಯಷ್ಟು ಮಕ್ಕಳೊಂದಿಗೆ ಪ್ರಾರಂಭವಾದ ಶಾಲೆಯಲ್ಲಿ ವರ್ಷ ಕಳೆದಂತೆ ಮಕ್ಕಳ ಸಂಖ್ಯೆ ಕ್ಷೀಣಿಸತೊಡಗಿದವು. 2016ರಲ್ಲಿ ಬರೀ 33 ಮಕ್ಕಳಿದ್ದ ಕಾರಣ ಮುಚ್ಚುವ ಸ್ಥಿತಿಗೆ ಬಂದಿದ್ದ ದಡ್ಡಲಕಾಡು ಶಾಲೆಯನ್ನು ಕರೆಂಕಿ ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್ ದತ್ತು ಪಡೆದುಕೊಂಡ ಬಳಿಕ ಶಾಲೆಯು ಅಭಿವೃದ್ಧಿ ಕಂಡಿದೆ. ಉಚಿತ ಸ್ಮಾರ್ಟ್ ಕ್ಲಾಸ್, ಯೋಗ, ನೃತ್ಯ, ಕರಾಟೆ, ಸಂಗೀತ, ಕ್ರೀಡೆ, ಕೃಷಿ ಹಾಗೂ ಸಂಸ್ಕಾರಯುತ ಶಿಕ್ಷಣವನ್ನು ಈ ಶಾಲೆಯಲ್ಲಿ ನೀಡಲಾಗುತ್ತಿದ್ದು, ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮ ಕಲಿಕಾ ವ್ಯವಸ್ಥೆಯನ್ನೂ ಮಾಡಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ 4 ಶಾಲಾ ಬಸ್‌ಗಳ ವ್ಯವಸ್ಥೆಯೂ ಇರುವುದರಿಂದ ಸಹಜವಾಗಿಯೇ ಪೋಷಕರ ಒಲವು ದಡ್ಡಲಕಾಡು ಶಾಲೆಯತ್ತ ಬೀರಿದೆ.
ದಡ್ಡಲಕಾಡು ಸರಕಾರಿ ಶಾಲೆಯಲ್ಲಿ ಈ ವರ್ಷ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 640. 6 ಸರಕಾರಿ ಶಿಕ್ಷಕರಿದ್ದು, 12 ಮಂದಿ ಗೌರವ ಶಿಕ್ಷಕರನ್ನು ದತ್ತು ಟ್ರಸ್ಟ್ ನೇಮಿಸಿದೆ. ಪ್ರಸಕ್ತ ವರ್ಷದಲ್ಲಿ 1ನೇ ತರಗತಿಗೆ ನಿರೀಕ್ಷೆಗೂ ಮೀರಿ 108 ಮಕ್ಕಳು ಸೇರ್ಪಡೆಗೊಂಡಿರುವುದರಿಂದ 1ನೇ ತರಗತಿಗೆ ಎ,ಬಿ,ಸಿ ವಿಭಾಗಗಳಲ್ಲಿ, 2ನೇ ತರಗತಿಯಲ್ಲಿ 2 ವಿಭಾಗಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಎಲ್ಲಾ ತರಗತಿಗಳಲ್ಲೂ ಅಧಿಕ ಮಕ್ಕಳಿದ್ದು, ಶಿಕ್ಷಕರು ಶಕ್ತಿ ಮೀರಿ ಪಾಠ ಮಾಡುತ್ತಿದ್ದಾರೆ. ಒಟ್ಟು ನಾಲ್ಕು ಶಾಲಾ ಬಸ್‌ಗಳಿಗೆ 4 ಡ್ರೈವರ್‌ಗಳು, 6 ಮಂದಿ ಸಹಾಯಕರಿದ್ದು, ಶಿಕ್ಷಕರಿಗೆ ಸೇರಿ ತಿಂಗಳಿಗೆ ಅಂದಾಜು 1.15 ಲಕ್ಷ ರೂ. ವೆಚ್ಚ ತಗಲುತ್ತಿದ್ದು, ಇದನ್ನು ಟ್ರಸ್ಟ್ ನಿರ್ವಹಣೆ ಮಾಡುತ್ತಿದೆ. ಪೋಷಕರಿಂದ ಯಾವುದೇ ಶುಲ್ಕ ಪಡೆಯುತ್ತಿಲ್ಲ. ಇನ್ನೂ ಅನೇಕ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಉತ್ಸುಕರಾಗಿದ್ದಾರೆ. ಸುಮಾರು 43 ವರ್ಷ ಇತಿಹಾಸವಿರುವ ದಡ್ಡಲಕಾಡು ಶಾಲೆಯಲ್ಲಿ 278 ವಿದ್ಯಾರ್ಥಿಗಳು ಆಂಗ್ಲಮಾಧ್ಯಮದಲ್ಲೇ ಶಿಕ್ಷಣ ಪಡೆಯುತ್ತಿರುವುದು ವಿಶೇಷ.
