ನಿರಾಶಾವಾದಿ ರಾಜಕಾರಣದ ಹುಟ್ಟು
ಭಾರತದ ರಾಜಕೀಯದ ಸಾಂಸ್ಥಿಕ ಸನ್ನಿವೇಶದಲ್ಲಿ ಒಂದು ಬಗೆಯ ನಿರಾಶಾದಾಯಕ ಧೋರಣೆಗಳು ಬೆಳೆಯುತ್ತಿರುವುದು ಕಳವಳಕಾರಿಯಾಗಿದೆ. ಈ ಧೋರಣೆಗಳು ಪ್ರಕ್ರಿಯೆಗಳಲ್ಲೂ ಮತ್ತು ಸಾರಭೂತ ಮಟ್ಟಗಳೆರಡರಲ್ಲೂ ವ್ಯಕ್ತವಾಗುತ್ತಿವೆ. ಪ್ರಕ್ರಿಯಾತ್ಮಕ ವಿಷಯಗಳಲ್ಲಿ ಸ್ಥಾಪಿತವಾಗಿರುವ ವಿಧಿ ವಿಧಾನಗಳನ್ನು ತಮಗೆ ಸೂಕ್ತವಾಗುವಂತೆ ಬಗ್ಗಿಸಿಕೊಳ್ಳುವಂತಹ ಹಾಗೂ ಅಕಾಲದಲ್ಲಿ ಪ್ರಮಾಣ ವಚನ ಬೋಧಿಸುವುದು ಇತ್ಯಾದಿಗಳೆಲ್ಲಾ ಸಂವಿಧಾನಿಕ ನೀತಿ-ನಿಯಮಗಳ ಉಲ್ಲಂಘನೆಯೇ ಆಗಿದೆ. ಇನ್ನು ಸಾರಭೂತ ಮಟ್ಟದಲ್ಲಿ ಕೆಲವು ಚುನಾಯಿತ ಶಾಸಕರು ಪಕ್ಷ ಸಿದ್ಧಾಂತಗಳ ಪರಿವೇ ಇಲ್ಲದೆ ಅಧಿಕಾರ ರೂಢ ಅಥವಾ ಅಧಿಕಾರಕ್ಕೇರಲಿರುವ ಪಕ್ಷಗಳಿಗೆ ಹಾರಿಹೋಗುವುದರಲ್ಲಿ ಆ ಬಗೆಯ ಪ್ರವೃತ್ತಿಗಳು ವ್ಯಕ್ತವಾಗುತ್ತಿವೆ. ಇವೆಲ್ಲವೂ ಮಹಾರಾಷ್ಟ್ರದಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳಲ್ಲಿ ಇನ್ನೂ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ. ಈ ಧೋರಣೆಗಳು ಸ್ವೇಚ್ಛೆ, ದ್ರೋಹ ಮತ್ತು ರಹಸ್ಯಗಳ ಸ್ವರೂಪದಲ್ಲೂ ಸಹ ಅಭಿವ್ಯಕ್ತಗೊಳ್ಳುತ್ತವೆ. ಹೀಗೆ ಈ ಧೋರಣೆಗಳು ಸಾಂವಿಧಾನಿಕ ನಿಯಮಗಳ ಮೇಲೆ ದಾಳಿ ನಡೆಸುತ್ತಾ ಶಾಸಕರನ್ನು ಎಲ್ಲಾ ನೈತಿಕ ಒತ್ತಡಗಳಿಂದಲೂ ಮುಕ್ತಗೊಳಿಸುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಸಂವಿಧಾನವು ನಿಗದಿ ಮಾಡಿರುವ ಹಾಗೂ ನ್ಯಾಯಾಲಯಗಳು ಮತ್ತೆ ಮತ್ತೆ ಅನುಮೋದಿಸಿರುವ ವಿಧಿವಿಧಾನಗಳನ್ನು ಪಾಲಿಸಲೇ ಬೇಕಾದ ಒತ್ತಡಗಳನ್ನೇನೂ ಶಾಸಕರು ಬಿಡಿಬಿಡಿಯಾಗಿ ಅನುಭವಿಸುವುದಿಲ್ಲ. ಮಹಾರಾಷ್ಟ್ರದಲ್ಲಿ ಸರಕಾರದ ರಚನೆಯ ಬಗ್ಗೆ ಸುಪ್ರೀಂ ಕೋರ್ಟ್ ಕೊಟ್ಟ ಇತ್ತೀಚಿನ ತೀರ್ಪಿನ ಹಿನ್ನೆಲೆಯೂ ಇದಕ್ಕಿದೆ. ಸ್ಪಷ್ಟ ಜನಾದೇಶವಿಲ್ಲದಂತ ಅನಿಶ್ಚಿತ ರಾಜಕೀಯ ಸಂದರ್ಭಗಳು ಸಂಸ್ಥೆಗಳ, ರಾಜಕೀಯ ಪಕ್ಷಗಳ ಮತ್ತು ಅದರ ನಾಯಕರ ರಾಜಕೀಯ ಜೀವನದಲ್ಲಿ ಇಂತಹ ಧೋರಣೆಗಳನ್ನು ಹುಟ್ಟಿಸುತ್ತವೆ ಎಂಬುದು ನಿಜ.
