‘ಸ್ವೀಟ್ ’ಅಲ್ಲದ ಸ್ವೀಟ್ಸ್ ಸಿಂಡ್ರೋಮ್
ಸ್ವೀಟ್ಸ್ ಸಿಂಡ್ರೋಮ್ ಹೆಸರನ್ನು ಹೆಚ್ಚಿನವರು ಕೇಳಿರಲಿಕ್ಕಿಲ್ಲ. ಇದೊಂದು ಅಪರೂಪದ ಚರ್ಮರೋಗವಾಗಿದೆ. ಜ್ವರ ಹಾಗೂ ಹೆಚ್ಚಾಗಿ ತೋಳುಗಳು,ಕುತ್ತಿಗೆ,ತಲೆ ಮತ್ತು ಬೆನ್ನು ಇತ್ಯಾದಿಗಳಲ್ಲಿ ನೋವಿನಿಂದ ಕೂಡಿದ ಗಾಯಗಳಂತಹ ದದ್ದುಗಳು ಕಾಣಿಸಿಕೊಳ್ಳುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ.
ಸ್ವೀಟ್ಸ್ ಸಿಂಡ್ರೋಮ್‌ಗೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ. ಕೆಲವರಲ್ಲಿ ಸೋಂಕು,ಅಸ್ವಸ್ಥತೆ ಅಥವಾ ಕೆಲವು ಔಷಧಿಗಳು ಸ್ವೀಟ್ಸ್ ಸಿಂಡ್ರೋಮ್‌ಗೆ ಕಾರಣವಾಗುತ್ತವೆ. ಕೆಲವು ವಿಧಗಳ ಕ್ಯಾನ್ಸರ್ ರೋಗಿಗಳಲ್ಲೂ ಈ ಚರ್ಮರೋಗವು ಕಾಣಿಸಿಕೊಳ್ಳುತ್ತದೆ.
ಸ್ವೀಟ್ಸ್ ಸಿಂಡ್ರೋಮ್‌ನ ಚಿಕಿತ್ಸೆಯಲ್ಲಿ ಪ್ರಿಡ್ನಿಸೋನ್‌ನಂತಹ ಕಾರ್ಟಿಕೊಸ್ಟಿರಾಯ್ಡ್ ಮಾತ್ರೆಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಚಿಕಿತ್ಸೆ ಆರಂಭಿಸಿದ ಕೆಲವೇ ದಿನಗಳಲ್ಲಿ ಈ ರೋಗದ ಲಕ್ಷಣಗಳು ಮಾಯವಾಗುತ್ತವೆ,ಅದರೆ ಮರುಕಳಿಸುವುದು ಸಾಮಾನ್ಯವಾಗಿದೆ.
ತೋಳುಗಳು, ಕುತ್ತಿಗೆ, ತಲೆ ಇತ್ಯಾದಿ ಕಡೆಗಳಲ್ಲಿ ಸಣ್ಣ ಗುಳ್ಳೆಗಳಂತಹ ಉಬ್ಬಿದ ರಚನೆಗಳು ಕಾಣಿಸಿಕೊಳ್ಳುವುದು ಈ ರೋಗದ ಮುಖ್ಯ ಲಕ್ಷಣವಾಗಿದೆ. ಹೆಚ್ಚಾಗಿ ಜ್ವರ ಅಥವಾ ಶ್ವಾಸಕೋಶಗಳ ಸೋಂಕಿನ ಬಳಿಕ ದಿಢೀರ್ ಆಗಿ ಇವು ಕಾಣಿಸಿಕೊಳ್ಳುತ್ತವೆ. ಇವು ಗಾತ್ರದಲ್ಲಿ ವೇಗವಾಗಿ ಬೆಳೆಯುತ್ತವೆ ಮತ್ತು ಅಲ್ಲಲ್ಲಿ ಗುಂಪಾಗಿ ಒಂದು ಇಂಚಿನವರೆಗೂ ವಿಸ್ತರಿಸಿಕೊಳ್ಳುತ್ತವೆ.
ನೋವಿನಿಂದ ಕೂಡಿದ ಕೆಂಪು ದದ್ದುಗಳು ಚರ್ಮದಲ್ಲಿ ಕಾಣಿಸಿಕೊಂಡರೆ ಮತ್ತು ಅವು ಬಹು ಬೇಗನೆ ದೊಡ್ಡದಾಗುತ್ತಿದ್ದರೆ ಸೂಕ್ತ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.
ಹೆಚ್ಚಿನ ಪ್ರಕರಣಗಳಲ್ಲಿ ಸ್ವೀಟ್ಸ್ ಸಿಂಡ್ರೋಮ್‌ಗೆ ಕಾರಣ ಏನು ಎನ್ನುವುದು ಪತ್ತೆಯಾಗುವುದಿಲ್ಲ. ಕೆಲವೊಮ್ಮೆ ಈ ರೋಗವು ಕ್ಯಾನ್ಸರ್‌ನೊಂದಿಗೆ ಗುರುತಿಸಿಕೊಂಡಿರುತ್ತದೆ.
ಔಷಧಿಗಳ ಅಡ್ಡಪರಿಣಾಮದಿಂದಲೂ ಇದು ಉಂಟಾಗುತ್ತದೆ. ಸಾಮಾನ್ಯವಾಗಿ ಬಿಳಿಯ ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸುವ ನಿರ್ದಿಷ್ಟ ವಿಧದ ಔಷಧಿಯು ಸ್ವೀಟ್ಸ್ ಸಿಂಡ್ರೋಮ್‌ಗೆ ಕಾರಣವಾಗುತ್ತದೆ.
