ಇಷ್ಟಲಿಂಗದ ಜನಕ
‘ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ’ ಎಂದು ಚೆನ್ನಬಸವಣ್ಣನವರು ಹೇಳಿದ್ದಾರೆ. ಬಸವಣ್ಣನವರೇ ಇಷ್ಟಲಿಂಗದ ಜನಕರು ಎಂಬುದನ್ನು ಅಲ್ಲಮಪ್ರಭು, ಸಿದ್ಧರಾಮ, ಅಕ್ಕಮಹಾದೇವಿ ಮುಂತಾದವರು ಸೂಚಿಸಿದ್ದಾರೆ. ಲಿಂಗಭೇದ, ವರ್ಣಭೇದ ಮತ್ತು ವರ್ಗಭೇದವನ್ನು ಕಳೆದು ಸಮರತಿ, ಸಮಕಳೆ ಮತ್ತು ಸಮಸುಖದ ಅರಿವು ಮೂಡಿಸಲಿಕ್ಕಾಗಿಯೇ ಇರುವಂಥದ್ದು ಎಂಬುದನ್ನು ಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ. ‘‘ಲಿಂಗವ ಪೂಜಿಸಿ ಫಲವೇನಯ್ಯಾ ಸಮರತಿ, ಸಮಕಳೆ, ಸಮಸುಖವನರಿಯದನ್ನಕ್ಕ’’ ಎಂದು ಬಸವಣ್ಣನವರು ಪ್ರಶ್ನಿಸಿದ್ದಾರೆ.
ರಕ್ತಸಂಬಂಧವನ್ನು ‘ನಂಟುಭಕ್ತಿ ನಾಯಕ ನರಕ’ ಎಂದು ಅಲ್ಲಗಳೆದು ಭಕ್ತಿಸಂಬಂಧದ ಮೂಲಕ ಸರ್ವ ಜಾತಿಮತಗಳ ಜನರನ್ನು ಅಕ್ಕ, ಅಣ್ಣ, ಅಪ್ಪ, ಅವ್ವ, ಅಮ್ಮ, ತಾಯಿ, ತಂದೆ, ಬೊಪ್ಪ, ಅಜ್ಜ, ಮುತ್ತಜ್ಜ, ಮುತ್ತಾತ, ಅಯ್ಯ, ಮುತ್ತಯ್ಯ ಮುಂತಾದ ರಕ್ತಸಂಬಂಧದ ಶಬ್ದ ಮತ್ತು ಪದಗಳಿಗೆ ಭಕ್ತಿಸಂಬಂಧದ ಅರ್ಥ ಕೊಟ್ಟು ಇಡೀ ಮಾನವ ಸಮಾಜವನ್ನೇ ಮಹಾಮನೆಯ ಪರಿಕಲ್ಪನೆಯಲ್ಲಿ ನೋಡಿದ್ದಾರೆ. ಕಲ್ಯಾಣದ ಪ್ರಧಾನಿಯಾಗಿದ್ದರೂ ಕಾಯಕಜೀವಿಗಳ ಜೊತೆ ದಾಸೋಹದ ಪಂಕ್ತಿಯಲ್ಲಿ ಪ್ರಸಾದ ಸ್ವೀಕರಿಸುತ್ತ ಅವರ ಜೊತೆ ಬದುಕಿದ್ದಾರೆ.
ಕಾಯಕ, ಪ್ರಸಾದ ಮತ್ತು ದಾಸೋಹ ಪ್ರಜ್ಞೆಯೊಂದಿಗೆ ಸಮೂಹ ಬದುಕಿಗೆ ನಾಂದಿ ಹಾಡಿದ್ದಾರೆ. ಬಿಜ್ಜಳನ ಹಳೆಯ ರಾಜ್ಯವ್ಯವಸ್ಥೆಯ ಪ್ರಧಾನಿಯಾಗಿದ್ದರೂ ನವಸಮಾಜದ ನಿರ್ಮಾಣಕ್ಕಾಗಿ ಕಾಯಕಜೀವಿಗಳ ನಾಯಕತ್ವ ವಹಿಸಿಕೊಂಡು ಅದ್ವಿತೀಯ ಮುತ್ಸದ್ದಿ ಎನಿಸಿಕೊಂಡಿದ್ದಾರೆ. ಪ್ರಧಾನಿ ಸಮೇತ ಎಲ್ಲ ಪರಸೇವಕರು ಮತ್ತು ಕಾಯಕಜೀವಿಗಳು ಸರಿಸಮಾನರು ಎಂದು ಘೋಷಿಸಿದವರೇ ಬಸವಣ್ಣನವರು.
‘‘ಲಿಂಗವ ಪೂಜಿಸಿ ಫಲವೇನಯ್ಯ
ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯ
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?’’
ಎಂದು ಬಸವಣ್ಣನವರು ಹೇಳುವ ಮೂಲಕ ಇಷ್ಟಲಿಂಗ ಪೂಜೆಯ ಮಹತ್ವವನ್ನು ಸಾರಿದ್ದಾರೆ. ಈ ವಚನ ಲಿಂಗಾಂಗಸಾಮರಸ್ಯದ ಅರ್ಥವನ್ನು ಒಳಗೊಂಡಂತೆ ಲೌಕಿಕ ಬದುಕಿನ ಅರ್ಥವನ್ನೂ ಸ್ಫುರಿಸುತ್ತದೆ. ಲೌಕಿಕದಲ್ಲಿ ‘ಸಮರತಿ’ ಲಿಂಗಸಮಾನತೆಯನ್ನು ಸೂಚಿಸುತ್ತದೆ. ಬ್ರಹ್ಮತೇಜಸ್ಸು, ಕ್ಷಾತ್ರತೇಜಸ್ಸು ಎಂಬುದಿಲ್ಲ ಇರುವುದೊಂದೇ ಮಾನವ ತೇಜಸ್ಸು ಎಂಬುದನ್ನು ‘ಸಮಕಳೆ’ ಸೂಚಿಸುತ್ತದೆ. ‘ಸಮಸುಖ’ವೆಂಬುದು ಎಲ್ಲ ಮಾನವರಿಗೂ ಪ್ರಕೃತಿ ಒಂದೇ ರೀತಿಯಲ್ಲಿ ನೋಡಿಕೊಳ್ಳುತ್ತದೆ ಎಂಬ ಸತ್ಯವನ್ನು ತಿಳಿಸುತ್ತದೆ. ಈ ಸತ್ಯದ ಅರಿವೇ ಇಷ್ಟಲಿಂಗ ಪೂಜಾಫಲವಾಗಿದೆ. ಬಸವಣ್ಣನವರು ಇಷ್ಟಕ್ಕೇ ನಿಲ್ಲುವುದಿಲ್ಲ. ಇಷ್ಟಲಿಂಗ ಪೂಜೆಯು ಮಾನವ ಏಕತೆಯ ಅರಿವನ್ನು ಮೂಡಿಸುತ್ತದೆ ಎಂದು ಹೇಳುತ್ತಾರೆ. ಭೂಮಿಯ ಮೇಲಿನ ಎಲ್ಲ ಮಾನವರು ನದಿಯೊಳಗೆ ನದಿ ಬೆರೆತಾಗ ಉಂಟಾಗುವ ಐಕ್ಯಭಾವವನ್ನು ತಮ್ಮ ನಿಜಜೀವನದಲ್ಲಿ ಹೊಂದಿರಬೇಕು. ಈ ಅರಿವು ೂಡ ಇಷ್ಟಲಿಂಗ ಪೂಜಾಫಲವೇ ಆಗಿದೆ.
ಲಿಂಗಭೇದ, ಜಾತಿ-ವರ್ಣಭೇದ, ವರ್ಗಭೇದ ಹಾಗೂ ಮಾನವ ಸಮಾಜಗಳ ಭೇದವನ್ನು ಅಳಿದು ಸಮತೆಯ ಬದುಕನ್ನು ಬದುಕುವ ಅರಿವು ಮೂಡಿದಾಗ ಜಗತ್ತು ಯುದ್ಧ ಮತ್ತು ಎಲ್ಲ ತೆರನಾದ ಹಿಂಸೆಗಳಿಂದ ಮುಕ್ತವಾಗುತ್ತದೆ. ಬಸವಣ್ಣನವರ ಇಷ್ಟಲಿಂಗ ಸೃಷ್ಟಿಯ ಉದ್ದೇಶ, ಮಾನವನನ್ನು ವಿಶ್ವಮಾನವನನ್ನಾಗಿ ಮಾಡುವುದೇ ಆಗಿದೆ.