ಆದರೆ ಅದೇ ಸಮಯದಲ್ಲಿ ಸದಾ ಅಧಿಕಾರದಲ್ಲಿ ಉಳಿಯಬೇಕೆಂಬ ಪಕ್ಷಗಳ ಮತ್ತು ನಾಯಕರ ಭೌತಿಕ ಅಗತ್ಯಗಳೂ ಸಹ ಈ ಧೋರಣೆಗಳ ಬೆನ್ನಿಗಿರುತ್ತವೆಂಬುದೂ ಸಹ ನಿಜ. ಮತ್ತೊಮ್ಮೆ ಮಹಾರಾಷ್ಟ್ರದ ಇತ್ತೀಚಿನ ಬೆಳವಣಿಗೆಗಳೇ ಇದನ್ನು ಮುನ್ನೆಲೆಗೆ ತಂದಿದೆ. ನಿಟ್ಟಿನಲ್ಲಿ ನಿರಾಶಾವಾದಿ ರಾಜಕಾರಣಕ್ಕೆ ಕೊಡುಗೆಯನ್ನು ನೀಡುತ್ತಿರುವ ವ್ಯಕ್ತಿಪರಿಸ್ಥಿತಿಗಳನ್ನೂ ಸಹ ಅಷ್ಟೇ ಮುಖ್ಯವಾಗಿ ಪರಿಗಣಿಸುವುದು ಮುಖ್ಯವಾಗುತ್ತದೆ. ರಾಜಕೀಯವನ್ನು ತನ್ನ ವೈಯಕ್ತಿಕ ಅಥವಾ ಖಾಸಗಿ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಬಳಸಿಕೊಳ್ಳಬೇಕೆಂಬ ತಣಿಯದ ಬಯಕೆಯನ್ನೇ ನಿರಾಶಾವಾದದ ರಾಜಕಾರಣದ ಯಶಸ್ಸು ಆಧರಿಸಿರುತ್ತದೆ. ರಾಜಕೀಯ ಜೀವನದ ಚೌಕಟ್ಟಿನಲ್ಲಿ ವ್ಯಕ್ತಿಗಳಲ್ಲಿ, ಗುಂಪುಗಳಲ್ಲಿ ಮತ್ತು ರಾಜಕೀಯ ಪಕ್ಷಗಳಲ್ಲೂ ಸಕ್ರಿಯವಾಗಿರುವ ಚಾಲಕಶಕ್ತಿಯಾಗಿಯೂ ಇಂತಹ ಬಯಕೆಗಳು ಕೆಲಸ ಮಾಡುತ್ತವೆ. ಅಂತಹ ಸಂದರ್ಭಗಳಲ್ಲಿ ಖಾಸಗಿ ಹಿತಾಸಕ್ತಿಯು ಪ್ರಾಮುಖ್ಯತೆಯನ್ನು ಪಡೆದುಕೊಂಡು ನೈತಿಕ ಕಟ್ಟುಪಾಡುಗಳು ಹಿನ್ನೆಲೆಗೆ ಸರಿಯುತ್ತವೆ. ಖಾಸಗಿ ಆಸಕ್ತಿಗಳ ಬದ್ಧತೆಯು ಸಾಂವಿಧಾನಿಕ ಪ್ರಕ್ರಿಯೆಗಳಿಗೆ ಅಥವಾ ಸಾರಕ್ಕೆ ಬದ್ಧವಾಗಿರುವುದನ್ನು ಬದಿಗೆ ಸರಿಸುತ್ತದೆ. ನಿರಾಶಾವಾದಿ ರೂಪದ ರಾಜಕೀಯವು ಪಾರದರ್ಶಕ ಮತ್ತು ಸಮಾಲೋಚನವಾದಿ ಸ್ವರೂಪದ ಪ್ರಜಾತಂತ್ರದ ಬಗ್ಗೆ ಆಳವಾದ ಅಸಹನೆಯನ್ನು ಒಳಗೊಂಡಿರುತ್ತದೆ ಮತ್ತು ಪ್ರಕ್ರಿಯಾತ್ಮಕ ವಿಧಿವಿಧಾನಗಳ ಬಗ್ಗೆ ತಿರಸ್ಕಾರವನ್ನು ಹೊಂದಿರುತ್ತದೆ. ವಾಸ್ತವವಾಗಿ, ಸಮಾಲೋಚನೆಯ ಮೂಲಕ ಗಟ್ಟಿಯಾದ ತೀರ್ಮಾನಗಳಿಗೆ ಬರಲು ಸಮರ್ಥರಲ್ಲದ ರಾಜಕೀಯ ನಾಯಕರೇ ಸಮಾಲೋಚನಾವಾದಿ ಪ್ರಜಾತಂತ್ರದ ಬಗ್ಗೆ ಅಸಹನೆಯನ್ನು ಹೊಂದಿರುತ್ತಾರೆ.