-ಹಿಲ್ಡಾ ಪೆರೇರ, ಪ್ರಭಾರ ಮುಖ್ಯ ಶಿಕ್ಷಕಿ
ದಡ್ಡಲಕಾಡು ಶಾಲೆ ನೋಡಲು ಖಾಸಗಿ ಶಾಲೆಯಂತಿದ್ದು, ಕಲಿಕೆಗೆ ಪೂರಕ ವಾತಾವರಣವನ್ನು ಇಲ್ಲಿನ ಶಾಲಾಭಿವೃದ್ಧಿ, ಟ್ರಸ್ಟ್ ನಿರ್ಮಿಸಿಕೊಟ್ಟಿದೆ. ರಾಜ್ಯ ಸರಕಾರ 1ನೇ ತರಗತಿಯಿಂದಲೇ ಕನ್ನಡ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅವಕಾಶದ ಮಾಹಿತಿ ತಿಳಿದೊಡನೆ ನಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸಿದ್ದೇವೆ. ಶಾಲೆಯು ಆಕರ್ಷಕ ಸಮವಸ್ತ್ರ, ಶೂ, ಬೆಲ್ಟ್ ಎಲ್ಲವೂ ನೀಡಿದೆ. ಇದರಿಂದ ಖಾಸಗಿ ಶಾಲೆಯ ಡೊನೇಶನ್ ಹಾವಳಿ ತಪ್ಪಿದಂತಾಗಿದ್ದು, ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಿದೆ.
ಬಾಲಕೃಷ್ಣ, ಪೋಷಕರು
ನಮ್ಮ ಟ್ರಸ್ಟ್ ಶಾಲೆಯನ್ನು ದತ್ತು ಪಡೆದಿದ್ದು, ಪೋಷಕರು, ಊರ-ಪರವೂರ ದಾನಿಗಳ ಸಹಕಾರದೊಂದಿಗೆ ಸುಮಾರು 4.5 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿದೆ. ಸಕಲ ಸೌಕರ್ಯಗಳನ್ನು ಹೊಂದಿರುವ ದಡ್ಡಲಕಾಡು ಶಾಲೆಯಲ್ಲಿ ಇರುವಂತೆ 2 ಅಂತಸ್ತಿನ ಕಟ್ಟಡ, ವಿಶಾಲವಾದ ಆಟದ ಮೈದಾನ, ಶಾಲಾ ಮುಂಭಾಗ ಗಾರ್ಡನ್ ತಾಲೂಕಿನ ಇತರ ಎಲ್ಲಿಯೂ ಕಾಣಲು ಸಾಧ್ಯವಿಲ್ಲ.
-ಪ್ರಕಾಶ್ ಅಂಚನ್, ರಾಜ್ಯಾಧ್ಯಕ್ಷ, ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ
ಬೇರೆ ಶಾಲೆಗಳಿಗೆ ಹೋಲಿಸಿದರೆ ನಮ್ಮ ಶಾಲೆಯಲ್ಲಿ ಅಧಿಕ ಮಕ್ಕಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಪಂಚಾಯತ್ ಹತ್ತಿರವಿದ್ದ ಕಾರಣ ಕೊಳವೆಬಾವಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕವಿದೆ. ಸರಕಾರದಿಂದ ಯಾವುದೇ ಅನುದಾನವಿಲ್ಲದೆ ಶಾಲೆಗೆ ಖಾಸಗಿ ಮಾದರಿಯಲ್ಲಿಯೇ ಹೈಟೆಕ್ ಸ್ಪರ್ಶ ನೀಡಲಾಗಿದೆ. ಅನುಭವವುಳ್ಳ 18 ಮಂದಿ ಶಿಕ್ಷಕರಿದ್ದು, ಉಚಿತ ಸ್ಮಾರ್ಟ್ ಕ್ಲಾಸ್ ಕೂಡ ಇದೆ. ಪೋಷಕರು ಶಾಲೆಯ ಮೇಲಿಟ್ಟಿರುವ ವಿಶ್ವಾಸ, ನಂಬಿಕೆಯಿಂದಾಗಿ ನಮ್ಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯಾದ್ಯಂತ ಸರಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಸಂಚಲನ ಉಂಟಾಗಿದೆ.
-ರಾಮಚಂದ್ರ ಪೂಜಾರಿ ಕರೆಂಕಿ, ಎಸ್‌ಡಿಎಂಸಿ ಅಧ್ಯಕ್ಷರು
ಕಲಿಯುತ್ತಿರುವ ಮಕ್ಕಳ ವಿವರ:
ಎಲ್‌ಕೆಜಿ: 77, ಯುಕೆಜಿ: 93
1ನೇ ತರಗತಿ ಆಂಗ್ಲ ಮಾಧ್ಯಮ: 108
2ನೇ ತರಗತಿ ಕನ್ನಡ ಮಾಧ್ಯಮ: 81
3ನೇ ತರಗತಿ ಕನ್ನಡ ಮಾಧ್ಯಮ: 63
4ನೇ ತರಗತಿ ಕನ್ನಡ ಮಾಧ್ಯಮ: 63
5ನೇ ತರಗತಿ ಕನ್ನಡ ಮಾಧ್ಯಮ: 43
6ನೇ ತರಗತಿ ಕನ್ನಡ ಮಾಧ್ಯಮ: 34
7ನೇ ತರಗತಿ ಕನ್ನಡ ಮಾಧ್ಯಮ: 42
8ನೇ ತರಗತಿ ಕನ್ನಡ ಮಾಧ್ಯಮ: 36
ಒಟ್ಟು ಸಂಖ್ಯೆ 640