ಈ ಪರಿಸ್ಥಿತಿಯಲ್ಲಿ ದೇಶ ಹಾಗೂ ಸಮಾಜ ಉಳಿದು ಬೆಳೆಯಲು ಸಾಧ್ಯವೇ?
ನಿರ್ಭಯಾ ಪ್ರಕರಣದ ನಂತರ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಯಿತು. ನಂತರ ಕಾನೂನು ತಿದ್ದುಪಡಿಯಾಯಿತು. ಅತ್ಯಾಚಾರಿಗಳಿಗೆ ನೇಣಿಗೂ ಏರಿಸುವ ಕಾನೂನು ಬಂತು. ಕೆಲವರನ್ನು ನೇಣಿಗೆ ಏರಿಸಬೇಕೆಂಬ ತೀರ್ಪುಗಳೂ ಕೂಡ ಬಂದವು. ಆದರೆ ನಂತರವೂ ಅತ್ಯಾಚಾರಗಳು ಹೆಚ್ಚಾಗುತ್ತಲೇ ಹೋಗುತ್ತಿವೆ. ಬದಲಿಗೆ ಮೊದಲಿಗೆ ಅತ್ಯಾಚಾರಗಳು ಮಾತ್ರ ನಡೆಯುತ್ತಿದ್ದಲ್ಲಿ ಈಗ ಅತ್ಯಾಚಾರ ಮಾಡಿದ ಮೇಲೆ ಸಾಕ್ಷಿ ನಾಶ ಮಾಡಲು ಕಗ್ಗೊಲೆಗಳ ಪ್ರಕರಣಗಳು ಹೆಚ್ಚಿದವು. ಇದು ಏನನ್ನು ತೋರಿಸುತ್ತವೆ?.
ವೃತ್ತಿಯಲ್ಲಿ ಬೆಳೆಯುತ್ತಿದ್ದ ಮತ್ತೊಂದು ಯುವ ವಿದ್ಯಾವಂತ ಹೆಣ್ಣು ಮಗಳು ತೆಲಂಗಾಣ ರಾಜ್ಯದಲ್ಲಿ ವಿಕೃತ ಕಾಮುಕರಿಂದ ಅತ್ಯಾಚಾರಕ್ಕೀಡಾಗಿ ಸುಟ್ಟು ಕರಕಲಾಗಿ ಹತ್ಯೆಗೀಡಾಗಿದ್ದಾಳೆ. ಆಕೆ ವೃತ್ತಿಯಲ್ಲಿ ಪಶುವೈದ್ಯೆ. ಸ್ಕೂಟರ್ ಪಂಕ್ಚರ್‌ಗೆ ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ಎಳೆದುಕೊಂಡು ಹೋದ ವಿಕ್ಷಿಪ್ತ, ವಿಕೃತ ಹಾಗೂ ಕ್ರೂರ ಗುಂಪು ಅತ್ಯಾಚಾರ ಮಾಡಿದ್ದಲ್ಲದೆ ನಂತರ ಆಕೆಯನ್ನು ಪೆಟ್ರೋಲಿನಲ್ಲಿ ಸುಟ್ಟು ಹಾಕಿರುವ ಘಟನೆಯನ್ನು ಹೇಗೆಂದು ಹೇಳುವುದೋ ಗೊತ್ತಾಗದಂತಹ ಸ್ಥಿತಿಯಾಗಿದೆ. ಆಕೆ ಹಾಗೂ ಅದಕ್ಕೂ ಹಿಂದಿನ ಇಂತಹುದೇ ಪ್ರಕರಣಗಳಲ್ಲಿ ಆ ಹೆಣ್ಣುಮಕ್ಕಳು ಅನುಭವಿಸಿದ ಮಾನಸಿಕ ಹಾಗೂ ದೈಹಿಕ ನರಕ ಯಾತನೆಗಳನ್ನು ಹೇಗೆಂದು ಶಬ್ದಗಳಲ್ಲಿ ಹಿಡಿದಿಡಲು ಸಾಧ್ಯ. ಹೃದಯ ಕಲಕಿ, ಹಿಂಡಿ ಹಿಪ್ಪೆಯಾಗುವಂತಹ ಭೀಕರ ಘಟನೆಗಳವು. ಭಾರತದಲ್ಲಿ ಮಹಿಳೆಯರ ಮೇಲೆ, ಎಳೆ ಬಾಲಕಿಯರ ಮೇಲೆ ಇಂತಹ ಅಮಾನುಷ, ವಿಕ್ಷಿಪ್ತ ಹಾಗೂ ವಿಕೃತ ದಾಳಿ ಹಾಗೂ ಕಗ್ಗೊಲೆಗಳು ಸಹಜ ಘಟನೆಗಳೆನ್ನುವಷ್ಟು ನಡೆಯುತ್ತಿವೆ. ಕೆಲವು ಹೊರ ಪ್ರಪಂಚಕ್ಕೆ ಗೊತ್ತಾಗುತ್ತವೆ. ಹಲವು ಗೊತ್ತಾಗುವುದೇ ಇಲ್ಲ. ಹೊರ ಪ್ರಪಂಚಕ್ಕೆ ಗೊತ್ತಾದರೂ ಶಿಕ್ಷೆಯಾದ ಪ್ರಕರಣಗಳು ಬಹಳ ಕಡಿಮೆ. ನಮ್ಮ ಕರ್ನಾಟಕದಲ್ಲಿಯೂ ಇಂತಹ ಘಟನೆಗಳು ಹಲವು ಬೆಳಕಿಗೆ ಬಂದಿದ್ದರೂ ಶಿಕ್ಷೆಯಾಗಿದ್ದೂ ಕಡಿಮೆ. ಕೆಲವು ಟೆಕ್ಕಿಗಳ ಪ್ರಕರಣದಲ್ಲಿ, ಮಣಿಪಾಲದ ಪ್ರಕರಣದಲ್ಲಿ ಶಿಕ್ಷೆಯಾಗಿದ್ದು ಬಿಟ್ಟರೆ ಉಳಿದಂತೆ ಬೆಳಕಿಗೆ ಬಂದ ಮರ್ಯಾದಾ ಹತ್ಯೆಗಳಾಗಲೀ, ತೀರ್ಥಹಳ್ಳಿ, ಧರ್ಮಸ್ಥಳ, ಉಜಿರೆಗಳ ಅತ್ಯಾಚಾರ ಹತ್ಯಾ ಪ್ರಕರಣಗಳಾಗಲೀ ಸರಿಯಾದ ತನಿಖೆಯತ್ತಲೂ ಸಾಗದೇ ಹೋಗಿವೆ. ಇನ್ನು ಶಿಕ್ಷೆಯ ಮಾತು ದೂರವೇ ಉಳಿಯಿತು. ವಿಜಯಪುರದ ದಾನಮ್ಮ ಎಂಬ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಕಗ್ಗೊಲೆ ಪ್ರಕರಣದ ಆರೋಪಿಗಳನ್ನು ಆಗಿನ ರಾಜ್ಯ ಸರಕಾರವೇ ರಕ್ಷಿಸಿತ್ತು ಎಂಬ ಆರೋಪವಿದೆ.