ಅದನ್ನೇ ಸಕಾರಾತ್ಮಕವಾಗಿ ಹೇಳುವುದಾದರೆ, ತನ್ನ ಬಗ್ಗೆ ತಾನು ನೈತಿಕ ನಿಯಂತ್ರಣ ಹೊಂದಿರುವವರು ಮಾತ್ರ ದುಷ್ಟ ಪರಿಣಾಮಗಳಿಗೆ ಈಡು ಮಾಡುವ ಹಾದಿ ತಪ್ಪಿಸುವ ಒತ್ತಡಗಳ ವಿರುದ್ಧ ದೃಢವಾಗಿ ಹೋರಾಡುತ್ತಾರೆ. ಮತ್ತೊಬ್ಬರ ದುಷ್ಟ ಯೋಜನೆಗೆ ತನ್ನನ್ನು ವಸ್ತುವಾಗಿ ಬಳಸಿಕೊಳ್ಳಲು ಬಿಡುವ ಜಾರುದಾರಿಯನ್ನು ಖಂಡಿತವಾಗಿ ಯಾರೊಬ್ಬರೂ ತುಳಿಯಬಾರದು. ಆ ಮೂಲಕ ಮಾತ್ರ ಒಬ್ಬ ವ್ಯಕ್ತಿಯು ತನಗೂ ನ್ಯಾಯವನ್ನು ಒದಗಿಸಿಕೊಳ್ಳಲು ಸಾಧ್ಯ. ಯಾವ ಪ್ರಜಾತಂತ್ರವೂ ಈ ಜಾರುದಾರಿಯ ಹಿಂದಿರುವ ಕೊಳೆತ ರಾಜಕೀಯ ರೂಪಗಳನ್ನು ಆಧರಿಸಿ ಬೆಳೆಯಲು ಸಾಧ್ಯವಿಲ್ಲ. ಪ್ರಜಾತಾಂತ್ರಿಕ ಸ್ವರೂಪದ ಸರಕಾರವೆಂಬುದು ಒಂದು ಆದರ್ಶವಾಗಿರುವುದು. ಏಕೆಂದರೆ ಅದು ಸಾಧಿಸಲು ಅಸಾಧ್ಯ ಎಂಬ ಕಾರಣಕ್ಕಲ್ಲ. ಬದಲಿಗೆ ಅತ್ಯುತ್ತಮ ರಾಜಕೀಯ ನಡಾವಳಿಗಳನ್ನು ಸ್ಥಾಪಿಸುವ ಮೂಲಕ ಅದನ್ನು ಕನಿಷ್ಠ ಮಟ್ಟದಲ್ಲಾದರೂ ಸಾಕಾರಗೊಳಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ. ಅವೆಂದರೆ ಸಾಂವಿಧಾನಿಕ ವಿಧಿ ವಿಧಾನಗಳಿಗೆ ಅನುಸಾರವಾಗಿ ಪ್ರಜಾಪ್ರತಿನಿಧಿಗಳು ಮಾಡುವ ನಡೆಗಳು. ಶಾಸಕರು ಮತ್ತು ರಾಜ್ಯಪಾಲರಂತಹ ಸಾಂಸ್ಥಿಕ ಮುಖ್ಯಸ್ಥರು ಆ ರೀತಿಯಲ್ಲಿ ನಡೆದುಕೊಳ್ಳುವ ಮೂಲಕ ಉತ್ತಮ ರಾಜಕೀಯ ನಡಾವಳಿಗಳಿಗೆ ಅವಕಾಶ ಕಲ್ಪಿಸಿಕೊಡುತ್ತಾರೆಂದು ನಿರೀಕ್ಷಿಸಲಾಗುತ್ತದೆ. ಇಂದಿನ ಮಟ್ಟಿಗೆ ಹೇಳುವುದಾದರೆ ಭಾರತೀಯ ರಾಜಕೀಯವು ಆಶಾವಾದಿ ಸ್ವರೂಪಗಳಿಗಿಂತ ನಿರಾಶಾವಾದಿ ಸ್ವರೂಪಗಳಲ್ಲೇ ಅಭಿವ್ಯಕ್ತಗೊಳ್ಳುತ್ತಿದೆ.
