ಸಿಎಂ ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲು: ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್
ಬೆಂಗಳೂರು, ಡಿ.2: ರಾಜ್ಯದ ಹದಿನೈದು ಕ್ಷೇತ್ರಗಳ ಉಪಚುನಾವಣೆಗೆ ಡಿ.5ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ, ಬಹಿರಂಗ ಪ್ರಚಾರಕ್ಕೆ ನಾಳೆ(ಡಿ.3) ಸಂಜೆ 6 ಗಂಟೆಗೆ ತೆರೆಬೀಳಲಿದೆ. ಡಿ.4ರಂದು ಅಭ್ಯರ್ಥಿಗಳು ಮನೆ-ಮನೆಗೆ ತೆರಳಿ ಮತಯಾಚನೆ ಮಾಡಲು ಅವಕಾಶವಿದೆ. ಮತದಾನ ಆರಂಭಕ್ಕೂ 48 ಗಂಟೆ ಮೊದಲು ಮತಯಾಚನೆ ಕೊನೆಗೊಳಿಸಬೇಕು ಎಂದು ಚುನಾವಣಾ ಆಯೋಗದ ಸೂಚನೆ ನೀಡಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಅನುಸರಿಸಬೇಕಾದ ಕ್ರಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಸೋಮವಾರ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.11ರಿಂದ ಆರಂಭವಾದ ಉಪಚುನಾವಣಾ ಪ್ರಕ್ರಿಯೆ, ಕಳೆದ ಹತ್ತು ದಿನಗಳಲ್ಲಿ ಬಿರುಸು ಪಡೆದಿತ್ತು. ಪ್ರಮುಖ ಎದುರಾಳಿಗಳಾದ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್, ಜೆಡಿಎಸ್ ಘಟಾನುಘಟಿ ಮುಖಂಡರು ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ.
ಮತದಾರರಲ್ಲದವರು ಡಿ.3ರ ಸಂಜೆ 6ರ ಬಳಿಕ ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಕ್ಷೇತ್ರದಿಂದ ಹೊರಗೆ ಕಳುಹಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೊಟೇಲ್, ವಸತಿ ಗೃಹ, ಪಕ್ಷದ ಕಚೇರಿಗಳ ಮೇಲೆ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ನಿಗಾ ಇಡಲಿದ್ದಾರೆ. ಉಚಿತ ಊಟ, ವಸತಿ ಹಾಗೂ ವಾಹನದ ವ್ಯವಸ್ಥೆ ಕಲ್ಪಿಸಿ ಆಮಿಷವೊಡ್ಡಿದರೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಂಜೀವ್ ಕುಮಾರ್ ಎಚ್ಚರಿಸಿದರು.
ಮತದಾನದ ಮುನ್ನಾದಿನ ಕ್ಷೇತ್ರದಲ್ಲಿ ನಿಷೇಧಾಜ್ಞೆ ಜಾರಿಯಾಗಲಿದೆ. ಐವರಿಗಿಂತ ಹೆಚ್ಚಿನ ಜನ ಗುಂಪುಗೂಡುವಂತಿಲ್ಲ. ಮನೆಮನೆಗೆ ತೆರಳಿ ಮತಯಾಚನೆ ಮಾಡುವವರು ನಿಯಮ ಪಾಲಿಸುವುದು ಕಡ್ಡಾಯ. ಮೆರವಣಿಗೆ, ಜಾಥಾಗಳಿಗೆ ಅವಕಾಶವಿಲ್ಲ. ಧ್ವನಿವರ್ಧಕ ಬಳಸಲು ಜಿಲ್ಲಾಡಳಿತ ಅನುಮತಿ ನೀಡುವುದಿಲ್ಲ. ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ವಿನಾಯಿತಿ ಸಿಗಲಿದೆ ಎಂದರು.
ಲಂಚ, ಅನುಚಿತ ವರ್ತನೆ, ಮತದಾರರ ಮೇಲೆ ಪ್ರಭಾವ ಬೀರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ವ್ಯಕ್ತಿಗತ ಟೀಕೆ ಮಾಡುವಂತಿಲ್ಲ. ಮತಗಟ್ಟೆಯ ನೂರು ಮೀಟರ್ ಅಂತರದೊಳಗೆ ಚುನಾವಣಾ ಪ್ರಚಾರ ಕೈಗೊಳ್ಳುವಂತಿಲ್ಲ ಎಂಬ ಸೂಚನೆ ನೀಡಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಚುನಾವಣಾ ಬಹಿರಂಗ ಪ್ರಚಾರದ ವೇಳೆ ‘ಲಿಂಗಾಯತ ಮತಗಳು ಬೇರೆ ಕಡೆ ಹೋಗಬಾರದು’ ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ ಪ್ರತಿಪಕ್ಷಗಳು ನೀಡಿದ್ದ ದೂರನ್ನು ಸ್ವೀಕರಿಸಿದ್ದು, ಸಿಎಂ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ
-ಸಂಜೀವ್ ಕುಮಾರ್, ಮುಖ್ಯ ಚುನಾವಣಾಧಿಕಾರಿ