ಹೆಣ್ಣು ಮಕ್ಕಳಿಗೆ ಇಂತಹ ಭಾರೀ ಸಾಮಾಜಿಕ ಅಭದ್ರತೆಗೆ ಪ್ರಧಾನ ಕಾರಣ ಇಂದಿನ ಭಾರತದ ಸಮಾಜ ಎದುರಿಸುತ್ತಿರುವ ಭಾರೀ ಬಿಕ್ಕಟ್ಟುಗಳು ಹಾಗೂ ಕುಸಿತಗಳು. ಆಳುವ ಶಕ್ತಿಗಳು ಯುವಜನರು ಹೆಚ್ಚುತ್ತಿರುವ ವ್ಯಗ್ರತೆಗಳನ್ನು ಮಹಿಳೆಯರ ಮೇಲೆ, ದಲಿತ ದಮನಿತರ ಮೇಲೆ ತಿರುಗಿಸುವಲ್ಲಿ ಹತ್ತು ಹಲವು ರೀತಿಗಳಲ್ಲಿ ತೊಡಗಿವೆ. ಊಳಿಗಮಾನ್ಯ ರಾಜ ವ್ಯವಸ್ಥೆ, ಮಠ ಮಾನ್ಯ ವ್ಯವಸ್ಥೆಯ ಸಂಸ್ಥೆಗಳು ಮಹಿಳೆಯನ್ನು ಪುರುಷನ ಸುಖಕ್ಕೋಸ್ಕರವೇ ಇರುವುದು, ಆತನ ಆಸ್ತಿ ಎಂದೆಲ್ಲಾ ಬಂಧಿಸಿಟ್ಟಿರುವುದು ಒಂದೆಡೆಯಾದರೆ ಮತ್ತೊಂದೆಡೆ ಅಂತಃಪುರದ ದಾಸಿಯರು, ಅಂದರೆ ರಾಜರುಗಳ, ಸಾಮಂತರ, ಭೂಮಾಲಕ ಆಸ್ತಿವಂತರ ಸ್ವತ್ತನ್ನಾಗಿ ಪರಿಗಣಿಸಲ್ಪಟ್ಟಿದ್ದಳು. ಚಾಣಕ್ಯನ ಅರ್ಥಶಾಸ್ತ್ರ, ಮನುಸ್ಮತಿ ಈ ವ್ಯವಸ್ಥೆಯನ್ನು ಸಾಂಸ್ಥೀಕರಿಸಿಟ್ಟಿತ್ತು.
ಹದಿನೆಂಟನೇ ಶತಮಾನದ ನಂತರದ ಜಗತ್ತಿನಲ್ಲಿ ಬದಲಾವಣೆಯ ಪರಿಣಾಮವಾಗಿ ಮಹಿಳೆ ಹಳೆಯ ಊಳಿಗಮಾನ್ಯ ಸಂಕೋಲೆಗಳಲ್ಲಿ ಕೆಲವದರಿಂದ ಬಿಡುಗಡೆಗೊಂಡಳು ಎಂದು ಭಾವಿಸುವಾಗಲೂ ಆಕೆ ಮತ್ತೆ ಹೊಸ ಬಂಡವಾಳಶಾಹಿ ಬಂಧನಗಳಿಗೆ, ಸಂಕೋಲೆಗಳಿಗೆ ಒಳಗಾದಳು. ಆಕೆಯನ್ನು ಮಾರುಕಟ್ಟೆಯ ಸರಕನ್ನಾಗಿ ಮಾಡಿತು ಕಾರ್ಪೊರೇಟ್ ವ್ಯವಸ್ಥೆ. ಅದು ಈಗ ವಿಪರೀತ ಮಟ್ಟ ತಲುಪಿದ್ದು ಆಕೆಯ ದೇಹ, ಮಾತು, ನೋಟ, ನಡಿಗೆ, ತೊಡುಗೆ, ಹಾವಭಾವ, ಬಳಸುವ ಸಾಧನ, ಅಂಗಗಳು, ಹೀಗೆ ಎಲ್ಲವನ್ನೂ ಲೈಂಗಿಕಗೊಳಿಸಿ ಮಾರುಕಟ್ಟೆಯ ಸರಕನ್ನಾಗಿ ಮಾಡಲಾಗಿದೆ. ಕಾರ್ಪೊರೇಟ್ ಜಗತ್ತು ಇಂದಿನ ಸ್ಥಿತಿಯನ್ನು ಯಾವ ಮಟ್ಟಕ್ಕೆ ಹದಗೆಡಿಸಿಟ್ಟಿದೆಯೆಂದರೆ ಹೆಣ್ಣು ಎಂಬ ಶಬ್ದ ಕಿವಿಗೆ ಬಿದ್ದೊಡನೆ, ಹೆಣ್ಣಿನ ಕಲ್ಪನೆ ಮನಸ್ಸಿನಲ್ಲಿ ಮೂಡಿದೊಡನೆ, ಹೆಣ್ಣು ಆಕಾರವನ್ನು ನೋಡಿದೊಡನೆ ಲೈಂಗಿಕ ಕ್ರಿಯೆಗಳ ಚಿತ್ರಣವೇ ಪ್ರೈಮರಿ ಶಾಲೆಯ ಮಕ್ಕಳ ಮನಸ್ಸಿನಲ್ಲೂ ಮೂಡಿಸುವಷ್ಟು ಲೈಂಗಿಕತೆಯ ಪರ್ಯಾಯ ಶಬ್ದವೇ ಹೆಣ್ಣು ಎನ್ನುವ ಮಟ್ಟಕ್ಕೆ ತಂದಿಡಲಾಗಿದೆ. ಅದರ ನಂತರವೇ ತಾಯಿ, ಅಕ್ಕ, ತಂಗಿ, ಇತ್ಯಾದಿ ಆಗಿವೆ. ಅಂತರ್ಜಾಲ, ಮೊಬೈಲ್ ಬಂದ ನಂತರ ಲೈಂಗಿಕ ಮಾರುಕಟ್ಟೆಯ ಜಾಲ ವಿಸ್ತೃತಗೊಳಿಸಲಾಯಿತು.
ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಫಿಲಿಪ್ಪೀನ್ಸ್ ನಂತಹ ದೇಶಗಳು ಹತ್ತು ಹನ್ನೆರಡರ ಹೆಣ್ಣುಮಕ್ಕಳ ಕಳ್ಳಸಾಗಾಟಕ್ಕೆ ಅಗ್ರ ಸ್ಥಾನದಲ್ಲಿವೆ. ಇದರಲ್ಲಿ ಮಿಲಿಯಗಟ್ಟಲೆ ಎಳೆ ಹೆಣ್ಣು ಮಕ್ಕಳು ಬಲಿಪಶುಗಳಾಗುತ್ತಿವೆ. ಜೊತೆಯಲ್ಲಿ ಮಾನವ ಸಹಜ ಪ್ರೀತಿಯ ಸಂಬಂಧವಾದ ಲೈಂಗಿಕತೆಯನ್ನು ಇನ್ನಿಲ್ಲದಂತೆ ವಿಕೃತಗೊಳಿಸಿ, ಮಾನವ ಸಮುದಾಯಕ್ಕೇ ಅಪಾಯಕಾರಿಯನ್ನಾಗಿ ಮಾಡಲಾಗಿದೆ. ಪ್ರೀತಿ ಹಾಗೂ ಕಾಮದ ನವಿರಾದ ಹಾಗೂ ಪ್ರೀತಿಯ ಭಾವ ತೀವ್ರತೆಯ ಜೋಡಣೆಯನ್ನು ಯುವ ಮನಸ್ಸುಗಳಲ್ಲಿ ವಿಕೃತಗೊಳಿಸಿ ನಾಶ ಮಾಡಲಾಗುತ್ತಿದೆ. ಎಷ್ಟು ಮಟ್ಟಕ್ಕೆಂದರೆ ಪ್ರೀತಿಗೆ ಪರ್ಯಾಯ ಶಬ್ದ ಲೈಂಗಿಕ ಕ್ರಿಯೆ ಎನ್ನುವ ಮಟ್ಟಕ್ಕೆ ತಂದಿಡಲಾಗಿದೆ. ಅದಲ್ಲದೆ ಭಾರತದಂತಹ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಆರೋಗ್ಯಕರ ತಿಳುವಳಿಕೆ ನೀಡುವ ಜ್ಞಾನದ ಕೊರತೆ ತೀವ್ರವಾಗಿದೆ.