ಸ್ವೀಟ್ಸ್ ಸಿಂಡ್ರೋಮ್ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆಯಾದರೂ ಕೆಳಗಿನ ಕೆಲವು ಅಂಶಗಳು ಈ ರೋಗವುಂಟಾಗುವ ಅಪಾಯವನ್ನು ಹೆಚ್ಚಿಸುತ್ತವೆ.
ಲಿಂಗ: ಸಾಮಾನ್ಯವಾಗಿ ಸ್ವೀಟ್ಸ್ ಸಿಂಡ್ರೋಮ್ ಪುರುಷರಿಗಿಂತ ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತದೆ.
ವಯಸ್ಸು: ಹಿರಿಯ ವಯಸ್ಸಿನವರು ಮತ್ತು ಶಿಶುಗಳಲ್ಲಿಯೂ ಸ್ವೀಟ್ಸ್ ಸಿಂಡ್ರೋಮ್ ಉಂಟಾಗುತ್ತದೆಯಾದರೂ ಈ ರೋಗವು ಮುಖ್ಯವಾಗಿ 30ರಿಂದ 60 ವರ್ಷ ವಯೋಮಾನದ ಗುಂಪಿನವರಲ್ಲಿ ಕಾಣಿಸಿಕೊಳ್ಳುತ್ತದೆ.
ಕ್ಯಾನ್ಸರ್: ಕೆಲವೊಮ್ಮೆ ಸ್ವೀಟ್ಸ್ ಸಿಂಡ್ರೋಮ್ ಕ್ಯಾನ್ಸರ್‌ನೊಂದಿಗೆ,ಹೆಚ್ಚಾಗಿ ರಕ್ತಕ್ಯಾನ್ಸರ್‌ನೊಂದಿಗೆ ಗುರುತಿಸಿಕೊಂಡಿರುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ತನ ಕ್ಯಾನ್ಸರ್ ಅಥವಾ ಕರುಳಿನ ಕ್ಯಾನ್ಸರ್‌ನಂತಹ ಟ್ಯೂಮರ್ ಬೆಳವಣಿಗೆಯಿದ್ದಾಗಲೂ ಸ್ವೀಟ್ಸ್ ಸಿಂಡ್ರೋಮ್ ಕಾಣಿಸಿಕೊಳ್ಳುತ್ತದೆ.
ಇತರ ಆರೋಗ್ಯ ಸಮಸ್ಯೆಗಳು: ಶ್ವಾಸನಾಳದ ಮೇಲ್ಭಾಗದ ಸೋಂಕುಗಳ ಬಳಿಕ ಸ್ವೀಟ್ಸ್ ಸಿಂಡ್ರೋಮ್ ಕಾಣಿಸಿಕೊಳ್ಳಬಹುದು. ಹಲವರಲ್ಲಿ ದದ್ದುಗಳು ಕಾಣಿಸಿಕೊಳ್ಳುವ ಮೊದಲು ಫ್ಲೂನಂತಹ ಲಕ್ಷಣಗಳು ಕಂಡುಬಂದಿರುತ್ತವೆ. ಕರುಳಿನ ಉರಿಯೂತದೊಂದಿಗೂ ಈ ರೋಗವು ಗುರುತಿಸಿಕೊಂಡಿದೆ.
ಗರ್ಭಾವಸ್ಥೆ: ಕೆಲವು ಮಹಿಳೆಯರು ಗರ್ಭ ಧರಿಸಿದಾಗ ಸ್ವೀಟ್ಸ್ ಸಿಂಡ್ರೋಮ್ ಕಾಣಿಸಿಕೊಳ್ಳುತ್ತದೆ.
ಔಷಧಿಗಳು: ಕೆಲವು ಔಷಧಿಗಳ ಅಡ್ಡಪರಿಣಾಮಗಳೂ ಈ ಚರ್ಮರೋಗಕ್ಕೆ ಕಾರಣವಾಗುತ್ತವೆ. ಅಝಥಾಯೊಪ್ರಿನ್,ನಿರ್ದಿಷ್ಟ ಆ್ಯಂಟಿ ಬಯಾಟಿಕ್‌ಗಳು,ಕೆಲವು ಸ್ಟಿರಾಯ್ಡಿ ಅಲ್ಲದ ಉರಿಯೂತ ನಿರೋಧಕ ಔಷಧಿಗಳು ಸ್ವೀಟ್ಸ್ ಸಿಂಡ್ರೋಮ್‌ನೊಂದಿಗೆ ತಳುಕು ಹಾಕಿಕೊಂಡಿವೆ.
ತೊಂದರೆಗಳು: ಚರ್ಮದ ಮೇಲಿನ ದದ್ದುಗಳು ಸೋಂಕಿಗೊಳಗಾಗುವ ಅಪಾಯವಿರುತ್ತದೆ. ಇದನ್ನು ತಡೆಯಲು ವೈದ್ಯರ ಸಲಹೆಯನ್ನು ಸರಿಯಾಗಿ ಪಾಲಿಸುವುದು ಅಗತ್ಯವಾಗುತ್ತದೆ. ಸ್ವೀಟ್ಸ್ ಸಿಂಡ್ರೋಮ್ ಕ್ಯಾನ್ಸರ್‌ನೊಂದಿಗೆ ಗುರುತಿಸಿಕೊಂಡಿರುವ ಪ್ರಕರಣಗಳಲ್ಲಿ ದದ್ದುಗಳು ಕಾಣಿಸಿಕೊಳ್ಳುವುದು ಅಥವಾ ಮರುಕಳಿಸುವುದು ಕ್ಯಾನ್ಸರ್‌ನ ಮೊದಲ ಸಂಕೇತವಾಗಿರಬಹುದು.