ನಿರಾಶಾವಾದಿ ಧೋರಣೆಗಳು ಪ್ರಜಾತಂತ್ರದ ಆಯಕಟ್ಟಿನ ಜಾಗದಲ್ಲಿ ನುಸುಳಿಕೊಂಡು ಅದರ ಸಾರವನ್ನೇ ನುಂಗಿಹಾಕುತ್ತಿದೆ. ಒಂದು ಸಮರ್ಥ ಕ್ರಿಯಾಶೀಲ ಪ್ರಜಾತಂತ್ರವು ಪಾರದರ್ಶಕತೆಯನ್ನು ಉತ್ತೇಜಿಸುತ್ತದೆ ಮತ್ತು ಪರ್ಯಾಲೋಚನೆ ಮತ್ತು ಪ್ರಾಮಾಣಿಕ ಸಮಾಲೋಚನೆಗಳ ಮೂಲಕ ತೆಗೆದುಕೊಂಡ ನಿರ್ಧಾರಗಳ ಮೂಲಕ ಪ್ರಜಾತಂತ್ರದ ಪರಿಧಿಯಲ್ಲಿ ಉಳಿದುಕೊಳ್ಳುವ ಅವಕಾಶಗಳು ಅಧಿಕವಾಗುವುದನ್ನು ಬಯಸುತ್ತದೆ. ಈ ಹಿನ್ನೆಲೆಯಲ್ಲಿ ತಮ್ಮ ರಾಜಕೀಯ ನಡೆಗಳಿಗೆ ಮಾರ್ಗದರ್ಶನ ಮಾಡುವ ಮತ್ತು ನಿಯಂತ್ರಿಸುವ ತತ್ವಪ್ರಣಾಳಿಯನ್ನು ರಾಜಕೀಯ ಪಕ್ಷಗಳು ಅನುಸರಿಸಬೇಕಿರುವುದು ಅತ್ಯಗತ್ಯವಾಗಿದೆ. ಇತರ ಪಕ್ಷಗಳಂತೆ ಇವೂ ಸಹ ಜಾರುದಾರಿಯನ್ನು ಹಿಡಿದುಬಿಟ್ಟವು ಎಂದು ರಾಜಕೀಯ ವಿಶ್ಲೇಷಕರು ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರೀಕ್ಷೆಗಳು ಇನ್ನೂ ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತವೆ. ಯಾವುದೇ ರಾಜಕೀಯ ಪಕ್ಷಗಳು ಇತರ ರಾಜಕೀಯ ಪಕ್ಷಗಳಷ್ಟೇ ದ್ರೋಹಿಯೂ ಮತ್ತು ಕುತಂತ್ರಿಯೂ ಆಗಬಹುದೆಂಬುದನ್ನೇ ಈ ಅಭಿಪ್ರಾಯಗಳು ಸೂಚಿಸುತ್ತವೆ. ತಮ್ಮ ರಾಜಕೀಯ ನಡಾವಳಿಗಳಲ್ಲಿ ರಾಜಕೀಯ ನಾಯಕರು ಮತ್ತು ಪಕ್ಷಗಳೆರಡೂ ಘನತೆಯಿಂದ ನಡೆದುಕೊಳ್ಳಬೇಕೆಂದು ಜನರು ನಿರೀಕ್ಷಿಸುತ್ತಾರೆ. ಇದರಿಂದ ಮಾತ್ರ ತಮ್ಮನ್ನು ಹಾಗೂ ಪ್ರಜಾತಂತ್ರವನ್ನೂ ಸಹ ರಕ್ಷಿಸಿಕೊಳ್ಳಲು ಸಾಧ್ಯ ಎಂದು ಅವರು ಭಾವಿಸುತ್ತಾರೆ.
ಕೃಪೆ: Economic and Political Weekly