ಇಂದು ಭಾರತ ತೀವ್ರವಾದ ಆರ್ಥಿಕ ಹಾಗೂ ಸಾಮಾಜಿಕವಾಗಿ ಕ್ಷೋಭೆಯಲ್ಲಿದೆ. ಅದರ ಭಾಗವಾಗಿ ರಾಜಕೀಯ ಅಸ್ಥಿರತೆಯೂ ತೀವ್ರವಾಗಿದೆ. ಇವೆಲ್ಲಾ ದಿನೇ ದಿನೇ ಯುವಜನರಲ್ಲಿ ವ್ಯಗ್ರತೆಗಳನ್ನು ತೀವ್ರಗೊಳಿಸುತ್ತಿವೆ. ಜೊತೆಗೆ ಮೊಬೈಲ್ ಮೂಲಕ ಸಿಗುವ ಅಸಹಜ, ವಿಕ್ಷಿಪ್ತ ಲೈಂಗಿಕ ಚಿತ್ರಗಳು ಯುವ ಮನಸ್ಸುಗಳನ್ನು ಮತ್ತಷ್ಟು ವ್ಯಗ್ರಗೊಳಿಸುತ್ತಿವೆ. ಇವೆಲ್ಲದರ ಪರಿಣಾಮ ಇಂದು ಪ್ರಿಯಾಂಕಾ ರೆಡ್ಡಿ, ನಿನ್ನೆ ಸೌಮ್ಯಾ ಅಂದು ನಿರ್ಭಯಾರಂತಹವರು ಬಲಿಯಾಗುತ್ತಾ ಬರುತ್ತಿದ್ದಾರೆ. ಕಾನೂನು ಬಿಗಿ ಮಾಡುವ, ನೇಣಿಗೇರಿಸುವ ಕ್ರಮಗಳಿಂದ ಈ ಸಾಮಾಜಿಕ ಸಮಸ್ಯೆಗೆ ಪರಿಹಾರ ಕಾಣಲು ಸಾಧ್ಯವಿಲ್ಲ ಅನ್ನುವುದು ಈಗಾಗಲೇ ಸಾಬೀತಾಗಿದೆ. ಯಾಕೆಂದರೆ ನಮ್ಮ ಎಲ್ಲಾ ವ್ಯವಸ್ಥೆಗಳಲ್ಲಿ ಪುರುಷಾಧಿಪತ್ಯದ ಪ್ರಾಬಲ್ಯವಿದೆ.
ನಿರ್ಭಯಾ ಪ್ರಕರಣದ ನಂತರ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಯಿತು. ನಂತರ ಕಾನೂನು ತಿದ್ದುಪಡಿಯಾಯಿತು. ಅತ್ಯಾಚಾರಿಗಳಿಗೆ ನೇಣಿಗೂ ಏರಿಸುವ ಕಾನೂನು ಬಂತು. ಕೆಲವರನ್ನು ನೇಣಿಗೆ ಏರಿಸಬೇಕೆಂಬ ತೀರ್ಪುಗಳೂ ಕೂಡ ಬಂದವು. ಆದರೆ ನಂತರವೂ ಅತ್ಯಾಚಾರಗಳು ಹೆಚ್ಚಾಗುತ್ತಲೇ ಹೋಗುತ್ತಿವೆ. ಬದಲಿಗೆ ಮೊದಲಿಗೆ ಅತ್ಯಾಚಾರಗಳು ಮಾತ್ರ ನಡೆಯುತ್ತಿದ್ದಲ್ಲಿ ಈಗ ಅತ್ಯಾಚಾರ ಮಾಡಿದ ಮೇಲೆ ಸಾಕ್ಷಿ ನಾಶ ಮಾಡಲು ಕಗ್ಗೊಲೆಗಳ ಪ್ರಕರಣಗಳು ಹೆಚ್ಚಿದವು. ಇದು ಏನನ್ನು ತೋರಿಸುತ್ತವೆ?. ಕೇವಲ ಕಾನೂನುಗಳಿಂದ ಈ ಅಮಾನುಷ ಪಿಡುಗನ್ನು ತಡೆಗಟ್ಟಲು ಸಾಧ್ಯವಿಲ್ಲವೆಂದು ತಾನೆ?. ಜನರನ್ನು ಲೈಂಗಿಕತೆ, ಮಾದಕತೆ, ಮಧ್ಯ, ಜಾತಿ, ಧರ್ಮ, ಲಿಂಗ ಭೇದಗಳ ವ್ಯಸನಗಳಲ್ಲಿ ಮುಳುಗಿಸಿ ಅವರು ತಮ್ಮ ಬದುಕಿಗೇ ಮಾರಕವಾಗಿರುವ ಸಂಗತಿಗಳ ಬಗ್ಗೆ ಹೊರಳದಂತೆ ಮಾಡುವ ಹುನ್ನಾರವದು. ಸಾಮಾಜಿಕ ವ್ಯಗ್ರತೆಗಳನ್ನು ಹೆಣ್ಣುಮಕ್ಕಳ ಮೇಲೆ ತಿರುಗಿಸುವ ದುಷ್ಟ ಸಂಚೂ ಕೂಡ ಹೌದು.
ಈ ಅಂಶಗಳನ್ನು ಗಮನದಲ್ಲಿಟ್ಟು ಪರಿಹಾರದತ್ತ ಸಾಗುವ ಚರ್ಚೆಗಳು ಹೆಚ್ಚಾಗಬೇಕಿದೆ. ಅಮಾನುಷ ಅಪರಾಧಿಗಳಿಗೆ ಕಠಿಣ ಶಿಕ್ಷೆ ಜಾರಿಯಾಗುವಂತೆ ಒತ್ತಾಯ ಹೇರುತ್ತಾ, ಪ್ರತಿರೋಧ ಒಡ್ಡುತ್ತಲೇ, ಜನಸಾಮಾನ್ಯರು ಪ್ರಜ್ಞಾಪೂರ್ವಕವಾಗಿ ಈ ಪಿಡುಗಿನ ವಿರುದ್ಧ ನಿಲ್ಲುವಂತೆ ಮಾಡಬೇಕಾಗಿದೆ. ಮಾಧ್ಯಮ, ಸಾಹಿತ್ಯ, ದಿನನಿತ್ಯದ ವಿಚಾರಗಳಲ್ಲಿ ಮಹಿಳೆಯನ್ನು ಉಪಭೋಗಿ ವಸ್ತುವಂತೆ ಬಿಂಬಿಸುವ ಎಲ್ಲಾ ವಿಚಾರಗಳ ವಿರುದ್ಧ ನಿಲ್ಲಬೇಕಿದೆ. ವ್ಯಕ್ತಿಗತ, ಕೌಟುಂಬಿಕ ಹಾಗೂ ಸಂಘಟಿತ ವಿರೋಧ ಒಡ್ಡಬೇಕಿದೆ.
ಇಂದು ದೇಶ ತಲುಪುತ್ತಿರುವ ಭೀಕರ ಪರಿಸ್ಥಿತಿಯಲ್ಲಿ ಎಷ್ಟೆಲ್ಲಾ ಹೆಣ್ಣು ಮಕ್ಕಳು ಬಲಿಪಶುಗಳಾಗಬೇಕಾಗುತ್ತೋ ಹೇಳಲಾಗದು. ಅತ್ಯಂತ ನೋವು, ವಿಷಾದದ ಹಾಗೂ ರೋಷದ ಸಂಗತಿಯಿದು.
ಮಿಂಚಂಚೆ: nandakumarnandana67gmail.com